Muslim leadership battle! Zameer vs Khader vs Tanveer, who will win?
x

ಮುಸ್ಲಿಂ ನಾಯಕರಾದ ಜಮೀರ್‌ ಅಹಮದ್‌, ಯು.ಟಿ. ಖಾದರ್‌ ಹಾಗೂ ತನ್ವಿರ್‌ ಸೇಠ್‌

ಮುಸ್ಲಿಂ ನಾಯಕತ್ವದ ಸಮರ! ಜಮೀರ್​ vs ಖಾದರ್ vs ತನ್ವೀರ್ ಯಾರಿಗೆ ಮಣೆ?

ಸಿಎಂ ಪಟ್ಟದ ಗುದ್ದಾಟ ಮುಗಿದ ಬೆನ್ನಲ್ಲೇ, ಇದೀಗ ಕೈ ಪಡೆಯ ಅತಿ ದೊಡ್ಡ ಶಕ್ತಿಯಾಗಿರುವ ಮುಸ್ಲಿಂ ಸಮುದಾಯದ 'ನಾಯಕತ್ವ'ಕ್ಕಾಗಿ ಹೊಸ ಕುಸ್ತಿ ಶುರುವಾಗಿದೆ.


Click the Play button to hear this message in audio format

ಕರ್ನಾಟಕ ರಾಜಕಾರಣದ ಸದ್ಯದ ಅತಿ ದೊಡ್ಡ ಹೈಡ್ರಾಮಾ ಕೊನೆಗೂ ಸುಖಾಂತ್ಯ ಕಂಡಿದೆ. ತಿಂಗಳುಗಳ ಕಾಲ ನಡೆದ 'ಸಿಎಂ ಕುರ್ಚಿ'ಯ ಹಗ್ಗಜಗ್ಗಾಟಕ್ಕೆ ಅಧಿಕೃತ ತೆರೆಬಿದ್ದಿದ್ದು, ಸಿದ್ದರಾಮಯ್ಯ ಅವರ ನಿರ್ಗಮನದ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಇದೀಗ ನಿಯೋಜಿತ ಮುಖ್ಯಮಂತ್ರಿಯಾಗಿ ರಾಜ್ಯದ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ. ಆದರೆ, ಒಂದು ಯುದ್ಧ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ಈಗ ಮತ್ತೊಂದು ಮಹಾಯುದ್ಧ ಆರಂಭವಾಗಿದೆ!

ಸಿಎಂ ಪಟ್ಟದ ಗುದ್ದಾಟ ಮುಗಿದ ಬೆನ್ನಲ್ಲೇ, ಇದೀಗ ಕೈ ಪಡೆಯ ಅತಿ ದೊಡ್ಡ ಶಕ್ತಿಯಾಗಿರುವ ಮುಸ್ಲಿಂ ಸಮುದಾಯದ 'ನಾಯಕತ್ವ'ಕ್ಕಾಗಿ ಹೊಸ ಕುಸ್ತಿ ಶುರುವಾಗಿದೆ. ಡಿ.ಕೆ. ಶಿವಕುಮಾರ್ ಅವರ ನೂತನ ಸರ್ಕಾರದಲ್ಲಿ ಉನ್ನತ ಸ್ಥಾನ ಪಡೆಯಲು ಮತ್ತು ಸಮುದಾಯದ ಪ್ರಶ್ನಾತೀತ ನಾಯಕನಾಗಿ ಹೊರಹೊಮ್ಮಲು ಇದೀಗ ಮೂವರು ಘಟಾನುಘಟಿಗಳ ನಡುವೆ ರಣಕಹಳೆ ಮೊಳಗಿದೆ. ಇದು ಕೇವಲ ಒಂದು ಸಚಿವ ಸ್ಥಾನಕ್ಕಾಗಿಯೋ ಅಥವಾ ಒಂದು ಖಾತೆಗಾಗಿಯೋ ನಡೆಯುತ್ತಿರುವ ಹೋರಾಟವಲ್ಲ, ಬದಲಿಗೆ ಇದು ಅಸ್ತಿತ್ವದ ಕದನ! ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿರುವ 'ಮುಸ್ಲಿಂ ಸಮುದಾಯದ' ಮುಂದಿನ 'ಬಾಸ್' ಯಾರು ಎಂಬುದನ್ನು ನಿರ್ಧರಿಸುವ ನಿರ್ಣಾಯಕ ಚದುರಂಗದಾಟವಾಗಿದೆ.

ನಾಯಕತ್ವಕ್ಕಾಗಿ ಮೂವರ ಜಿದ್ದಾಜಿದ್ದಿ!

ಮುಸ್ಲಿಂ ಸಮುದಾಯದ ಸರ್ವೋಚ್ಚ ನಾಯಕನ ಪಟ್ಟಕ್ಕಾಗಿ ಪ್ರಮುಖವಾಗಿ ಮೂರು ಧ್ರುವಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಜಮೀರ್​ ಅಹ್ಮದ್ ಖಾನ್ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪರಮಾಪ್ತ, ರಾಜ್ಯಾದ್ಯಂತ ಯುವ ಪಡೆ ಹಾಗೂ ಮಾಸ್ ಅಪೀಲ್ ಹೊಂದಿರುವ ಆಕ್ರಮಣಕಾರಿ ನಾಯಕರಾಗಿದ್ದಾರೆ. ಯು.ಟಿ. ಖಾದರ್ ಅವರು, ಕರಾವಳಿಯ ಕೋಮುವಾದಿ ರಾಜಕಾರಣದ ನಡುವೆಯೂ ಸದಾ ಸೌಮ್ಯ ಸ್ವಭಾವದಿಂದ ಗೆದ್ದು ಬರುತ್ತಿರುವ, ಸದ್ಯದ ವಿಧಾನಸಭೆಯ ಸಭಾಧ್ಯಕ್ಷ ಹಾಗೂ ಆಡಳಿತಾತ್ಮಕ ಅನುಭವದ ರಾಜಕಾರಣಿಯಾಗಿದ್ದಾರೆ.

ತನ್ವೀರ್ ಸೇಟ್​ ಅವರು, ಹಳೇ ಮೈಸೂರು ಭಾಗದ ಮುಸ್ಲಿಂ ರಾಜಕಾರಣದ ಅಘೋಷಿತ ಬಾದ್‌ಶಾ, ಸದ್ದಿಲ್ಲದೆ ಕಾರ್ಯತಂತ್ರ ರೂಪಿಸುವ ಹಿರಿಯ ನಿಷ್ಠಾವಂತ ನಾಯಕ. ಹಿರಿಯರ ಈ ಕದನ ಒಂದೆಡೆಯಾದರೆ, ಭವಿಷ್ಯದ ನಾಯಕತ್ವದ ಮೇಲೆ ಕಣ್ಣಿಟ್ಟಿರುವ ರಿಜ್ವಾನ್ ಅರ್ಷದ್ ಹಾಗೂ ಇತ್ತೀಚೆಗಷ್ಟೇ ಡಿಕೆಶಿ ಪಾಳಯಕ್ಕೆ ಜಿಗಿದಿರುವ ಯುವ ನಾಯಕ ನಲಪಾಡ್ ಹ್ಯಾರಿಸ್ ಅವರಂತಹ ಯುವ ಪಡೆಯ ಕುಸ್ತಿಯೂ ತೆರೆಮರೆಯಲ್ಲಿ ಜೋರಾಗಿದೆ.

ಕಾಂಗ್ರೆಸ್ ಪಾಲಿಗೆ ಮುಸ್ಲಿಂ ಶಕ್ತಿ ಎಷ್ಟು ದೊಡ್ಡದು?

2015ರ ಕಾಂತರಾಜು ಆಯೋಗದ ದತ್ತಾಂಶಗಳ ಪ್ರಕಾರ, ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಸುಮಾರು 76 ಲಕ್ಷದಷ್ಟಿದೆ (ಒಟ್ಟು ಜನಸಂಖ್ಯೆಯ ಶೇ. 12.58). ಕಳೆದ 30 ವರ್ಷಗಳಲ್ಲಿ ಮುಸ್ಲಿಮರ ಜನಸಂಖ್ಯೆಯಲ್ಲಿ ಶೇ. 94 ರಷ್ಟು ತೀವ್ರ ಏರಿಕೆ ಕಂಡುಬಂದಿದೆ. ಆದರೆ, ಪ್ರಸ್ತುತ 224 ಸದಸ್ಯ ಬಲದ ವಿಧಾನಸಭೆಯಲ್ಲಿ ಕೇವಲ 9 ಮಂದಿ (ಶೇ. 4) ಹಾಗೂ ವಿಧಾನ ಪರಿಷತ್ತಿನಲ್ಲಿ ಕೇವಲ 4 ಮಂದಿ ಮುಸ್ಲಿಂ ಪ್ರತಿನಿಧಿಗಳಿದ್ದಾರೆ. ಜನಸಂಖ್ಯೆ ಹಾಗೂ ರಾಜಕೀಯ ಪ್ರಾತಿನಿಧ್ಯದ ನಡುವಿನ ಈ ಭಾರಿ ಅಂತರವೇ ಪ್ರಸ್ತುತ ಮುಸುಕಿನ ಗುದ್ದಾಟಕ್ಕೆ ಮೂಲ ಕಾರಣ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳ ಬೃಹತ್ ಬಹುಮತ ಸಾಧಿಸಲು ಮುಸ್ಲಿಂ ಮತದಾರರ ಏಕೀಕೃತ ಒಲವೇ ಪ್ರಮುಖ ಕಾರಣವಾಗಿದ್ದರಿಂದ, ಈಗ ಅಧಿಕಾರ ಹಂಚಿಕೆಯಲ್ಲಿ ಸಮುದಾಯ ದೊಡ್ಡ ಪಾಲನ್ನೇ ನಿರೀಕ್ಷಿಸುತ್ತಿದೆ.

ಶೂನ್ಯ ನಾಯಕತ್ವ ಸೃಷ್ಟಿ!

ಒಂದು ಕಾಲದಲ್ಲಿ ಸಿ.ಕೆ. ಜಾಫರ್ ಷರೀಫ್, ಕೆ. ರೆಹಮಾನ್ ಖಾನ್, ಖಮರುಲ್ ಇಸ್ಲಾಂ, ಅಜೀಜ್ ಸೇಠ್ ಹಾಗೂ ರೋಷನ್ ಬೇಗ್ ಅವರಂತಹ ದಿಗ್ಗಜರು ಇಡೀ ರಾಜ್ಯದ ಉದ್ದಗಲಕ್ಕೂ ಕಾಂಗ್ರೆಸ್‌ ಪಕ್ಷದ ಮುಸ್ಲಿಂ ಅಸ್ತಿತ್ವವನ್ನು ಗಟ್ಟಿಗೊಳಿಸಿದ್ದರು. ಆದರೆ, ಕಳೆದ ಒಂದೂವರೆ ದಶಕದಿಂದ ರಾಜ್ಯದ ಬಹುತೇಕ ಮುಸ್ಲಿಂ ನಾಯಕರು ಸಿದ್ದರಾಮಯ್ಯ ಅವರ 'ಅಹಿಂದ' ನೆರಳಿನಲ್ಲೇ ಬೆಳೆದಿದ್ದರು. ಇದೀಗ ಸಿದ್ದರಾಮಯ್ಯ ಅವರ ಪ್ರಭಾವ ಕಡಿಮೆಯಾಗಿ, ಡಿ.ಕೆ. ಶಿವಕುಮಾರ್ ಸಂಪೂರ್ಣ ಚುಕ್ಕಾಣಿ ಹಿಡಿಯುತ್ತಿದ್ದಂತೆ ಮುಸ್ಲಿಂ ನಾಯಕತ್ವದಲ್ಲಿ ಒಂದು ದೊಡ್ಡ 'ಶೂನ್ಯ' ಸೃಷ್ಟಿಯಾಗಿದೆ. "ಸಿದ್ದರಾಮಯ್ಯ ಅವರ ಬಳಿಕ ನಮ್ಮ ಧ್ವನಿಯಾಗಿ ಯಾರು ನಿಲ್ಲುತ್ತಾರೆ?" ಎಂಬ ಪ್ರಶ್ನೆಗೆ ಉತ್ತರವಾಗಿ ಈ ಮೂವರು ನಾಯಕರು ರೇಸ್‌ಗೆ ಇಳಿದಿದ್ದಾರೆ.

ನಾಯಕರ ಪ್ಲಸ್, ಮೈನಸ್ ಪಾಯಿಂಟ್‌ಗಳೇನು?

ಜಮೀರ್​ ಅಹ್ಮದ್ ಖಾನ್‌

ಜೆಡಿಎಸ್‌ನಿಂದ ಬಂದು ಚಾಮರಾಜಪೇಟೆ ಕ್ಷೇತ್ರದ ಪ್ರಶ್ನಾತೀತ ಶಾಸಕರಾಗಿ ಬೆಳೆದ ಜಮೀರ್​, ಸಿದ್ದರಾಮಯ್ಯ ಅವರ ಪರಮಾಪ್ತ ವಲಯದ ಪ್ರಮುಖರು. ಜಮೀರ್​ ಅವರ ಪ್ಲಸ್ ಪಾಯಿಂಟ್ ಎಂದರೆ ಅವರ 'ಮಾಸ್ ಅಪೀಲ್'. ಕೇವಲ ಬೆಂಗಳೂರು ಮಾತ್ರವಲ್ಲ, ರಾಜ್ಯದ ಮೂಲೆ ಮೂಲೆಯಲ್ಲೂ ಮುಸ್ಲಿಂ ಯುವಕರಲ್ಲಿ ಜಮೀರ್‌ಗೆ ದೊಡ್ಡ ಫಾಲೋಯಿಂಗ್ ಇದೆ. ಮಸೀದಿಗಳ ಅಭಿವೃದ್ಧಿ ಇರಲಿ, ಹಜ್ ಯಾತ್ರಿಕರಿಗೆ ನೆರವಿರಲಿ ಅಥವಾ ಅನಾಹುತಗಳಾದಾಗ ವೈಯಕ್ತಿಕ ಹಣ ನೀಡುವುದಿರಲಿ—ಜಮೀರ್​ ಯಾವಾಗಲೂ ಮುಂದು. ಉಪಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲೂ ಜಮೀರ್​ ಹೆಸರು ಬಲವಾಗಿ ಕೇಳಿಬಂದಿತ್ತು. ಆದರೆ, ಜಮೀರ್​ ಹಾದಿ ಹೂವಿನ ಹಾಸಿಗೆಯಲ್ಲ!

ಇತ್ತೀಚೆಗೆ ಅವರ ಸುತ್ತ ವಿವಾದಗಳ ಹುತ್ತವೇ ಬೆಳೆದಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಅಥವಾ ಸ್ಥಳೀಯ ಚುನಾವಣೆಗಳಲ್ಲಿ ಎಸ್‌ಡಿಪಿಐ ಅಭ್ಯರ್ಥಿಗೆ ಪರೋಕ್ಷವಾಗಿ ನೆರವು ನೀಡಿದ್ದಾರೆ ಎಂಬ ಗಂಭೀರ ಆರೋಪಗಳು ಪಕ್ಷದೊಳಗಿಂದಲೇ ಕೇಳಿಬರುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಕೆಲವು ಆಡಿಯೋ ಕ್ಲಿಪ್‌ಗಳು ವೈರಲ್ ಆಗಿವೆ. ಈ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದಷ್ಟೇ ಹೊರಬರಬೇಕಿದೆ. ಆದರೆ ರಾಜಕೀಯವಾಗಿ ಇದು ಜಮೀರ್​ ಅವರ ಇಮೇಜ್‌ಗೆ ದೊಡ್ಡ ಡ್ಯಾಮೇಜ್ ಮಾಡಿದೆ. ಜೊತೆಗೆ ಡಿ.ಕೆ. ಶಿವಕುಮಾರ್ ಬಣ ಜಮೀರ್‌ಗೆ ಚೆಕ್ ಮೇಟ್ ಇಡಲು ಇದೇ ಅಸ್ತ್ರವನ್ನು ಬಳಸುತ್ತಿದೆ ಎಂಬ ಮಾತುಗಳೂ ಇವೆ.

ಯು.ಟಿ. ಖಾದರ್‌

ಜಮೀರ್​ ಅವರ ಮಾಸ್ ರಾಜಕಾರಣಕ್ಕೆ ತದ್ವಿರುದ್ಧವಾದ ವ್ಯಕ್ತಿತ್ವ ಹೊಂದಿರುವ ನಾಯಕನೇ ಯು.ಟಿ. ಖಾದರ್. ಕರಾವಳಿ ಕರ್ನಾಟಕ ಅಂದರೆ ಬಿಜೆಪಿಯ ಹಿಂದುತ್ವದ ಪ್ರಯೋಗಶಾಲೆ. ಅಂಥದ್ದೊಂದು ಕೋಮುವಾದಿ ಸೂಕ್ಷ್ಮ ಪ್ರದೇಶದಲ್ಲಿ, ಕೇವಲ ಮುಸ್ಲಿಂ ಮತಗಳಿಂದಲ್ಲ, ಬದಲಾಗಿ ಹಿಂದೂಗಳ ಮತಗಳನ್ನೂ ಪಡೆದು ಸತತವಾಗಿ ಗೆಲ್ಲುತ್ತಿರುವ ಏಕೈಕ ಕಾಂಗ್ರೆಸ್ ನಾಯಕ ಯು.ಟಿ. ಖಾದರ್. ಅವರ ಶಕ್ತಿ ಇರುವುದು ಸೌಮ್ಯ ಸ್ವಭಾವ ಮತ್ತು ಆಡಳಿತಾತ್ಮಕ ಅನುಭವದಲ್ಲಿ. ಅವರು ಆರೋಗ್ಯ ಸಚಿವರಾಗಿ, ಆಹಾರ ಸಚಿವರಾಗಿ ಮಾಡಿದ ಕೆಲಸಗಳು ಇಂದಿಗೂ ಜನಜನಿತ. ಪ್ರಸ್ತುತ ಅವರು ವಿಧಾನಸಭೆಯ ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಖಾದರ್ ಬೆಂಬಲಿಗರ ವಾದ ಬಹಳ ಸ್ಪಷ್ಟವಾಗಿದೆ. "ಜಮೀರ್‌ಗೆ ಕೇವಲ ಭಾಷಣ ಮಾಡುವುದು ಗೊತ್ತು, ಆದರೆ ಖಾದರ್‌ಗೆ ಆಡಳಿತ ನಡೆಸುವುದು ಗೊತ್ತು. ಕರಾವಳಿಯಲ್ಲಿ ಪಕ್ಷವನ್ನು ಉಳಿಸಿದ ಖಾದರ್‌ಗೆ ದೊಡ್ಡ ಹುದ್ದೆ ಸಿಗಲೇಬೇಕು". ಆದರೆ ಇಲ್ಲಿರುವ ತಾಂತ್ರಿಕ ಸಮಸ್ಯೆ ಎಂದರೆ, ಸ್ಪೀಕರ್ ಹುದ್ದೆಯಲ್ಲಿರುವವರನ್ನು ಮತ್ತೆ ಸಚಿವ ಸಂಪುಟಕ್ಕೆ ತರುವುದು ಅಷ್ಟು ಸುಲಭವಲ್ಲ. ಅದಕ್ಕೆ ಹೈಕಮಾಂಡ್‌ನ ಗ್ರೀನ್ ಸಿಗ್ನಲ್ ಬೇಕು. ಆದರೂ, ವಿವಾದರಹಿತ ನಾಯಕನನ್ನು ಹುಡುಕಿದರೆ ಕಾಂಗ್ರೆಸ್ ಹೈಕಮಾಂಡ್‌ಗೆ ಮೊದಲು ಕಾಣುವುದು ಖಾದರ್ ಮಾತ್ರ!

ತನ್ವೀರ್ ಸೇಟ್‌

ಈ ಇಬ್ಬರ ಜಗಳದ ಲಾಭ ಪಡೆಯಲು ಸೈಲೆಂಟ್ ಆಗಿ ಕಣಕ್ಕಿಳಿದಿರುವ ಮೂರನೇ ಅಸ್ತ್ರವೇ ತನ್ವೀರ್ ಸೇಟ್​. ಮೈಸೂರಿನ ನರಸಿಂಹರಾಜ ಕ್ಷೇತ್ರದ ಪ್ರಶ್ನಾತೀತ ನಾಯಕ ತನ್ವೀರ್ ಸೇಟ್​. ಇವರದ್ದು ರಾಜಕೀಯದ ದೊಡ್ಡ ಪರಂಪರೆ. ಇವರ ತಂದೆ ಅಜೀಜ್ ಸೇಟ್​ ಅವರ ಕಾಲದಿಂದಲೂ ಕಾಂಗ್ರೆಸ್‌ನ ಕಟ್ಟಾಳುಗಳು. ಒಮ್ಮೆ ಮಾರಣಾಂತಿಕ ಹಲ್ಲೆಗೆ ಒಳಗಾಗಿ ಸಾವಿನ ದವಡೆಯಿಂದ ಪಾರಾಗಿ ಬಂದ ಮೇಲೂ ಪಕ್ಷದ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ತನ್ವೀರ್ ಸೇಟ್​ ಹೆಚ್ಚು ಸದ್ದು ಮಾಡುವ ನಾಯಕರಲ್ಲ, ಆದರೆ ಹಳೇ ಮೈಸೂರು ಭಾಗದ ಮುಸ್ಲಿಂ ಮತಗಳ ಮೇಲೆ ಇವರ ಹಿಡಿತ ಭದ್ರವಾಗಿದೆ. ಜಮೀರ್​ ಮತ್ತು ಖಾದರ್ ಇಬ್ಬರ ಪೈಪೋಟಿಯ ನಡುವೆ, "ಹಿರಿಯರು ಮತ್ತು ಸಂಘಟನೆಗೆ ನಿಷ್ಠರು" ಎಂಬ ಕೋಟಾದಡಿ ತನ್ವೀರ್ ಸೈತ್‌ಗೆ ಜಾಕ್‌ಪಾಟ್ ಹೊಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಡಿ.ಕೆ. ಶಿವಕುಮಾರ್ ಮುಂದಿರುವ ಅಗ್ನಿಪರೀಕ್ಷೆ!

ಈಗ ಚೆಂಡು ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಂಗಳದಲ್ಲಿದೆ. ಕೇವಲ ಒಬ್ಬರನ್ನು ಮಂತ್ರಿ ಮಾಡುವುದಲ್ಲ. ಜಾತಿ ಸಮೀಕರಣ, ಪ್ರಾದೇಶಿಕ ಸಮತೋಲನ, ಮತ್ತು ಮುಂದಿನ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಭದ್ರವಾದ ವೋಟ್ ಬ್ಯಾಂಕ್ ಅನ್ನು ಉಳಿಸಿಕೊಳ್ಳುವುದು. ಒಂದು ವೇಳೆ ಜಮೀರ್‌ಗೆ ಮಣೆ ಹಾಕಿದರೆ ವಿವಾದಗಳನ್ನು ಮೈಮೇಲೆ ಎಳೆದುಕೊಂಡಂತಾಗುತ್ತದೆ, ಖಾದರ್ ಅವರನ್ನು ಸ್ಪೀಕರ್ ಸ್ಥಾನದಿಂದ ಕೆಳಗಿಳಿಸಿದರೆ ಬೇರೊಬ್ಬ ಸಮರ್ಥರನ್ನು ಹುಡುಕಬೇಕು, ತನ್ವೀರ್ ಸೇಟ್​ಗೆ ಅವಕಾಶ ನೀಡಿದರೆ ಉತ್ತರ ಕರ್ನಾಟಕದ ರಹೀಮ್ ಖಾನ್ ಅವರಂತಹ ನಾಯಕರು ಬಂಡಾಯವೇಳಬಹುದು. ಡಿ.ಕೆ. ಶಿವಕುಮಾರ್ ಈ ರಾಜಕೀಯ 'ಚಕ್ರವ್ಯೂಹ'ವನ್ನು ಹೇಗೆ ಭೇದಿಸುತ್ತಾರೆ ಎಂಬುದು ಸದ್ಯದ ಅತಿ ದೊಡ್ಡ ಕುತೂಹಲವಾಗಿದೆ.

Read More
Next Story