
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ನಿಶ್ಚಿತ, ಮುಂದಿನ ಸಿಎಂ ಯಾರೇ ಆದ್ರೂ ತಾತ್ಕಾಲಿಕ: ವಿಜಯೇಂದ್ರ ಭವಿಷ್ಯ
ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬಳಿಕ ಯಾರೇ ಮುಖ್ಯಮಂತ್ರಿಯಾದರೂ ಅದು ತಾತ್ಕಾಲಿಕ ವ್ಯವಸ್ಥೆಯಷ್ಟೇ. ಕರ್ನಾಟಕದಲ್ಲಿ ಅವಧಿಪೂರ್ವ ಚುನಾವಣೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿರುವುದು ಸಿದ್ದರಾಮಯ್ಯ ನೇತೃತ್ವದ ಸರಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ಲೇಷಿಸಿದ್ದು, ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲು ಕಾಂಗ್ರೆಸ್ ಸಂಪೂರ್ಣವಾಗಿ ವಿಫಲವಾಗಿದೆ ಎಂಬುದನ್ನು ಹೈಕಮಾಂಡ್ ಸ್ವತಃ ಅನುಮೋದಿಸಿದಂತಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಬುಧವಾರ (ಮೇ 27) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ದೆಹಲಿಯಲ್ಲಿ ನಿನ್ನೆ ನಡೆದ ಐದೂವರೆ ಗಂಟೆಗಳ ಮ್ಯಾರಥಾನ್ ಸಭೆಯ ಬಳಿಕ ಕೊನೆಗೂ ಮುಖ್ಯಮಂತ್ರಿಗಳಿಂದ ರಾಜೀನಾಮೆ ಪಡೆಯಲು ಹೈಕಮಾಂಡ್ ತೀರ್ಮಾನಿಸಿದೆ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ ಎಂಬುದಕ್ಕೆ ಇದೇ ಸ್ಪಷ್ಟ ಮುನ್ಸೂಚನೆ" ಎಂದರು.
ಮುಂದಿನ ಸಿಎಂ ಯಾರೇ ಆದರೂ ಅದು ತಾತ್ಕಾಲಿಕ
ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬಳಿಕ ಯಾರೇ ಮುಖ್ಯಮಂತ್ರಿಯಾದರೂ ಅದು ತಾತ್ಕಾಲಿಕ ವ್ಯವಸ್ಥೆಯಷ್ಟೇ. ಕರ್ನಾಟಕದಲ್ಲಿ ಅವಧಿಪೂರ್ವ ಚುನಾವಣೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸಿದ್ದರಾಮಯ್ಯನವರ ನಿರ್ಗಮನದ ನಂತರ ಆಡಳಿತದಲ್ಲಿ ಯಾವ ರೀತಿಯ ಗೊಂದಲಗಳು ಸೃಷ್ಟಿಯಾಗಲಿವೆ ಎಂಬುದನ್ನು ನೀವೇ ನೋಡಲಿದ್ದೀರಿ. ಹೈಕಮಾಂಡ್ ತೀರ್ಮಾನಕ್ಕೆ ಕಟ್ಟುಬಿದ್ದು ಸಿದ್ದರಾಮಯ್ಯನವರು ರಾಜೀನಾಮೆ ನೀಡೇ ನೀಡುತ್ತಾರೆ. ಆದರೆ ಮುಂದಿನ ಸಿಎಂ ಯಾರಾಗುತ್ತಾರೆ ಎಂಬುದು ಆ ಭಗವಂತನಿಗೇ ಗೊತ್ತು ಎಂದು ಮಾರ್ಮಿಕವಾಗಿ ಹೇಳಿದರು.
10 ಲಕ್ಷ ಕೋಟಿ ರೂ. ಸಾಲದ ಸುಳಿಯಲ್ಲಿ ರಾಜ್ಯ
"ನನಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಅವರು ಅತಿ ಹೆಚ್ಚು ರಾಜಕೀಯ ಅನುಭವ ಹೊಂದಿರುವ ನಾಯಕರು. ಆದರೆ, ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಸಿದ್ದರಾಮಯ್ಯನವರ ಆಡಳಿತದಲ್ಲಿ ರಾಜ್ಯವು ಬರೊಬ್ಬರಿ 10 ಲಕ್ಷ ಕೋಟಿ ರೂಪಾಯಿಗಳಷ್ಟು ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದೆ. ರಾಜ್ಯ ಇಂದು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ನಾವೆಲ್ಲರೂ ಆಲೋಚಿಸುವಂತಹ ದುಸ್ಥಿತಿ ನಿರ್ಮಾಣವಾಗಿದೆ" ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಮುಖ ಆರೋಪಗಳೇನು ?
ಕಾಂಗ್ರೆಸ್‌ನ ಆಂತರಿಕ ಮುನಿಸಿನಿಂದಾಗಿ ರಾಜ್ಯದ ಆಡಳಿತ ಯಂತ್ರ ಸಂಪೂರ್ಣ ಕುಸಿದುಬಿದ್ದಿದೆ. ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣದಂತಹ ಗಂಭೀರ ಭ್ರಷ್ಟಾಚಾರಗಳು ಸಿದ್ದರಾಮಯ್ಯ ಅವಧಿಯಲ್ಲೇ ನಡೆದಿವೆ. ಸರ್ಕಾರದ ಒತ್ತಡ ತಡೆಯಲಾರದೆ ರಾಜ್ಯದಲ್ಲಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಉಪಚುನಾವಣೆ ಗೆಲುವು ಆಡಳಿತಕ್ಕೆ ಮಾನದಂಡವಲ್ಲ
ಇತ್ತೀಚಿನ ಉಪಚುನಾವಣೆಗಳ ಗೆಲುವಿನ ಕುರಿತು ಪ್ರತಿಕ್ರಿಯಿಸಿದ ಅವರು, "ಉಪಚುನಾವಣೆಯ ಗೆಲುವು ಎಂದಿಗೂ ಸರಕಾರದ ಉತ್ತಮ ಆಡಳಿತಕ್ಕೆ ಮಾನದಂಡವಾಗಲು ಸಾಧ್ಯವಿಲ್ಲ. ಒಂದು ವೇಳೆ ಅದೇ ಮಾನದಂಡವಾಗಿದ್ದರೆ ಸಿದ್ದರಾಮಯ್ಯನವರಿಗೆ ರಾಜೀನಾಮೆ ನೀಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಅಭಿವೃದ್ಧಿ ಶೂನ್ಯವಾಗಿ, ಭ್ರಷ್ಟಾಚಾರದಲ್ಲಿ ಮುಳುಗಿದ್ದ ಕಾಂಗ್ರೆಸ್ ಸರ್ಕಾರವು ಕೊನೆಗೂ ಮುಖ್ಯಮಂತ್ರಿ ಹುದ್ದೆ ಬದಲಾವಣೆಗೆ ಮುಂದಾಗಿರುವುದು ಸತ್ಯವನ್ನು ಒಪ್ಪಿಕೊಂಡಂತಾಗಿದೆ" ಎಂದರು.

