Politics is a game of chess: CM D.K. Shivakumars poignant words!
x

ಸಿಎಂ ಡಿ.ಕೆ. ಶಿವಕುಮಾರ್‌

"ರಾಜಕೀಯವೆಂದರೆ ಚದುರಂಗದಾಟ": ಸಿಎಂ ಡಿ.ಕೆ. ಶಿವಕುಮಾರ್‌ ಮಾರ್ಮಿಕ ನುಡಿ!

ಮಾಜಿ ಸಿಎಂ ದೇವರಾಜ ಅರಸು ಅವರ ಮೊಮ್ಮಗನಾಗಿದ್ದ ಸೂರಜ್‌ ಹೆಗ್ಡೆ ಪಕ್ಷದ ಅತ್ಯಂತ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಹಿಂದೆ ಅವರಿಗೆ ಮೈಸೂರು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಕೊಡಿಸಲು ಸಾಕಷ್ಟು ಹೋರಾಟ ನಡೆಸಿದ್ದೆ ಎಂದು ಸಿಎಂ ತಿಳಿಸಿದರು.


Click the Play button to hear this message in audio format

ರಾಜಕಾರಣ ಎಂಬುದು ಚದುರಂಗದಾಟವಿದ್ದಂತೆ. ಈ ಆಟ ಆಡುವಾಗ ಯಾರಾದರೂ ತಾನು ಯಾವ ಕಾಯಿ ನಡೆಸುತ್ತೇನೆ ಎಂದು ಮುಂಚಿತವಾಗಿ ಹೇಳುತ್ತಾರೆಯೇ? ಯಾರೂ ಹೇಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾರ್ಮಿಕವಾಗಿ ನುಡಿದಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರಿಗೆ ರಾಜ್ಯಸಭೆ ಟಿಕೆಟ್ ತಪ್ಪಿಸಿ ಬಿಜೆಪಿ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾಡಿರುವ ಟೀಕೆಗಳ ಬಗ್ಗೆ ಉತ್ತರಿಸಿದ ಸಿಎಂ, "ಅವರು ಪಕ್ಷದ ಹಿರಿಯ ನಾಯಕರು, ಮಾತನಾಡಿದ್ದಾರೆ. ಆದರೆ ನಾನು ಸದ್ಯಕ್ಕೆ ಈ ವಿಷಯದ ಬಗ್ಗೆ ಏನನ್ನೂ ಮಾತನಾಡುವುದಿಲ್ಲ. ನಮ್ಮ ಪಕ್ಷದ ಶಿಸ್ತು ಮತ್ತು ಚಿಂತನೆಯನ್ನು ನಾನು ಪಾಲಿಸುತ್ತೇನೆ," ಎಂದರು.

ಸೂರಜ್‌ ಹೆಗ್ಡೆ ತ್ಯಾಗಮಯಿ

ಇಂದು ನಿಧನರಾದ ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಸೂರಜ್ ಹೆಗ್ಡೆ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದರು. "ಸೂರಜ್ ನನ್ನ ಅತ್ಯಂತ ಆತ್ಮೀಯ ಸ್ನೇಹಿತ ಹಾಗೂ ತ್ಯಾಗಕ್ಕೆ ಹೆಸರಾದವರು. ಅವರು ಎಂದಿಗೂ ತಮಗೆ ಇದೇ ಸ್ಥಾನ ಬೇಕು ಎಂದು ಹಠ ಹಿಡಿದವರಲ್ಲ. ಮಾಜಿ ಸಿಎಂ ದೇವರಾಜ ಅರಸು ಅವರ ಮೊಮ್ಮಗನಾಗಿದ್ದ ಅವರು, ಪಕ್ಷದ ಅತ್ಯಂತ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಹಿಂದೆ ಅವರಿಗೆ ಮೈಸೂರು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಕೊಡಿಸಲು ನಾನು ಸಾಕಷ್ಟು ಹೋರಾಟ ನಡೆಸಿದ್ದೆ." ಎಂದು ತಿಳಿಸಿದರು.

ಪಕ್ಷಕ್ಕೆ ದೊಡ್ಡ ನಷ್ಟ

ಸೂರಜ್ ಹೆಗ್ಡೆ ಅವರ ಸಂಘಟನಾ ಚಾತುರ್ಯವನ್ನು ಸ್ಮರಿಸಿದ ಸಿಎಂ ಡಿ.ಕೆ. ಶಿವಕುಮಾರ್‌, "ನನ್ನೊಂದಿಗೆ ಕೆಪಿಸಿಸಿ ಪದಾಧಿಕಾರಿಯಾಗಿ ಸಕ್ರಿಯವಾಗಿ ಕೆಲಸ ಮಾಡಿದ್ದರು. ಅವರ ಕಾರ್ಯವೈಖರಿಯನ್ನು ಗುರುತಿಸಿ ನಮ್ಮ ಸರ್ಕಾರ ಅವರಿಗೆ ರಾಜ್ಯ ಮಟ್ಟದ ಸಚಿವ ಸ್ಥಾನದ ಗೌರವ ನೀಡಿತ್ತು. ಅವರ ಮೇಲೆ ಪಕ್ಷ ದೊಡ್ಡ ನಿರೀಕ್ಷೆ ಇಟ್ಟುಕೊಂಡಿತ್ತು. ಇಂತಹ ನಿಷ್ಠಾವಂತ ನಾಯಕನನ್ನು ಕಳೆದುಕೊಂಡಿರುವುದು ಪಕ್ಷ ಹಾಗೂ ವೈಯಕ್ತಿಕವಾಗಿ ನಮಗೆ ತೀವ್ರ ದುಃಖ ತಂದಿದೆ," ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ

"ಸೂರಜ್ ಹೆಗ್ಡೆ ಅವರ ತಂದೆಯವರೂ ಹಿರಿಯ ರಾಜಕಾರಣಿಯಾಗಿದ್ದು, ಈ ಸಮಯದಲ್ಲಿ ಅವರ ಕುಟುಂಬದ ದುಃಖವನ್ನು ನೋಡಲು ಸಾಧ್ಯವಾಗುತ್ತಿಲ್ಲ. ಸೂರಜ್ ಹೆಗ್ಡೆ ಅವರ ಪಾರ್ಥಿವ ಶರೀರಕ್ಕೆ ರಾಜ್ಯ ಸರ್ಕಾರದ ವತಿಯಿಂದ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಗುವುದು. ಅವರ ಕುಟುಂಬಸ್ಥರು ಅಂತಿಮ ವಿಧಿವಿಧಾನಗಳ ಸಮಯ ನಿಗದಿಪಡಿಸಿದ ತಕ್ಷಣ ಸಕಲ ಮರ್ಯಾದೆಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲು ಮುಖ್ಯ ಕಾರ್ಯದರ್ಶಿಗಳಿಗೆ ಈಗಾಗಲೇ ಆದೇಶಿಸಿದ್ದೇನೆ. ನಾನು ಕೂಡ ಅಂತ್ಯಕ್ರಿಯೆಯಲ್ಲಿ ಖುದ್ದಾಗಿ ಭಾಗಿಯಾಗಲಿದ್ದೇನೆ," ಎಂದರು.

Read More
Next Story