ಮತದಾರರ ಪಟ್ಟಿಗೆ  ಬಾಂಗ್ಲಾದೇಶಿಯರನ್ನು ಸೇರಿಸಲು ಕಾಂಗ್ರೆಸ್​​ ಹುನ್ನಾರ: ಆರ್‌. ಅಶೋಕ
x

ಮತದಾರರ ಪಟ್ಟಿಗೆ ಬಾಂಗ್ಲಾದೇಶಿಯರನ್ನು ಸೇರಿಸಲು ಕಾಂಗ್ರೆಸ್​​ ಹುನ್ನಾರ: ಆರ್‌. ಅಶೋಕ

ಮಹದೇವಪುರ ಹಾಗೂ ಬ್ಯಾಟರಾಯನಪುರ ಪ್ರದೇಶಗಳಲ್ಲಿ ಮಸೀದಿಗಳ ಮುಂದೆ ಗುಂಪುಗುಂಪಾಗಿ ಕುಳಿತು ಎಸ್‌ಐಆರ್‌ ಪ್ರಕ್ರಿಯೆ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದರು.


ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ಬಿಎಲ್‌ಒಗಳು ಎಸ್‌ಐಆರ್‌ ಅರ್ಜಿಗಳನ್ನು ನಿಯಮಬಾಹಿರವಾಗಿ ಬೀದಿಗಳಲ್ಲಿ ಹಂಚುತ್ತಿದ್ದು, ಬಾಂಗ್ಲಾದೇಶ ಮೂಲದ ನಿವಾಸಿಗಳನ್ನು ಮತದಾರರ ಪಟ್ಟಿಗೆ ಸೇರಿಸುವ ಸಂಚು ನಡೆಯುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ ಗಂಭೀರ ಆರೋಪ ಮಾಡಿದ್ದಾರೆ. ಇದೇ ವೇಳೆ ರಾಜ್ಯದಲ್ಲಿ ಕಾಣಿಸಿಕೊಂಡಿರುವ ಬರ ಪರಿಸ್ಥಿತಿ, ತಮಿಳುನಾಡಿಗೆ ನೀರು ಹರಿಸುವ ವಿಚಾರ, ರೈತರ ಸಮಸ್ಯೆ ಹಾಗೂ ರಾಜ್ಯ ಸರ್ಕಾರದ ಆಡಳಿತ ವೈಫಲ್ಯಗಳ ಕುರಿತು ಕೂಡ ಅವರು ತೀವ್ರ ವಾಗ್ದಾಳಿ ನಡೆಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್‌. ಅಶೋಕ, ದೇಶದ ಭದ್ರತೆಯ ದೃಷ್ಟಿಯಿಂದ ಚುನಾವಣಾ ಆಯೋಗ ಎಸ್‌ಐಆರ್‌ ಪ್ರಕ್ರಿಯೆ ನಡೆಸುತ್ತಿದೆ. ಇದು ಕೇಂದ್ರ ಸರ್ಕಾರದ ಉದ್ದೇಶವೂ ಆಗಿದೆ. ಆದರೆ ಕಾಂಗ್ರೆಸ್‌ ಸರ್ಕಾರ ಬಾಂಗ್ಲಾ ನಿವಾಸಿಗಳ ಪಾಲಿಗೆ ರಾಜ್ಯವನ್ನು ಸ್ವರ್ಗವನ್ನಾಗಿ ಮಾಡುತ್ತಿದೆ ಎಂದು ಆರೋಪಿಸಿದರು.

20 ಲಕ್ಷ ಬಾಂಗ್ಲಾ ನಿವಾಸಿಗಳು ರಾಜ್ಯದಲ್ಲಿದ್ದಾರೆ

ಈ ಹಿಂದೆ ಕೋಗಿಲು ಕ್ರಾಸ್‌ನಲ್ಲಿ ಬಾಂಗ್ಲಾ ನಿವಾಸಿಗಳಿಗೆ ಮನೆ ನಿರ್ಮಿಸಲು ಸರ್ಕಾರ ಮುಂದಾಗಿತ್ತು. ಬಿಜೆಪಿ ಹೋರಾಟದ ಬಳಿಕ ಆ ಯೋಜನೆ ಕೈಬಿಡಲಾಯಿತು. ಈಗ ಬೆಂಗಳೂರು, ಕೊಡಗು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಸುಮಾರು 20 ಲಕ್ಷ ಬಾಂಗ್ಲಾ ನಿವಾಸಿಗಳು ನೆಲೆಸಿದ್ದಾರೆ ಎಂದು ಅಶೋಕ ಆರೋಪಿಸಿದರು.

2002ರ ಮತದಾರರ ಪಟ್ಟಿಯಲ್ಲಿ ಇವರ ಹೆಸರುಗಳೇ ಇರಲಿಲ್ಲ. ಆದರೆ ಈಗ ಹಜ್‌ ಭವನ, ಮಸೀದಿಗಳ ಮುಂದೆ ಹಾಗೂ ಹೆದ್ದಾರಿಗಳ ಸಮೀಪ ರಾಜಾರೋಷವಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸುವ ಕೆಲಸ ನಡೆಯುತ್ತಿದೆ ಎಂದು ದೂರಿದರು.

ಬೀದಿಯಲ್ಲಿ ಅರ್ಜಿ ಹಂಚುವುದು ನಿಯಮ ಉಲ್ಲಂಘನೆ

ಎಸ್‌ಐಆರ್‌ ಪ್ರಕ್ರಿಯೆಯ ಪ್ರಕಾರ ಬಿಎಲ್‌ಒಗಳು ಪ್ರತಿ ಮನೆಗೆ ತೆರಳಿ ಸಮೀಕ್ಷೆ ನಡೆಸಬೇಕು. ಮನೆ ಗುರುತಿಸಿ ಅರ್ಜಿ ನೀಡಿ, ಅದನ್ನು ಭರ್ತಿ ಮಾಡಿಸಿಕೊಂಡು ಮರಳಿ ಪಡೆಯಬೇಕು. ಆದರೆ ಪ್ರಸಾದ ಹಂಚುವ ರೀತಿಯಲ್ಲಿ ಬೀದಿಗಳಲ್ಲಿ ಕುಳಿತು ಅರ್ಜಿಗಳನ್ನು ವಿತರಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಮಹದೇವಪುರ ಹಾಗೂ ಬ್ಯಾಟರಾಯನಪುರ ಪ್ರದೇಶಗಳಲ್ಲಿ ಮಸೀದಿಗಳ ಮುಂದೆ ಗುಂಪುಗುಂಪಾಗಿ ಕುಳಿತು ಎಸ್‌ಐಆರ್‌ ಪ್ರಕ್ರಿಯೆ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದರು.

ಚುನಾವಣಾ ಆಯೋಗಕ್ಕೆ ದೂರು, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಈ ಕುರಿತು ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಗಳಿಗೆ ಪತ್ರ ಬರೆದು ಅಕ್ರಮಗಳ ಬಗ್ಗೆ ಗಮನ ಸೆಳೆಯಲಾಗುವುದು ಎಂದು ಅಶೋಕ ಹೇಳಿದರು.

ಈ ರೀತಿಯ ಅಕ್ರಮಗಳಿಗೆ ಅವಕಾಶ ಕಲ್ಪಿಸಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಅವರು ಆಗ್ರಹಿಸಿದರು. ಒಮ್ಮೆ ಬಾಂಗ್ಲಾ ನಿವಾಸಿಗಳು ರಾಜ್ಯದಲ್ಲಿ ನೆಲೆಸಿದರೆ ಅವರಿಗೆ ಉಚಿತ ಸೌಲಭ್ಯಗಳನ್ನು ನೀಡಬೇಕಾಗುತ್ತದೆ. ಇದು ದೇಶಕ್ಕೆ ಹೊರೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

2002ರ ಮತದಾರರ ಪಟ್ಟಿಯ ದಾಖಲೆ ಕಾಣೆಯಾಗಿವೆ

ಯಲಹಂಕದ ಕೆಲವು ಪ್ರದೇಶಗಳಲ್ಲಿ 2002ರ ಮತದಾರರ ಪಟ್ಟಿಯ ದಾಖಲೆಗಳು ಲಭ್ಯವಾಗುತ್ತಿಲ್ಲ. ವೆಬ್‌ಸೈಟ್‌ನಲ್ಲಿಯೂ ಅಪ್‌ಲೋಡ್‌ ಮಾಡಿಲ್ಲ. ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಈ ರೀತಿಯ ಕೆಲಸ ಮಾಡಲಾಗಿದೆ ಎಂದು ಆರೋಪಿಸಿದರು.

ಇದಕ್ಕೆ ಆದೇಶ ನೀಡಿದ ಹಿರಿಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಎಸ್‌ಐಆರ್‌ಗೆ ವಿರೋಧ, ಆದರೆ ನೋಂದಣಿಗೆ ಕಾಂಗ್ರೆಸ್‌ ಕರೆ

ಒಂದೆಡೆ ಕಾಂಗ್ರೆಸ್‌ ಎಸ್‌ಐಆರ್‌ ಪ್ರಕ್ರಿಯೆಯನ್ನು ವಿರೋಧಿಸುತ್ತಿದೆ. ಮತ್ತೊಂದೆಡೆ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಎಸ್‌ಐಆರ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಿ ಎಂದು ಜನರಿಗೆ ಕರೆ ನೀಡುತ್ತಿದೆ ಎಂದು ಅಶೋಕ ಟೀಕಿಸಿದರು.

ಇದರ ಮೂಲಕ ಬಾಂಗ್ಲಾ ನಿವಾಸಿಗಳನ್ನು ಇಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಎಸ್‌ಐಆರ್‌ ಭಾರತೀಯ ನಾಗರಿಕರಿಗೆ ಮಾತ್ರ ಅನ್ವಯವಾಗುತ್ತದೆ. "ಅನ್ನ ಹಾಕುವವರಿಗೆ ಮತ ಇದೆ, ಕನ್ನ ಹಾಕುವವರಿಗೆ ಅಲ್ಲ" ಎಂಬುದನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿದುಕೊಳ್ಳಬೇಕು ಎಂದು ಹೇಳಿದರು.

'ಡಿ.ಕೆ. ಶಿವಕುಮಾರ್‌ ಆಡಳಿತದಲ್ಲಿ ಹೊಸತನವೇ ಇಲ್ಲ'

ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್‌ ಅಧಿಕಾರ ಸ್ವೀಕರಿಸಿ ಒಂದು ತಿಂಗಳು ಕಳೆದರೂ ರಾಜ್ಯದ ಆಡಳಿತದಲ್ಲಿ ಯಾವುದೇ ಹೊಸತನ ಕಂಡುಬಂದಿಲ್ಲ. "ಹಳೆ ಬಾಟಲ್‌ಗೆ ಹೊಸ ಹೆಂಡ" ಎಂಬಂತಾಗಿದೆ ಎಂದು ಅಶೋಕ ವ್ಯಂಗ್ಯವಾಡಿದರು.

ನೀರಿನ ಕೊರತೆಯಿಂದ ಬೆಳೆ ಬೆಳೆಯಬೇಡಿ ಎಂದು ಮುಖ್ಯಮಂತ್ರಿ ರೈತರಿಗೆ ಕರೆ ನೀಡಿರುವುದು ಸರಿಯಲ್ಲ. ಯಾವಾಗ ಬೆಳೆ ಬೆಳೆಯಬೇಕು ಎಂಬ ಅರಿವು ರೈತರಿಗೆ ಮೊದಲಿನಿಂದಲೂ ಇದೆ ಎಂದರು.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಚಿನ್ನದ ಬಳಕೆ ಕಡಿಮೆ ಮಾಡಿ ಎಂದಾಗ ಕಾಂಗ್ರೆಸ್‌ ನಾಯಕರು ಟೀಕಿಸಿದ್ದರು. ಈಗ ಅದೇ ರೀತಿಯ ಸಲಹೆಯನ್ನು ಮುಖ್ಯಮಂತ್ರಿ ನೀಡುತ್ತಿದ್ದಾರೆ ಎಂದು ಹೇಳಿದರು. ಧೈರ್ಯವಿದ್ದರೆ ತಮಿಳುನಾಡಿಗೂ ಬೆಳೆ ಬೆಳೆಯಬೇಡಿ ಎಂದು ಹೇಳಲಿ ಎಂದು ಸವಾಲು ಹಾಕಿದರು.

'ಮೇಕೆದಾಟು ಬಗ್ಗೆ ಮೌನ, ತಮಿಳುನಾಡಿಗೆ ನೀರು'

ಮೇಕೆದಾಟು ಯೋಜನೆಗೆ ವಿರೋಧವಾಗಿ ತಮಿಳುನಾಡು ಸರ್ಕಾರ ನಿರ್ಣಯ ಕೈಗೊಂಡಿದ್ದರೂ ಮುಖ್ಯಮಂತ್ರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಅಶೋಕ ಆರೋಪಿಸಿದರು. ಇದರ ಬದಲಿಗೆ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಮೇಕೆದಾಟು ಯೋಜನೆಗೆ ಸರ್ಕಾರ 10 ರೂಪಾಯಿಯನ್ನೂ ಮೀಸಲಿಟ್ಟಿಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಮಿಳುನಾಡಿನ ಪರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

'ಬರದ ಲಕ್ಷಣಗಳಿದ್ದರೂ ಸಚಿವರು ಮೈದಾನಕ್ಕಿಳಿದಿಲ್ಲ'

ರಾಜ್ಯದಲ್ಲಿ ಬರಗಾಲದ ಲಕ್ಷಣಗಳು ಸ್ಪಷ್ಟವಾಗಿ ಕಾಣಿಸಿಕೊಂಡಿದ್ದರೂ ಜಲಸಂಪನ್ಮೂಲ ಸಚಿವರು ಬೆಂಗಳೂರಿನಿಂದ ಹೊರಗೆ ಹೋಗಿಲ್ಲ ಎಂದು ಅಶೋಕ ಆರೋಪಿಸಿದರು.

ತುಂಗಭದ್ರಾ ಕ್ರಸ್ಟ್‌ ಗೇಟ್‌ ಚಾಲನಾ ಕಾರ್ಯಕ್ರಮಕ್ಕೂ ಸಚಿವರು ತೆರಳಿಲ್ಲ. ಕೃಷಿ ಇಲಾಖೆಗೆ ಸಚಿವರೇ ಇಲ್ಲ. ಬರ ಪರಿಸ್ಥಿತಿಗೆ ಸರ್ಕಾರ ಎಷ್ಟು ಪರಿಹಾರ ನಿಗದಿಪಡಿಸಿದೆ? ಎಷ್ಟು ಪ್ರದೇಶಗಳಿಗೆ ಭೇಟಿ ನೀಡಿದೆ? ಕೇಂದ್ರ ಸರ್ಕಾರಕ್ಕೆ ಯಾವಾಗ ನಿಯೋಗ ಕಳುಹಿಸುತ್ತದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

'ಜಲಾಶಯಗಳಲ್ಲಿ ಭಾರೀ ಪ್ರಮಾಣದ ನೀರಿನ ಕೊರತೆ'

ಕಳೆದ ವರ್ಷದ ಇದೇ ಅವಧಿಯಲ್ಲಿ ರಾಜ್ಯದ 22 ಜಲಾಶಯಗಳಲ್ಲಿ ಒಟ್ಟು 335.292 ಟಿಎಂಸಿ ನೀರು ಇತ್ತು. ಆದರೆ ಈಗ ಕೇವಲ 66.099 ಟಿಎಂಸಿ ನೀರು ಮಾತ್ರ ಲಭ್ಯವಿದೆ ಎಂದು ಅಶೋಕ ಅಂಕಿಅಂಶಗಳನ್ನು ನೀಡಿದರು.

ಆಲಮಟ್ಟಿಯಲ್ಲಿ ಸುಮಾರು 20 ಟಿಎಂಸಿ ಹಾಗೂ ತುಂಗಭದ್ರಾದಲ್ಲಿ ಸುಮಾರು 9 ಟಿಎಂಸಿ ಸೇರಿದಂತೆ ಬಹುತೇಕ ಎಲ್ಲಾ ಜಲಾಶಯಗಳಲ್ಲೂ ನೀರಿನ ಕೊರತೆ ಇದೆ. ಇಂತಹ ಸಂದರ್ಭದಲ್ಲಿ ರೈತರು ಬೆಳೆ ಬೆಳೆಯಬಾರದು ಎಂದರೆ ಅವರ ಜೀವನ ಹೇಗೆ ಸಾಗಬೇಕು ಎಂದು ಪ್ರಶ್ನಿಸಿದರು.

ಸರ್ಕಾರಕ್ಕೆ ನೀರಿನ ಕೊರತೆ ಇದ್ದರೂ ಲಂಚದ ಕೊರತೆ ಇಲ್ಲ ಎಂದು ವಾಗ್ದಾಳಿ ನಡೆಸಿದ ಅವರು, ಮುಖ್ಯಮಂತ್ರಿ ಈಗಾಗಲೇ ಅಧ್ಯಯನ ನಡೆಸಿ ರೈತರಿಗೆ ಪರಿಹಾರ ಘೋಷಿಸಬೇಕಿತ್ತು ಎಂದರು. ರೈತರೊಂದಿಗೆ ಸಭೆ ನಡೆಸಿ ಬೆಳೆ ಹಾನಿಗೆ ತಕ್ಷಣವೇ 10 ಸಾವಿರ ಕೋಟಿ ರೂಪಾಯಿ ಮೀಸಲಿಡಬೇಕು. ಜೊತೆಗೆ ಬರ ನಿರ್ವಹಣೆಗೆ ವಿಶೇಷ ಟಾಸ್ಕ್‌ ಫೋರ್ಸ್‌ ರಚಿಸಿ ಗೋಶಾಲೆಗಳನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಕೃಷ್ಣ ಬೈರೇಗೌಡ ವಿರುದ್ಧವೂ ವಾಗ್ದಾಳಿ

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳನ್ನು ಬೈದು ರೀಲ್ಸ್‌ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಅಶೋಕ ಟೀಕಿಸಿದರು. ಹಿಂದಿನ ಸಚಿವರು ವ್ಯವಸ್ಥೆ ಹಾಳು ಮಾಡಿದ್ದಾರೆ ಎಂದು ಅವರೇ ಹೇಳುತ್ತಿದ್ದಾರೆ. ರಸ್ತೆ ಗುಂಡಿ ಮುಚ್ಚುವುದು ರಾಕೆಟ್‌ ಸೈನ್ಸ್‌ನಾ ಎಂದು ಪ್ರಶ್ನಿಸುತ್ತಿದ್ದರೆ, ಆ ರಾಕೆಟ್‌ ಸೈನ್ಸ್‌ನ್ನು ಡಿ.ಕೆ. ಶಿವಕುಮಾರ್‌ ಅವರೇ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.

ನಗರದಲ್ಲಿ ಹಣಕಾಸಿನ ಸಮಸ್ಯೆ ಇಲ್ಲ, ಆಡಳಿತ ವೈಫಲ್ಯ ಮಾತ್ರ ಇದೆ ಎಂದು ಸಚಿವರೇ ಹೇಳಿರುವುದು ಕಳೆದ ಮೂರು ವರ್ಷಗಳ ಸರ್ಕಾರದ ವೈಫಲ್ಯವನ್ನೇ ಒಪ್ಪಿಕೊಂಡಂತಾಗಿದೆ ಎಂದರು.

'ಸಿಎಂ-ಸಚಿವರ ನಡುವೆ ಮುಸುಕಿನ ಗುದ್ದಾಟ'

ಬಿಡಿಎ, ಬಿಎಂಆರ್‌ಡಿಎ ಸೇರಿದಂತೆ ಹೆಚ್ಚು ಆದಾಯ ತರುವ ಸಂಸ್ಥೆಗಳನ್ನು ಮುಖ್ಯಮಂತ್ರಿ ತಮ್ಮ ಬಳಿಯೇ ಇಟ್ಟುಕೊಂಡಿದ್ದು, ಉಳಿದ ಇಲಾಖೆಗಳನ್ನು ಸಚಿವರಿಗೆ ನೀಡಿದ್ದಾರೆ ಎಂದು ಅಶೋಕ ಆರೋಪಿಸಿದರು.

ಇದರಿಂದ ಮುಖ್ಯಮಂತ್ರಿ ಹಾಗೂ ಸಚಿವರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಸರ್ಕಾರ ಇನ್ನಾದರೂ ನಿದ್ರೆಯಿಂದ ಎಚ್ಚೆತ್ತುಕೊಂಡು ಜನರ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದರು.

Read More
Next Story