
ಕಾಂಗ್ರೆಸ್‌ಗೆ ಮುಸ್ಲಿಂ ಸಂಘಟನೆಗಳ ಖಡಕ್ ಎಚ್ಚರಿಕೆ: 'ತಪ್ಪು ತಿದ್ದಿಕೊಳ್ಳಿ, ಇಲ್ಲವಾದರೆ...'
ಇತ್ತೀಚೆಗೆ ನಡೆದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವ ವಿಚಾರದಲ್ಲಿ ನಡೆದ ಮುನಿಸು ಇದೀಗ ಪತ್ರದವರೆಗೆ ತಲುಪಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಪಕ್ಷವು ಮುಸ್ಲಿಂ ಸಮುದಾಯವನ್ನು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ತೀವ್ರ ಅಸಮಾಧಾನ ಸ್ಫೋಟಗೊಂಡಿದೆ. ಮುಸ್ಲಿಂ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ, ರಾಜ್ಯದ ವಿವಿಧ ಮುಸ್ಲಿಂ ಸಂಘಟನೆಗಳು, ಒಕ್ಕೂಟಗಳ ಪ್ರಮುಖರು ಮತ್ತು ಧರ್ಮಗುರುಗಳು ಕಾಂಗ್ರೆಸ್ ಹೈಕಮಾಂಡ್‌ಗೆ ನೇರ ಪತ್ರ ಬರೆದು ಎಚ್ಚರಿಕೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ ಈ ಸುದೀರ್ಘ ಪತ್ರ ಬರೆಯಲಾಗಿದೆ.
ಪತ್ರದಲ್ಲಿರುವ ಪ್ರಮುಖ ಆಕ್ಷೇಪಗಳು ಏನು?
"2023ರ ವಿಧಾನಸಭಾ ಚುನಾವಣೆಯಲ್ಲಿ ಶೇ. 90ಕ್ಕೂ ಹೆಚ್ಚು ಮುಸ್ಲಿಮರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರಿಂದಲೇ ನೀವು ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಆದರೆ, ಸರ್ಕಾರ ರಚನೆಯಾದ ಬಳಿಕ ಪ್ರಮುಖ ನೇಮಕಾತಿಗಳು ಮತ್ತು ನಿಗಮ-ಮಂಡಳಿಗಳಲ್ಲಿ ಮುಸ್ಲಿಮರಿಗೆ ಸೂಕ್ತ ಪ್ರಾತಿನಿಧ್ಯ ನೀಡದೆ ದ್ರೋಹ ಎಸಗಿದ್ದೀರಿ" ಎಂದು ಪತ್ರದಲ್ಲಿ ನೇರವಾಗಿ ಆರೋಪಿಸಲಾಗಿದೆ.
ಇತ್ತೀಚೆಗೆ ನಡೆದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಸಮುದಾಯ ನ್ಯಾಯಯುತ ಬೇಡಿಕೆ ಇಟ್ಟಿತ್ತು. ಆದರೆ, ಅದನ್ನು ಕಡೆಗಣಿಸಿದ್ದಲ್ಲದೆ, "ಟಿಕೆಟ್ ಕೇಳಿದ್ದೇ ಒಂದು ಅಪರಾಧ" ಎಂಬಂತೆ ವರಿಷ್ಠರು ನಡೆದುಕೊಂಡಿದ್ದು ಸಮುದಾಯಕ್ಕೆ ನೋವು ತಂದಿದೆ ಎಂದಿದ್ದಾರೆ.
ಪಚುನಾವಣೆಯ ಮತದಾನ ಮುಗಿದ ಬೆನ್ನಲ್ಲೇ, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಸೇರಿದಂತೆ ಹಲವು ಮುಸ್ಲಿಂ ನಾಯಕರನ್ನು ಏಕಾಏಕಿ ಪಕ್ಷದಿಂದ ವಜಾಗೊಳಿಸಲಾಗಿದೆ. ಯಾವುದೇ ಶೋಕಾಸ್ ನೋಟಿಸ್ ನೀಡದೆ, ವಿವರಣೆ ಕೇಳದೆ ವಜಾ ಮಾಡಿದ್ದು ಎಷ್ಟು ಸರಿ? ಅದೇ, ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದ ಹಿರಿಯ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ಕಾಂಗ್ರೆಸ್‌ಗೆ ಏಕಿಲ್ಲ ಎಂದು ಪ್ರಶ್ನಿಸಲಾಗಿದೆ.
"ಕಾಂಗ್ರೆಸ್ ಪಕ್ಷ ಕೊಟ್ಟಷ್ಟು ರಕ್ಷಣೆಯನ್ನು ಮುಸಲ್ಮಾನರಿಗೆ ಬೇರೆ ಯಾರೂ ಕೊಟ್ಟಿಲ್ಲ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದನ್ನು ಮುಸ್ಲಿಂ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ.
ತಪ್ಪು ತಿದ್ದಿಕೊಳ್ಳಲು ಡೆಡ್‌ಲೈನ್!
"ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷವು ಕೂಡಲೇ ಎಚ್ಚೆತ್ತುಕೊಂಡು, ಮುಸ್ಲಿಂ ಸಮುದಾಯದ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ನೀವು ಮಾಡುತ್ತಿರುವ ತಪ್ಪುಗಳನ್ನು ತಕ್ಷಣವೇ ತಿದ್ದಿಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ" ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.
ವಿಜಯಪುರದ ಮೌಲಾನಾ ಸೈಯದ್ ತನ್ವೀರ್ ಹಾಶ್ಮಿ, ಬೀದರ್‌ನ ಅಬ್ದುಲ್ ಖದೀರ್, ಉಡುಪಿಯ ಕೆ.ಎಸ್. ಮೊಹಮ್ಮದ್ ಮಸೂದ್, ಭಟ್ಕಳದ ಮೌಲಾನಾ ಅಬ್ದುರ‍್ರಕೀಬ್ ನದ್ವಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳ 30ಕ್ಕೂ ಹೆಚ್ಚು ಪ್ರಮುಖ ಮುಸ್ಲಿಂ ಮುಖಂಡರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ಕಾಂಗ್ರೆಸ್ ವರಿಷ್ಠರು ಈ ಪತ್ರಕ್ಕೆ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಕಾದು ನೋಡಬೇಕಿದೆ.

