Muslim communitys discontent against Congress: Huge rally in Bengaluru on May 16
x

ಸಾಂದರ್ಭಿಕ ಚಿತ್ರ

ಕಾಂಗ್ರೆಸ್ ವಿರುದ್ಧ ಮುಸ್ಲಿಂ ಸಮುದಾಯದ ಅಸಮಾಧಾನ: ಮೇ 16ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ

ಮೇ 16ರಂದು ನಡೆಯುವ ಟೌನ್‌ಹಾಲ್ ಸಮಾವೇಶಕ್ಕೆ ಯಾವುದೇ ರಾಜಕೀಯ ನಾಯಕರಿಗೆ ಆಹ್ವಾನ ನೀಡದಿರಲು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ.


Click the Play button to hear this message in audio format

ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಮೂರು ವರ್ಷಗಳ ಆಡಳಿತಾವಧಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಿದ ಭರವಸೆಗಳು ಎಷ್ಟರ ಮಟ್ಟಿಗೆ ಈಡೇರಿವೆ ಎಂಬುದರ ಬಗ್ಗೆ ಪರಾಮರ್ಶೆ ನಡೆಸಲು ಹಾಗೂ ಸರ್ಕಾರದ ವಿರುದ್ಧದ ಅಸಮಾಧಾನವನ್ನು ಹೊರಹಾಕಲು ಬೃಹತ್ 'ಕರ್ನಾಟಕ ಮುಸ್ಲಿಂ ಸಮಾವೇಶ'ವನ್ನು ಆಯೋಜಿಸಲಾಗಿದೆ.

ಮೇ 16ರಂದು (ಶನಿವಾರ) ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಈ ಸಮಾವೇಶ ನಡೆಯಲಿದ್ದು, 'ಕಾಂಗ್ರೆಸ್ ಸರ್ಕಾರ ಹೇಳಿದ್ದೇನು? ಮಾಡಿದ್ದೇನು? ಮುಂದೇನು?' ಎಂಬ ಮಹತ್ವದ ವರದಿಯನ್ನು ಬಿಡುಗಡೆ ಮಾಡಲಾಗುತ್ತಿದೆ.

ಈ ಬೃಹತ್ ಸಮಾವೇಶದ ಪೂರ್ವಭಾವಿಯಾಗಿ ಬುಧವಾರ (ಮೇ 6) ನಗರದ ಶಿವಾಜಿನಗರದಲ್ಲಿರುವ ಎ ಜೆ ಇಂಟರ್ ನ್ಯಾಷನಲ್ ಹೋಟೆಲ್‌ನಲ್ಲಿ ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟದ (KRMO) ಅಡ್‌ಹಾಕ್ ಸಮಿತಿ ಸೇರಿದಂತೆ ರಾಜ್ಯದ ಪ್ರಮುಖ ಮುಸ್ಲಿಂ ಸಂಘಟನೆಗಳ ಸಭೆ ಯಶಸ್ವಿಯಾಗಿ ಜರುಗಿತು. ಸಭೆಯಲ್ಲಿ ಹಿರಿಯ ಉಲೇಮಾಗಳು, ಜಮಾಅತ್‌ಗಳ ಮುಖಂಡರು, ವಕೀಲರು, ನಿವೃತ್ತ ಅಧಿಕಾರಿಗಳು, ಪತ್ರಕರ್ತರು ಹಾಗೂ ಕಾರ್ಯಕರ್ತರು ಸೇರಿ 75ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡು ಸುದೀರ್ಘ ಚರ್ಚೆ ನಡೆಸಿದರು.

ವರದಿಯಲ್ಲಿ ಏನಿದೆ?

KRMO ಅಡ್‌ಹಾಕ್ ಸಮಿತಿಯ ವರದಿ ತಯಾರಿ ತಂಡ ಹಾಗೂ ವಿವಿಧ ಕ್ಷೇತ್ರಗಳ ಪರಿಣತರು ಸಿದ್ಧಪಡಿಸಿರುವ ಕರಡು ವರದಿಯನ್ನು ಸಭೆಯಲ್ಲಿ ಮಂಡಿಸಲಾಯಿತು. ಮುಖ್ಯವಾಗಿ 10 ಪ್ರಮುಖ ವಿಷಯಗಳಲ್ಲಿ ಕಾಂಗ್ರೆಸ್ ಮುಸ್ಲಿಮರಿಗೆ ನೀಡಿದ್ದ ಭರವಸೆಗಳು, ಈಡೇರಿದ ಹಾಗೂ ಈಡೇರದ ಭರವಸೆಗಳ ಬಗ್ಗೆ ವರದಿಯಲ್ಲಿ ಆಳವಾಗಿ ವಿಶ್ಲೇಷಿಸಲಾಗಿದೆ.

ಹಿಜಾಬ್ ನಿರ್ಬಂಧ ತೆರವು, ಮೀಸಲಾತಿ ಮರುಸ್ಥಾಪನೆ, ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳಿಗೆ ಕಡಿವಾಣ, ಬಜೆಟ್ ಅನುದಾನ ಹಂಚಿಕೆ, ರಾಜಕೀಯ ಪ್ರಾತಿನಿಧ್ಯದಲ್ಲಿನ ತಾರತಮ್ಯ, ವಕ್ಫ್ ಆಸ್ತಿಗಳ ಸಮಸ್ಯೆಗಳು, ಗೋ ಹತ್ಯೆ ನಿಷೇಧ ಕಾಯ್ದೆ ಮತ್ತು ಮತಾಂತರ ನಿರ್ಬಂಧ ಕಾಯ್ದೆ ವಾಪಸಾತಿ, ಹಾಗೂ ವಿದ್ಯಾರ್ಥಿ ವೇತನ ಸೇರಿದಂತೆ ಹತ್ತು ಹಲವು ವಿಷಯಗಳ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಿ ವರದಿಗೆ ಅಂತಿಮ ರೂಪ ನೀಡಲಾಯಿತು.

ಕಾಂಗ್ರೆಸ್‌ಗೆ ಎಚ್ಚರಿಕೆ ರವಾನೆ

ಸಭೆಯಲ್ಲಿ ರಾಜ್ಯ ಸರ್ಕಾರದ ಕಾರ್ಯವೈಖರಿ ಹಾಗೂ ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಯಿತು. "ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರ ಇದೇ ರೀತಿ ಸಮುದಾಯವನ್ನು ನಿರ್ಲಕ್ಷಿಸುತ್ತಾ ಸಾಗಿದರೆ, ಮುಂಬರುವ ದಿನಗಳಲ್ಲಿ ಸಮುದಾಯವು ತನ್ನ ಆಯ್ಕೆಗಳನ್ನು ಮುಕ್ತವಾಗಿರಿಸಿಕೊಳ್ಳಬೇಕಾಗುತ್ತದೆ" ಎಂಬ ಸರ್ವಾನುಮತದ ಎಚ್ಚರಿಕೆಯನ್ನು ಸಭೆ ರವಾನಿಸಿದೆ. ಸರ್ಕಾರಕ್ಕೆ ಬಲವಾದ ಸಂದೇಶ ನೀಡುವ ಉದ್ದೇಶದಿಂದಲೇ ಮೇ 16ರ ಸಮಾವೇಶಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಜನರನ್ನು ಸೇರಿಸಲು ನಿರ್ಧರಿಸಲಾಗಿದೆ.

ರಾಜಕಾರಣಿಗಳಿಗೆ ಆಹ್ವಾನವಿಲ್ಲ

ಮೇ 16ರಂದು ನಡೆಯುವ ಟೌನ್‌ಹಾಲ್ ಸಮಾವೇಶಕ್ಕೆ ಯಾವುದೇ ರಾಜಕೀಯ ನಾಯಕರಿಗೆ ಆಹ್ವಾನ ನೀಡದಿರಲು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ಸಮಾವೇಶದ ಬಳಿಕ, ಬಿಡುಗಡೆಯಾದ ವರದಿಯ ಪ್ರತಿಯನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರುಗಳಿಗೆ ಅಧಿಕೃತವಾಗಿ ತಲುಪಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ಸಮಾವೇಶದ ಕುರಿತ ಹೆಚ್ಚಿನ ಮಾಹಿತಿಗಾಗಿ ಸುಹೇಲ್ ಅಹ್ಮದ್ ಮರೂರ್ (80504 75788), ತನ್ವಿರ್ ಅಹ್ಮದ್ ಖಾನ್ (98861 94492) ಅಥವಾ ಯಹ್ಯಾ ದಾಮೂದಿ (97398 66895) ಅವರನ್ನು ಸಂಪರ್ಕಿಸಬಹುದಾಗಿದೆ.

Read More
Next Story