
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹಾಗೂ ಸಿಎಂ ಸಿದ್ದರಾಮಯ್ಯ
ದಿಲ್ಲಿಯಲ್ಲಿ ಕಾಂಗ್ರೆಸ್ ಹೈವೋಲ್ಟೇಜ್ ಮೀಟಿಂಗ್: ಸಿದ್ದರಾಮಯ್ಯನಿಂದ ‘ದಲಿತ ಸಿಎಂ’ ದಾಳ?
ರಾಜ್ಯದಲ್ಲಿ ಸರ್ಕಾರ ರಚನೆಯಾದ ಬಳಿಕ ಕೆಲವೇ ಕೆಲವು ಬಾರಿ ದೆಹಲಿಗೆ ಭೇಟಿ ನೀಡಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಸಿಎಂ ಈ ಬಾರಿ ತಮ್ಮ ಜೊತೆಯಲ್ಲೇ ಕರೆದುಕೊಂಡು ಹೋಗಿದ್ದಾರೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಮನೆಮಾಡಿರುವ ನಾಯಕತ್ವ ಗೊಂದಲ ಹಾಗೂ ಸಚಿವ ಸಂಪುಟ ಪುನಾರಚನೆ ಕಸರತ್ತಿಗೆ ಮದ್ದರೆಯಲು ಹೈಕಮಾಂಡ್ ಇದೀಗ ಮುಂದಾಗಿದೆ. ದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿ 'ಇಂದಿರಾ ಭವನ'ದಲ್ಲಿ ಬೆಳಗ್ಗೆ 11 ಗಂಟೆಗೆ ಮಹತ್ವದ ಹೈವೋಲ್ಟೇಜ್ ಸಭೆ ಆಯೋಜನೆಯಾಗಿದ್ದು, ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಈ ಬಾರಿಯ ದೆಹಲಿ ಭೇಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ತೀವ್ರ ಕುತೂಹಲ ಕೆರಳಿಸಿದೆ. ರಾಜ್ಯದಲ್ಲಿ ಸರ್ಕಾರ ರಚನೆಯಾದ ಬಳಿಕ ಕೆಲವೇ ಕೆಲವು ಬಾರಿ ದೆಹಲಿಗೆ ಭೇಟಿ ನೀಡಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಸಿಎಂ ಈ ಬಾರಿ ತಮ್ಮ ಜೊತೆಯಲ್ಲೇ ಕರೆದುಕೊಂಡು ಹೋಗಿದ್ದಾರೆ. ಯಾರೆಲ್ಲಾ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದರೂ ಸಾಮಾನ್ಯವಾಗಿ ರಾಜ್ಯದಲ್ಲೇ ಉಳಿದುಕೊಳ್ಳುತ್ತಿದ್ದ ಪರಮೇಶ್ವರ್, ಇದೀಗ ಸಿದ್ದರಾಮಯ್ಯ ಜೊತೆ ಮೊದಲ ಬಾರಿಗೆ ದೆಹಲಿ ಯಾತ್ರೆ ಕೈಗೊಂಡಿರುವುದು ಅಚ್ಚರಿ ಮೂಡಿಸಿದೆ.
ಸಿಎಂ ಗಾದಿ ನಿಭಾಯಿಸಲು ಸಿದ್ದ: ಪರಮೇಶ್ವರ್
"ನಾನೂ ಸಿಎಂ ಗಾದಿ ನಿಭಾಯಿಸಲು ಸಿದ್ಧ" ಎಂದು ಹೇಳುತ್ತಲೇ ಗೃಹ ಸಚಿವ ಡಾ.ಜಿ. ಪರಮೇಶ್ವರ್ ದೆಹಲಿಗೆ ತಲುಪಿದ್ದಾರೆ. ಒಂದು ವೇಳೆ ಹೈಕಮಾಂಡ್ ನಾಯಕತ್ವ ಬದಲಾವಣೆಗೆ ಮುಂದಾದರೆ, ಸಿದ್ದರಾಮಯ್ಯ ಅವರು 'ದಲಿತ ಸಿಎಂ' ದಾಳ ಉರುಳಿಸಿ ಡಾ.ಜಿ. ಪರಮೇಶ್ವರ್ ಪರ ನಿಲುವು ತಳೆಯಲಿದ್ದಾರೆಯೇ? ಇದೇ ಕಾರಣಕ್ಕೆ ಅವರನ್ನು ಜೊತೆಯಲ್ಲಿ ಕರೆತಂದಿದ್ದಾರೆಯೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ.
ಐವರು ನಾಯಕರ 'ಸೀಕ್ರೆಟ್ ಮೀಟಿಂಗ್'
ಮುಂದಿನ ಎರಡು ವರ್ಷಗಳ ಕಾಲ ಕರ್ನಾಟಕದ ಆಡಳಿತದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರದಂತೆ ನೋಡಿಕೊಳ್ಳಲು ಹೈಕಮಾಂಡ್ ಮಾಸ್ಟರ್ ಪ್ಲಾನ್ ಮಾಡಿದೆ. ಈ ಹಿನ್ನೆಲೆಯಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ಮಾತ್ರ ರಹಸ್ಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿಯೂ ಭಾಗಿಯಾಗುವ ಸಾಧ್ಯತೆ ಇದ್ದು, ಒಂದು ವೇಳೆ ಅವರು ಉಪಸ್ಥಿತರಿದ್ದರೆ ನಾಯಕತ್ವ ಬದಲಾವಣೆ ವಿಚಾರ ಅತ್ಯಂತ ಭಾರಿ ಮಹತ್ವ ಪಡೆದುಕೊಳ್ಳಲಿದೆ.
ಸಭೆಯ ಪ್ರಮುಖ ಅಜೆಂಡಾಗಳೇನು ?
ನಾಯಕತ್ವ ಗೊಂದಲಕ್ಕೆ ತೆರೆ
ಮಂಗಳವಾರ(ಮೇ 26) ಸಭೆಯಲ್ಲಿ ರಾಜ್ಯ ನಾಯಕರ ನಡುವಿನ ನಾಯಕತ್ವದ ಗೊಂದಲಕ್ಕೆ ಶಾಶ್ವತ ಬ್ರೇಕ್ ಹಾಕುವುದು, ಮುಂದೆ ಯಾರೂ ಸಾರ್ವಜನಿಕವಾಗಿ ನಾಯಕತ್ವದ ಕುರಿತು ಮಾತನಾಡದಂತೆ ಸ್ಪಷ್ಟ ಸಂದೇಶ ರವಾನಿಸುವುದು ಹಾಗೂ ಸಿಎಂ ಮತ್ತು ಡಿಸಿಎಂ ಇಬ್ಬರ ಮುಂದೆಯೂ ಹೈಕಮಾಂಡ್ ತನ್ನದೇ ಆದ ವಿಶೇಷ ಫಾರ್ಮುಲಾವನ್ನು ಪ್ರಸ್ತಾಪಿಸಿ, ಮುಂದಿನ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಒಮ್ಮತ ಮೂಡಿಸುವ ಉದ್ದೇಶ ಹೊಂದಿದೆ.
ಸಚಿವ ಸಂಪುಟ ಪುನಾರಚನೆ
ಸರ್ಕಾರಕ್ಕೆ ಮೂರು ವರ್ಷಗಳು ಮುಗಿಯುತ್ತ ಬಂದಿರುವ ಹಿನ್ನೆಲೆಯಲ್ಲಿ ತಕ್ಷಣವೇ ಸಂಪುಟ ಪುನಾರಚನೆಗೆ ಅವಕಾಶ ನೀಡುವುದು, 2028ರ ಮುಂದಿನ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ಮುಖಗಳಿಗೆ ಆದ್ಯತೆ ನೀಡುವುದು, ಅದಕ್ಷ ಸಚಿವರಿಗೆ ಗೇಟ್ ಪಾಸ್ ನೀಡಿ, ಯಾರನ್ನು ಕೈಬಿಡಬೇಕು ಮತ್ತು ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಅಂತಿಮ ಪಟ್ಟಿ ಸಿದ್ಧತೆ ಬಗ್ಗೆ ಚರ್ಚೆಯಾಗಲಿದೆ.
ಅಭ್ಯರ್ಥಿಗಳ ಆಯ್ಕೆ ಕಸರತ್ತು
ಜೂನ್ ತಿಂಗಳಿನಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಯ ನಾಲ್ಕು ಸ್ಥಾನಗಳ ಪೈಕಿ ಕಾಂಗ್ರೆಸ್ ಪಾಲಿಗೆ ಸಿಗಲಿರುವ 3 ಸ್ಥಾನಗಳಿಗೆ ಯಾರನ್ನು ಕಣಕ್ಕಿಳಿಸಬೇಕು ಎಂಬ ಕುರಿತು ಚರ್ಚಿಸಲಾಗುವುದು. ಐದು ನಾಮನಿರ್ದೇಶನ ಹಾಗೂ ವಿಧಾನಸಭೆಯಿಂದ ಪರಿಷತ್ತಿಗೆ ನಡೆಯುವ ಏಳು ಸ್ಥಾನಗಳ ಚುನಾವಣೆಯಲ್ಲಿ ಪಕ್ಷದ ಪಾಲಿಗೆ ಬರುವ 4 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು. ಇದರೊಂದಿಗೆ, ಮುಂದಿನ ಎರಡು ವರ್ಷಗಳು ಸಂಪೂರ್ಣ ಚುನಾವಣಾ ವರ್ಷಗಳಾಗಿರುವುದರಿಂದ ಪಕ್ಷವನ್ನು ಸಜ್ಜುಗೊಳಿಸುವ ಕುರಿತು ಹಾಗೂ ಎಸ್‌ಐಆರ್ (SIR) ತನಿಖೆಗಳ ಕುರಿತೂ ಸಭೆಯಲ್ಲಿ ಪ್ರಸ್ತಾಪವಾಗುವ ಸಾಧ್ಯತೆಯಿದೆ.

