
ಮಾಜಿ ಸಚಿವೆ ರಾಣಿ ಸತೀಶ್
ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳೆಯರ ಕಡೆಗಣನೆ: ಹಿರಿಯ ನಾಯಕಿ ರಾಣಿ ಸತೀಶ್ ತೀವ್ರ ಅಸಮಾಧಾನ
ಮುಂದಿನ ಹಂತದ ಸಂಪುಟ ವಿಸ್ತರಣೆಯಲ್ಲಾದರೂ ಕನಿಷ್ಠ ಮೂರರಿಂದ ನಾಲ್ಕು ಮಹಿಳೆಯರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬಲವಾದ ಬೇಡಿಕೆಯನ್ನು ಮಾಜಿ ಸಚಿವೆ ರಾಣಿ ಸತೀಶ್ ಸರ್ಕಾರದ ಮುಂದಿಟ್ಟಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳೆಯರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಸಿಗದಿರುವ ಕುರಿತು ಪಕ್ಷದ ಹಿರಿಯ ನಾಯಕಿಯರಲ್ಲಿ ತೀವ್ರ ಅಸಮಾಧಾನ ಸ್ಫೋಟಗೊಂಡಿದೆ. ಮೊದಲ ಹಂತದ ಸಚಿವ ಸಂಪುಟ ರಚನೆಯಲ್ಲಿ ಒಬ್ಬರೇ ಒಬ್ಬ ಮಹಿಳಾ ಶಾಸಕರಿಗೆ ಸ್ಥಾನ ನೀಡದಿರುವುದು ಮತ್ತು ಇತ್ತೀಚಿನ ಮೇಲ್ಮನೆ ಹಾಗೂ ರಾಜ್ಯಸಭಾ ಆಯ್ಕೆಯಲ್ಲೂ ಮಹಿಳೆಯರನ್ನು ಕಡೆಗಣಿಸಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ‘ದ ಫೆಡರಲ್ ಕರ್ನಾಟಕ’ದೊಂದಿಗೆ ವಿಶೇಷವಾಗಿ ಮಾತನಾಡಿದ ಮಾಜಿ ಸಚಿವೆ ರಾಣಿ ಸತೀಶ್ ಅವರು, ಸರ್ಕಾರ ಮತ್ತು ಪಕ್ಷದ ನಿರ್ಧಾರಗಳ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. "ಮಂತ್ರಿಮಂಡಲದಲ್ಲಿ ಮಹಿಳೆಯರಿಗೆ ಸ್ಥಾನ ನೀಡದಿರುವುದು ಕೇವಲ ಅನ್ಯಾಯವಲ್ಲ, ಇದು ಮಹಿಳಾ ಸಮುದಾಯದ ಆತ್ಮವಿಶ್ವಾಸಕ್ಕೆ ಧಕ್ಕೆ ತರುವಂತಹ ವಿಚಾರ," ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಎಲ್ಲಾ ಸ್ತರಗಳಲ್ಲೂ ಕಡೆಗಣನೆ
ಕೇವಲ ಸಚಿವ ಸಂಪುಟ ಮಾತ್ರವಲ್ಲದೆ, ಇತ್ತೀಚೆಗೆ ನಡೆದ ವಿಧಾನ ಪರಿಷತ್‌ನ ಐದು ಸ್ಥಾನಗಳ ಆಯ್ಕೆ ಹಾಗೂ ರಾಜ್ಯಸಭೆಯ ಮೂರು ಸ್ಥಾನಗಳ ಆಯ್ಕೆಯಲ್ಲೂ ಕೇವಲ ಪುರುಷರಿಗೇ ಆದ್ಯತೆ ನೀಡಲಾಗಿದೆ. "ಆಡಳಿತಾತ್ಮಕವಾಗಿ ರಾಜ್ಯದ ಮುಖ್ಯ ಕಾರ್ಯದರ್ಶಿಯೇ ಮಹಿಳೆಯಾಗಿದ್ದಾರೆ, ಶೈಕ್ಷಣಿಕ ರಂಗದಲ್ಲಿ ವಿದ್ಯಾರ್ಥಿನಿಯರು ಮುಂಚೂಣಿಯಲ್ಲಿದ್ದಾರೆ. ಹೀಗಿರುವಾಗ ರಾಜಕೀಯವಾಗಿ ಮಾತ್ರ ಮಹಿಳೆಯರನ್ನು ಹಿಂತಳ್ಳುತ್ತಿರುವುದು ಸರಿಯಲ್ಲ," ಎಂದು ಅವರು ಅಭಿಪ್ರಾಯಪಟ್ಟರು.
ಎಸ್.ಎಂ. ಕೃಷ್ಣ ಕಾಲದ ನೆನಪು
ಹಿಂದಿನ ಸರ್ಕಾರಗಳ ಉದಾಹರಣೆ ನೀಡಿದ ರಾಣಿ ಸತೀಶ್, "ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ನಾವು ನಾಲ್ವರು ಮಹಿಳೆಯರು ಸಚಿವರಾಗಿದ್ದೆವು. ಆದರೆ ಈಗಿನ ಪರಿಸ್ಥಿತಿ ನಿರಾಶಾದಾಯಕವಾಗಿದೆ. ಮಹಿಳೆಯರ ಮತಗಳು ಜಯಕ್ಕೆ ಅನಿವಾರ್ಯವಾಗಿರುವಾಗ, ಅಧಿಕಾರ ಹಂಚಿಕೆಯಲ್ಲಿ ಅವರನ್ನು ಮರೆಯುವುದು ಎಷ್ಟು ಸರಿ?" ಎಂದು ಪ್ರಶ್ನಿಸಿದರು.
ಹೈಕಮಾಂಡ್ ಮೇಲೆ ಒತ್ತಡ
ಈಗಾಗಲೇ ಈ ವಿಷಯದ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದ ಅವರು, ಮಾರ್ಗರೇಟ್ ಆಳ್ವ ಅವರಂತಹ ಹಿರಿಯ ನಾಯಕಿಯರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು. ಮುಂದಿನ ಹಂತದ ಸಂಪುಟ ವಿಸ್ತರಣೆಯಲ್ಲಾದರೂ ಕನಿಷ್ಠ ಮೂರರಿಂದ ನಾಲ್ಕು ಮಹಿಳೆಯರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬಲವಾದ ಬೇಡಿಕೆಯನ್ನು ಅವರು ಸರ್ಕಾರದ ಮುಂದಿಟ್ಟಿದ್ದಾರೆ.
ಪಕ್ಷದ ಮಹಿಳಾ ಘಟಕದೊಂದಿಗೆ ಚರ್ಚಿಸಿ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಗಮನ ಸೆಳೆಯಲು ಪತ್ರ ಬರೆಯುವ ಅಥವಾ ಭೇಟಿ ಮಾಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸರ್ಕಾರ, ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ಮೂಲಕ ಆ ನ್ಯಾಯವನ್ನು ಎತ್ತಿ ಹಿಡಿಯಬೇಕಿದೆ ಎಂಬುದು ಹಿರಿಯ ನಾಯಕಿಯರ ಒಕ್ಕೊರಲ ಆಗ್ರಹವಾಗಿದೆ.

