
ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಸಿಎಂ ಆಪ್ತ ಸಚಿವರಾದ ಹೆಚ್.ಸಿ. ಮಹದೇವಪ್ಪ ಹಾಗೂ ಸತೀಶ್ ಜಾರಕಿಹೊಳಿ
ಸಿಎಂ ಬದಲಾವಣೆ ಚರ್ಚೆ ಬೆನ್ನಲ್ಲೇ ಸಿದ್ದರಾಮಯ್ಯ ರಣತಂತ್ರ: 40 ಶಾಸಕರಿಂದ 'ದೆಹಲಿ ಚಲೋ'
ಮುಖ್ಯಮಂತ್ರಿಗಳ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಡಾ. ಎಚ್.ಸಿ. ಮಹಾದೇವಪ್ಪ ಅವರು ಪ್ರಸ್ತುತ ನವದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.
ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಹಾಗೂ ಸಂಪುಟ ಪುನಾರಚನೆಯ ಚರ್ಚೆಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತ ನಾಯಕರ ಮೂಲಕ ದೆಹಲಿ ಮಟ್ಟದಲ್ಲಿ ಮಹತ್ವದ ರಣತಂತ್ರ ಹೆಣೆದಿದ್ದಾರೆ. ಸಿಎಂ ಬದಲಾವಣೆ ವಿಚಾರಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಸಿದ್ದರಾಮಯ್ಯ ಬಣ, ಹೈಕಮಾಂಡ್‌ಗೆ ಸಂದೇಶ ರವಾನಿಸಿದೆ.
ಮುಖ್ಯಮಂತ್ರಿಗಳ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಡಾ. ಎಚ್.ಸಿ. ಮಹಾದೇವಪ್ಪ ಅವರು ಪ್ರಸ್ತುತ ನವದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಸೋಮವಾರ ತಡರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಸುದೀರ್ಘ ಸಮಾಲೋಚನೆ ನಡೆಸಿದ್ದ ಈ ಇಬ್ಬರು ನಾಯಕರು, ಮಂಗಳವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ.
'ಅಹಿಂದ' ಅಸ್ತ್ರ ಹಾಗೂ ಹೈಕಮಾಂಡ್‌ಗೆ ಎಚ್ಚರಿಕೆ
ದೆಹಲಿ ನಾಯಕರ ಭೇಟಿ ವೇಳೆ ಸಚಿವರು ಸ್ಪಷ್ಟ ಹಾಗೂ ಕಠಿಣ ಸಂದೇಶ ರವಾನಿಸಿದ್ದಾರೆ. "ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಬಾರದು. ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಬದಲಾಯಿಸಿದರೆ, ಅದು ಪಕ್ಷ ಮತ್ತು ಸರ್ಕಾರದ ಇಮೇಜ್ ಮೇಲೆ ಭಾರಿ ನಕಾರಾತ್ಮಕ ಪರಿಣಾಮ ಬೀರಲಿದೆ" ಎಂದು ಎಚ್ಚರಿಸಿದ್ದಾರೆ.
"ಒಂದು ವೇಳೆ ನಾಯಕತ್ವ ಬದಲಾವಣೆ ಅನಿವಾರ್ಯವೇ ಆಗಿದ್ದರೆ, ಆ ಸ್ಥಾನವನ್ನು 'ಅಹಿಂದ' ವರ್ಗದ ನಾಯಕರಿಗೇ ನೀಡಬೇಕು. ಇಲ್ಲವಾದರೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿ. ಇದಕ್ಕೂ ಮೀರಿ ಸಿಎಂ ಬದಲಾವಣೆ ಮಾಡಿದರೆ, ಮುಂದಿನ ರಾಜಕೀಯ ಬೆಳವಣಿಗೆಗಳಿಗೆ ನಾವು ಜವಾಬ್ದಾರರಲ್ಲ," ಎಂದು ಸಚಿವರು ಹೈಕಮಾಂಡ್‌ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ, ನಾಯಕತ್ವ ಬದಲಾವಣೆ ಕುರಿತು ರಾಜ್ಯದ ನಾಯಕರು ನೀಡುತ್ತಿರುವ ಬಹಿರಂಗ ಹೇಳಿಕೆಗಳಿಗೆ ಮೊದಲು ಕಡಿವಾಣ ಹಾಕುವಂತೆ ಆಗ್ರಹಿಸಿದ್ದಾರೆ.
ಶಕ್ತಿ ಪ್ರದರ್ಶನಕ್ಕೆ 40 ಶಾಸಕರ 'ದೆಹಲಿ ಚಲೋ'
ಈ ಬೆಳವಣಿಗೆಗಳ ನಡುವೆ, ಸಿದ್ದರಾಮಯ್ಯ ಬೆಂಬಲಿತ ಸುಮಾರು 40 ಶಾಸಕರ ಪಡೆ ದೆಹಲಿಗೆ ತೆರಳಲು ಸಕಲ ಸಿದ್ಧತೆ ನಡೆಸಿದೆ. ಮೇ ಮೊದಲ ವಾರದಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲಿರುವ ಈ ಶಾಸಕರು, ಮೇಲ್ನೋಟಕ್ಕೆ 'ಸಂಪುಟ ಪುನಾರಚನೆ'ಗೆ ಆಗ್ರಹಿಸುವ ಯೋಜನೆಯಲ್ಲಿದ್ದಾರೆ.
ಇದರ ಹಿಂದಿನ ಅಸಲಿ ತಂತ್ರಗಾರಿಕೆಯೇ ಬೇರೆಯಾಗಿದೆ. ಸಂಪುಟ ಪುನಾರಚನೆಯ ನೆಪದಲ್ಲಿ 40 ಶಾಸಕರು ಒಟ್ಟಾಗಿ ದೆಹಲಿಗೆ ತೆರಳಿ, ಸಿದ್ದರಾಮಯ್ಯ ಅವರ ಬೆನ್ನಿಗಿರುವ ಶಾಸಕರ ಬಲವನ್ನು (ಶಕ್ತಿ ಪ್ರದರ್ಶನ) ಹೈಕಮಾಂಡ್‌ಗೆ ತೋರಿಸುವುದು ಇದರ ಪ್ರಮುಖ ಉದ್ದೇಶ. ಈ ಮೂಲಕ ಹೈಕಮಾಂಡ್ ಅನ್ನು ಇಕ್ಕಟ್ಟಿಗೆ ಸಿಲುಕಿಸುವ ಜೊತೆಗೆ, ಪದೇ ಪದೇ ಮುನ್ನೆಲೆಗೆ ಬರುತ್ತಿರುವ ನಾಯಕತ್ವ ಬದಲಾವಣೆ ಚರ್ಚೆಗೆ ಶಾಶ್ವತ ಬ್ರೇಕ್ ಹಾಕುವ ತಂತ್ರಗಾರಿಕೆ ಈ 'ದೆಹಲಿ ಚಲೋ' ಹಿಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

