
ಸಚಿವ ಪ್ರಿಯಾಂಕ್ ಖರ್ಗೆ
ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅಧಿಕೃತ ಅನುಮತಿ ಕಡ್ಡಾಯ: ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆಯಿಂದ ಮತ್ತೆ ರಾಜಕೀಯ ಸಂಘರ್ಷ
ಆರ್‌ಎಸ್‌ಎಸ್ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಗೃಹ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ವಿಧಾನ ಪರಿಷತ್ತಿನಲ್ಲಿ ನೀಡಿದ್ದ ಲಿಖಿತ ಉತ್ತರವೂ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿತ್ತು. ಇದೀಗ ಪಥಸಂಚಲನಕ್ಕೆ ಅನುಮತಿ ಪಡೆಯುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸಂಘರ್ಷಕ್ಕೆ ಹೊಸ ಆಯಾಮ ನೀಡಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪಥಸಂಚಲನಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ರಾಜಕೀಯ ಚರ್ಚೆ ಮತ್ತೆ ತೀವ್ರಗೊಂಡಿದೆ. ದಸರಾ ಹಬ್ಬದ ಸಂದರ್ಭದಲ್ಲಿ ರಾಜ್ಯದಾದ್ಯಂತ ಪಥಸಂಚಲನ ನಡೆಸಲು ಉದ್ದೇಶಿಸಿರುವ ಆರ್‌ಎಸ್‌ಎಸ್ ಸ್ವಯಂಸೇವಕರು, ಗೃಹ ಇಲಾಖೆಗೆ ಕೇವಲ ಮಾಹಿತಿ ನೀಡುವುದು ಅಥವಾ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡುವುದು ಅಧಿಕೃತ ಅನುಮತಿಗೆ ಸಮನಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಎಲ್ಲಾ ಸಂಘಟನೆಗಳಂತೆ ನಿಗದಿತ ಅರ್ಜಿ ಸಲ್ಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಂದ ಔಪಚಾರಿಕ ಅನುಮತಿ ಪಡೆದ ಬಳಿಕವೇ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಅವರು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಆಗ್ರಹಿಸಿದ್ದಾರೆ.
ಕಳೆದ ವರ್ಷ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ್ದರಿಂದ ಉಂಟಾಗಿದ್ದ ವಿವಾದ, ಸಾರ್ವಜನಿಕ ಸ್ಥಳಗಳ ಬಳಕೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ನಿಯಮಗಳು, ವಿಧಾನಮಂಡಲದಲ್ಲಿ ಸಂಘದ ವಿರುದ್ಧ ದಾಖಲಾಗಿರುವ ಪ್ರಕರಣಗಳ ಕುರಿತ ಚರ್ಚೆ ಹಾಗೂ ಆರ್‌ಎಸ್‌ಎಸ್‌ನ ನೋಂದಣಿ ಮತ್ತು ಕಾನೂನು ಮಾನ್ಯತೆಯ ಪ್ರಶ್ನೆಗಳು ಈ ಹೊಸ ಬೆಳವಣಿಗೆಯ ಹಿನ್ನೆಲೆ.
ಆರ್‌ಎಸ್‌ಎಸ್ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಗೃಹ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ವಿಧಾನ ಪರಿಷತ್ತಿನಲ್ಲಿ ನೀಡಿದ್ದ ಲಿಖಿತ ಉತ್ತರವೂ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿತ್ತು. ಇದೀಗ ಪಥಸಂಚಲನಕ್ಕೆ ಅನುಮತಿ ಪಡೆಯುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸಂಘರ್ಷಕ್ಕೆ ಹೊಸ ಆಯಾಮ ನೀಡಿದೆ.
My dearest Swayamsevaks of the RSS,
Hope the Dasara festivities are in full swing!
Not to be a wet blanket, but a gentle reminder, merely “informing” or telling the Home Department to “cooperate” or “make necessary arrangements” is not the same as obtaining permission.
Please submit your application in accordance with the prescribed procedure applicable to all organizations and await formal approval from the competent authorities.
I am sure you have read your own Akhil Bharatiya Pratinidhi Sabha Annual Report 2025–26, which states that the RSS conducted 562 route marches across Karnataka, involving 2,21,963 uniformed participants.
Now, when lakhs of you intend to march through Karnataka’s streets on single day at the same time, the Police Department has considerable preparations to make: deployment of personnel, transportation, food, traffic management, security arrangements and other logistics.
All of this requires planning, manpower and public resources.
So, please fill out the prescribed application form, provide the necessary details and await formal permission.
Happy Dasara!
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 20, 2026
ದಸರಾ ಪಥಸಂಚಲನದ ಬಗ್ಗೆ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಅಕ್ಟೋಬರ್ 20ರಂದು 'ಎಕ್ಸ್' ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪ್ರಕಟಿಸಿರುವ ಪ್ರಿಯಾಂಕ್ ಖರ್ಗೆ, ಆರ್‌ಎಸ್‌ಎಸ್ ಸ್ವಯಂಸೇವಕರನ್ನು ಉದ್ದೇಶಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಸರಾ ಸಂಭ್ರಮದ ನಡುವೆಯೂ ಸಂಘಟನೆಯು ಕಾನೂನುಬದ್ಧ ಪ್ರಕ್ರಿಯೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ಕೇವಲ ಗೃಹ ಇಲಾಖೆಗೆ ಮಾಹಿತಿ ನೀಡುವುದಾಗಲಿ ಅಥವಾ ಅಗತ್ಯ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸುವುದಾಗಲಿ ಅಧಿಕೃತ ಅನುಮತಿಯಾಗುವುದಿಲ್ಲ. ಇತರ ಎಲ್ಲಾ ಸಂಘಟನೆಗಳಿಗೆ ಅನ್ವಯಿಸುವ ನಿಗದಿತ ಕಾರ್ಯವಿಧಾನದಂತೆಯೇ ಅರ್ಜಿ ಸಲ್ಲಿಸಿ, ಅಗತ್ಯ ವಿವರಗಳನ್ನು ಒದಗಿಸಿ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯುವುದು ಕಡ್ಡಾಯ ಎಂದು ಅವರು ಒತ್ತಾಯಿಸಿದ್ದಾರೆ.
ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರತಿನಿಧಿ ಸಭಾದ 2025–26ನೇ ಸಾಲಿನ ವಾರ್ಷಿಕ ವರದಿಯನ್ನು ಉಲ್ಲೇಖಿಸಿರುವ ಸಚಿವರು, ರಾಜ್ಯದಲ್ಲಿ ಸಂಘವು ಈವರೆಗೆ 562 ಪಥಸಂಚಲನಗಳನ್ನು ನಡೆಸಿದ್ದು, ಒಟ್ಟು 2,21,963 ಸಮವಸ್ತ್ರಧಾರಿ ಸ್ವಯಂಸೇವಕರು ಭಾಗವಹಿಸಿದ್ದಾರೆ ಎಂಬುದನ್ನು ನೆನಪಿಸಿದ್ದಾರೆ. ಒಂದೇ ದಿನ ರಾಜ್ಯದ ವಿವಿಧ ಭಾಗಗಳಲ್ಲಿ ಲಕ್ಷಾಂತರ ಜನರು ಪಥಸಂಚಲನ ನಡೆಸಲು ಮುಂದಾದರೆ, ಪೊಲೀಸ್ ಇಲಾಖೆಯ ಮೇಲೆ ಭಾರಿ ಪ್ರಮಾಣದ ಸಿದ್ಧತೆಯ ಹೊಣೆ ಬೀಳುತ್ತದೆ.
ಇಷ್ಟು ದೊಡ್ಡ ಜನಸ್ತೋಮ ಸೇರುವಾಗ ಪೊಲೀಸರ ನಿಯೋಜನೆ, ಸಂಚಾರ ನಿರ್ವಹಣೆ, ಭದ್ರತೆ, ಸಾರಿಗೆ, ಆಹಾರ ಹಾಗೂ ಇತರ ವ್ಯವಸ್ಥೆಗಳಿಗಾಗಿ ಹೆಚ್ಚಿನ ಸಿಬ್ಬಂದಿ, ಸಮಯ ಮತ್ತು ಸಾರ್ವಜನಿಕ ಸಂಪನ್ಮೂಲಗಳ ಅಗತ್ಯವಿರುತ್ತದೆ. ಆದ್ದರಿಂದ, ಪಥಸಂಚಲನದ ದಿನಾಂಕ, ಮಾರ್ಗ, ಹಾಗೂ ಭಾಗವಹಿಸುವವರ ನಿಖರ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಮುಂಚಿತವಾಗಿ ಒದಗಿಸಿ ಅನುಮತಿ ಪಡೆಯುವುದು ಅತ್ಯಗತ್ಯ ಎಂದು ಖರ್ಗೆ ಪ್ರತಿಪಾದಿಸಿದ್ದಾರೆ.
ಚಿತ್ತಾಪುರದ ಹಳೆಯ ವಿವಾದ
ಪ್ರಿಯಾಂಕ್ ಖರ್ಗೆ ಮತ್ತು ಆರ್‌ಎಸ್‌ಎಸ್ ನಡುವಿನ ಸಂಘರ್ಷಕ್ಕೆ ಪ್ರಮುಖ ತಿರುವು ಸಿಕ್ಕಿದ್ದು 2025ರ ಅಕ್ಟೋಬರ್‌ನಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನಡೆದ ಪಥಸಂಚಲನ ವಿವಾದದ ಮೂಲಕ. ಖರ್ಗೆ ಅವರು ಪ್ರತಿನಿಧಿಸುವ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ನಡೆಸಲು ಮುಂದಾದಾಗ, ಅನುಮತಿ ಮತ್ತು ಕಾನೂನು ಸುವ್ಯವಸ್ಥೆಯ ಪ್ರಶ್ನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು.
2025ರ ಅಕ್ಟೋಬರ್ 19ರಂದು ಆರ್‌ಎಸ್‌ಎಸ್ ಪಥಸಂಚಲನ ಹಮ್ಮಿಕೊಂಡಿತ್ತು. ಅದೇ ದಿನ ಭೀಮ್ ಆರ್ಮಿ ಸೇರಿದಂತೆ ಇತರ ದಲಿತ ಸಂಘಟನೆಗಳೂ ಮೆರವಣಿಗೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದವು. ಒಂದೇ ಮಾರ್ಗದಲ್ಲಿ ವಿವಿಧ ಸಂಘಟನೆಗಳ ಕಾರ್ಯಕ್ರಮಗಳು ನಡೆದರೆ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಪರಿಗಣಿಸಿದ ಸ್ಥಳೀಯ ಆಡಳಿತ, ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿತ್ತು. ಅಲ್ಲದೆ, ಅನುಮತಿ ಪಡೆಯುವ ಮುನ್ನವೇ ಅಳವಡಿಸಲಾಗಿದ್ದ ಬ್ಯಾನರ್‌ಗಳು ಮತ್ತು ಕಟೌಟ್‌ಗಳನ್ನು ತೆರವುಗೊಳಿಸಿದ್ದು ವಿವಾದವನ್ನು ಮತ್ತಷ್ಟು ಕಾವೇರಿಸಿತ್ತು.
ರಾಜ್ಯ ಸರ್ಕಾರದ ಈ ನಡೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿತ್ತು. ಸರ್ಕಾರವು ಉದ್ದೇಶಪೂರ್ವಕವಾಗಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಅಡ್ಡಿಪಡಿಸುತ್ತಿದ್ದು, ಚಿತ್ತಾಪುರವನ್ನು ರಾಜಕೀಯ ಸಂಘರ್ಷದ ಕೇಂದ್ರವನ್ನಾಗಿ ಮಾಡಲಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ, ಸಾರ್ವಜನಿಕ ಸ್ಥಳಗಳನ್ನು ಬಳಸುವ ಯಾವುದೇ ಸಂಘಟನೆಯಾಗಲಿ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಲೇಬೇಕು ಎಂಬ ನಿಲುವನ್ನು ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡಿದ್ದರು. ಆರ್‌ಎಸ್‌ಎಸ್ ಮಾತ್ರವಲ್ಲದೆ ಇತರ ಸಂಘಟನೆಗಳಿಗೂ ಅನುಮತಿ ಪ್ರಕ್ರಿಯೆ ಸಮಾನವಾಗಿ ಅನ್ವಯಿಸುತ್ತದೆ ಎಂಬುದು ಅವರ ವಾದವಾಗಿತ್ತು.
ಅಂತಿಮವಾಗಿ ಈ ವಿವಾದ ನ್ಯಾಯಾಲಯದ ಮೆಟ್ಟಿಲೇರಿದಾಗ, ಕರ್ನಾಟಕ ಹೈಕೋರ್ಟ್ ಪಥಸಂಚಲನಕ್ಕೆ ಷರತ್ತುಬದ್ಧ ಅವಕಾಶ ಕಲ್ಪಿಸಿತು. ನ್ಯಾಯಾಲಯದ ನಿರ್ದೇಶನದಂತೆ ನವೆಂಬರ್ 16ರಂದು ಚಿತ್ತಾಪುರದಲ್ಲಿ ಪಥಸಂಚಲನ ನಡೆಯಿತು. ಭಾಗವಹಿಸುವವರ ಸಂಖ್ಯೆಯನ್ನು 300ಕ್ಕೆ ಸೀಮಿತಗೊಳಿಸುವುದು, ಕೇವಲ 50 ಸದಸ್ಯರ ಬ್ಯಾಂಡ್‌ಗೆ ಅವಕಾಶ ನೀಡುವುದು, ಹಾಗೂ ನಿಗದಿತ ಮಾರ್ಗ ಮತ್ತು ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಸೇರಿದಂತೆ ಆಡಳಿತ ವಿಧಿಸಿದ್ದ ಷರತ್ತುಗಳಿಗೆ ಒಳಪಟ್ಟು ಈ ಕಾರ್ಯಕ್ರಮ ಜರುಗಿತ್ತು.
ಸಾರ್ವಜನಿಕ ಸ್ಥಳಗಳ ಬಳಕೆಗೆ ನಿಯಮ
ಚಿತ್ತಾಪುರ ವಿವಾದದ ಬೆನ್ನಲ್ಲೇ ಕರ್ನಾಟಕ ಸರ್ಕಾರವು ಸಾರ್ವಜನಿಕ ಸ್ವತ್ತುಗಳ ಬಳಕೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿತ್ತು. ಸರ್ಕಾರಿ ಜಾಗಗಳಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸುವ ಮುನ್ನ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂಬ ನಿಯಮ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿತ್ತು. ಆರ್‌ಎಸ್‌ಎಸ್ ಚಟುವಟಿಕೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಯಂತ್ರಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರ ಹಿಂದೆಯೇ ಈ ನಿಯಮಗಳು ಜಾರಿಯಾಗಿದ್ದು ಸಾಕಷ್ಟು ರಾಜಕೀಯ ಮಹತ್ವ ಪಡೆದುಕೊಂಡಿತ್ತು.
ವಿಧಾನಮಂಡಲದಲ್ಲಿ ಆರ್‌ಎಸ್‌ಎಸ್ ವಿಚಾರವಾಗಿ ಗದ್ದಲ
ಆರ್‌ಎಸ್‌ಎಸ್ ವಿರುದ್ಧದ ರಾಜಕೀಯ ಟೀಕೆಗಳ ನಡುವೆಯೇ, ಆಗಸ್ಟ್ 2026ರಲ್ಲಿ ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದ ಲಿಖಿತ ಉತ್ತರವು ಮತ್ತೊಂದು ವಿವಾದಕ್ಕೆ ನಾಂದಿಹಾಡಿತ್ತು. ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ರಾಜ್ಯದಲ್ಲಿ ಆರ್‌ಎಸ್‌ಎಸ್ ವಿರುದ್ಧ ದಾಖಲಾಗಿರುವ ಪ್ರಕರಣಗಳು, ಕೋಮು ಗಲಭೆಗಳಲ್ಲಿ ಸಂಘಟನೆಯ ಪಾತ್ರ, ಹಾಗೂ ಪಥಸಂಚಲನ ಅಥವಾ ದೈನಂದಿನ ಶಾಖೆಗಳ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಗಳ ಕುರಿತು ಮಾಹಿತಿ ಕೇಳಿದ್ದರು.
ಇದಕ್ಕೆ ಲಿಖಿತ ಉತ್ತರ ನೀಡಿದ್ದ ಖರ್ಗೆ, ಆರ್‌ಎಸ್‌ಎಸ್ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಸಂಘಟನೆಯ ವಿರುದ್ಧ ನಿರಂತರವಾಗಿ ಟೀಕೆ ಮಾಡುತ್ತಿರುವ ಸಚಿವರ ಇಲಾಖೆಯ ಅಧಿಕೃತ ಉತ್ತರದಲ್ಲೇ 'ಯಾವುದೇ ಪ್ರಕರಣಗಳಿಲ್ಲ' ಎಂಬ ಅಂಶ ಹೊರಬಂದಿರುವುದನ್ನು ಬಿಜೆಪಿ ನಾಯಕರು ರಾಜಕೀಯವಾಗಿ ಬಳಸಿಕೊಂಡು ತೀವ್ರ ವಾಗ್ದಾಳಿ ನಡೆಸಿದ್ದರು. ಆರ್‌ಎಸ್‌ಎಸ್ ಮೇಲಿನ ಆರೋಪಗಳಿಗೆ ಸರ್ಕಾರದ ದಾಖಲೆಗಳೇ ಸಾಬೀತು ಮಾಡುತ್ತಿಲ್ಲ ಎಂದು ಬಿಜೆಪಿ ವಾದಿಸಿತ್ತು.
ಆದರೆ, ಖರ್ಗೆ ಅವರು ಸಂಘಟನೆಯ ನೋಂದಣಿ ಮತ್ತು ಕಾನೂನು ಸ್ಥಾನಮಾನವನ್ನು ಪ್ರತ್ಯೇಕವಾಗಿ ಪ್ರಸ್ತಾಪಿಸುವ ಮೂಲಕ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದರು. ಆರ್‌ಎಸ್‌ಎಸ್ ನೋಂದಾಯಿತ ಸಂಸ್ಥೆಯಲ್ಲದ ಕಾರಣ ಆ ಸಂಘಟನೆಯ ಹೆಸರಿನಲ್ಲಿ ನೇರವಾಗಿ ಪ್ರಕರಣ ದಾಖಲಾಗದಿರಬಹುದು; ಬದಲಿಗೆ, ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳು ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾಗಿದ್ದರೆ, ಅಂಥವರ ವಿರುದ್ಧ ವೈಯಕ್ತಿಕವಾಗಿ ಪ್ರಕರಣಗಳು ದಾಖಲಾಗುತ್ತವೆ ಎಂಬುದು ಅವರ ವಾದವಾಗಿತ್ತು.
ಆರ್‌ಎಸ್‌ಎಸ್ ನೋಂದಣಿ ವಿವಾದ
ಪಥಸಂಚಲನದ ಅನುಮತಿ ವಿಚಾರದ ಜೊತೆಗೆ, ಆರ್‌ಎಸ್‌ಎಸ್ ನೋಂದಾಯಿತ ಸಂಸ್ಥೆಯೇ ಎಂಬ ಪ್ರಶ್ನೆಯೂ ಪ್ರಿಯಾಂಕ್ ಖರ್ಗೆ ಅವರ ರಾಜಕೀಯ ಅಭಿಯಾನದ ಪ್ರಮುಖ ಅಸ್ತ್ರ ಸಂಘಟನೆಯ ಕಾನೂನು ಸ್ಥಾನಮಾನ, ಆಸ್ತಿಗಳ ವಿವರ, ಹಣಕಾಸಿನ ಮೂಲಗಳು, ಲೆಕ್ಕಪರಿಶೋಧನೆ ಮತ್ತು ಹೊಣೆಗಾರಿಕೆಯ ಕುರಿತು ಅವರು ಹಲವು ಬಾರಿ ಬಹಿರಂಗವಾಗಿ ಪ್ರಶ್ನಿಸಿದ್ದಾರೆ. ಜೂನ್ 2026ರಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದ ಅವರು, ಸಂಘಟನೆಯ ಕಾನೂನು ಮತ್ತು ಹಣಕಾಸಿನ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವಂತೆ ಒತ್ತಾಯಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಆರ್‌ಎಸ್‌ಎಸ್ ಮುಖಂಡರು, ಸಂಘಟನೆಯು ಯಾವುದನ್ನೂ ಮುಚ್ಚಿಡುತ್ತಿಲ್ಲ ಮತ್ತು ನೋಂದಣಿ ವಿಚಾರವನ್ನು ಕೇವಲ ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಕೇವಲ ನೋಂದಣಿಯಾಗಿಲ್ಲ ಎಂಬ ಕಾರಣಕ್ಕಾಗಿಯೇ ಸಂಘಟನೆಯ ಅಸ್ತಿತ್ವವನ್ನು ಹಾಗೂ ಅದರ ಸಾಮಾಜಿಕ ಕಾರ್ಯಗಳನ್ನು ನಿರಾಕರಿಸಲು ಸಾಧ್ಯವಿಲ್ಲ ಎಂಬ ವಾದವನ್ನು ಬಿಜೆಪಿ ಮುಖಂಡರೂ ಬಲವಾಗಿ ಮಂಡಿಸಿದ್ದರು.

