
ಡಿಕೆಶಿ ಸರ್ಕಾರಕ್ಕೆ ಆರಂಭದಲ್ಲೇ ಶಾಕ್! ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ
ಬೆಂಗಳೂರು ನಗರಾಭಿವೃದ್ಧಿ ಖಾತೆ ಕೈತಪ್ಪಿದ್ದಕ್ಕೆ ಹಿರಿಯ ನಾಯಕ ರಾಮಲಿಂಗಾರೆಡ್ಡಿ ತೀವ್ರ ಅಸಮಾಧಾನಗೊಂಡಿದ್ದು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜ್ಯ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆಯ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಬಹುನಿರೀಕ್ಷಿತ ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಗದೆ ಇರುವ ಕಾರಣಕ್ಕೆ ಹಿರಿಯ ನಾಯಕ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರು ತೀವ್ರ ಅಸಮಾಧಾನ ಹೊರಹಾಕಿದ್ದು, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬೆಂಗಳೂರು ಅಭಿವೃದ್ಧಿ ಖಾತೆಯ ಬದಲಿಗೆ ಜಲಸಂಪನ್ಮೂಲ ಇಲಾಖೆಯನ್ನು ನೀಡಿರುವುದಕ್ಕೆ ರಾಮಲಿಂಗಾರೆಡ್ಡಿ ಅವರು ತೀವ್ರ ಬೇಸರಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಅವರು ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.
ಮಾತು ತಪ್ಪಿದ ಹೈಕಮಾಂಡ್?
"ಹಿಂದೆ ಮಾತು ಕೊಟ್ಟಂತೆ ನನಗೆ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನೇ ನೀಡಬೇಕು" ಎಂದು ರಾಮಲಿಂಗಾರೆಡ್ಡಿ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ತಮಗೆ ನೀಡಿರುವ ಜಲಸಂಪನ್ಮೂಲ ಖಾತೆಯನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದ ಅವರು, ಸಚಿವ ಸ್ಥಾನಕ್ಕೆ ಗುಡ್ ಬೈ ಹೇಳಿ ಕೇವಲ ಶಾಸಕರಾಗಿ ಮಾತ್ರ ಮುಂದುವರಿಯಲು ತೀರ್ಮಾನಿಸಿದ್ದಾರೆ ಎಂದು ಅವರ ಆಪ್ತ ವಲಯದ ಮೂಲಗಳು ತಿಳಿಸಿವೆ.
ರಾಮಲಿಂಗಾರೆಡ್ಡಿ ಅವರ ಈ ದಿಢೀರ್ ಅಸಮಾಧಾನ ಮತ್ತು ರಾಜೀನಾಮೆ ನಿರ್ಧಾರದಿಂದಾಗಿ ಕಾಂಗ್ರೆಸ್ ವಲಯದಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ಹೈಕಮಾಂಡ್ ಹಾಗೂ ಸಿಎಂ ಈ ಬಿಕ್ಕಟ್ಟನ್ನು ಹೇಗೆ ಶಮನಗೊಳಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಭರವಸೆ ಹುಸಿ: ಬೆಂಗಳೂರು ಬದಲಿಗೆ ಜಲಸಂಪನ್ಮೂಲ!
ರಾಮಲಿಂಗಾ ರೆಡ್ಡಿ ಅವರು ಈ ಬಾರಿ ಆರಂಭದಿಂದಲೂ 'ಬೆಂಗಳೂರು ನಗರಾಭಿವೃದ್ಧಿ' ಖಾತೆಯ ಮೇಲೆ ಕಣ್ಣಿಟ್ಟಿದ್ದರು. ಈ ಹಿಂದೆ ತಮಗೆ ಇದೇ ಖಾತೆಯನ್ನು ನೀಡುವುದಾಗಿ ಪಕ್ಷದ ವರಿಷ್ಠರು ಭರವಸೆ ನೀಡಿದ್ದರು ಎಂಬುದು ಅವರ ವಾದ. ಆದರೆ, ಗುರುವಾರ ರಾತ್ರಿ ಪ್ರಕಟವಾದ ಅಧಿಕೃತ ಪಟ್ಟಿಯಲ್ಲಿ ಅವರಿಗೆ ಜಲಸಂಪನ್ಮೂಲ ಇಲಾಖೆಯನ್ನು ಹಂಚಿಕೆ ಮಾಡಲಾಗಿದೆ. ಈ ಖಾತೆಯ ಬಗ್ಗೆ ತಮಗೆ ಕಿಂಚಿತ್ತೂ ಆಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿರುವ ರೆಡ್ಡಿ, ಖಾತೆ ಬದಲಾವಣೆಗಾಗಿ ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ಖಾತೆ ಬದಲಾಯಿಸದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಡಿಕೆಶಿಗೆ ಮಧ್ಯರಾತ್ರಿ ಫೋನ್ ಕರೆ
ಗುರುವಾರ ರಾತ್ರಿ ಖಾತೆ ಹಂಚಿಕೆಯ ಲಿಸ್ಟ್ ಹೊರಬೀಳುತ್ತಿದ್ದಂತೆ ಅಲರ್ಟ್ ಆದ ರಾಮಲಿಂಗಾ ರೆಡ್ಡಿ, ತಡಮಾಡದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ನೇರವಾಗಿ ಫೋನ್ ಕರೆ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. "ನನಗೆ ಕೊಟ್ಟ ಮಾತು ತಪ್ಪಿದ್ದೀರಿ, ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ" ಎಂದು ನೇರವಾಗಿಯೇ ತಿಳಿಸಿದ್ದರು ಎನ್ನಲಾಗಿದೆ.
ಹೈಕಮಾಂಡ್ ಅಡ್ಡಗಾಲು ಎಂದ ಡಿಕೆಶಿ!
ರಾಮಲಿಂಗಾರೆಡ್ಡಿ ಅವರ ದಿಢೀರ್ ರಾಜೀನಾಮೆ ಎಚ್ಚರಿಕೆಯಿಂದ ಎಚ್ಚೆತ್ತ ಡಿಕೆ ಶಿವಕುಮಾರ್, ಫೋನ್‌ನಲ್ಲೇ ಹಿರಿಯ ನಾಯಕನನ್ನು ಸಮಾಧಾನಪಡಿಸಲು ಕಸರತ್ತು ನಡೆಸಿದ್ದಾರೆ. "ಈ ಬಗ್ಗೆ ನಾನು ಈಗಾಗಲೇ ಎಐಸಿಸಿ (AICC) ನಾಯಕರ ಜೊತೆಗೆ ಸುದೀರ್ಘವಾಗಿ ಮಾತುಕತೆ ನಡೆಸಿದ್ದೇನೆ. ಆದರೆ, ದೆಹಲಿ ನಾಯಕರು ಸದ್ಯಕ್ಕೆ ಖಾತೆ ಬದಲಾವಣೆಗೆ ಒಪ್ಪುತ್ತಿಲ್ಲ" ಎಂದು ಡಿಕೆಶಿ ಅಸಹಾಯಕತೆ ವ್ಯಕ್ತಪಡಿಸಿ, ಸಮಜಾಯಿಷಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

