
ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್ ಅವರಿಗೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಪತ್ರ ಸಲ್ಲಿಸಿದರು.
ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ನೀಡಿದ ಸಿಎಂ ಸಿದ್ದರಾಮಯ್ಯ!
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ರಾತ್ರಿಯ ವೇಳೆಗೆ ಬೆಂಗಳೂರಿಗೆ ಮರಳುವ ಸಾಧ್ಯತೆಯಿದೆ. ರಾಜ್ಯಪಾಲರು ಕೇಂದ್ರ ಸ್ಥಾನಕ್ಕೆ ಬಂದ ತಕ್ಷಣವೇ ರಾಜೀನಾಮೆ ಪತ್ರವನ್ನು ಕೂಲಂಕಷವಾಗಿ ಪರಿಶೀಲಿಸಿ, ಅದನ್ನು ಅಧಿಕೃತವಾಗಿ ಅಂಗೀಕರಿಸಲಿದ್ದಾರೆ.
ಹೈಕಮಾಂಡ್ ಸೂಚನೆಯಂತೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ ಸಿದ್ದರಾಮಯ್ಯ ಅವರು ಮಧ್ಯಾಹ್ನ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಕಾರಿನಲ್ಲಿ ರಾಜಭವನಕ್ಕೆ ಆಗಮಿಸಿದರು. ಆದರೆ, ಈ ಮಹತ್ವದ ಕ್ಷಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವೈಯಕ್ತಿಕ ಕಾರಣಗಳಿಗಾಗಿ ಮಧ್ಯಪ್ರದೇಶದ ಪ್ರವಾಸದಲ್ಲಿದ್ದ ಕಾರಣ ಲೋಕಭವನದಲ್ಲಿ ಉಪಸ್ಥಿತರಿರಲಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್ ಅವರಿಗೆ ತಮ್ಮ ಅಧಿಕೃತ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದರು.
ರಾಜ್ಯಪಾಲರು ಬಂದ ಬಳಿಕವೇ ಪ್ರಕ್ರಿಯೆ
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್ ಅವರು, "ಪ್ರಸ್ತುತ ರಾಜ್ಯಪಾಲರು ಕೇಂದ್ರ ಸ್ಥಾನದಲ್ಲಿಲ್ಲ. ಅವರು ಬೆಂಗಳೂರಿಗೆ ಮರಳಿದ ನಂತರವೇ ಈ ರಾಜೀನಾಮೆ ಪತ್ರವನ್ನು ಅವರ ಮುಂದೆ ಮಂಡಿಸಲಾಗುವುದು. ಅಲ್ಲಿಯವರೆಗೆ ಕಾಯಬೇಕು" ಎಂದು ನಿಯಮಾವಳಿಗಳನ್ನು ವಿವರಿಸಿದರು. ಇದಕ್ಕೆ ಸಮ್ಮತಿಸಿದ ಸಿದ್ದರಾಮಯ್ಯ ಅವರು, ತಮ್ಮ ರಾಜೀನಾಮೆ ಪತ್ರವನ್ನು ವಿಶೇಷ ಕಾರ್ಯದರ್ಶಿಯವರ ಕೈಗೊಪ್ಪಿಸಿ ಲೋಕಭವನದಿಂದ ವಾಪಸ್ ತೆರಳಿದರು.
ರಾಜಭವನದ ಮುಂದಿನ ನಡೆ ಏನು ?
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ರಾತ್ರಿಯ ವೇಳೆಗೆ ಬೆಂಗಳೂರಿಗೆ ಮರಳುವ ಸಾಧ್ಯತೆಯಿದೆ. ರಾಜ್ಯಪಾಲರು ಕೇಂದ್ರ ಸ್ಥಾನಕ್ಕೆ ಬಂದ ತಕ್ಷಣವೇ ರಾಜೀನಾಮೆ ಪತ್ರವನ್ನು ಕೂಲಂಕಷವಾಗಿ ಪರಿಶೀಲಿಸಿ, ಅದನ್ನು ಅಧಿಕೃತವಾಗಿ ಅಂಗೀಕರಿಸಲಿದ್ದಾರೆ ಎಂದು ರಾಜಭವನದ ಮೂಲಗಳು ತಿಳಿಸಿವೆ. ಅಲ್ಲಿಯವರೆಗೆ ತಾಂತ್ರಿಕವಾಗಿ ಸಿದ್ದರಾಮಯ್ಯ ಅವರೇ ಉಸ್ತುವಾರಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ರಾಜ್ಯಪಾಲರು ರಾಜೀನಾಮೆಯನ್ನು ಅಂಗೀಕರಿಸಿದ ತಕ್ಷಣವೇ ಹೊಸ ಸರ್ಕಾರ ರಚನೆ ಹಾಗೂ ಡಿ.ಕೆ. ಶಿವಕುಮಾರ್ ಅವರ ಮುಖ್ಯಮಂತ್ರಿ ಹಾದಿ ಸುಗಮವಾಗಲಿದೆ.

