
ಸರ್ಕಾರದ ಪಂಚ ಗ್ಯಾರಂಟಿಗಳು
ಸಿದ್ದರಾಮಯ್ಯ ʼಗ್ಯಾರಂಟಿʼಗೆ ಗ್ಯಾರಂಟಿಯಿಲ್ಲ! ಸಿಎಂ ಎದುರೇ ಕಾಂಗ್ರೆಸ್ ನಾಯಕರ ಅಸಮಾಧಾನ!
ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪ ಚುನಾವಣೆ ವೇಳೆ ಜನರು ಗ್ಯಾರಂಟಿ ಬಗ್ಗೆ ಹೆಚ್ಚಾಗಿ ಮಾತನಾಡಲೇ ಇಲ್ಲ. ಎಲ್ಲರೂ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದು ಆಪ್ತ ಶಾಸಕರು ತಿಳಿಸಿದ್ದಾರೆ.
ಪಂಚ ಗ್ಯಾರಂಟಿಗಳ ಘೋಷಣೆಯೊಂದಿಗೆ ವಿಧಾನಸಭೆಯಲ್ಲಿ ಭರ್ಜರಿ ಜಯ ಸಾಧಿಸಿದ್ದ ಕಾಂಗ್ರೆಸ್, ರಾಜ್ಯದಲ್ಲಿ ಸರ್ಕಾರವನ್ನು ರಚಿಸಿ ಗ್ಯಾರಂಟಿಗಳನ್ನು ಜಾರಿಗೆ ತಂದಿತ್ತು. ಸದಾ ಗ್ಯಾರಂಟಿಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೆ ನೀಡುತ್ತಿದ್ದ ಕಾಂಗ್ರೆಸ್‌ನ ಕೆಲವು ನಾಯಕರು ಇದೀಗ ಗ್ಯಾರಂಟಿಗಳ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ.
ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಗುರುವಾರ ತಮ್ಮ ಆಪ್ತ ಸಚಿವರು ಹಾಗೂ ಶಾಸಕರೊಂದಿಗೆ ನಡೆಸಿದ ಸಭೆಯಲ್ಲಿ ಕೆಲವು ನಾಯಕರು ಸಿಎಂ ಎದುರಿನಲ್ಲೇ ಗ್ಯಾರಂಟಿ ಬಗ್ಗೆ ಅಪಸ್ವರ ಎತ್ತಿದ್ದು, ಕೇವಲ ಈ ಯೋಜನೆಗಳನ್ನು ನೆಚ್ಚಿಕೊಂಡು 2028ರ ಚುನಾವಣೆಯನ್ನು ಎದುರಿಸುವುದು ಕಷ್ಟ, ಸರ್ಕಾರ ರಚನೆ ಸಂದರ್ಭದಲ್ಲಿ ಇದ್ದ ವಾತಾವರಣ ಈಗಿಲ್ಲ, ಜನರು ಮೊದಲಿನಂತೆ ಗ್ಯಾರಂಟಿ ಬಗ್ಗೆ ಮಾತನ್ನಾಡುತ್ತಿಲ್ಲ ಎಂದರು.
ಸಚಿವರು ಹೇಳಿದ್ದೇನು ?
ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪ ಚುನಾವಣೆ ವೇಳೆ ಜನರು ಗ್ಯಾರಂಟಿ ಬಗ್ಗೆ ಹೆಚ್ಚಾಗಿ ಮಾತನಾಡಲೇ ಇಲ್ಲ. ಎಲ್ಲರೂ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಜನರಿಗೆ ರಸ್ತೆ, ಚರಂಡಿಯಂತಹ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಮೊದಲಿದ್ದ ಭಾವನೆ ಜನರಲ್ಲಿ ಈಗ ಇಲ್ಲ. ಅದೊಂದು ಮಾಸಾಶನ ರೀತಿಯ ಯೋಜನೆ ಎಂಬಂತೆ ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.
ಸ್ಥಳೀಯ ಚುನಾವಣೆ ಕಷ್ಟ
ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮಪಂಚಾಯಿತಿ ಹಾಗೂ ಗ್ರೇಟರ್ ಬೆಂಗಳೂರು ಚುನಾವಣೆ ಎದುರಿಸಬೇಕಿದೆ. ನಂತರ 2028ಕ್ಕೆ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಿದ್ದರಾಗಬೇಕಾಗುತ್ತದೆ. ಹೀಗಿರುವಾಗ ನಾವು ಗ್ಯಾರಂಟಿಗಳನ್ನ ಮುಂದಿಟ್ಟುಕೊಂಡು ಚುನಾವಣೆ ಎದುರಿಸುವುದಾದರೂ ಹೇಗೆ ? ಶಾಸಕರೂ ಅಭಿವೃದ್ಧಿ ಕಾರ್ಯಕ್ಕೆ ಅನುದಾನವೇ ಇಲ್ಲವೆಂದು ಬೇಸರಗೊಂಡಿದ್ದಾರೆ. ತುರ್ತಾಗಿ ಶಾಸಕರಿಗೆ ಅನುದಾನ ಬೇಕಾಗಿದೆ ಎಂದು ಆಪ್ತ ಸಚಿವರು ಸಿಎಂಗೆ ಮನವಿ ಮಾಡಿದರು.
ಈ ಹಿಂದೆಯೂ ಕೇಳಿಬಂದಿತ್ತು ಅಪಸ್ವರ
ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಯ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ, ಶಾಸಕ ಆರ್.ವಿ. ದೇಶಪಾಂಡೆ ಕಳೆದ ಕೆಲವು ತಿಂಗಳುಗಳ ಹಿಂದೆ ವ್ಯಂಗ್ಯವಾಡಿದ್ದರು. ಗ್ಯಾರಂಟಿ ಯೋಜನೆಯಿಂದ ಸರ್ಕಾರಕ್ಕೆ ನಷ್ಟ, ಆರ್ಥಿಕ ಹೊರೆಯಾಗಿದೆ. ಜನರಿಗೆ ಅನುಕೂಲವಾಗಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಸರ್ಕಾರ ನಡೆಸಲು ಕಷ್ಟವಾಗಿದೆ ಎಂದಿದ್ದರು.
ಮುಖ್ಯಮಂತ್ರಿ ಇಂದಿರಾ ಕಿಟ್ ಕೊಡುತ್ತಾರೋ, ತೊಗರಿಬೇಳೆ ಎಂದು ತೆಂಗಿನಕಾಯಿ ಕೊಡುತ್ತಾರೋ ನಮಗೆ ತಿಳಿಯದು. ಸರ್ಕಾರದಲ್ಲಿ ಮಹಿಳೆಯರು ಎಲ್ಲಾ ಸೌಲಭ್ಯಗಳನ್ನೂ ಪಡೆಯುತ್ತಿದ್ದಾರೆ. ಆದರೆ ಪುರುಷರಿಗೆ ಯಾವುದೇ ಯೋಜನೆಗಳಿಲ್ಲ. ಸರ್ಕಾರದ ಈ ಯೋಜನೆಗಳನ್ನು ಜನರಿಗೆ ತಲುಪಿಸಲು ರಚಿಸಿರುವ ಸಮಿತಿಗಳನ್ನು ನಿಭಾಯಿಸುವುದೇ ಆಗಿದೆ. ರಾಜ್ಯದಲ್ಲಿ ಅಭಿವೃದ್ಧಿಯ ವೇಗ ತಗ್ಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

