What is it about the Bangalore Urban Development Department that has so much power?
x

ಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು ನಗರಾಭಿವೃದ್ಧಿ ಖಾತೆ ಇಲ್ಲೇನಿದೆ ಅಷ್ಟೊಂದು ಪವರ್?

ಬೆಂಗಳೂರು ನಗರಾಭಿವೃದ್ಧಿ ಖಾತೆಯ ನೈಜ ಶಕ್ತಿಯನ್ನು ಅಳೆಯುವ ಮುನ್ನ ಒಂದು ಕಟು ಸತ್ಯವನ್ನು ಒಪ್ಪಿಕೊಳ್ಳಬೇಕು. ಇದು ದೇಶದ ಐಟಿ ಹಬ್, ರಿಯಲ್ ಎಸ್ಟೇಟ್ ಸ್ವರ್ಗ ಮತ್ತು ವಿದೇಶಿ ನೇರ ಹೂಡಿಕೆಯ ಹೆಬ್ಬಾಗಿಲು.


Click the Play button to hear this message in audio format

ಕರ್ನಾಟಕ ರಾಜಕಾರಣದಲ್ಲಿ ಹೈಕಮಾಂಡ್ ಮಟ್ಟದಲ್ಲಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಯುವುದು ಹೊಸದೇನಲ್ಲ. "ನಿಮಗೆ ಯಾವ ಖಾತೆ ಬೇಕು?" ಎಂದು ಕೇಳಿದರೆ ಗೃಹ, ಹಣಕಾಸು, ಕಂದಾಯ ಅಥವಾ ಇಂಧನ ಇಲಾಖೆಗಳ ಹೆಸರುಗಳು ಮುಂಚೂಣಿಗೆ ಬರುತ್ತವೆ. ಆದರೆ, ವಿಧಾನಸೌಧದ ಮೊಗಸಾಲೆಯ ಒಳ ಉಸಿರನ್ನು ಬಲ್ಲ ರಾಜಕೀಯ ಚಾಣಕ್ಯರು ಮಾತ್ರ ಬೊಟ್ಟು ಮಾಡುವುದು ಮತ್ತೊಂದು ವಿಶೇಷ ಖಾತೆಯತ್ತ. ಅದೇ ‘ಬೆಂಗಳೂರು ನಗರಾಭಿವೃದ್ಧಿ ಖಾತೆ’!.

ಒಂದು ಸಚಿವ ಸ್ಥಾನಕ್ಕಾಗಿ ಪ್ರಭಾವಿ ನಾಯಕರು ರಾತ್ರೋರಾತ್ರಿ ಹೈಕಮಾಂಡ್ ಬಾಗಿಲು ತಟ್ಟುವುದೇಕೆ? ಸಿಎಂ ಅಥವಾ ಡಿಸಿಎಂಗಳೇ ವರ್ಷಾನುಗಟ್ಟಲೆ ಈ ಖಾತೆಯನ್ನು ಬೇರೆಯವರಿಗೆ ಬಿಟ್ಟುಕೊಡದೆ ತಮ್ಮ ಬಳಿಯೇ ಭದ್ರವಾಗಿ ಇಟ್ಟುಕೊಳ್ಳುವ ರಹಸ್ಯವೇನು? ಕರ್ನಾಟಕ ರಾಜಕಾರಣದ ಅತಿ ದೊಡ್ಡ ಆರ್ಥಿಕ ಮತ್ತು ರಾಜಕೀಯ ಶಕ್ತಿಕೇಂದ್ರದ ಹಿಂದಿನ ಅಸಲಿ ಒಳ-ಲೆಕ್ಕಾಚಾರಗಳೇ ಬೇರೆ ಇವೆ.

ರಾಜ್ಯದ ಆರ್ಥಿಕ ಇಂಜಿನ್!

ಬೆಂಗಳೂರು ನಗರಾಭಿವೃದ್ಧಿ ಖಾತೆಯ ನೈಜ ಶಕ್ತಿಯನ್ನು ಅಳೆಯುವ ಮುನ್ನ ಒಂದು ಕಟು ಸತ್ಯವನ್ನು ಒಪ್ಪಿಕೊಳ್ಳಬೇಕು. ಬೆಂಗಳೂರು ಕೇವಲ ಆಡಳಿತಾತ್ಮಕ ರಾಜಧಾನಿಯಲ್ಲ. ಇದು ದೇಶದ ಐಟಿ ಹಬ್, ರಿಯಲ್ ಎಸ್ಟೇಟ್ ಸ್ವರ್ಗ ಮತ್ತು ವಿದೇಶಿ ನೇರ ಹೂಡಿಕೆಯ (FDI) ಹೆಬ್ಬಾಗಿಲು. ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹರಿದುಬರುವ ಒಟ್ಟು ತೆರಿಗೆ ಆದಾಯದ ಸಿಂಹಪಾಲು ಬರುವುದೇ ಸಿಲಿಕಾನ್ ಸಿಟಿಯಿಂದ. ರಾಜಕೀಯ ವಲಯದ ಸರಳ ಸೂತ್ರವೇನೆಂದರೆ "ಬೆಂಗಳೂರಿನ ಮೇಲೆ ಹಿಡಿತ ಸಾಧಿಸಿದರೆ, ಇಡೀ ರಾಜ್ಯದ ಆರ್ಥಿಕತೆಯ ನಾಡಿಮಿಡಿತವನ್ನು ಹಿಡಿದಂತೆ!"

ಸಿಎಂ, ಡಿಸಿಎಂಗಳ 'ಹಾಟ್ ಫೇವರಿಟ್' ಖಾತೆ

ಕಳೆದ ಒಂದೂವರೆ ದಶಕದ ರಾಜಕೀಯ ಇತಿಹಾಸವನ್ನು ತಿರುವಿ ಹಾಕಿದರೆ ಒಂದು ಅಚ್ಚರಿಯ ಸಂಗತಿಯೆಂದರೆ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ ಅವರಿಂದ ಹಿಡಿದು ಇತ್ತೀಚಿನವರೆಗೂ ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್‌ವರೆಗೆ ಬಹುತೇಕ ಸಂದರ್ಭಗಳಲ್ಲಿ ರಾಜ್ಯದ ಮುಖ್ಯಸ್ಥರೇ ಈ ಖಾತೆಯನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಸಾವಿರಾರು ಕೋಟಿ ರೂಪಾಯಿಗಳ ಬೃಹತ್ ಯೋಜನೆಗಳ ಮೇಲೆ ನೇರ ನಿಯಂತ್ರಣ ಸಾಧಿಸಲು ಮತ್ತು ರಾಜಕೀಯ ಪ್ರಭಾವವನ್ನು ಹತ್ತು ಪಟ್ಟು ಹೆಚ್ಚಿಸಿಕೊಳ್ಳಲು ಈ ಖಾತೆಯೇ ಪ್ರಮುಖ ಅಸ್ತ್ರ.

ಬಿಬಿಎಂಪಿಯ ಕೋಟಿ ಕೋಟಿ ಸಾಮ್ರಾಜ್ಯ

ಬೆಂಗಳೂರು ನಗರಾಭಿವೃದ್ಧಿ ಸಚಿವರ ಬಳಿಯಿರುವ ಅತಿ ದೊಡ್ಡ ಸ್ಥಳೀಯ ಆಡಳಿತ ಸಂಸ್ಥೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ. ಇದರ ವಾರ್ಷಿಕ ಬಜೆಟ್ ಗಾತ್ರವೇ ಸರಿಸುಮಾರು 12,000 ದಿಂದ 15,000 ಕೋಟಿ ರೂಪಾಯಿಗಳು! ಆಸ್ತಿ ತೆರಿಗೆ, ಜಾಹೀರಾತು ಹೋರ್ಡಿಂಗ್, ಉದ್ದಿಮೆ ಪರವಾನಗಿ ಹಾಗೂ ವಾರ್ಡ್ ಮಟ್ಟದ ಕಾಮಗಾರಿಗಳ ರೂಪದಲ್ಲಿ ಹರಿಯುವ ಪ್ರತಿ ರೂಪಾಯಿಯ ಮೇಲೂ ಸಚಿವರಿಗೆ ಪರೋಕ್ಷ ಹಿಡಿತವಿರುತ್ತದೆ.

ಬಿಡಿಎ; ಭೂಮಿಯ ಮೇಲಿನ ಪರಮಾಧಿಕಾರ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈ ಖಾತೆಯ ಮತ್ತೊಂದು ಪವರ್‌ಫುಲ್ ಅಸ್ತ್ರ. ಹೊಸ ಬಡಾವಣೆಗಳ ನಿರ್ಮಾಣ, ನಿವೇಶನ ಹಂಚಿಕೆ ಮತ್ತು ಭೂಸ್ವಾಧೀನ ಬಿಡಿಎ ವ್ಯಾಪ್ತಿಗೆ ಬರುತ್ತದೆ. ಮಾಸ್ಟರ್ ಪ್ಲಾನ್‌ನಲ್ಲಿನ ಒಂದು ಸಣ್ಣ ಬದಲಾವಣೆ ಅಥವಾ ಭೂಮಿಯ ಕೃಷಿಯೇತರ ಬಳಕೆಯ ಒಂದು ಸಣ್ಣ ನಿರ್ಧಾರ, ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಭೂಮಿಯ ಬೆಲೆಯನ್ನು ರಾತ್ರೋರಾತ್ರಿ ಹತ್ತು ಪಟ್ಟು ಹೆಚ್ಚಿಸಬಲ್ಲದು!

ಸಾವಿರಾರು ಕೋಟಿಗಳ ಮೆಗಾ ಯೋಜನೆಗಳು

ನಮ್ಮ ಮೆಟ್ರೋ ವಿಸ್ತರಣೆ, ಪ್ರಸ್ತಾವಿತ ಸುರಂಗ ರಸ್ತೆ ಯೋಜನೆ, ಬೃಹತ್ ಮೇಲ್ಸೇತುವೆಗಳು ಮತ್ತು ಸಿಗ್ನಲ್ ಫ್ರೀ ಕಾರಿಡಾರ್‌ಗಳೆಲ್ಲವೂ ಕಣ್ಣಿಗೆ ಕಾಣುವ 'ಅಭಿವೃದ್ಧಿ' ಕಾಮಗಾರಿಗಳು. ಇವು ಆಡಳಿತ ಪಕ್ಷಕ್ಕೆ ಭಾರಿ ರಾಜಕೀಯ ಮೈಲೇಜ್ ತಂದುಕೊಡುತ್ತವೆ. ಜೊತೆಗೆ, ಪ್ರತಿಯೊಂದು ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮತ್ತು ಗುತ್ತಿಗೆದಾರರ ನೇಮಕದಲ್ಲಿ ಸಚಿವರ ಕಚೇರಿಯದ್ದೇ ಅಂತಿಮ ನಿರ್ಧಾರವಾಗಿರುತ್ತದೆ.

'ಅಕ್ಷಯ ಪಾತ್ರೆ' ರಸ್ತೆ ಗುಂಡಿ!

ಸಾಮಾನ್ಯ ಜನರಿಗೆ ಕಸ ಎಂದರೆ ಮೂಗು ಮುಚ್ಚಿಕೊಳ್ಳುವ ವಿಷಯವಿರಬಹುದು, ಆದರೆ ಆಡಳಿತಾತ್ಮಕವಾಗಿ ಅದೊಂದು 'ಮಲ್ಟಿ-ಕ್ರೋರ್ ಇಂಟಸ್ಟ್ರಿ'. ಪ್ರತಿದಿನ ಉತ್ಪತ್ತಿಯಾಗುವ ಸಾವಿರಾರು ಟನ್ ಕಸದ ಸಾಗಾಟ ಮತ್ತು ವಿಲೇವಾರಿಗೆ ಕೋಟ್ಯಂತರ ರೂಪಾಯಿ ಗುತ್ತಿಗೆ ನೀಡಲಾಗುತ್ತದೆ. ಇನ್ನು ಜಲಮಂಡಳಿಯ ಕಾವೇರಿ ನೀರು ಪೂರೈಕೆ ಮತ್ತು ಒಳಚರಂಡಿ ಯೋಜನೆಗಳೂ ಸಹ ಬೃಹತ್ ವೆಚ್ಚದ ಕಾಮಗಾರಿಗಳೇ ಆಗಿವೆ. ಆಶ್ಚರ್ಯದ ಸಂಗತಿಯೆಂದರೆ, ವಾಹನ ಸವಾರರ ಪಾಲಿಗೆ ಕಂಟಕವಾಗಿರುವ ಬೆಂಗಳೂರಿನ ರಸ್ತೆ ಗುಂಡಿಗಳು, ಗುತ್ತಿಗೆದಾರರ ಪಾಲಿಗೆ ಪ್ರತಿ ವರ್ಷ ಹಣ ತಂದುಕೊಡುವ 'ಅಕ್ಷಯ ಪಾತ್ರೆ'ಯಂತಾಗಿವೆ!

28 ಕ್ಷೇತ್ರಗಳ ರಾಜಕೀಯ ಗೇಮ್

ಬೆಂಗಳೂರು ಇಂದು ಅಂತಾರಾಷ್ಟ್ರೀಯ ಮಟ್ಟದ ಬ್ರ್ಯಾಂಡ್. ಗೂಗಲ್, ಆ್ಯಪಲ್, ಮೈಕ್ರೋಸಾಫ್ಟ್‌ನಂತಹ ಜಾಗತಿಕ ದಿಗ್ಗಜ ಕಂಪನಿಗಳು ಇಲ್ಲಿವೆ. ಹೀಗಾಗಿ ಈ ನಗರದ ಅಭಿವೃದ್ಧಿಯ ರೂವಾರಿ ಎಂದು ಬಿಂಬಿಸಿಕೊಳ್ಳುವುದು ಯಾವುದೇ ನಾಯಕನಿಗೆ ರಾಷ್ಟ್ರೀಯ ಮಟ್ಟದಲ್ಲಿ ಇಮೇಜ್ ತಂದುಕೊಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಕರ್ನಾಟಕ ವಿಧಾನಸಭೆಯ ಒಟ್ಟು 224 ಕ್ಷೇತ್ರಗಳ ಪೈಕಿ ಬೆಂಗಳೂರು ನಗರವೊಂದರಲ್ಲೇ 28 ವಿಧಾನಸಭಾ ಕ್ಷೇತ್ರಗಳಿವೆ. ಇದು ರಾಜ್ಯ ರಾಜಕಾರಣದ ಅತಿ ದೊಡ್ಡ ಪಾಲು. ಈ 28 ಶಾಸಕರನ್ನು ಮತ್ತು ಕಾರ್ಪೊರೇಟರ್‌ಗಳನ್ನು ತನ್ನ ವಿಶ್ವಾಸಕ್ಕೆ ತೆಗೆದುಕೊಂಡು ನಗರವನ್ನು ನಿಯಂತ್ರಿಸುವ ನಾಯಕ, ಭವಿಷ್ಯದಲ್ಲಿ ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿ ಸುಲಭವಾಗಿ ಮುಂಚೂಣಿಗೆ ಬರಬಹುದು.

Read More
Next Story