
ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಸಿದ್ಧರಾಮಯ್ಯ ರಾಜೀನಾಮೆ ಕೊಡೋಕೆ ಆಗುತ್ತಾ? ಅವರ ಮುಂದಿರುವ ಆಯ್ಕೆಗಳೇನು?
ರಾಜ್ಯಪಾಲರ ಕಾರ್ಯಾಲಯಕ್ಕೆ ರಾಜೀನಾಮೆ ತಲುಪಿಸಿದರೆ ಅಧಿಕೃತ ದಾಖಲೆ ಎಂದು ಪರಿಗಣಿಸಲಾಗುತ್ತದೆ. ರಾಜ್ಯಪಾಲರು ಕೇಂದ್ರ ಸ್ಥಾನಕ್ಕೆ ಮರಳಿದ ಬಳಿಕ ರಾಜೀನಾಮೆ ಪತ್ರವನ್ನು ಅವರ ವಿವೇಚನೆಗೆ ಕಳುಹಿಸಲಾಗುತ್ತದೆ.
ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವಾಗಲೇ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋತ್ ಅವರು ಮಧ್ಯಪ್ರದೇಶದ ಇಂದೋರ್‌ಗೆ ತೆರಳಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.
ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬಹುದೇ, ಸಂವಿಧಾನ ಹಾಗೂ ಕಾನೂನಿನಲ್ಲಿ ಇಂತಹ ಸಂದರ್ಭಗಳಲ್ಲಿ ಹೇಗೆ ರಾಜೀನಾಮೆ ಸಲ್ಲಿಸಬಹುದು ಎಂಬ ಪ್ರಶ್ನೆಗಳು ಎದ್ದಿವೆ. ಅಲ್ಲದೇ, ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಇರುವ ಆಯ್ಕೆಗಳೇನು ಎಂಬುದು ಇಲ್ಲಿದೆ.
ವಿಶೇಷ ಕಾರ್ಯದರ್ಶಿಗೆ ರಾಜೀನಾಮೆ
- ಸಂವಿಧಾನದ ನಿಯಮಗಳ ಪ್ರಕಾರ ರಾಜ್ಯಪಾಲರು ಕಚೇರಿಯಲ್ಲಿ ಲಭ್ಯವಿಲ್ಲದಿದ್ದರೂ ಮುಖ್ಯಮಂತ್ರಿಗಳು ತಮ್ಮ ರಾಜೀನಾಮೆ ಪತ್ರವನ್ನು ರಾಜಭವನದ ವಿಶೇಷ ಕಾರ್ಯದರ್ಶಿ ಅಥವಾ ಜಂಟಿ ಕಾರ್ಯದರ್ಶಿಗೆ ಹಸ್ತಾಂತರಿಸಬಹುದು.
- ರಾಜ್ಯಪಾಲರ ಕಾರ್ಯಾಲಯಕ್ಕೆ ರಾಜೀನಾಮೆ ತಲುಪಿಸಿದರೆ ಅಧಿಕೃತ ದಾಖಲೆ ಎಂದು ಪರಿಗಣಿಸಲಾಗುತ್ತದೆ. ರಾಜ್ಯಪಾಲರು ಕೇಂದ್ರ ಸ್ಥಾನಕ್ಕೆ ಮರಳಿದ ಬಳಿಕ ರಾಜೀನಾಮೆ ಪತ್ರವನ್ನು ಅವರ ವಿವೇಚನೆಗೆ ಕಳುಹಿಸಲಾಗುತ್ತದೆ.
- ಪ್ರಸ್ತುತ, ಕರ್ನಾಟಕ ರಾಜ್ಯಪಾಲರು ಇಂದೋರ್ ಪ್ರವಾಸದಲ್ಲಿದ್ದು, ಸಂಜೆ ಅಥವಾ ರಾತ್ರಿ ವಾಪಸಾಗುವುದರಿಂದ ಈ ಆಯ್ಕೆಯಡಿ ಇಂದೇ (ಗುರುವಾರ) ವಿಶೇಷ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ನೀಡುವ ಸಾಧ್ಯತೆ ಇದೆ. ರಾಜೀನಾಮೆ ನಿರ್ಧಾರ ಸ್ವಯಂಪ್ರೇರಿತವೇ ಅಥವಾ ಯಾವುದಾದರೂ ಒತ್ತಡದಿಂದ ನೀಡುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ರಾಜ್ಯಪಾಲರು ಮುಖ್ಯಮಂತ್ರಿಗಳನ್ನು ಮುಖಾಮುಖಿ ಭೇಟಿಯಾಗಿ ಚರ್ಚಿಸಿದ ಬಳಿಕ ರಾಜೀನಾಮೆ ಅಂಗೀಕಾರವಾಗಲಿದೆ.
- ಈ ನಡುವೆ, ಹೊಸ ಮುಖ್ಯಮಂತ್ರಿ ಹಾಗೂ ಮಂತ್ರಿಮಂಡಲ ರಚನೆಯಾಗುವವರೆಗೂ ಸಿದ್ದರಾಮಯ್ಯ ಅವರನ್ನೇ ಉಸ್ತುವಾರಿ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ರಾಜ್ಯಪಾಲರು ಸೂಚಿಸಬಹುದಾಗಿದೆ.
- ಇನ್ನು ತುರ್ತು ಸಂದರ್ಭದಲ್ಲಿ ಮುಖ್ಯಮಂತ್ರಿಗಳು ತಮ್ಮ ಸಹಿ ಇರುವ ಅಧಿಕೃತ ರಾಜೀನಾಮೆ ಪತ್ರದ ಸ್ಕ್ಯಾನ್ ಪ್ರತಿಯನ್ನು ರಾಜ್ಯಪಾಲರ ಅಧಿಕೃತ ಇ-ಮೇಲ್ ಐಡಿಗೆ ಕಳುಹಿಸಬಹುದು. ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆ. ಆದರೆ, ರಾಜ್ಯಪಾಲರು ಹಿಂತಿರುಗಿದ ಬಳಿಕ ನೇರವಾಗಿ ಅವರನ್ನು ಭೇಟಿ ಮಾಡಿ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಲೇಬೇಕು.
- ಒಂದು ವೇಳೆ ರಾಜ್ಯಪಾಲರು ದೀರ್ಘಾವಧಿ ರಜೆಯಲ್ಲಿದ್ದು, ನೆರೆಯ ರಾಜ್ಯದ ರಾಜ್ಯಪಾಲರಿಗೆ ಹೆಚ್ಚುವರಿ ಉಸ್ತುವಾರಿ ನೀಡಿದ್ದಾಗ ಮುಖ್ಯಮಂತ್ರಿಗಳು ಉಸ್ತುವಾರಿ ರಾಜ್ಯಪಾಲರನ್ನು ಸಂಪರ್ಕಿಸಿ ರಾಜೀನಾಮೆ ನೀಡುವುದಕ್ಕೂ ಕಾನೂನಿನಲ್ಲಿ ಅವಕಾಶಗಳಿವೆ.
Next Story

