Punch to the throne | High command breaks for leadership change; Sidhu-DKshis joint message is behind a secret call from seniors
x

ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಸಿಎಂ ಸಿದ್ದರಾಮಯ್ಯ 

ಗದ್ದುಗೆ ಗುದ್ದಾಟ| ನಾಯಕತ್ವ ಬದಲಾವಣೆ ಕಗ್ಗಂಟು; ಪಂಚರಾಜ್ಯ ಫಲಿತಾಂಶದಲ್ಲಿದೆ ಸಿಎಂ ಕುರ್ಚಿ ಭವಿಷ್ಯ

ರಾಜ್ಯ ನಾಯಕತ್ವದ ಬಿಕ್ಕಟ್ಟು ಇದೀಗ ಪಂಚರಾಜ್ಯ ಚುನಾವಣೆ ಫಲಿತಾಂಶದ ಮೇಲೆ ನಿಂತಿದೆ. ಕೇರಳ ಮತ್ತು ಅಸ್ಸಾಂನಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಿದರೆ, ಡಿ.ಕೆ. ಶಿವಕುಮಾರ್‌ ಅವರ ಬಹುದಿನಗಳ ಸಿಎಂ ಸ್ಥಾನದ ಬೇಡಿಕೆ ಪರಿಗಣಿಸಬಹುದು ಎನ್ನಲಾಗಿದೆ.


Click the Play button to hear this message in audio format

ಪಂಚರಾಜ್ಯ ಚುನಾವಣೆಯ ಫಲಿತಾಂಶಕ್ಕೆ ದಿನಗಣನೇ ಆರಂಭವಾಗಿರುವ ಬೆನ್ನಲ್ಲೇ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಕೂಗು ಪ್ರಬಲವಾಗುತ್ತಿದೆ. ಮೇ 4 ರಂದು ಹೊರಬೀಳಲಿರುವ ಪಂಚರಾಜ್ಯ ಫಲಿತಾಂಶಯು ರಾಜ್ಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಲಿದೆ. ಚುನಾವಣೆ ಫಲಿತಾಂಶವೇ ನಾಯಕತ್ವ ಬದಲಾವಣೆ ಬಿಕ್ಕಟ್ಟಿಗೆ ಪರಿಹಾರ ಸೂಚಿಸಲಿರುವ ಹಿನ್ನೆಲೆಯಲ್ಲಿ ಸಿಎಂ ಹಾಗೂ ಡಿಸಿಎಂ ಬಣದಲ್ಲಿ ಚಟುವಟಿಕೆಗಳು ತೀವ್ರಗೊಂಡಿವೆ.

ಸಿಎಂ ಸಿದ್ದರಾಮಯ್ಯ ಅವರು ಬುಧವಾರ ರಾತ್ರಿ ಬೆಂಗಳೂರಿನಲ್ಲಿ ಆಪ್ತ ಸಚಿವರು ಹಾಗೂ ಶಾಸಕರಿಗೆ ಔತಣಕೂಟ ಏರ್ಪಡಿಸುವ ಮೂಲಕ ಹೈಕಮಾಂಡ್‌ಗೆ ಸಂಖ್ಯಾಬಲದ ಸಂದೇಶ ಸಾರುವ ಪ್ರಯತ್ನ ನಡೆಸಿದರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ದೆಹಲಿಯಲ್ಲಿ ಹೈಕಮಾಂಡ್ ನಾಯಕರೊಂದಿಗೆ ಸಮಾಲೋಚನೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಕೇರಳ, ಅಸ್ಸಾಂ ಹಾಗೂ ಪುದುಚೇರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾದ ಫಲಿತಾಂಶ ನಿರೀಕ್ಷೆ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಪಾಳಯದಲ್ಲಿ ಸಿಎಂ ಬದಲಾವಣೆ ನಿರೀಕ್ಷೆ ಗರಿಗೆದರಿದೆ. ಇದರ ಸುಳಿವು ಅರಿತಿರುವ ಸಿಎಂ ಸಿದ್ದರಾಮಯ್ಯ ಅವರು, ಹೈಕಮಾಂಡ್‌ ನಾಯಕರಿಗೆ ತಮ್ಮ ʼಬಲʼ ಪ್ರದರ್ಶಿಸಲು ತಂತ್ರಗಾರಿಕೆ ರೂಪಿಸಿದ್ದಾರೆ.

ಫಲಿತಾಂಶದ ಮೇಲೆ ಕುರ್ಚಿ ಭವಿಷ್ಯ

ರಾಜ್ಯ ನಾಯಕತ್ವದ ಬಿಕ್ಕಟ್ಟು ಇದೀಗ ಪಂಚರಾಜ್ಯ ಚುನಾವಣೆ ಫಲಿತಾಂಶದ ಮೇಲೆ ನಿಂತಿದೆ. ಕೇರಳ ಮತ್ತು ಅಸ್ಸಾಂನಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಿದರೆ, ಅದರ ಶ್ರೇಯಸ್ಸು ನೇರವಾಗಿ ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲಲಿದೆ. ಆಗ ಡಿ.ಕೆ. ಶಿವಕುಮಾರ್‌ ಅವರ ಬಹುದಿನಗಳ ಸಿಎಂ ಸ್ಥಾನದ ಬೇಡಿಕೆಯನ್ನು ಹೈಕಮಾಂಡ್ ಪರಿಗಣಿಸಬಹುದು ಎನ್ನಲಾಗಿದೆ. ಈ ಮಧ್ಯೆ, ಕರ್ನಾಟಕದ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ವಿರುದ್ಧವಾದ ಫಲಿತಾಂಶ ಬಂದರೆ ನೇರ ಪರಿಣಾಮ ಸಿಎಂ ಪಾಳಯಕ್ಕೆ ತಟ್ಟಲಿದೆ. ಸಿಎಂ ಆಪ್ತರಾದ ಜಮೀರ್‌ ಅಹಮದ್‌, ಅಬ್ದುಲ್‌ ಜಬ್ಬಾರ್‌ ಹಾಗೂ ನಜೀರ್‌ ಅಹಮದ್‌ ಅವರು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಶಿಸ್ತುಕ್ರಮ ಜರುಗಿಸಲಾಗಿದೆ. ನಿರೀಕ್ಷಿತ ಫಲಿತಾಂಶ ಬಾರದಿದ್ದರೆ ಸಿಎಂ ಸಿದ್ದರಾಮಯ್ಯ ಅವರ ಜನಪ್ರಿಯತೆ ಕುಗ್ಗಲಿದೆ. ಇದು ಸಿಎಂ ಕುರ್ಚಿಗೂ ಕಂಟಕ ತರುವ ಭೀತಿ ತಂದೊಡ್ಡಿದೆ.

ಆಗೊಮ್ಮೆ ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದರೆ ಸಿಎಂ ಬಣದ ಹಿಡಿತ ಹೆಚ್ಚಲಿದೆ. ಅದು ಡಿಕೆಶಿ ಪ್ರಯತ್ನಕ್ಕೆ ಅಡ್ಡಿಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಸಿಎಂ ಔತಣಕೂಟ, ಡಿಕೆಶಿ ದೆಹಲಿ ಭೇಟಿ

ಸಿಎಂ ಸಿದ್ದರಾಮಯ್ಯ ಅವರು ಬುಧವಾರ ರಾತ್ರಿ ಆಪ್ತ ಶಾಸಕರು ಮತ್ತು ಸಚಿವರಿಗೆ ಔತಣಕೂಟ ಏರ್ಪಡಿಸಿ ಹೈಕಮಾಂಡ್‌ಗೆ ಬಲ ಪ್ರದರ್ಶನದ ಸಂದೇಶ ರವಾನಿಸುವ ಕಸರತ್ತು ಆರಂಭಿಸಿದ್ದಾರೆ. ಇನ್ನು ಸಿಎಂ ತಂತ್ರಗಳಿಗೆ ನೇರವಾಗಿ ಟಾಂಗ್ ನೀಡಿರುವ ಡಿ.ಕೆ.ಶಿವಕುಮಾರ್ ಅವರು, ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಅಸ್ಸಾಂ ಚುನಾವಣೆಯಲ್ಲಿ ಪಕ್ಷದ ಗೆಲುವಿನ ವಿಶ್ವಾಸ ಚಿಗುರಿಸುವ ಮೂಲಕ ಹೈಕಮಾಂಡ್ ನಾಯಕರ ವಿಶ್ವಾಸ ಗಳಿಸಿರುವುದು ಡಿಕೆಶಿ ಸಿಎಂ ಕುರ್ಚಿ ಹಾದಿಯನ್ನು ಸುಗಮಗೊಳಿಸಿದೆ ಎನ್ನಲಾಗಿದೆ.

ಡಿಕೆಶಿ ವಿರುದ್ಧ ಮುಸ್ಲಿಂ ವಿರೋಧಿ ಧೋರಣೆ ಅಸ್ತ್ರ

ಉಪ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಮುಸ್ಲಿಂ ನಾಯಕರ ವಿರುದ್ಧ ಕ್ರಮ ಕೈಗೊಂಡಿರುವ ಕೆಪಿಸಿಸಿ ಅಧ್ಯಕ್ಷರ ನಡೆಯನ್ನು ಮುಸ್ಲಿಂ ವಿರೋಧಿ ಧೋರಣೆ ಎಂದು ಬಿಂಬಿಸಲು ಪ್ರಯತ್ನ ಸಿಎಂ ಬಣದಲ್ಲಿ ನಡೆಯುತ್ತಿದೆ. ಇದು ನೇರವಾಗಿ ಕುರ್ಚಿ ಕದನಕ್ಕೆ ಥಳಕು ಹಾಕಿಕೊಂಡಿದೆ. ಅಲ್ಪಸಂಖ್ಯಾತ ನಾಯಕರ ವಿರುದ್ಧ ಕ್ರಮ ಜರುಗಿಸುವ ಮೂಲಕ ಡಿಕೆಶಿ ಅವರು ಪಕ್ಷದ ಸಾಂಪ್ರದಾಯಿಕ ಮತಬ್ಯಾಂಕ್‌ ಛಿದ್ರಗೊಳಿಸಿದ್ದಾರೆ ಎಂದು ಹೈಕಮಾಂಡ್ ಗೆ ಈಗಾಗಲೇ ಸಿಎಂ ಬಣದವರು ದೂರಲಾಗಿದೆ. ಇದು ಡಿಕೆಶಿ ಅವರನ್ನು 'ಅಲ್ಪಸಂಖ್ಯಾತ ವಿರೋಧಿ' ಎಂದು ಬಿಂಬಿಸಿ, ಸಿಎಂ ರೇಸ್‌ನಿಂದ ದೂರ ತಳ್ಳಲು ಪ್ರಯತ್ನಿಸಲಾಗುತ್ತಿದೆ ಎನ್ನಲಾಗಿದೆ.

ಸಿಎಂ ಡಿನ್ನರ್‌ ಮೀಟಿಂಗ್‌ ರಹಸ್ಯವೇನು?

ಪಂಚ ರಾಜ್ಯಗಳ ಚುನಾವಣೆ ಮುಗಿಯುವ ಹಂತಕ್ಕೆ ಬರುತ್ತಿದ್ದಂತೆ ಕೈ ಪಡೆಯಲ್ಲಿ ಬಿರುಸಿನ ವಿದ್ಯಾಮಾನಗಳು ನಡೆಯುತ್ತಿವೆ. ಯಾವುದೇ ಕಾರಣಕ್ಕೂ ಸಿಎಂ ಗಾದಿ ಬಿಟ್ಟುಕೊಡದಂತೆ ಸಿದ್ದರಾಮಯ್ಯ ಅವರಿಗೆ ಆಪ್ತರು ಒತ್ತಾಯಿಸಿದ್ದಾರೆ.

ಮೇ.4 ರಂದು ರಾಜ್ಯ ಕಾಂಗ್ರೆಸ್‌ನಲ್ಲಿ ದೊಡ್ಡ ಕ್ರಾಂತಿಯಾಗುವ ವದಂತಿಗೆ ತಲೆಕೆಡಿಸಿಕೊಂಡಿರುವ ಬೆಂಬಲಿಗರು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಸುದೀರ್ಘ ಸಭೆ ನಡೆಸಿ, ‌ಚರ್ಚಿಸಿದ್ದಾರೆ. ಉಳಿದ ಎರಡು ವರ್ಷದ ಅವಧಿಗೆ ಸಿಎಂ ಸ್ಥಾನ ಬಿಟ್ಟುಕೊಡಬಾರದು. ಅಂತಹ ಸನ್ನಿವೇಶ ಬಂದರೆ ಹೈಕಮಾಂಡ್ ಬಳಿ ಗಟ್ಟಿಯಾಗಿ ಮಾತನಾಡಬೇಕು. ಹೈಕಮಾಂಡ್‌ ಕಠಿಲ ನಿಲುವು ತೆಗೆದುಕೊಂಡ ಪಕ್ಷದಲ್ಲಿ ಅಹಿಂದ ನಾಯಕರಲ್ಲಿ ಒಬ್ಬರ ಹೆಸರನ್ನು ಮುಂದಿನ ಸಿಎಂ ಸ್ಥಾನಕ್ಕೆ ಶಿಫಾರಸು ಮಾಡಬೇಕು ಎಂದು ಬೆಂಬಲಿಗ ಸಚಿವರು ಆಗ್ರಹಿಸಿದ್ದಾರೆ. ಕೆಲ ಸಚಿವರು ಡಾ.ಜಿ.ಪರಮೇಶ್ವರ್ ಹೆಸರನ್ನೇ ಸಿಎಂ ಸ್ಥಾನಕ್ಕೆ ಸೂಚಿಸುವಂತೆಯೂ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೆಹಲಿಯಲ್ಲಿ ಡಿಕೆಶಿ ಮಾತಿನ ಮರ್ಮವೇನು?

ಸಿಎಂ ಸಿದ್ದರಾಮಯ್ಯ ಅವರು ಔತಣಕೂಟ ನಡೆಸಿರುವ ಕುರಿತು ದೆಹಲಿಯಲ್ಲಿ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯಿಸಿ, "ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಯಾರ ಆಪ್ತರು, ಯಾರಿಗೆ ಆಪ್ತರಲ್ಲ ಎಂಬುದು ನನಗೆ ಗೊತ್ತಿಲ್ಲ. ಇಂತಹ ಸಭೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿರುವುದು ಮೇ ೪ ಬಳಿಕ ಮಹತ್ವದ ವಿದ್ಯಾಮಾನಗಳು ನಡೆಯಲಿವೆ ಎಂಬ ವದಂತಿಗಳಿಗೆ ಪುಷ್ಠಿ ನೀಡುತ್ತಿದೆ.

"ನಾನು ಪಕ್ಷದ ನಾಯಕರನ್ನು ಭೇಟಿಯಾಗಿದ್ದೇನೆ. ಯಾರನ್ನು ಭೇಟಿಯಾಗಿರುವೆ ಎಂದು ನಿಮಗೆ (ಮಾಧ್ಯಮದವರು) ಹೇಳುವುದಿಲ್ಲ. ದೆಹಲಿಗೆ ಗಾಳಿ ಕುಡಿಯಲು ಬಂದಿಲ್ಲ.‌ ತಮಿಳುನಾಡು, ಕೇರಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಚುನಾವಣೆ ಪ್ರವಾಸ ಮಾಡಿದ್ದೆ. ಎಲ್ಲೆಲ್ಲಿ ಏನಾಗಿದೆ ಎಂಬುದನ್ನು ನಾಯಕರಿಗೆ ಮಾಹಿತಿ ನೀಡಿದ್ದೇನೆ. ಕರ್ನಾಟಕದಲ್ಲಿ ಆಗುವ ಬದಲಾವಣೆಗಳ ಬಗ್ಗೆ ನಾನು ಮಾಧ್ಯಮಗಳ ಮುಂದೆ ಚರ್ಚೆ ಮಾಡುವುದಿಲ್ಲ ಎಂದು ಹೇಳಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಒಟ್ಟಾರೆ ಕರ್ನಾಟಕ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಎಂಬುದು ಕೇವಲ ಆಂತರಿಕ ವಿಚಾರವಾಗಿ ಉಳಿದಿಲ್ಲ, ಪಂಚರಾಜ್ಯಗಳ ಫಲಿತಾಂಶದ ನಂತರ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರವನ್ನೂ ಅವಲಂಬಿಸಿದೆ. ಸಿದ್ದರಾಮಯ್ಯ ಅವರು ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು 'ಸಂಖ್ಯಾಬಲ' ನೆಚ್ಚಿಕೊಂಡಿದ್ದರೆ, ಡಿ.ಕೆ. ಶಿವಕುಮಾರ್ ಫಲಿತಾಂಶ ಮತ್ತು ನಿಷ್ಠೆಯನ್ನು ಅಸ್ತ್ರವಾಗಿ ಬಳಸುತ್ತಿದ್ದಾರೆ.

Read More
Next Story