ಸಿಎಂಗೆ ಸಂಪುಟ ಪುನಾರಚನೆ ʼಬಲʼ; ಡಿಕೆಶಿಗೆ ನಾಯಕತ್ವ ಬದಲಾವಣೆಯದ್ದೇ ಛಲ
x
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌

ಸಿಎಂಗೆ ಸಂಪುಟ ಪುನಾರಚನೆ ʼಬಲʼ; ಡಿಕೆಶಿಗೆ ನಾಯಕತ್ವ ಬದಲಾವಣೆಯದ್ದೇ ಛಲ

ಹೊಸ ಮುಖಗಳಿಗೆ ಅವಕಾಶ ನೀಡಿ, ಆಡಳಿತವನ್ನು ಹಳಿಗೆ ತರಬಹುದು. ಜತೆಗೆ ಸಂಪುಟದಲ್ಲಿ ನಿಷ್ಠಾವಂತರಿಗೆ ಹೆಚ್ಚು ಆದ್ಯತೆ ನೀಡಿ ವಿರೋಧಿ ಬಣವನ್ನು ದುರ್ಬಲಗೊಳಿಸಬಹುದು ಎಂಬುದು ಸಿದ್ದರಾಮಯ್ಯರ ಯೋಜನೆಯಾಗಿದೆ.


Click the Play button to hear this message in audio format

ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಮೇ 20ಕ್ಕೆ ಮೂರು ವರ್ಷ ಪೂರ್ಣಗೊಳಿಸಲಿದೆ. ಆದರೂ, ಕಳೆದ ಒಂದೂವರೆ ವರ್ಷದಿಂದ ನಾಯಕತ್ವ ಬದಲಾವಣೆಯ ಕಿತ್ತಾಟ ಮುಗಿದಿಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ನಡುವಿನ ʼಸಿಎಂ ಸ್ಥಾನʼದ ಗುದ್ದಾಟ ಇದೀಗ ಬಲಾಬಲ ಪ್ರದರ್ಶನಕ್ಕೆ ವೇದಿಕೆಯಾಗಿದೆ.

ಪೂರ್ಣಾವಧಿ ಅಧಿಕಾರ ಹಿಡಿಯುವ ಸಿದ್ದರಾಮಯ್ಯ ಅವರ ಪ್ರಯತ್ನ, ಸಿಎಂ ಕುರ್ಚಿ ಕಸಿಯುವ ಡಿಕೆಶಿ ಯೋಜನೆಗಳು ಕಾಂಗ್ರೆಸ್‌ ಪಕ್ಷದಲ್ಲಿ ದಿನಕ್ಕೊಂದು ಬೆಳವಣಿಗೆಗೆ ಕಾರಣವಾಗುತ್ತಿವೆ.

ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಪ್ರತಿ ಬಾರಿ ನಾಯಕತ್ವ ಬದಲಾವಣೆಯ ಕೂಗು ಕೇಳಿಬಂದಾಗಲೂ ಸಿಎಂ ಹಾಗೂ ಡಿಸಿಎಂ ಬಣದ ಶಾಸಕರು ದೆಹಲಿಯಲ್ಲಿ ಹೈಕಮಾಂಡ್‌ ನಾಯಕರ ಮನೆ ಬಾಗಿಲು ತಟ್ಟುತ್ತಿದ್ದರು, ತಮ್ಮ ನಾಯಕರ ಪರ ವಕಾಲತು ವಹಿಸುತ್ತಿದ್ದರು. ಈಗಲೂ ಅಂತಹದ್ದೇ ಸಂದರ್ಭ ಎದುರಾಗಿ ಸಿಎಂ ಸಿದ್ದರಾಮಯ್ಯ ಬೆಂಬಲಿಗ ಶಾಸಕರು ಸಂಪುಟ ಪುನಾರಚನೆ ನೆಪದಲ್ಲಿ ʼಸಿಎಂ ಬಲʼ ಪ್ರದರ್ಶನಕ್ಕೆ ತೆರಳಿದ್ದಾರೆ. ಅದರಲ್ಲೂ ನಾಯಕತ್ವ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ರಾಹುಲ್‌ ಗಾಂಧಿ ಭೇಟಿಯೂ ಶತಾಯ ಗತಾಯ ಪ್ರಯತ್ನ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಂಚರಾಜ್ಯ ಚುನಾವಣೆ ಬಳಿಕ ನಾಯಕತ್ವ ಬದಲಾವಣೆ, ʼಮೇ ಕ್ರಾಂತಿʼ ಇನ್ನಿತರ ಮಾತುಗಳ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು, ಶಾಸಕರನ್ನು ದೆಹಲಿ ಯಾತ್ರೆಗೆ ಸಮ್ಮತಿಸಿದ್ದಾರೆ. ಆ ಮೂಲಕ ಹೈಕಮಾಂಡ್ ಎದುರು ತಮ್ಮ ವರ್ಚಸ್ಸು, ಬಲ ಪ್ರದರ್ಶಿಸುವುದೂ ಕೂಡ ಸಿಎಂ ತಂತ್ರವಾಗಿದೆ ಎನ್ನಲಾಗಿದೆ.

ಹೊಸ ಮುಖಗಳಿಗೆ ಅವಕಾಶ ನೀಡಿ, ಆಡಳಿತವನ್ನು ಹಳಿಗೆ ತರಬಹುದು. ಜತೆಗೆ ಸಂಪುಟದಲ್ಲಿ ನಿಷ್ಠಾವಂತರಿಗೆ ಹೆಚ್ಚು ಆದ್ಯತೆ ನೀಡಿ ವಿರೋಧಿ ಬಣವನ್ನು ದುರ್ಬಲಗೊಳಿಸಬಹುದು ಎಂಬುದು ಸಿದ್ದರಾಮಯ್ಯರ ಯೋಜನೆಯಾಗಿದೆ.

ಡಿ.ಕೆ.ಶಿವಕುಮಾರ್ ಬಣದಲ್ಲಿ ಆತಂಕ

ಸಂಪುಟ ಪುನಾರಚನೆಯೊಂದಿಗೆ ಸ್ಥಾನ ಭದ್ರಪಡಿಸಿಕೊಳ್ಳುವ ಸಿಎಂ ತಂತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಪ್ರತಿತಂತ್ರ ಹೆಣೆಯುವುದರಲ್ಲಿ ನಿರತಾಗಿದ್ದಾರೆ.

ಎರಡೂವರೆ ವರ್ಷದ ಬಳಿಕ ಸಿಎಂ ಸ್ಥಾನಕ್ಕಾಗಿ ಡಿ.ಕೆ. ಶಿವಕುಮಾರ್ ನಡೆಸಿದ ಪ್ರತಿ ಹಂತದ ಲಾಬಿಗೂ ಸಿಎಂ ಸಿದ್ದರಾಮಯ್ಯರ ರಾಜಕೀಯ ತಂತ್ರಗಳು ಅಡ್ಡಿ ತಂದಿದ್ದವು. ಈಗ ಸರ್ಕಾರಕ್ಕೆ ಮೂರು ವರ್ಷ ಸಮೀಪಿಸುತ್ತಿರುವ ಬೆನ್ನಲ್ಲೇ ಶಾಸಕರ ದಿಢೀರ್ ದೆಹಲಿ ಭೇಟಿಯನ್ನು ತಮ್ಮ ರಾಜಕೀಯ ಭವಿಷ್ಯಕ್ಕೆ ಕಂಟಕ ಎಂದೇ ಭಾವಿಸಿದ್ದಾರೆ.

ಪಕ್ಷದ ಶಿಸ್ತಿನ ಹೆಸರಿನಲ್ಲಿ ದೆಹಲಿಗೆ ತೆರಳಿದ ಶಾಸಕರಿಗೆ ಎಚ್ಚರಿಕೆ ನೀಡುವ ಮೂಲಕ, ಹೈಕಮಾಂಡ್ ಮೇಲೆ ಸಿದ್ದರಾಮಯ್ಯ ಹೊಂದಿರುವ ಹಿಡಿತವನ್ನು ಸಡಿಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

ಹೈಕಮಾಂಡ್ ಮುಂದಿರುವ ಸವಾಲುಗಳೇನು?

ದೇಶದ ಕೆಲವೇ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ಗೆ ಕರ್ನಾಟಕವು ಪ್ರಮುಖವಾಗಿದೆ. ಇಲ್ಲಿನ ಆಂತರಿಕ ಕಚ್ಚಾಟವು ಹೈಕಮಾಂಡ್ ನಾಯಕರಿಗೆ ಈಗ ತಲೆನೋವಾಗಿದೆ.

ಹಿರಿಯ ನಾಯಕರ ನಡುವಿನ ಸಂಘರ್ಷವು ಸರ್ಕಾರದ ಆಡಳಿತದ ಮೇಲೆ ಪರಿಣಾಮ ಬೀರಬಹುದು. ಅಲ್ಲದೇ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳ ಟೀಕೆಗೂ ದಾರಿ ಮಾಡಿಕೊಡಲಿದೆ. ಆದ್ದರಿಂದ ಐದು ವರ್ಷಗಳ ಕಾಲ ಸರ್ಕಾರವನ್ನು ಸುಗಮವಾಗಿ ನಡೆಸಲು ಸಿದ್ದರಾಮಯ್ಯ ಅವರಿಗೇ ಪೂರ್ಣಾವಧಿ ನೀಡಬೇಕೇ ಅಥವಾ ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ನೀಡಬೇಕೇ ಎಂಬ ಗೊಂದಲದಲ್ಲಿ ಹೈಕಮಾಂಡ್ ಇದೆ.

ಕಾದು ನೋಡುವ ತಂತ್ರದ ಮೊರೆ

ಸಿಎಂ ಹಾಗೂ ಡಿಸಿಎಂ ನಡುವಿನ ಕುರ್ಚಿ ಕದನದಲ್ಲಿ ಕಾಂಗ್ರೆಸ್ ಹೈಕಮಾಂಡ್ ಆತುರದ ನಿರ್ಧಾರ ಕೈಗೊಳ್ಳದೇ ಕಾದು ನೋಡುವ ತಂತ್ರದ ಮೊರೆ ಹೋಗಿದೆ.

2028ರ ಚುನಾವಣೆವರೆಗೂ ಪಕ್ಷವನ್ನು ಒಗ್ಗಟ್ಟಾಗಿ ಮುನ್ನಡೆಸುವುದು ಅನಿವಾರ್ಯವಾಗಿದೆ. ಸಿದ್ದರಾಮಯ್ಯ ಅವರ ಸಂಖ್ಯಾಬಲದ ರಾಜಕೀಯ ಮತ್ತು ಡಿ.ಕೆ. ಶಿವಕುಮಾರ್ ಅವರ ಪಕ್ಷ ಸಂಘಟನೆ ಹಾಗೂ ನಾಯಕತ್ವ ಬದಲಾವಣೆ ಪಟ್ಟುಗಳ ಮಧ್ಯೆ ಸಂಪುಟ ಪುನಾರಚನೆ ಕಸರತ್ತು ಆರಂಭವಾಗಿದೆ. ಆದರೆ, ಸಂಪುಟ ಪುನಾರಚನೆ ಅನಿವಾರ್ಯವೇ ಆದರೆ ಯಾರೆನ್ನೆಲ್ಲಾ ಕೈ ಬಿಡಬೇಕು. ಯಾರಿಗೆಲ್ಲಾ ಅವಕಾಶ ನೀಡಬೇಕು ಎಂಬುದನ್ನು ಸಮಚಿತ್ತದಿಂದ ನಿರ್ಧರಿಸಬೇಕಾದ ತುರ್ತು ಹೈಕಮಾಂಡ್‌ ಮುಂದಿದೆ.

ಏಕೆಂದರೆ, ನಾಯಕತ್ವ ಬದಲಾವಣೆ ವಿಷಯವನ್ನು ಮುಂದೂಡಿಕೊಂಡು ಹೋಗಬೇಕಾದರೆ ಸಂಪುಟದಲ್ಲಿ ಸಿಎಂ ಹಾಗೂ ಡಿಸಿಎಂ ಇಬ್ಬರಿಗೂ ಸಮಾನ ಆಯ್ಕೆ ಅವಕಾಶ ನೀಡಬೇಕಾಗಿದೆ. ಒಂದು ವೇಳೆ ಖಡಾಖಂಡಿತವಾಗಿ ನಾಯಕತ್ವದ ಬದಲಾವಣೆ ಇಲ್ಲ ಎಂದು ಹೇಳುವುದೂ ಕೂಡ ಪಕ್ಷ ಸಂಘಟನೆ ದೃಷ್ಟಿಯಿಂದ ಹಿನ್ನಡೆಯಾಗಲಿದೆ. ಹಾಗಾಗಿ, ಸಿಎಂ ಹಾಗೂ ಡಿಸಿಎಂ ಬಣವನ್ನು ಸಮಾಧಾನಪಡಿಸುವುದೇ ಹೈಕಮಾಂಡ್‌ ಮುಂದಿರುವ ದಾರಿಯಾಗಿದೆ ಎನ್ನಲಾಗಿದೆ.

ಕಾರ್ಯಕ್ಷಮತೆ ನೆಪದಲ್ಲಿ ಬದಲಾವಣೆ

ಸಂಪುಟ ಪುನಾರಚನೆಯಲ್ಲಿ ಹೊಸಬರು ಹಾಗೂ ಹಿರಿಯ ಶಾಸಕರಿಗೆ ಅವಕಾಶ ನೀಡಲು ಸಚಿವರ ಮೌಲ್ಯಮಾಪನ ಪ್ರಕ್ರಿಯೆ ನಡೆಸಲಾಗಿದೆ. ಆಡಳಿತದಲ್ಲಿ ಕಳಪೆ ಸಾಧನೆ ತೋರಿರುವ ಹಿರಿಯ ಸಚಿವರನ್ನು ಪಕ್ಷದ ಸಂಘಟನೆಗೆ ಬಳಸಿಕೊಂಡು, ಅವರ ಜಾಗಕ್ಕೆ ಹೊಸ ಹಾಗೂ ಹಿರಿಯ ಶಾಸಕರನ್ನು ನೇಮಿಸುವ ಮಾತುಗಳು ಪಕ್ಷದಲ್ಲಿ ಕೇಳಿ ಬರುತ್ತಿವೆ.

ಈಗ ಇದೇ ವಾದವನ್ನು ಸಿಎಂ ಬಣದ ಶಾಸಕರು ಬಳಸಿಕೊಳ್ಳುತ್ತಿದ್ದಾರೆ. ಸಚಿವರು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಇದು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುತ್ತಿದೆ, ಹಾಗಾಗಿ, ಸಂಪುಟ ಪುನಾರಚನೆ ಆಗಬೇಕು ಎಂದು ಆಗ್ರಹಿಸುತ್ತಿದ್ದಾರೆ, ಇನ್ನು ಕೆಲ ಶಾಸಕರು ನಾಯಕತ್ವ ಬದಲಾವಣೆ ಮಾಡಿದರೆ ಇಡೀ ಸಂಪುಟವನ್ನೇ ಬದಲಿಸಬಹುದು. ಆಗ ಹೊಸ ಸಂಪುಟದಲ್ಲಿ ಪರಿಣಾಮಕಾರು ಆಡಳಿತ ನೀಡಬಹುದುʼ ಎಂಬ ವಾದ ಮುಂದಿಡುತ್ತಿದ್ದಾರೆ.

ದೆಹಲಿಯಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್‌ ಶಾಸಕರು

ಡಿಕೆಶಿ ಪ್ರಭಾವ ತಗ್ಗಿಸಲು ಸಂಪುಟ ಪುನಾರಚನೆ ವೇಳೆ ಹೆಚ್ಚುವರಿ ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಬೇಕು ಎಂಬ ಒತ್ತಾಯಗಳು ಕೇಳಿ ಬಂದಿವೆ. ಆಗೊಮ್ಮೆ ಹೆಚ್ಚುವರಿ ಡಿಸಿಎಂ ಹುದ್ದೆಗಳನ್ನು ಸೃಜಿಸಿದರೆ ಹಾಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಪ್ರಭಾವ ಕುಗ್ಗಿಸಬಹುದು. ಜತೆಗೆ ಸಿಎಂ ಸ್ಥಾನದ ಬಿಗಿಪಟ್ಟು ಸಡಿಲಿಸಬಹುದು ಎಂಬ ಲೆಕ್ಕಾಚಾರವೂ ನಡೆಯುತ್ತಿದೆ.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಸಚಿವರ ಪಾತ್ರ ಎಷ್ಟಿದೆ, ಶಾಸಕರು ಹಾಗೂ ಸಾರ್ವಜನಿಕರಿಗೆ ಸಚಿವರ ಲಭ್ಯತೆ, ದೂರು ದುಮ್ಮಾನಗಳಿಗೆ ಸ್ಪಂದಿಸುತ್ತಿದ್ದಾರೆಯೇ, ಇಲ್ಲವೇ ಎಂಬುದನ್ನು ಆಧರಿಸಿ ಸಚಿವರ ಮೌಲ್ಯಮಾಪನ ನಡೆಸಲಾಗಿದೆ. ಕಳೆದ ಲೋಕಸಭಾ ಚುನಾವಣೆ ಫಲಿತಾಂಶ ವೇಳೆ ಸಚಿವರ ತವರು ಜಿಲ್ಲೆಗಳಲ್ಲಿ ಪಕ್ಷದ ಸಾಧನೆ ಹೇಗಿತ್ತು ಎಂಬುದು ಕೂಡ ಮೌಲ್ಯಮಾಪನದ ಮಾನದಂಡವಾಗಿತ್ತು ಎನ್ನಲಾಗಿದೆ.

ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸಚಿವರಿಗೆ ಪದೋನ್ನತಿ ಅಥವಾ ಪ್ರಮುಖ ಇಲಾಖೆಗಳನ್ನು ನೀಡಲಾಗುವುದು. ಕಳಪೆ ಪ್ರದರ್ಶನ ತೋರಿದ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಪಕ್ಷದ ಸಂಘಟನೆಯ ಜವಾಬ್ದಾರಿ ವಹಿಸಬೇಕು ಎಂಬ ಮಾತುಗಳು ಪಕ್ಷದಲ್ಲಿ ಕೇಳಿ ಬರುತ್ತಿವೆ. ಈಗಾಗಲೇ 25 ರಿಂದ 30 ಮಂದಿ ಕಳಪೆ ಸಾಧನೆ ತೋರಿರುವ ಸಚಿವರು ಸಂಪುಟದಲ್ಲಿ ಇದ್ದಾರೆ ಎನ್ನಲಾಗಿದೆ.

Read More
Next Story