CM D.K. Shivakumars secret to success; Who is the grandfather of the fly?
x

ನೊಣವಿನಕೆರೆ ಅಜ್ಜಯ್ಯನವರ ಆರ್ಶೀವಾದ ಪಡೆದ ಸಿಎಂ ಡಿ.ಕೆ. ಶಿವಕುಮಾರ್‌ (ಸಂಗ್ರಹ ಚಿತ್ರ)

ಸಿಎಂ ಡಿ.ಕೆ. ಶಿವಕುಮಾರ್‌ ಯಶಸ್ಸಿನ ಸೀಕ್ರೆಟ್; ಯಾರೀ ನೊಣವಿನಕೆರೆ ಅಜ್ಜಯ್ಯ?

ರಾಜ್ಯ ರಾಜಕಾರಣದ ಹೈಡ್ರಾಮಾ ಮುಗಿದು ಡಿ.ಕೆ. ಶಿವಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಿದ ಸಂದರ್ಭದಲ್ಲಿ ಅಜ್ಜಯ್ಯನವರ ಆಶೀರ್ವಾದ ಪಡೆದಿದ್ದರು.


Click the Play button to hear this message in audio format

ಕರ್ನಾಟಕ ರಾಜಕಾರಣದ 'ಟ್ರಬಲ್ ಶೂಟರ್' ಎಂದೇ ಹೆಸರಾಗಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಧ್ಯಾತ್ಮಿಕ ನಂಬಿಕೆ ಮತ್ತು ಅವರ ಯಶಸ್ಸಿನ ಹಿಂದಿರುವ ಶಕ್ತಿಯ ಕುರಿತು ಸಾರ್ವಜನಿಕ ವಲಯದಲ್ಲಿ ಸದಾ ಚರ್ಚೆ ನಡೆಯುತ್ತಿರುತ್ತದೆ. ಈ ಪೈಕಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಯ ನೊಣವಿನಕೆರೆ ಅಜ್ಜಯ್ಯನವರ ಮೇಲಿನ ಅವರ ಭಕ್ತಿ ಮತ್ತೊಮ್ಮೆ ಜಗಜ್ಜಾಹೀರಾಗಿದೆ.

ಯಾರೀ ನೊಣವಿನಕೆರೆ ಅಜ್ಜಯ್ಯ?

ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಅವರನ್ನು ಭಕ್ತರು ಅತ್ಯಂತ ಪ್ರೀತಿ ಮತ್ತು ಗೌರವದಿಂದ 'ನೊಣವಿನಕೆರೆ ಅಜ್ಜಯ್ಯ' ಎಂದೇ ಕರೆಯುತ್ತಾರೆ. ಸುಮಾರು 500 ವರ್ಷಗಳ ಸುದೀರ್ಘ ಹಾಗೂ ಭವ್ಯ ಇತಿಹಾಸ ಹೊಂದಿರುವ ಈ ಕಾಡಸಿದ್ದೇಶ್ವರ ಮಠವು ಲಕ್ಷಾಂತರ ಭಕ್ತರ ಆರಾಧ್ಯ ಕೇಂದ್ರವಾಗಿದೆ.

ಅಜ್ಜಯ್ಯನ ಅಪ್ಪಣೆ ಇಲ್ಲದೆ ಹೆಜ್ಜೆ ಇಡದ ಡಿಕೆಶಿ!

ಡಿ.ಕೆ. ಶಿವಕುಮಾರ್ ಅವರು ಅಜ್ಜಯ್ಯನವರ ಪರಮ ಭಕ್ತರಾಗಿದ್ದಾರೆ. ತಮ್ಮ ರಾಜಕೀಯ ಜೀವನದ ಪ್ರತಿಯೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ, ಚುನಾವಣೆಗೆ ಸ್ಪರ್ಧಿಸುವಾಗ ಅಥವಾ ಯಾವುದೇ ದೊಡ್ಡ ಜವಾಬ್ದಾರಿ ವಹಿಸಿಕೊಳ್ಳುವ ಮೊದಲು ನೊಣವಿನಕೆರೆ ಮಠಕ್ಕೆ ಭೇಟಿ ನೀಡುವುದು ಅವರ ದಿನಚರಿಯಾಗಿದೆ. ಅಜ್ಜಯ್ಯನವರ ದರ್ಶನ ಪಡೆದು, ಅವರ ಆಶೀರ್ವಾದ ಹಾಗೂ ಅಪ್ಪಣೆ ದೊರೆತ ನಂತರವಷ್ಟೇ ಡಿಕೆಶಿ ತಮ್ಮ ಮುಂದಿನ ರಾಜಕೀಯ ಹೆಜ್ಜೆಯನ್ನು ಇಡುತ್ತಾರೆ ಎಂಬುದು ವಿಶೇಷ.

ಪ್ರಮಾಣವಚನದ ಹಿಂದಿನ ರಹಸ್ಯ!

ರಾಜ್ಯ ರಾಜಕಾರಣದ ಹೈಡ್ರಾಮಾ ಮುಗಿದು ಡಿ.ಕೆ. ಶಿವಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಿದ ಸಂದರ್ಭದಲ್ಲಿ ಅಜ್ಜಯ್ಯನವರ ಆಶೀರ್ವಾದ ಪಡೆದಿದ್ದರು. ಆ ಸಮಯದಲ್ಲಿ ರಾಜಕೀಯವಾಗಿ ಹೆಚ್ಚು ಮಾತನಾಡದಂತೆ ಅಜ್ಜಯ್ಯನವರು ಡಿಕೆಶಿಗೆ ವಿಶೇಷ ಸಲಹೆ ನೀಡಿದ್ದರು. "ಮಾತು ಆಡಿದರೆ ಮುತ್ತು ಒಡೆದು ಹೋಗಲಿದೆ" ಎಂದು ಮಾರ್ಮಿಕವಾಗಿ ನುಡಿದಿದ್ದ ಶ್ರೀಗಳು, ಮೌನವಾಗಿರುವಂತೆ ಸೂಚಿಸಿದ್ದರು. ಗುರುವಿನ ಈ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿದ್ದ ಡಿಕೆಶಿ, ಆ ಕಠಿಣ ಪರಿಸ್ಥಿತಿಯಲ್ಲಿ ಮೌನಕ್ಕೆ ಶರಣಾಗುವ ಮೂಲಕವೇ ದೊಡ್ಡ ರಾಜಕೀಯ ಯಶಸ್ಸನ್ನು ಸಾಧಿಸಿದ್ದರು ಎಂದು ಮೂಲಗಳು ತಿಳಿಸಿವೆ.

Read More
Next Story