What did DCM D.K. Shivakumar say after touching CM Siddaramaiahs feet?
x

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌

ಸಿಎಂ ಸಿದ್ದರಾಮಯ್ಯನವರ ಪಾದ ಮುಟ್ಟಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದೇನು ?

ಉಪಾಹಾರ ಕೂಟ ಆರಂಭವಾಗುವ ಮುನ್ನವೇ ಇಬ್ಬರೂ ನಾಯಕರು ಪರಸ್ಪರ ಅಪ್ಪಿಕೊಂಡು ಒಗ್ಗಟ್ಟಿನ ಸಂದೇಶ ರವಾನಿಸಿದರು. ಇದೇ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದರು.


Click the Play button to hear this message in audio format

ರಾಜ್ಯ ರಾಜಕಾರಣದ ಅತ್ಯಂತ ಮಹತ್ವದ ಅಧಿಕಾರ ಹಸ್ತಾಂತರ ಪ್ರಕ್ರಿಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ 'ಕಾವೇರಿ' ಇಂದು ಸಾಕ್ಷಿಯಾಯಿತು. ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದ ಸಿದ್ದರಾಮಯ್ಯ, ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ ಅತ್ಯಂತ ಭಾವುಕ ಕ್ಷಣಗಳು ನಿರ್ಮಾಣವಾದವು.

ನಿಮ್ಮ ಆಶೀರ್ವಾದ ಇರಲಿ ಸರ್: ಭಾವುಕರಾದ ಡಿಕೆಶಿ

ಉಪಾಹಾರ ಕೂಟ ಆರಂಭವಾಗುವ ಮುನ್ನವೇ ಇಬ್ಬರೂ ನಾಯಕರು ಪರಸ್ಪರ ಅಪ್ಪಿಕೊಂಡು ಒಗ್ಗಟ್ಟಿನ ಸಂದೇಶ ರವಾನಿಸಿದರು. ಇದೇ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದರು. ಈ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್, "ಸರ್, ಮುಂದೆಯೂ ನಿಮ್ಮ ಮಾರ್ಗದರ್ಶನದಲ್ಲೇ ನಾವು ಕೆಲಸ ಮಾಡಿಕೊಂಡು ಹೋಗುತ್ತೇವೆ. ನಿಮ್ಮ ಆಶೀರ್ವಾದ ಸದಾ ನನಗೆ ಮತ್ತು ನಮ್ಮ ತಂಡದ ಮೇಲೆ ಇರಲಿ. ನಿಮ್ಮ ಆಡಳಿತ ವೈಖರಿ ಮತ್ತು ವಿಚಾರಧಾರೆಗಳನ್ನು ಗಮನದಲ್ಲಿಟ್ಟುಕೊಂಡು ನಾವು ಮುನ್ನಡೆಯುತ್ತೇವೆ. ನೀವು ರಾಜ್ಯದಲ್ಲಿ ಮಾಡಿರುವ ಜನಪರ ಕೆಲಸಗಳೇ ನಮ್ಮ ಮುಂದೆ ಮಾದರಿಯಾಗಿದೆ. ಅದನ್ನೇ ನಾನೂ ಅನುಸರಿಸಿಕೊಂಡು ಹೋಗುತ್ತೇನೆ. ಸರ್ಕಾರದ ಯಶಸ್ಸಿಗೆ ನಿಮ್ಮ ಅವಶ್ಯಕತೆ ನಮಗೆ ಸದಾ ಇದೆ, ನೀವು ಹಾಕಿಕೊಟ್ಟ ದಾರಿಯಲ್ಲೇ ನಾನು ಸಾಗುತ್ತೇನೆ" ಎಂದು ಅತ್ಯಂತ ವಿನಮ್ರವಾಗಿ ನುಡಿದರು.

ಸಚಿವರ ಕಣ್ಣೀರು; ಭಾವುಕರಾದ ಸಿಎಂ

ಸಿದ್ದರಾಮಯ್ಯ ಅವರು ತಾವು ಮಧ್ಯಾಹ್ನ 3 ಗಂಟೆಗೆ ರಾಜೀನಾಮೆ ನೀಡುತ್ತಿರುವುದಾಗಿ ಅಧಿಕೃತವಾಗಿ ಪ್ರಕಟಿಸುತ್ತಿದ್ದಂತೆ ಇಡೀ ಸಭಾಂಗಣದಲ್ಲಿ ನೀರವ ಮೌನ ಆವರಿಸಿತು. ಸಚಿವರಾದ ಸಂತೋಷ್ ಲಾಡ್ ಸೇರಿದಂತೆ ಹಲವು ಹಿರಿಯ ಸಚಿವರು ಮತ್ತು ಶಾಸಕರು ತೀವ್ರ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರು ಹಾಕಿದರು.

ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಸಚಿವರು ಕಣ್ಣೀರು ಹಾಕಿದಾಗ ಸದಾ ಗಂಭೀರವಾಗಿರುತ್ತಿದ್ದ ಸಿದ್ದರಾಮಯ್ಯ ಅವರು ಕೂಡ ಒಂದು ಕ್ಷಣ ಭಾವುಕರಾದರು. ಸಚಿವರನ್ನು ಸಮಾಧಾನಪಡಿಸುತ್ತಾ ಮಾತನಾಡಿದ ಸಿಎಂ, "ಕಳೆದ ಮೂರು ವರ್ಷಗಳ ನನ್ನ ಆಡಳಿತಾವಧಿಯಲ್ಲಿ ನಾನು ಮಾಡಿದ ಕೆಲಸಗಳು ನನಗೆ ಸಂಪೂರ್ಣ ಸಮಾಧಾನ ತಂದಿದೆ. ನಿಮ್ಮೆಲ್ಲರ ಸಹಕಾರಕ್ಕೆ ಧನ್ಯವಾದಗಳು" ಎಂದು ಗದ್ಗದಿತ ಕಂಠದಿಂದ ನುಡಿದರು.

ಸಚಿವ ಸಂಪುಟದಲ್ಲಿ ಹಿರಿಯರ ಉಪಸ್ಥಿತಿ

ಈ ಹೈವೋಲ್ಟೇಜ್ ಉಪಾಹಾರ ಕೂಟದಲ್ಲಿ ಸಚಿವರಾದ ಎಚ್.ಕೆ. ಪಾಟೀಲ್, ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್ ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿದ್ದರು. ಹೈಕಮಾಂಡ್ ಸೂಚನೆಯನ್ನು ಗೌರವಿಸಿ ಸಿದ್ದರಾಮಯ್ಯ ಅವರು ಗೌರವಾನ್ವಿತವಾಗಿ ಸ್ಥಾನ ಬಿಟ್ಟುಕೊಡುತ್ತಿರುವುದು ಮತ್ತು ಡಿಕೆಶಿ ತೋರಿದ ಸೌಹಾರ್ದತೆ ರಾಜ್ಯ ರಾಜಕೀಯ ಇತಿಹಾಸದಲ್ಲೇ ಒಂದು ಅಪರೂಪದ ವಿದ್ಯಮಾನವಾಗಿ ದಾಖಲಾಗಿದೆ. ಶುಕ್ರವಾರ (ಮೇ 29) ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ನಡೆಯಲಿದ್ದು, ಅಧಿಕೃತವಾಗಿ ಹೊಸ ನಾಯಕನ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

Read More
Next Story