
ಹಂಗಾಮಿ ಸಿಎಂ ಸಿದ್ದರಾಮಯ್ಯ ಹಾಗೂ ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ
ಡಿಸಿಎಂ ಖೆಡ್ಡಾ: ಪುತ್ರವ್ಯಾಮೋಹಕ್ಕೆ ಒಳಗಾಗದೇ ಡಿಕೆಶಿ ತಂತ್ರಕ್ಕೆ ಸಿದ್ದರಾಮಯ್ಯ ಚೆಕ್‌ಮೇಟ್!
ಇಂದಿರಾ ಗಾಂಧಿಯವರ ಕಾಲದ ಕಾಂಗ್ರೆಸ್‌ನ 'ಪರಿವಾರ ವಾದ'ವನ್ನು ವಿರೋಧಿಸಿ ರಾಜಕೀಯಕ್ಕೆ ಪ್ರವೇಶ ಮಾಡಿದ್ದ ಸಿದ್ದರಾಮಯ್ಯನವರೇ ಈಗ ಅದೇ ಆರೋಪ ಎದುರಿಸುವಂತಾಗಿರುವುದು ರಾಜಕೀಯದ ಬಹುದೊಡ್ಡ ವೈರುಧ್ಯ.
ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಇದೊಂದು ಅತ್ಯಂತ ಮಹತ್ವದ ಹಾಗೂ ವಿಪರ್ಯಾಸದ ಘಟ್ಟ! ಎಪ್ಪತ್ತು-ಎಂಭತ್ತರ ದಶಕದಲ್ಲಿ ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಸಿಡಿದೆದ್ದು, 'ಡೆಲ್ಲಿ ದರ್ಬಾರ್' ಸಂಸ್ಕೃತಿಯನ್ನು ಟೀಕಿಸುತ್ತಾ ಬೆಳೆದ ಅದೇ ಮಾಸ್ ಲೀಡರ್, ಅಹಿಂದ ನಾಯಕ ಸಿದ್ದರಾಮಯ್ಯ ಈಗ ಹೈಕಮಾಂಡ್ ಸೂಚನೆಗೆ ಒಪ್ಪಿ ಸಿಎಂ ಹುದ್ದೆ ತ್ಯಜಿಸಿದ್ದಾರೆ. ಆದರೆ, ಸದ್ಯ ವಿಧಾನಸೌಧದ ಮೊಗಸಾಲೆಯಲ್ಲಿ ಬಿರುಗಾಳಿ ಎಬ್ಬಿಸಿರುವುದು ಸಿಎಂ ಬದಲಾವಣೆ ಮಾತ್ರವಲ್ಲ; ಸಿದ್ದರಾಮಯ್ಯನವರ ಮೇಲೆ ಬೀಸುತ್ತಿರುವ 'ಪುತ್ರ ವ್ಯಾಮೋಹ'ದ ಅಸ್ತ್ರ!
ಇಂದಿರಾ ಗಾಂಧಿಯವರ ಕಾಲದ ಕಾಂಗ್ರೆಸ್‌ನ 'ಪರಿವಾರ ವಾದ'ವನ್ನು ವಿರೋಧಿಸಿ ರಾಜಕೀಯಕ್ಕೆ ಪ್ರವೇಶ ಮಾಡಿದ್ದ ಸಿದ್ದರಾಮಯ್ಯನವರೇ ಈಗ ಅದೇ ಆರೋಪ ಎದುರಿಸುವಂತಾಗಿರುವುದು ರಾಜಕೀಯದ ಬಹುದೊಡ್ಡ ವೈರುಧ್ಯ. ಹಿರಿಯ ಪುತ್ರ ರಾಕೇಶ್ ನಿಧನದ ಬಳಿಕ ಡಾ. ಯತೀಂದ್ರ ಅವರನ್ನು ವರುಣಾ ಕ್ಷೇತ್ರದ ಶಾಸಕನನ್ನಾಗಿ ಮಾಡಲಾಯಿತು. ಆ ನಂತರ ಅವರಿಗೆ ವಿಧಾನಪರಿಷತ್ ಸ್ಥಾನವನ್ನೂ ಕಲ್ಪಿಸಲಾಯಿತು. ಇಂದು ಯತೀಂದ್ರ ಕೇವಲ ತಂದೆಯ ಕ್ಷೇತ್ರದ ಉಸ್ತುವಾರಿಯಷ್ಟೇ ಅಲ್ಲ, ಶಕ್ತಿ ಕೇಂದ್ರದ ಪವರ್ ಕಾರಿಡಾರ್‌ಗಳಲ್ಲಿ ಪ್ರತಿಯೊಂದು ರಾಜಕೀಯ ಆಗುಹೋಗುಗಳನ್ನು ನಿಭಾಯಿಸುವ 'ಸೂಪರ್ ಪವರ್' ಆಗಿ ಹೊರಹೊಮ್ಮಿದ್ದಾರೆ.
ಏನಿದು 'ಡಿಸಿಎಂ' ಆಫರ್ ಖೆಡ್ಡಾ?
ಹೈಕಮಾಂಡ್ ಸೂಚನೆಯಂತೆ ಸಿದ್ದರಾಮಯ್ಯನವರು ಸಿಎಂ ಸ್ಥಾನದಿಂದ ಕೆಳಗಿಳಿದಿದ್ದು, 'ಕನಕಪುರ ಬಂಡೆ' ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಬುಧವಾರ(ಜೂ. 3) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮತ್ತು ಡಿಕೆಶಿ ಬಣ ಸಿದ್ದರಾಮಯ್ಯ ವಿರುದ್ಧ ಭಾರಿ ದೊಡ್ಡ 'ರಾಜಕೀಯ ಟ್ರ್ಯಾಪ್' ಹೆಣೆದಿದೆ ಎನ್ನಲಾಗುತ್ತಿದೆ. ಸಿದ್ದರಾಮಯ್ಯನವರ ಅಹಿಂದ ವೋಟ್ ಬ್ಯಾಂಕ್ ಮತ್ತು ಪ್ರಭಾವದ ತಾಕತ್ತೇನು ಎಂಬುದು ಹೈಕಮಾಂಡ್‌ಗೆ ಗೊತ್ತು. ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಈ ಹುಲಿ ಸುಮ್ಮನೆ ಕೂರಲ್ಲ. ಅದಕ್ಕಾಗಿಯೇ ಅವರ 'ಪುತ್ರ ವ್ಯಾಮೋಹ'ವನ್ನು ಅಸ್ತ್ರವಾಗಿಸಿಕೊಂಡು, ಮಗ ಯತೀಂದ್ರಗೆ ಉಪಮುಖ್ಯಮಂತ್ರಿ (DCM) ಅಥವಾ ಪ್ರಬಲ ಕ್ಯಾಬಿನೆಟ್ ದರ್ಜೆಯ ಹುದ್ದೆಯ ಆಫರ್ ಅನ್ನು ಮುಂದಿಡಲಾಗಿದೆ!
ಡಿಕೆಶಿಯವರ 'ನರೇಟಿವ್ ಪಾಲಿಟಿಕ್ಸ್'!
ಮೇಲ್ನೋಟಕ್ಕೆ ಇದು ಸಿದ್ದರಾಮಯ್ಯನವರನ್ನು ಸಮಾಧಾನಪಡಿಸುವ ಆಫರ್‌ನಂತೆ ಕಂಡರೂ, ಇದರ ಹಿಂದೆ ಡಿ.ಕೆ. ಶಿವಕುಮಾರ್ ಅವರ ಬೃಹತ್ ರಾಜಕೀಯ ಲೆಕ್ಕಾಚಾರ ಅಡಗಿದೆ. ಒಂದು ವೇಳೆ ಯತೀಂದ್ರ ಡಿಸಿಎಂ ಹುದ್ದೆ ಒಪ್ಪಿಕೊಂಡರೆ, ಡಿಕೆಶಿ ಬಣ ರಾಜ್ಯಾದ್ಯಂತ ಒಂದು ಪ್ರಬಲ ನರೇಟಿವ್ ಸೃಷ್ಟಿ ಮಾಡುತ್ತದೆ. "ನೋಡಿದ್ರಾ.. ಸಿದ್ದರಾಮಯ್ಯನವರಿಗೆ ಸೈದ್ಧಾಂತಿಕ ಬದ್ಧತೆಗಿಂತ ಮಗನ ಮೇಲಿನ ವ್ಯಾಮೋಹವೇ ಹೆಚ್ಚಾಯಿತು. ಕೇವಲ ಮಗನ ರಾಜಕೀಯ ಭವಿಷ್ಯಕ್ಕಾಗಿ ತಮ್ಮ ಮುಖ್ಯಮಂತ್ರಿ ಸ್ಥಾನವನ್ನೇ ತ್ಯಾಗ ಮಾಡಿದರು!" ಈ ಮೂಲಕ ಸಿದ್ದರಾಮಯ್ಯನವರ 'ತ್ಯಾಗದ' ಇಮೇಜ್ ಅನ್ನು ಕೇವಲ 'ಮಗನ ಪ್ರೀತಿ' ಎಂದು ಬಿಂಬಿಸಿ, ಅವರ ಸೈದ್ಧಾಂತಿಕ ಇಮೇಜ್ ಅನ್ನು ಕಂಪ್ಲೀಟ್ ಆಗಿ ಡ್ಯಾಮೇಜ್ ಮಾಡುವುದು ಡಿ.ಕೆ.ಶಿವಕುಮಾರ್ ಬಣದ ಯೋಜನೆಯಾಗಿತ್ತು.
ಡಿಕೆಶಿ ತಂತ್ರಕ್ಕೆ ಸಿದ್ದರಾಮಯ್ಯ ಪ್ರತಿತಂತ್ರ!
40 ವರ್ಷಗಳ ರಾಜಕೀಯ ಉಂಡು ಮಲಗಿರುವ ಸಿದ್ದರಾಮಯ್ಯ ಈ ಬಲೆಗೆ ಬೀಳುವ ಮುತ್ಸದ್ದಿಯೇ? ಖಂಡಿತಾ ಇಲ್ಲ. ಡಿಕೆಶಿಯವರ ತಂತ್ರವನ್ನು ಅರಿತಿರುವ ಸಿದ್ದರಾಮಯ್ಯ ಈ ಖೆಡ್ಡಾವನ್ನು ಧೂಳೀಪಟ ಮಾಡಿದ್ದಾರೆ! ದೆಹಲಿ ರಾಜಕಾರಣಕ್ಕೆ ಬನ್ನಿ, ರಾಜ್ಯಸಭೆ ಸದಸ್ಯರಾಗಿ ಎಂಬ ಹೈಕಮಾಂಡ್ ಆಫರ್ ಅನ್ನು ಕಡ್ಡಿಮುರಿದಂತೆ ತಿರಸ್ಕರಿಸಿದ್ದಾರೆ. ಮಗನಿಗೆ ಮಣೆ ಹಾಕುತ್ತಿದ್ದ ಡಿಸಿಎಂ ಹಾಗೂ ಸಚಿವ ಸ್ಥಾನದ ಆಫರ್ ಅನ್ನು ನಯವಾಗಿಯೇ ನಿರಾಕರಿಸಿದ್ದಾರೆ. "ನನ್ನ ಮಗನಿಗೆ ಸದ್ಯಕ್ಕೆ ಯಾವುದೇ ಹುದ್ದೆ ಬೇಡ" ಎಂದು ಹೈಕಮಾಂಡ್‌ಗೆ ಖಡಕ್ ಆಗಿ ತಿಳಿಸಿದ್ದಾರೆ.
'ವರುಣಾ' ಕದನ !
ರಾಜ್ಯಸಭೆಗೆ ಹೋದರೆ ವರುಣಾ ಕ್ಷೇತ್ರವನ್ನು ಬಿಡಬೇಕಾಗುತ್ತದೆ. ಆಗ ವಿಧಾನಪರಿಷತ್ ಸ್ಥಾನ ಬಿಟ್ಟು ಯತೀಂದ್ರ ವರುಣಾದಲ್ಲಿ ಸ್ಪರ್ಧಿಸಿದರೆ, ಅವರನ್ನು ಸೋಲಿಸಲು ಪಕ್ಷದೊಳಗಿನ 'ಹಿತಶತ್ರುಗಳೇ' ಕಾಯುತ್ತಿದ್ದಾರೆ. ಅದರಲ್ಲಿ ಡಿಕೆಶಿಯವರ ಕಾಣದ 'ಕೈ' ಇದ್ದೇ ಇರುತ್ತದೆ ಎಂಬುದು ಸಿದ್ದರಾಮಯ್ಯನವರ ಆತಂಕ. ಇದರ ಜೊತೆಗೆ, ಯತೀಂದ್ರ ಅವರ ಹೆಸರಿನಲ್ಲಿ ಈ ಹಿಂದೆ ಕೇಳಿಬಂದಿದ್ದ ವರ್ಗಾವಣೆ ದಂಧೆಯ ಆರೋಪಗಳು, ವೈರಲ್ ಆಡಿಯೋ ವಿವಾದಗಳು ಸಿದ್ದರಾಮಯ್ಯನವರಿಗೆ ಮುಜುಗುರ ತಂದಿದ್ದವು. ಈಗ ಇಳಿ ವಯಸ್ಸಿನಲ್ಲಿ ಮಗನಿಗೆ ಅಧಿಕಾರ ಕೊಟ್ಟು, ಮತ್ತಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡು 'ರಾಜಕೀಯ ಸಂಧ್ಯಾಕಾಲ'ದಲ್ಲಿ ಕಳಂಕ ಹೊರಲು ಸಿದ್ದರಾಮಯ್ಯ ಸಿದ್ಧರಿಲ್ಲ.
ಸಿದ್ದರಾಮಯ್ಯ ಕುಟುಂಬದಲ್ಲೇ ಭಿನ್ನಾಭಿಪ್ರಾಯ?
ಯತೀಂದ್ರ ಅವರಿಗೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಹುದ್ದೆ ಅಲಂಕರಿಸಬೇಕೆಂಬ ತೀವ್ರ ಆಸೆಯಿತ್ತು. ಅದಕ್ಕಾಗಿ ಅವರು ಸಿದ್ಧತೆಯನ್ನೂ ಮಾಡಿಕೊಂಡಿದ್ದರು. ಆದರೆ, ಸಿದ್ದರಾಮಯ್ಯನವರ ಈ ಕಠಿಣ ನಿರ್ಧಾರದಿಂದಾಗಿ ತಂದೆ-ಮಗನ ನಡುವೆ ಅಸಮಾಧಾನ ಮೂಡಿದೆ ಎನ್ನಲಾಗುತ್ತಿದೆ. ವಿಶೇಷವೆಂದರೆ, ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರು ಪತಿಯ ನಿರ್ಧಾರಕ್ಕೆ ಸಾಥ್ ನೀಡಿದ್ದು, ಕುಟುಂಬ ರಾಜಕಾರಣಕ್ಕಿಂತ ಹೊಸಬರಿಗೆ ಅವಕಾಶ ನೀಡುವುದು ಸೂಕ್ತ ಎಂಬ ಒಲವು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ಹಾದಿ ಮುಳ್ಳಿನ ಹಾಸಿಗೆಯೋ?
"ನಾನು ಎಲ್ಲಿಗೂ ಹೋಗಲ್ಲ, ಇಲ್ಲೇ ಇರುತ್ತೇನೆ" ಎಂದು ಘರ್ಜಿಸಿರುವ ಸಿದ್ದರಾಮಯ್ಯ, ಕುರ್ಚಿ ಹೋದರೂ ರಾಜ್ಯ ರಾಜಕಾರಣದಲ್ಲೇ ಉಳಿದು ತೆರೆಮರೆಯಿಂದಲೇ ಡಿ.ಕೆ.ಶಿವಕುಮಾರ್‌ಗೆ ಬ್ರೇಕ್ ಹಾಕಲು ಯೋಜನೆ ಮಾಡಿದ್ದಾರೆ. 'ಮಗನ ಭವಿಷ್ಯ' ಮತ್ತು 'ತಮ್ಮ ಅಹಿಂದ ಇಮೇಜ್' ಎರಡನ್ನೂ ಉಳಿಸಿಕೊಳ್ಳುವ ಹೋರಾಟದಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗ್ತಾರಾ? ಡಿಕೆಶಿ ಸಿಎಂ ಆದರೂ ಸಿದ್ದರಾಮಯ್ಯನವರು ಸುಲಭವಾಗಿ ಆಡಳಿತ ನಡೆಸಲು ಬಿಡ್ತಾರಾ? ಡಿಕೆಶಿ ಹಾದಿ ಹೂವಿನ ಹಾಸಿಗೆಯಾಗುತ್ತಾ ಅಥವಾ ಮುಳ್ಳಿನ ಹಾದಿಯಾಗುತ್ತಾ? ಇವೆಲ್ಲಕ್ಕೂ ಕಾಲವೇ ಉತ್ತರ ನೀಡಬೇಕಿದೆ.

