
ರಾಜ್ಯಸಭಾ ಚುನಾವಣೆ: ಕರ್ನಾಟಕದಿಂದ ಮಲ್ಲಿಕಾರ್ಜುನ ಖರ್ಗೆ, ಪವನ್ ಖೇರಾ, ಮನ್ಸೂರ್ ಅಲಿ ಖಾನ್‌ಗೆ ಕಾಂಗ್ರೆಸ್ ಟಿಕೆಟ್
ಕರ್ನಾಟಕದ ಮೂವರು ನಾಯಕರನ್ನು ಹೊರತುಪಡಿಸಿ, ದೇಶದ ಇತರೆ ನಾಲ್ಕು ಪ್ರಮುಖ ರಾಜ್ಯಗಳಿಗೂ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಘೋಷಿಸಿದೆ.
ಮುಂಬರುವ 2026ರ ರಾಜ್ಯಸಭಾ ಚುನಾವಣೆಗಳಿಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ ತನ್ನ ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟು ಐದು ರಾಜ್ಯಗಳಿಂದ ಏಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದ್ದು, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಈ ಅಭ್ಯರ್ಥಿಗಳ ಪಟ್ಟಿಗೆ ಅಧಿಕೃತ ಅನುಮೋದನೆ ನೀಡಿದ್ದಾರೆ.
ಈ ಬಾರಿಯ ರಾಜ್ಯಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಹೈಕಮಾಂಡ್ ಹೆಚ್ಚಿನ ಆದ್ಯತೆ ನೀಡಿದ್ದು, ಒಟ್ಟು ಮೂವರು ಪ್ರಮುಖ ನಾಯಕರನ್ನು ರಾಜ್ಯದಿಂದ ಮೇಲ್ಮನೆಗೆ ಕಳುಹಿಸಲು ಕಾಂಗ್ರೆಸ್ ನಿರ್ಧರಿಸಿದೆ. ಸ್ವತಃ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಹಿರಿಯ ಮುಖಂಡರಾದ ಪವನ್ ಖೇರಾ ಹಾಗೂ ಮನ್ಸೂರ್ ಅಲಿ ಖಾನ್ ಅವರು ಕರ್ನಾಟಕದಿಂದ ಕಾಂಗ್ರೆಸ್ ಅಭ್ಯರ್ಥಿಗಳಾಗಿ ರಾಜ್ಯಸಭೆಗೆ ಸ್ಪರ್ಧಿಸಲಿದ್ದಾರೆ.
ಇತರೆ ರಾಜ್ಯಗಳ ಅಭ್ಯರ್ಥಿಗಳ ಅಂತಿಮ ಪಟ್ಟಿ
ಕರ್ನಾಟಕದ ಮೂವರು ನಾಯಕರನ್ನು ಹೊರತುಪಡಿಸಿ, ದೇಶದ ಇತರೆ ನಾಲ್ಕು ಪ್ರಮುಖ ರಾಜ್ಯಗಳಿಗೂ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಘೋಷಿಸಿದೆ. ಮಧ್ಯಪ್ರದೇಶ ರಾಜ್ಯದಿಂದ ಮೀನಾಕ್ಷಿ ನಟರಾಜನ್ ಅವರನ್ನು ಕಣಕ್ಕಿಳಿಸಲಾಗಿದ್ದು, ರಾಜಸ್ಥಾನದಿಂದ ನೀರಜ್ ಡಾಂಗಿ ಅವರಿಗೆ ಅವಕಾಶ ನೀಡಲಾಗಿದೆ. ಅದೇ ರೀತಿ, ತಮಿಳುನಾಡಿನಿಂದ ಪ್ರವೀಣ್ ಚಕ್ರವರ್ತಿ ಹಾಗೂ ಜಾರ್ಖಂಡ್ ರಾಜ್ಯದಿಂದ ಪ್ರಣವ್ ಝಾ ಅವರು ಕಾಂಗ್ರೆಸ್ ಅಭ್ಯರ್ಥಿಗಳಾಗಿ ರಾಜ್ಯಸಭೆ ಪ್ರವೇಶಿಸಲು ಸ್ಪರ್ಧಿಸಲಿದ್ದಾರೆ.

