
Internal Reservation |ಒಳ ಮೀಸಲಾತಿ ಜಾರಿ: ಇಂದು ಸಿದ್ದರಾಮಯ್ಯ ನೇತೃತ್ವದಲ್ಲಿ ನಿರ್ಣಾಯಕ ಸಚಿವ ಸಂಪುಟ ಸಭೆ
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.
ಪರಿಶಿಷ್ಟ ಜಾತಿಗಳ (SC) ಒಳ ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಇಂದು ಅತ್ಯಂತ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದ್ದು, ಮೂರು ದಶಕಗಳ ಹೋರಾಟಕ್ಕೆ ಇಂದು ತಾರ್ಕಿಕ ಅಂತ್ಯ ಸಿಗುವ ನಿರೀಕ್ಷೆಯಿದೆ.
ಇಂದಿನ ಸಭೆಯ ಪ್ರಮುಖಾಂಶಗಳು:
ನ್ಯಾಯಾಲಯದ ಆದೇಶದಂತೆ ಒಟ್ಟು ಮೀಸಲಾತಿಯನ್ನು ಶೇ. 50ಕ್ಕೆ ಸೀಮಿತಗೊಳಿಸಿರುವುದರಿಂದ, ಎಸ್‌ಸಿ ಸಮುದಾಯಕ್ಕೆ ಲಭ್ಯವಿರುವ ಶೇ. 15 ರಷ್ಟು ಮೀಸಲಾತಿಯಲ್ಲೇ ಒಳ ಮೀಸಲಾತಿ ಹಂಚಿಕೆ ಮಾಡಲಾಗುತ್ತದೆ. ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದ ತಾಂತ್ರಿಕ ಸಮಿತಿಯು ಇಂದು ತನ್ನ ವರದಿಯನ್ನು ಸಲ್ಲಿಕೆ ಮಾಡಲಿದೆ. ಸಂಪುಟ ಸಭೆಗೂ ಮುನ್ನ ಸಿಎಂ ಸಿದ್ದರಾಮಯ್ಯ ಅವರು ಎಸ್‌ಸಿ ಸಮುದಾಯದ ಸಚಿವರೊಂದಿಗೆ ಪ್ರತ್ಯೇಕ ಸಭೆ ನಡೆಸಿ ವಿಶ್ವಾಸಕ್ಕೆ ತೆಗೆದುಕೊಳ್ಳಲಿದ್ದಾರೆ.
ಸಮಿತಿ ಶಿಫಾರಸು ಮಾಡಲಿರುವ ಸಂಭಾವ್ಯ ಹಂಚಿಕೆ:
ಶಾಲಿನಿ ರಜನೀಶ್ ನೇತೃತ್ವದ ತಾಂತ್ರಿಕ ಸಮಿತಿಯು ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಹಂಚಿಕೆಗೆ ಸಂಬಂಧಿಸಿದಂತೆ ಮಹತ್ವದ ಶಿಫಾರಸುಗಳನ್ನು ನೀಡುವ ಸಾಧ್ಯತೆಯಿದ್ದು, ಇದರ ಅನ್ವಯ ಒಟ್ಟು ಲಭ್ಯವಿರುವ ಶೇ. 15 ರಷ್ಟು ಮೀಸಲಾತಿಯಲ್ಲಿ ಎಡಗೈ ಸಂಬಂಧಿತ ಜಾತಿಗಳನ್ನೊಳಗೊಂಡ ಗುಂಪು 'ಎ' ಗೆ ಶೇ. 5.3, ಬಲಗೈ ಸಂಬಂಧಿತ ಜಾತಿಗಳನ್ನೊಳಗೊಂಡ ಗುಂಪು 'ಬಿ' ಗೆ ಶೇ. 5.3 ಹಾಗೂ ಅಲೆಮಾರಿ, ಅರೆ ಅಲೆಮಾರಿ ಮತ್ತು ಸ್ಪೃಶ್ಯ ಜಾತಿಗಳನ್ನೊಳಗೊಂಡ ಗುಂಪು 'ಸಿ' ಗೆ ಶೇ. 4.4 ರಷ್ಟು ಮೀಸಲಾತಿಯನ್ನು ವರ್ಗೀಕರಣ ಮಾಡಬಹುದು ಎಂದು ವರದಿಯಲ್ಲಿ ಸಲಹೆ ನೀಡುವ ನಿರೀಕ್ಷೆಯಿದೆ.
ಹಿನ್ನೆಲೆ ಮತ್ತು ಕುತೂಹಲ
ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳ ಪೈಕಿ ಅವಕಾಶ ವಂಚಿತ ಉಪ ಜಾತಿಗಳಿಗೆ ನ್ಯಾಯ ಒದಗಿಸುವುದು ಈ ಒಳ ಮೀಸಲಾತಿಯ ಮುಖ್ಯ ಉದ್ದೇಶವಾಗಿದೆ. ಈ ಹಿಂದೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯ ಆಧಾರದ ಮೇಲೆ ಸರ್ಕಾರ ನಿರ್ಧಾರ ಕೈಗೊಂಡಿತ್ತಾದರೂ, ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಈಗ ಕಾನೂನಾತ್ಮಕ ಅಂಶಗಳನ್ನು ಪರಾಮರ್ಶಿಸಿ ಹೊಸದಾಗಿ ವರ್ಗೀಕರಣ ಮಾಡಲು ಸರ್ಕಾರ ಮುಂದಾಗಿದೆ.
ಈ ಹಿಂದಿನ ಹಲವು ಸಭೆಗಳಲ್ಲಿ ಸುದೀರ್ಘ ಚರ್ಚೆ ನಡೆದಿದ್ದರೂ, ಉಪಚುನಾವಣೆ ಹಾಗೂ ತಾಂತ್ರಿಕ ಕಾರಣಗಳಿಂದ ನಿರ್ಧಾರ ವಿಳಂಬವಾಗಿತ್ತು. ಎಡಗೈ ಸಮುದಾಯದ ಸಚಿವರ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಇಂದಿನ ಸಭೆ ರಾಜಕೀಯವಾಗಿಯೂ ತೀವ್ರ ಕುತೂಹಲ ಮೂಡಿಸಿದೆ.

