Rajya Sabha election fears: Madhya Pradesh Congress MLAs shift to Bangalore resort!
x

ಮಧ್ಯಪ್ರದೇಶದ ಕಾಂಗ್ರೆಸ್‌ ಶಾಸಕರು

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನದ ಭೀತಿ: ಮಧ್ಯಪ್ರದೇಶ ಕಾಂಗ್ರೆಸ್ ಶಾಸಕರು ಬೆಂಗಳೂರು ರೆಸಾರ್ಟ್‌ಗೆ ಶಿಫ್ಟ್!

ಮಧ್ಯಪ್ರದೇಶದ ರಾಜಧಾನಿ ಭೂಪಾಲ್‌ನಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ 63 ಕಾಂಗ್ರೆಸ್ ಶಾಸಕರು ಇಂದು ಬಿಗಿ ಭದ್ರತೆಯಲ್ಲಿ ವಂಡರ್ ಲಾ ರೆಸಾರ್ಟ್‌ಗೆ ಪ್ರಯಾಣಿಸಿದರು.


Click the Play button to hear this message in audio format

ದೇಶಾದ್ಯಂತ ರಾಜ್ಯಸಭೆ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದೆ. ಜೂ.18 ರಂದು ಮಧ್ಯಪ್ರದೇಶದಿಂದ ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ರೆಸಾರ್ಟ್ ರಾಜಕಾರಣ ಶುರುವಾಗಿದೆ. ಪ್ರತಿಪಕ್ಷಗಳಿಂದ ಕುದುರೆ ವ್ಯಾಪಾರ ಹಾಗೂ ಸ್ವಪಕ್ಷೀಯ ಶಾಸಕರಿಂದ ಅಡ್ಡಮತದಾನ ನಡೆಯುವ ಭೀತಿಯಿಂದ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ.

ಮಧ್ಯಪ್ರದೇಶದ ರಾಜಧಾನಿ ಭೂಪಾಲ್‌ನಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ 63 ಕಾಂಗ್ರೆಸ್ ಶಾಸಕರು ಇಂದು ಬಿಗಿ ಭದ್ರತೆಯಲ್ಲಿ ವಂಡರ್ ಲಾ ರೆಸಾರ್ಟ್‌ಗೆ ಪ್ರಯಾಣಿಸಿದರು. ಕೆಪಿಸಿಸಿ ಮುಖಂಡರು ಹಾಗೂ ಹಿರಿಯ ನಾಯಕರು ಮಧ್ಯಪ್ರದೇಶದ ಕಾಂಗ್ರೆಸ್‌ ಶಾಸಕರಿಗೆ ಬಿಡದಿ ಸಮೀಪದ ವಂಡರ್‌ ಲಾ ರೆಸಾರ್ಟ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.

ಒಂದು ವಾರ ರೆಸಾರ್ಟ್‌ ವಾಸ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿ ಇರುವುದರಿಂದ ಶಾಸಕರನ್ನು ಯಾವುದೇ ಆಮಿಷಗಳಿಗೆ ಒಳಗಾಗದಂತೆ ತಡೆಯಲು ಮತ್ತು ಒಗ್ಗಟ್ಟು ಕಾಯ್ದುಕೊಳ್ಳಲು ಕರ್ನಾಟಕವನ್ನು ಅತ್ಯಂತ ಸುರಕ್ಷಿತ ತಾಣವೆಂದು ಹೈಕಮಾಂಡ್ ಆಯ್ಕೆ ಮಾಡಿಕೊಂಡಿದೆ. ಮೂಲಗಳ ಪ್ರಕಾರ ಬೆಂಗಳೂರಿಗೆ ಆಗಮಿಸಿರುವ ಮಧ್ಯಪ್ರದೇಶದ ಶಾಸಕರು ಸುಮಾರು ಒಂದು ವಾರದ ಕಾಲ ಇಲ್ಲೇ ಬೀಡು ಬಿಡಲಿದ್ದಾರೆ. ಜೂ. 17ರ ರಾತ್ರಿ ಅಥವಾ ಜೂ. 18ರ ಬೆಳಿಗ್ಗೆ ಶಾಸಕರೆಲ್ಲರೂ ಒಟ್ಟಾಗಿ ಬೆಂಗಳೂರಿನಿಂದ ಮಧ್ಯಪ್ರದೇಶಕ್ಕೆ ವಾಪಸ್ ಹೊರಡಲಿದ್ದಾರೆ.

ಸಿಎಂ ಡಿ.ಕೆ. ಶಿವಕುಮಾರ್‌ಗೆ ಹೊಣೆ

"ರಾಜ್ಯಸಭೆ ಚುನಾವಣೆಯ ಮತದಾನದ ದಿನದವರೆಗೂ ಶಾಸಕರನ್ನು ಪ್ರತಿಪಕ್ಷಗಳ ಸಂಪರ್ಕಕ್ಕೆ ಸಿಗದಂತೆ ದೂರ ಇಡುವುದು ಹೈಕಮಾಂಡ್ ತಂತ್ರವಾಗಿದೆ. ಕರ್ನಾಟಕದಲ್ಲಿ ಟ್ರಬಲ್‌ ಶೂಟರ್ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಿರುವುದರಿಂದ ಈ ಶಾಸಕರ ಜವಾಬ್ದಾರಿಯನ್ನು ಡಿಕೆಶಿ ಅವರಿಗೆ ವಹಿಸಲಾಗಿದೆ ಎಂದು ಹೇಳಲಾಗಿದೆ. ಒಟ್ಟಾರೆ, ಮಧ್ಯಪ್ರದೇಶದ ಆಂತರಿಕ ರಾಜಕೀಯ ಬಿಕ್ಕಟ್ಟು ಮತ್ತು ರಾಜ್ಯಸಭೆ ಚುನಾವಣೆಯ ಭೀತಿ ಕರ್ನಾಟಕದಲ್ಲಿ ಮತ್ತೊಮ್ಮೆ 'ರೆಸಾರ್ಟ್ ರಾಜಕಾರಣ'ದ ಸಂಚಲನಕ್ಕೆ ಕಾರಣವಾಗಿದೆ.

ಈ ಹಿಂದೆ ಒಡಿಶಾದ ಶಾಸಕರನ್ನು ಬೆಂಗಳೂರಿನಲ್ಲಿ ಇರಿಸಲಾಗಿತ್ತು. ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಹಾಗೂ ಕುದುರೆ ವ್ಯಾಪಾರ ನಡೆಯುವ ಭೀತಿಯಿಂದ ಬೆಂಗಳೂರಿಗೆ ಕರೆತರಲಾಗಿತ್ತು. ಡಿ.ಕೆ.ಶಿವಕುಮಾರ್ ಅವರು ಈ ಹಿಂದೆ ಅಹ್ಮದ್‌ ಪಟೇಲ್‌ ಸ್ಪರ್ಧೆ ಹಿನ್ನೆಲೆಯಲ್ಲಿ ಗುಜರಾತ್ ಶಾಸಕರನ್ನು ಬೆಂಗಳೂರಿಗೆ ಕರೆತಂದು ರೆಸಾರ್ಟ್‌ನಲ್ಲಿ ಇರಿಸಿದ್ದರು. ಅದಾದ ಬಳಿಕವೇ ಶಿವಕುಮಾರ್‌ ನಿವಾಸದ ಮೇಲೆ ಇಡಿ ದಾಳಿ ನಡೆದಿತ್ತು.

Read More
Next Story