ನೂತನ ಸಚಿವರ ಖಾತೆ ಹಂಚಿಕೆ ಕುತೂಹಲ: ಪ್ರಿಯಾಂಕ್‌ ಖರ್ಗೆಗೆ ಗೃಹ? ಜಲಸಂಪನ್ಮೂಲಕ್ಕೆ ಎಂ.ಬಿ. ಪಾಟೀಲ್ ಪಟ್ಟು!
x

ಸಚಿವ ಎಂ.ಬಿ. ಪಾಟೀಲ್‌, ಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಸಚಿವ ಪ್ರಿಯಾಂಕ್‌ ಖರ್ಗೆ

ನೂತನ ಸಚಿವರ ಖಾತೆ ಹಂಚಿಕೆ ಕುತೂಹಲ: ಪ್ರಿಯಾಂಕ್‌ ಖರ್ಗೆಗೆ ಗೃಹ? ಜಲಸಂಪನ್ಮೂಲಕ್ಕೆ ಎಂ.ಬಿ. ಪಾಟೀಲ್ ಪಟ್ಟು!

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗಾಗಲೇ ಯಾರಿಗೆ ಯಾವ ಖಾತೆ ನೀಡಬೇಕೆಂದು ದೆಹಲಿ ಮಟ್ಟದಲ್ಲಿ ಚರ್ಚಿಸಿ, ಹೈಕಮಾಂಡ್ ಒಪ್ಪಿಗೆಯೊಂದಿಗೆ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.


Click the Play button to hear this message in audio format

ರಾಜ್ಯದ ನೂತನ ಸಚಿವರಿಗೆ ಅಧಿಕೃತವಾಗಿ ಖಾತೆಗಳ ಪಟ್ಟಿ ಗುರುವಾರ ಬಿಡುಗಡೆಯಾಗುವ ಸಾಧ್ಯತೆಯಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗಾಗಲೇ ಯಾರಿಗೆ ಯಾವ ಖಾತೆ ನೀಡಬೇಕೆಂದು ದೆಹಲಿ ಮಟ್ಟದಲ್ಲಿ ಚರ್ಚಿಸಿ, ಹೈಕಮಾಂಡ್ ಒಪ್ಪಿಗೆಯೊಂದಿಗೆ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪ್ರಿಯಾಂಕ್‌ ಖರ್ಗೆಗೆ ಗೃಹ ಖಾತೆ ?

ಈ ಬಾರಿಯ ಸಂಪುಟದಲ್ಲಿ ಅತ್ಯಂತ ಪ್ರಮುಖ ಬೆಳವಣಿಗೆಯೆಂದರೆ, ಸಿದ್ದರಾಮಯ್ಯ ಅವರ ಹಿಂದಿನ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ಹಿರಿಯ ನಾಯಕ ಜಿ. ಪರಮೇಶ್ವರ್ ಅವರು ಈ ಬಾರಿ "ನನಗೆ ಗೃಹ ಖಾತೆ ಬೇಡ" ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅತ್ಯಂತ ಜವಾಬ್ದಾರಿಯುತ ಹಾಗೂ ಸವಾಲಿನ ಗೃಹ ಖಾತೆಯನ್ನು ಯುವ ನಾಯಕ ಪ್ರಿಯಾಂಕ್ ಖರ್ಗೆ ಅವರಿಗೆ ವಹಿಸಲು ಸಿಎಂ ಡಿ.ಕೆ. ಶಿವಕುಮಾರ್ ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

ಜಲಸಂಪನ್ಮೂಲ ಖಾತೆಗೆ ಪಾಟೀಲ್ ಪಟ್ಟು!

ಲಿಂಗಾಯಿತ ಸಮುದಾಯದ ಹಿರಿಯ ನಾಯಕ ಎಂ.ಬಿ. ಪಾಟೀಲ್ ಅವರಿಗೆ ಈ ಹಿಂದಿನಂತೆಯೇ ಬೃಹತ್ ಕೈಗಾರಿಕಾ ಖಾತೆಯನ್ನು ನೀಡಲು ಸಿಎಂ ಒಲವು ತೋರಿದ್ದಾರೆ. ಆದರೆ, ಎಂ.ಬಿ. ಪಾಟೀಲ್ ಅವರು ತಮಗೆ ಜಲಸಂಪನ್ಮೂಲ ಖಾತೆಯನ್ನೇ ನೀಡಬೇಕು ಎಂದು ಪಟ್ಟು ಹಿಡಿದಿರುವುದು ತೀವ್ರ ಕುತೂಹಲ ಮೂಡಿಸಿದೆ. ಅಂತಿಮವಾಗಿ ಜಲಸಂಪನ್ಮೂಲ ಯಾರ ಪಾಲಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ಪ್ರಮುಖ ನಾಯಕರ ಸಂಭಾವ್ಯ ಖಾತೆಗಳು

ಪರಿಶಿಷ್ಟ ಪಂಗಡದ ಪ್ರಭಾವಿ ನಾಯಕ ಸತೀಶ್ ಜಾರಕಿಹೊಳಿ ಅವರಿಗೆ ಮತ್ತೊಮ್ಮೆ ಮಹತ್ವದ ಲೋಕೋಪಯೋಗಿ ಖಾತೆ ಸಿಗುವುದು ಬಹುತೇಕ ಖಚಿತವಾಗಿದೆ. ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರಿಗೆ ಹಳೆಯ ಸಾರಿಗೆ ಖಾತೆಯ ಜತೆಗೆ ಅತ್ಯಂತ ಪ್ರಮುಖವಾದ ಬೆಂಗಳೂರು ನಗರಾಭಿವೃದ್ಧಿ ಜವಾಬ್ದಾರಿಯನ್ನೂ ನೀಡುವ ಸಾಧ್ಯತೆಯಿದೆ. ಕರಾವಳಿ ಭಾಗದ ಪ್ರಮುಖ ನಾಯಕ ಯು.ಟಿ. ಖಾದರ್ ಅವರಿಗೆ ಆರೋಗ್ಯ ಖಾತೆಯ ಜವಾಬ್ದಾರಿ ಸಿಗುವ ಸಾಧ್ಯತೆಯಿದ್ದು, ಮೊದಲ ಬಾರಿಗೆ ಸಚಿವರಾಗುತ್ತಿರುವ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಉನ್ನತ ಶಿಕ್ಷಣ ಅಥವಾ ವೈದ್ಯಕೀಯ ಶಿಕ್ಷಣದಂತಹ ಪ್ರಮುಖ ಇಲಾಖೆಯನ್ನು ನೀಡಲು ಸಿಎಂ ಒಲವು ತೋರಿದ್ದಾರೆ ಎನ್ನಲಾಗಿದೆ.

Read More
Next Story