
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
KPCC ಪದಗ್ರಹಣದಲ್ಲಿ ಹೈಡ್ರಾಮಾ: ಮಲ್ಲಿಕಾರ್ಜುನ್ ಖರ್ಗೆ ಕಾರ್ಯಕರ್ತರನ್ನು ‘ಯೂಸ್‌ಲೆಸ್ ಫೆಲೋಸ್’ ಎಂದಿದ್ದೇಕೆ ?
ಕೋಪದ ಭರದಲ್ಲೇ ಮಾತು ಮುಂದುವರಿಸಿದ ಖರ್ಗೆ, ಇದು ಒಬ್ಬ ವ್ಯಕ್ತಿಯ ಕಾರ್ಯಕ್ರಮವಲ್ಲ, ಇದು ಪಕ್ಷದ ಕಾರ್ಯಕ್ರಮ. ಇಲ್ಲಿ ವ್ಯಕ್ತಿಗಳ ಪೂಜೆಗೆ ಅವಕಾಶವಿಲ್ಲ ಎಂದರು.
ಅರಮನೆ ಮೈದಾನದಲ್ಲಿ ನಡೆದ ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಪದಗ್ರಹಣ ಸಮಾರಂಭದಲ್ಲಿ ಹಿರಿಯ ನಾಯಕರ ಸಮ್ಮುಖದಲ್ಲೇ ಹೈಡ್ರಾಮಾ ನಡೆದಿದೆ. ಭಾಷಣದ ವೇಳೆ ಕಾರ್ಯಕರ್ತರ ಅತಿರೇಕದ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವೇದಿಕೆಯಲ್ಲೇ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.
ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಲು ಎದ್ದು ನಿಲ್ಲುತ್ತಿದ್ದಂತೆ, ಸಭೆಯಲ್ಲಿದ್ದ ಕೆಲ ಕಾರ್ಯಕರ್ತರು ಒಮ್ಮಿಂದೊಮ್ಮೆಲೇ ಮುಖ್ಯಮಂತ್ರಿ "ಡಿಕೆ.. ಡಿಕೆ.." (ಡಿ.ಕೆ. ಶಿವಕುಮಾರ್) ಎಂದು ಜೋರಾಗಿ ಘೋಷಣೆಗಳನ್ನು ಕೂಗಲು ಆರಂಭಿಸಿದರು. ಇದರಿಂದ ಕೋಪಗೊಂಡ ಖರ್ಗೆ, ವೇದಿಕೆಯಲ್ಲೇ ತಮ್ಮ ಆಕ್ರೋಶ ಹೊರಹಾಕಿದರು.
ಕಸ ಗುಡಿಸಲು ಬಂದಿದ್ದಾರಾ?
ಘೋಷಣೆ ಕೂಗುತ್ತಿದ್ದ ಕಾರ್ಯಕರ್ತರ ವಿರುದ್ಧ ಕೆಂಡಾಮಂಡಲರಾದ ಖರ್ಗೆ, "ಯೂಸ್‌ಲೆಸ್ ಫೆಲೋಸ್.. ಮೊದಲು ಸುಮ್ಮನಿರಿ! ಇಲ್ಲಿ ಹೀಗೆ ಕೂಗಾಡಿದರೆ ದೇಶ ನಿಮ್ಮ ಕೈಗೆ ಬಂದಹಾಗೆ ಆಗುತ್ತದಾ? ಒಬ್ಬರು ಒಂದು ಹೇಳುವುದು, ಮತ್ತೊಬ್ಬರು ಇನ್ನೊಂದು ಕೂಗುವುದು.. ಹಾಗಾದರೆ ಬಾಕಿಯವರು ಇಲ್ಲಿ ಏನು ಕಸ ಗುಡಿಸಲು ಬಂದಿದ್ದಾರಾ?" ಎಂದು ಸಿಟ್ಟಿನಿಂದ ಗದರಿದರು. ಖರ್ಗೆ ಅವರು ತೀವ್ರವಾಗಿ ಸಿಟ್ಟಾಗುತ್ತಿದ್ದಂತೆ ಎಚ್ಚೆತ್ತ ಸಿಎಂ ಡಿ.ಕೆ. ಶಿವಕುಮಾರ್, ತಕ್ಷಣವೇ ವೇದಿಕೆಯಲ್ಲಿ ಎದ್ದು ನಿಂತು ಕೈ ಸನ್ನೆ ಮಾಡುವ ಮೂಲಕ ಘೋಷಣೆ ಕೂಗುತ್ತಿದ್ದ ತಮ್ಮ ಬೆಂಬಲಿಗರನ್ನು ಶಾಂತರಾಗಿ ಕುಳಿತುಕೊಳ್ಳುವಂತೆ ಸೂಚಿಸಿದರು.
ಇದು ವ್ಯಕ್ತಿಪೂಜೆಯ ವೇದಿಕೆಯಲ್ಲ
ಕೋಪದ ಭರದಲ್ಲೇ ಮಾತು ಮುಂದುವರಿಸಿದ ಖರ್ಗೆ, "ಇದು ಒಬ್ಬ ವ್ಯಕ್ತಿಯ ಕಾರ್ಯಕ್ರಮವಲ್ಲ, ಇದು ಪಕ್ಷದ ಕಾರ್ಯಕ್ರಮ. ಇಲ್ಲಿ ವ್ಯಕ್ತಿಗಳ ಪೂಜೆಗೆ ಅವಕಾಶವಿಲ್ಲ. ನಮ್ಮೆಲ್ಲರನ್ನೂ ಒಟ್ಟುಗೂಡಿಸುವ ಪಕ್ಷದ ಸಂಘಟನೆಗಾಗಿ ನಾವು ಇಲ್ಲಿದ್ದೇವೆ. ನನಗೆ 58 ವರ್ಷಗಳ ರಾಜಕೀಯ ಅನುಭವವಿದೆ. ಅನೇಕ ನಾಯಕರು ಇಲ್ಲಿಗೆ ಬಂದಿದ್ದಾರೆ. ಪಕ್ಷಕ್ಕೆ ಅವರ ಕೊಡುಗೆ ಚಿಕ್ಕದಾಗಿದ್ದರೂ, ಪಕ್ಷವು ಅವರಿಗೆ ಬಹಳ ದೊಡ್ಡ ಕೊಡುಗೆಯನ್ನು ನೀಡಿದೆ" ಎಂದು ಮಾರ್ಮಿಕವಾಗಿ ನುಡಿದರು.
ಶಿಸ್ತು ಕ್ರಮದ ಎಚ್ಚರಿಕೆ
ಅಶಿಸ್ತು ಪ್ರದರ್ಶಿಸಿದ ಕಾರ್ಯಕರ್ತರಿಗೆ ಖರ್ಗೆ ಕಠಿಣ ಸಂದೇಶ ರವಾನಿಸಿದರು. "ಇಲ್ಲಿ ಯಾರೇ ಕೂಗಾಡುತ್ತಿದ್ದರೂ ನೆನಪಿರಲಿ, ಇಲ್ಲಿ ವಿಡಿಯೋ ರೆಕಾರ್ಡಿಂಗ್ ಆಗುತ್ತಿದೆ. ಕಾರ್ಯಕ್ರಮ ಮುಗಿದ ನಂತರ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುವುದು. ಪಕ್ಷದ ಶಿಸ್ತು ಉಲ್ಲಂಘಿಸಿ ಈ ರೀತಿ ವರ್ತಿಸಿದವರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಕೆ ನೀಡಿದರು.

