
ಕೆಪಿಸಿಸಿ ಅಧ್ಯಕ್ಷ ಸ್ಥಾನ; ಸಮರ್ಥ ನಾಯಕರಿಗೆ ಹೈಕಮಾಂಡ್ ತಲಾಶ್
ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಹಲವರು ತೆರೆಮರೆಯಲ್ಲಿ ಪೈಪೋಟಿ ನಡೆಸುತ್ತಿದ್ದು, ಸೂಕ್ತ ಹಾಗೂ ಸಮರ್ಥ ನಾಯಕನಿಗಾಗಿ ಹೈಕಮಾಂಡ್ ತಲಾಶ್ ಆರಂಭಿಸಿದೆ.
ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆ ಸುಸೂತ್ರವಾಗಿ ಮುಗಿದ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಪಕ್ಷದ ನೂತನ ಸಾರಥಿಯ ಆಯ್ಕೆಗೆ ಹೈಕಮಾಂಡ್ ನಾಯಕರು ಪ್ರಕ್ರಿಯೆ ಚುರುಕುಗೊಳಿಸಿದ್ದಾರೆ.
ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಹಲವರು ತೆರೆಮರೆಯಲ್ಲಿ ಪೈಪೋಟಿ ನಡೆಸುತ್ತಿದ್ದು, ಸೂಕ್ತ ಹಾಗೂ ಸಮರ್ಥ ನಾಯಕನಿಗಾಗಿ ಹೈಕಮಾಂಡ್ ತಲಾಶ್ ಆರಂಭಿಸಿದೆ.
ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ತೆರವಾಗಲಿದೆ. ಪಕ್ಷದ ಈ ಅತ್ಯುನ್ನತ ಸ್ಥಾನಕ್ಕೆ ಆಯ್ಕೆಯಾಗುವವರಿಗೆ ಇರಬೇಕಾದ ಮಾನದಂಡಗಳ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಕಲಬುರಗಿಯಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಆಗುವುದು ಸಹಜ ಪ್ರಕ್ರಿಯೆ, ಆ ಮೂಲಕ 'ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ' ಎಂಬ ಪಕ್ಷದ ಸಿದ್ಧಾಂತವನ್ನು ಹೈಕಮಾಂಡ್ ಕಟ್ಟುನಿಟ್ಟಾಗಿ ಪಾಲಿಸಲಿದೆ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
"ಮುಂದಿನ ವಿಧಾನಸಭಾ ಚುನಾವಣೆಗೆ ಕೇವಲ 24 ತಿಂಗಳು ಮಾತ್ರ ಬಾಕಿಯಿದೆ. ಹೀಗಾಗಿ ಚುನಾವಣೆ ಮತ್ತು ಪಕ್ಷವನ್ನು ಸಂಘಟಿಸುವ ದೃಷ್ಟಿಯಿಂದ ಅತ್ಯಂತ ವೇಗವಾಗಿ ಮತ್ತು ಎಲ್ಲರನ್ನೂ ಒಗ್ಗಟ್ಟಾಗಿ ಕರೆದೊಯ್ಯುವ ನಾಯಕನನ್ನು ನಾವು ಹುಡುಕುತ್ತಿದ್ದೇವೆ." ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿರುವುದು ಪಕ್ಷದಲ್ಲಿ ಸಂಚಲನ ಮೂಡಿಸಿದೆ.
ಹೊಸ ಅಧ್ಯಕ್ಷರ ಆಯ್ಕೆಗೆ 4 ಸೂತ್ರಗಳು
ಕೆಪಿಸಿಸಿ ನೂತನ ಅಧ್ಯಕ್ಷರಾಗುವವರು ಪಕ್ಷದ ತಳಮಟ್ಟದ ಕಾರ್ಯಕರ್ತರಿಂದ ಹಿಡಿದು ಸಾರ್ವಜನಿಕರಲ್ಲೂ ಉತ್ತಮ ವರ್ಚಸ್ಸು ಹೊಂದಿರುವ ವ್ಯಕ್ತಿಯಾಗಿರಬೇಕು.
ನೂತನ ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸರ್ಕಾರದ ಜೊತೆ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ, ಅತ್ಯುತ್ತಮ ಸಮನ್ವಯತೆಯಿಂದ ಕೆಲಸ ಮಾಡುವ ನಾಯಕನಿಗೆ ಆದ್ಯತೆ ನೀಡಬೇಕು.
ಮುಂದಿನ ವಿಧಾನಸಭಾ ಚುನಾವಣೆಗೆ ಕೇವಲ ಎರಡು ವರ್ಷ ಬಾಕಿ ಇರುವುದರಿಂದ, ತಕ್ಷಣದಿಂದಲೇ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಸವಾಲು ಹೊಸ ಅಧ್ಯಕ್ಷರ ಮೇಲಿರಲಿದೆ.
ಕೇವಲ ನಾಯಕನಷ್ಟೇ ಅಲ್ಲ, ಆ ನಾಯಕನಿಗೆ ಸಂಪೂರ್ಣವಾಗಿ ಸಹಕರಿಸುವ ಒಂದು ಬಲಿಷ್ಠ ತಂಡವನ್ನು ಒಟ್ಟಿಗೆ ಕೊಂಡೊಯ್ಯುವ ಚಾತುರ್ಯ ಹೊಂದಿರುವ ವ್ಯಕ್ತಿಯಾಗಿರಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಪೈಫೋಟಿ
ಡಿ.ಕೆ. ಶಿವಕುಮಾರ್ ಸಿಎಂ ಕುರ್ಚಿ ಏರುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಪಕ್ಷದೊಳಗೆ ಜಾತಿ ಮತ್ತು ಪ್ರಾದೇಶಿಕ ಸಮೀಕರಣಗಳ ಲೆಕ್ಕಾಚಾರ ಜೋರಾಗಿದೆ.
ಹೈಕಮಾಂಡ್ ಶೀಘ್ರದಲ್ಲೇ ಶಾಸಕರು ಮತ್ತು ಹಿರಿಯ ನಾಯಕರ ಅಭಿಪ್ರಾಯ ಪಡೆದು, ಒಮ್ಮತದ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆಯಿದೆ. ಸಿಎಂ ಆಗಿ ಡಿ.ಕೆ. ಶಿವಕುಮಾರ್ ಅವರ ವೇಗಕ್ಕೆ ಸರಿಸಾಟಿಯಾಗಿ ನಿಲ್ಲಬಲ್ಲ ನಾಯಕ ಯಾರೆಂಬ ಪ್ರಶ್ನೆ ಪಕ್ಷದಲ್ಲಿ ಎದುರಾಗಿದೆ.
ಸದ್ಯ ಆಕಾಂಕ್ಷಿಗಳ ಪಟ್ಟಿಯಲ್ಲಿ ಡಾ.ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಕೃಷ್ಣ ಬೈರೇಗೌಡ ಹಾಗೂ ಬಿ.ಕೆ. ಹರಿಪ್ರಸಾದ್ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಒಟ್ಟಾರೆ, ಲೋಕಸಭೆ ಉಪಚುನಾವಣೆ ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ದೃಷ್ಟಿಯಿಂದ ಕೆಪಿಸಿಸಿ ಸಾರಥ್ಯ ಯಾರಿಗೆ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ತಿಂಗಳ ನಂತರ ಸಂಪುಟ ಪುನಾರಚನೆ
ರಾಜ್ಯದಲ್ಲಿ ಸದ್ಯಕ್ಕೆ ಮೊದಲ ಹಂತದಲ್ಲಿ ಸಚಿವರ ಪ್ರಮಾಣವಚನ ನಡೆಯಲಿದ್ದು, ಅದಾದ 15 ದಿನ ಅಥವಾ ಒಂದು ತಿಂಗಳ ನಂತರ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಸಿಎಂ ಜೊತೆ ಎಷ್ಟು ಜನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಪ್ರಸ್ತಾಪ ಇನ್ನೂ ಬಂದಿಲ್ಲ. ಪ್ರಸ್ತಾಪ ಬಂದ ಬಳಿಕವೇ ಡಿಸಿಎಂ ಹಾಗೂ ಸಚಿವರ ಸಂಖ್ಯೆ ತೀರ್ಮಾನವಾಗಲಿದೆ. ಜೂನ್ 3ರ ನಂತರ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

