ರಾಮಲಿಂಗಾರೆಡ್ಡಿಗೆ ಬೆಂಗಳೂರು ಉಸ್ತುವಾರಿ ಅನುಮಾನ; ಸಿಎಂ ಡಿಕೆಶಿ ನೀಡಿದ್ದ ವಾಗ್ದಾನವೇನು?
x

ರಾಮಲಿಂಗಾರೆಡ್ಡಿಗೆ ಬೆಂಗಳೂರು ಉಸ್ತುವಾರಿ ಅನುಮಾನ; ಸಿಎಂ ಡಿಕೆಶಿ ನೀಡಿದ್ದ ವಾಗ್ದಾನವೇನು?

2023 ರಲ್ಲಿ ಬೆಂಗಳೂರಿನ ಮೇಲೆ ಹಿಡಿತ ಸಾಧಿಸಲು ಪಟ್ಟು ಹಿಡಿದಿದ್ದ ಡಿ.ಕೆ.ಶಿವಕುಮಾರ್ ಅವರು ಖುದ್ದಾಗಿ ತಮ್ಮ ಸಹೋದರ ಡಿ.ಕೆ. ಸುರೇಶ್ ಅವರೊಂದಿಗೆ ರಾಮಲಿಂಗಾರೆಡ್ಡಿ ನಿವಾಸಕ್ಕೆ ತೆರಳಿ ಮನವೊಲಿಸಿದ್ದರು.


ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಸಚಿವ ಸಂಪುಟದ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ನೀಡಿದ್ದ ಹಳೇ ವಾಗ್ದಾನ ಈಗ ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

2023ರಲ್ಲಿ ಸರ್ಕಾರ ರಚನೆ ಸಂದರ್ಭದಲ್ಲಿ ನೀಡಿದ್ದ ವಚನದಂತೆ ಸಿಎಂ ಡಿ.ಕೆ. ಶಿವಕುಮಾರ್ ಅವರು ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ಅಭಿವೃದ್ಧಿ ಖಾತೆ ಹಸ್ತಾಂತರಿಸುತ್ತಾರಾ ಅಥವಾ ಹೈಕಮಾಂಡ್ ಲೆಕ್ಕಾಚಾರ ಬೇರೆಯೇ ಇದೆಯಾ ಎಂಬ ಪ್ರಶ್ನೆ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

2023ರಲ್ಲಿ ನೀಡಿದ್ದ ವಾಗ್ದಾನವೇನು?

ಕಳೆದ 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ಅಭಿವೃದ್ಧಿ ಮತ್ತು ಉಸ್ತುವಾರಿ ಜವಾಬ್ದಾರಿ ನೀಡಲು ನಿರ್ಧರಿಸಿದ್ದರು. ಆದರೆ, ಬೆಂಗಳೂರಿನ ಮೇಲೆ ಹಿಡಿತ ಸಾಧಿಸಲು ಪಟ್ಟು ಹಿಡಿದಿದ್ದ ಡಿ.ಕೆ.ಶಿವಕುಮಾರ್ ಅವರು ಖುದ್ದಾಗಿ ತಮ್ಮ ಸಹೋದರ ಡಿ.ಕೆ. ಸುರೇಶ್ ಅವರೊಂದಿಗೆ ರಾಮಲಿಂಗಾರೆಡ್ಡಿ ನಿವಾಸಕ್ಕೆ ತೆರಳಿ ಮನವೊಲಿಸಿದ್ದರು.

"ಸದ್ಯಕ್ಕೆ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ನನಗೆ ಬಿಟ್ಟುಕೊಡಿ. ಮುಂದೆ ನಾನು ಮುಖ್ಯಮಂತ್ರಿಯಾದ ಬಳಿಕ ಈ ಜವಾಬ್ದಾರಿಯನ್ನು ನಿಮಗೇ ವಹಿಸುತ್ತೇನೆ," ಎಂದು ಡಿಕೆಶಿ ಬ್ರದರ್ಸ್ ಅಂದು ರಾಮಲಿಂಗಾರೆಡ್ಡಿ ಅವರಿಗೆ ವಚನ ನೀಡಿದ್ದರು ಎನ್ನಲಾಗಿದೆ. ಈ ನಂಬಿಕೆಯ ಮೇಲೆಯೇ ರಾಮಲಿಂಗಾರೆಡ್ಡಿ ಅಂದು ಹಿಂದೆ ಸರಿದಿದ್ದರು.

ಮತ್ತೆ ಭರವಸೆ ನೀಡಿದ್ದ ಸಿಎಂ ಡಿಕೆಶಿ

ಇತ್ತೀಚೆಗೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ರಾಮಲಿಂಗಾರೆಡ್ಡಿ ಅವರು ಖುದ್ದಾಗಿ ಸಿಎಂ ಅವರನ್ನು ಭೇಟಿಯಾಗಿ ಹಳೇ ವಾಗ್ದಾನ ನೆನಪಿಸಿದ್ದರು ಎನ್ನಲಾಗಿದೆ. ಆ ಸಂದರ್ಭದಲ್ಲೂ ಸಿಎಂ ಡಿಕೆಶಿ, "ಖಂಡಿತವಾಗಿಯೂ ನಿಮಗೇ ಬೆಂಗಳೂರು ಉಸ್ತುವಾರಿ ನೀಡುತ್ತೇವೆ, ಆತಂಕ ಬೇಡ," ಎಂದು ಮರು ಭರವಸೆ ನೀಡಿದ್ದರು ಎನ್ನಲಾಗಿದೆ. ಆದರೆ, ಈಗ ತೆರೆಮರೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳೇ ಬೇರೆ ಕಥೆ ಹೇಳುತ್ತಿವೆ.

ಕೃಷ್ಣ ಬೈರೇಗೌಡಗೆ ಮಣೆ ಹಾಕಲು ಕಸರತ್ತು

ಬೆಂಗಳೂರು ರಾಜಕಾರಣದಲ್ಲಿ ರಾಮಲಿಂಗಾರೆಡ್ಡಿ ಅವರು ಭದ್ರ ಹಿಡಿತ ಹೊಂದಿದ್ದರೂ, ಮುಂಬರುವ ಜಿಬಿಎ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಚಿವ ಕೃಷ್ಣ ಬೈರೇಗೌಡ ಅವರಿಗೆ ಬೆಂಗಳೂರು ಅಭಿವೃದ್ಧಿ ಖಾತೆ ನೀಡಲು ಹೈಕಮಾಂಡ್ ಮಟ್ಟದಲ್ಲಿ ತೀವ್ರ ಒತ್ತಡ ಮತ್ತು ತೆರೆಮರೆಯ ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ. ಇದು ರಾಮಲಿಂಗಾರೆಡ್ಡಿ ಅಸಮಾಧಾನಕ್ಕೆ ಕಾರಣವಾಗಿದೆ.

ಬೆಂಗಳೂರು ಅಭಿವೃದ್ಧಿ ಖಾತೆಗೆ ರೆಡ್ಡಿ ಪಟ್ಟು

ಪಕ್ಷ ಮತ್ತು ಸರ್ಕಾರದಲ್ಲಿ ತಮ್ಮನ್ನು ಮೂಲೆಗುಂಪು ಮಾಡಲು ಯತ್ನಿಸಲಾಗುತ್ತಿದೆ ಎಂಬ ಅಸಮಾಧಾನ ರಾಮಲಿಂಗಾರೆಡ್ಡಿ ಅವರ ಆಪ್ತ ವಲಯದಲ್ಲಿ ಹೊಗೆಯಾಡುತ್ತಿದೆ. ಡಿಕೆಶಿ ಮಾತು ನಂಬಿ ಬೆಂಗಳೂರು ಅಭಿವೃದ್ಧಿ ಖಾತೆ ಬಿಟ್ಟುಕೊಡಲಾಗಿದೆ. ಈಗ ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಬೆಂಗಳೂರು ಉಸ್ತುವಾರಿ ಸಿಗದಿದ್ದರೆ ಕಠಿಣ ನಿರ್ಧಾರ ಕೈಗೊಳ್ಳಬೇಕಾಗಬಹುದು ಎಂದು ರೆಡ್ಡಿ ಅವರು ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಬಿಎಂಪಿ ಚುನಾವಣೆ ಹೊತ್ತಲ್ಲೇ ಭಿನ್ನಮತ?

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಚುನಾವಣೆ ಎದುರಾಗುತ್ತಿರುವ ನಿರ್ಣಾಯಕ ಸಮಯದಲ್ಲಿ ನಗರದ ಸಾರಥ್ಯ ಯಾರಿಗೆ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಒಂದು ವೇಳೆ ರಾಮಲಿಂಗಾರೆಡ್ಡಿ ಅವರಂತಹ ಹಿರಿಯ ನಾಯಕ ಅಸಮಾಧಾನಗೊಂಡು ದೂರ ಸರಿದರೆ, ಅದು ಬೆಂಗಳೂರು ನಗರದ ಕಾಂಗ್ರೆಸ್ ಪಕ್ಷದ ಸಂಘಟನೆ ಹಾಗೂ ಮುಂಬರುವ ಚುನಾವಣೆಯ ಮೇಲೆಯೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ.

Read More
Next Story