Elections for 7 Legislative Council seats: DKSH-HDK Maha Kurukshetra for the 5th seat!
x

ಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ 

ವಿಧಾನಪರಿಷತ್ ಚುನಾವಣೆ: 5ನೇ ಸೀಟಿಗೆ ಡಿಕೆಶಿ-ಎಚ್‌ಡಿಕೆ ಬಿಗ್‌ ಫೈಟ್‌

ಯಾವುದೇ ರೀತಿಯಲ್ಲೂ ಅಡ್ಡ ಮತದಾನ ಆಗದಂತೆ ತಡೆಯಲು ಕಾಂಗ್ರೆಸ್‌ನ ಎಲ್ಲಾ ಶಾಸಕರನ್ನು ಬೆಂಗಳೂರು ಹೊರವಲಯದ 'ವಂಡರ್ ಲಾ' ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗುತ್ತಿದೆ.


Click the Play button to hear this message in audio format

ವಿಧಾನಸಭಾ ಸದಸ್ಯರಿಂದ ವಿಧಾನಪರಿಷತ್‌ನ 7 ಸ್ಥಾನಗಳಿಗೆ ನಡೆಯಲಿರುವ ಚುನಾವಣೆ ಕಣ ಈಗ ರಂಗೇರಿದ್ದು, ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ದೋಸ್ತಿ ಪಡೆಗಳ ನಡುವೆ ಜಿದ್ದಾಜಿದ್ದಿನ ಫೈಟ್ ಸೃಷ್ಟಿಯಾಗಿದೆ. ಏಳು ಸ್ಥಾನಗಳ ಪೈಕಿ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್‌ಗೆ 4 ಹಾಗೂ ಬಿಜೆಪಿಗೆ 2 ಸ್ಥಾನಗಳು ಸುಲಭವಾಗಿ ಒಲಿಯಲಿವೆ. ಆದರೆ, ಬಾಕಿ ಉಳಿದಿರುವ 1 ಸ್ಥಾನಕ್ಕೆ ಈಗ "ಮಹಾ ಕುರುಕ್ಷೇತ್ರ" ಆರಂಭವಾಗಿದೆ. ಮತಗಳ ಕೊರತೆಯಿದ್ದರೂ ಕಾಂಗ್ರೆಸ್ ತನ್ನ ಐದನೇ ಅಭ್ಯರ್ಥಿಯಾಗಿ ವಿನಯ್ ಕಾರ್ತಿಕ್ ಅವರನ್ನ ಕಣಕ್ಕಿಳಿಸಿದರೆ, ಇತ್ತ ದೋಸ್ತಿ ಪಡೆಯಿಂದ ಜೆಡಿಎಸ್ ಅಭ್ಯರ್ಥಿ ಅಖಾಡಕ್ಕಿಳಿದು ಸೆಡ್ಡು ಹೊಡೆದಿದ್ದಾರೆ.

ಡಿಕೆಶಿ 'ವಂಡರ್ ಲಾ' ರಣತಂತ್ರ!

ತಮ್ಮ ಪಕ್ಷದ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಅವರನ್ನು ಹೇಗೆಲ್ಲಾ ಗೆಲ್ಲಿಸಿಕೊಳ್ಳಬೇಕು ಎಂಬ ಬಗ್ಗೆ ಸಿಎಂ ಡಿ.ಕೆ. ಶಿವಕುಮಾರ್ ಯೋಜನೆ ರೂಪಿಸಿದ್ದಾರೆ. ಯಾವುದೇ ರೀತಿಯಲ್ಲೂ ಅಡ್ಡ ಮತದಾನ ಆಗದಂತೆ ತಡೆಯಲು ಕಾಂಗ್ರೆಸ್‌ನ ಎಲ್ಲಾ ಶಾಸಕರನ್ನು ಬೆಂಗಳೂರು ಹೊರವಲಯದ 'ವಂಡರ್ ಲಾ' ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗುತ್ತಿದೆ. ಜೂ. 18ರವರೆಗೆ ಎರಡು ದಿನಗಳ ಕಾಲ ಶಾಸಕರು ಕಡ್ಡಾಯವಾಗಿ ರೆಸಾರ್ಟ್‌ನಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಶಾಸಕರಿಗೆ ತರಬೇತಿ

ಯಾವ ಶಾಸಕರು, ಯಾವ ಅಭ್ಯರ್ಥಿಗೆ ಎಷ್ಟನೇ ಪ್ರಾಶಸ್ತ್ಯದ ಮತ ಹಾಕಬೇಕು ಎಂಬ ಬಗ್ಗೆ ರೆಸಾರ್ಟ್‌ನಲ್ಲೇ ತರಬೇತಿ ನೀಡಲಾಗುತ್ತದೆ. ಜೂ. 18ರ ಬೆಳಗ್ಗೆ ರೆಸಾರ್ಟ್‌ನಿಂದ ನೇರವಾಗಿ ವಿಶೇಷ ಬಸ್‌ಗಳ ಮೂಲಕ ಶಾಸಕರು ವಿಧಾನಸೌಧಕ್ಕೆ ಆಗಮಿಸಿ ಮತ ಚಲಾಯಿಸಲಿದ್ದಾರೆ. ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕರ ಮತಗಳನ್ನು ಸೆಳೆಯಲು ಡಿ.ಕೆ.ಶಿವಕುಮಾರ್ ತೆರೆಮರೆಯ ಯೋಜನೆ ನಡೆಸುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಎಚ್‌ಡಿಕೆ ಪ್ರತಿತಂತ್ರ: 'ಕೈ' ಶಾಸಕರಿಗೆ ಗಾಳ!

ಇತ್ತ ಕಾಂಗ್ರೆಸ್ ಕೋಟೆಗೆ ಲಗ್ಗೆ ಇಡಲು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭರ್ಜರಿ ಪ್ರತಿತಂತ್ರ ಹೆಣೆದಿದ್ದಾರೆ. ಜೆಡಿಎಸ್ ಅಭ್ಯರ್ಥಿಯ ಗೆಲುವಿಗಾಗಿ ಹಗಲಿರುಳು ಕಸರತ್ತು ನಡೆಸುತ್ತಿರುವ ಕುಮಾರಸ್ವಾಮಿ, ಕಾಂಗ್ರೆಸ್ ಪಾಳಯದಲ್ಲಿರುವ ಅಸಮಾಧಾನಿತ ಶಾಸಕರ ಮೇಲೆ ಕಣ್ಣಿಟ್ಟಿದ್ದಾರೆ. ಒಳಗೊಳಗೇ ಅತೃಪ್ತ 'ಕೈ' ಶಾಸಕರನ್ನು ಸೆಳೆದು, ಅಡ್ಡ ಮತದಾನ ಮಾಡಿಸುವ ಮೂಲಕ ಕಾಂಗ್ರೆಸ್‌ಗೆ ಶಾಕ್ ನೀಡಲು ದೋಸ್ತಿ ಪಡೆ ಲೆಕ್ಕಾಚಾರ ಹಾಕಿದೆ.

Read More
Next Story