
Cabinet Meeting | ಸಚಿವ ಸಂಪುಟ ಸಭೆಯಲ್ಲಿ ಹೈಡ್ರಾಮಾ! ಮುಸ್ಲಿಂ ನಾಯಕರ ವಿರುದ್ಧದ ಕ್ರಮಕ್ಕೆ ಭಾರಿ ವಿರೋಧ; ಡಿಕೆಶಿ ವಾಕ್ ಔಟ್!
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮುಸ್ಲಿಂ ನಾಯಕರ ವಿರುದ್ಧದ ಶಿಸ್ತು ಕ್ರಮದ ವಿಚಾರವಾಗಿ ಸಚಿವರ ನಡುವೆ ಭಾರಿ ವಾಕ್ಸಮರ ನಡೆದಿದೆ. ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ ಆಕ್ಷೇಪ ವ್ಯಕ್ತಪಡಿಸಿದೆ.
ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಮಹತ್ವದ ಬೆಳವಣಿಗೆಯೊಂದರಲ್ಲಿ, ಗುರುವಾರ ರಾತ್ರಿ ನಡೆದ ಸಚಿವ ಸಂಪುಟ ಸಭೆಯು ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ. ಮುಸ್ಲಿಂ ನಾಯಕರ ವಿರುದ್ಧದ ಶಿಸ್ತು ಕ್ರಮ ಮತ್ತು ಚುನಾವಣಾ ವೈಫಲ್ಯದ ವಿಚಾರವಾಗಿ ಸಚಿವರ ನಡುವೆ ಭಾರಿ ವಾಕ್ಸಮರ ನಡೆದಿದ್ದು, ಆಡಳಿತಾರೂಢ ಕಾಂಗ್ರೆಸ್ ಸರ್ಕಾರದಲ್ಲಿನ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ. ಮುಸ್ಲಿಂ ಸಮುದಾಯದ ನಾಯಕರ ಪರವಾಗಿ ಕೆಲ ಸಚಿವರು ಬ್ಯಾಟಿಂಗ್ ಮಾಡಿದರೆ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ದಾಖಲೆಗಳ ಸಮೇತ ತಿರುಗೇಟು ನೀಡಿದ್ದು, ಸಭೆಯು ಅಸಮಾಧಾನದ ನಡುವೆಯೇ ಅಂತ್ಯಗೊಂಡಿದೆ.
ಮುಸ್ಲಿಂ ನಾಯಕರ ವಿರುದ್ಧದ ಶಿಸ್ತು ಕ್ರಮ ಹಾಗೂ ಚುನಾವಣಾ ವೈಫಲ್ಯದ ವಿಚಾರವಾಗಿ ಸಚಿವರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಅಂತಿಮವಾಗಿ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸಭೆಯಿಂದ ಅರ್ಧಕ್ಕೇ ಎದ್ದು ಹೊರನಡೆದಿದ್ದಾರೆ.
ಮುಸ್ಲಿಂ ಸಮುದಾಯದ ಆಕ್ರೋಶದ ಭೀತಿ
ಸಭೆಯಲ್ಲಿ ಮುಸ್ಲಿಂ ನಾಯಕರ ವಿರುದ್ಧ ತೆಗೆದುಕೊಳ್ಳಲಾಗಿರುವ ಕಠಿಣ ಕ್ರಮದ ಬಗ್ಗೆ ಹಲವು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಸಚಿವ ಪ್ರಿಯಾಂಕ್ ಖರ್ಗೆ ಅವರು, "ಮುಸ್ಲಿಂ ಸಮುದಾಯದ ಬೆಂಬಲವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣಾ ಪ್ರಚಾರದ ವೇಳೆ ಮುಸ್ಲಿಂ ಸಮುದಾಯದ ಮ್ಯಾಪಿಂಗ್ ಸರಿಯಾಗಿ ನಡೆದಿಲ್ಲ. ಮುಸ್ಲಿಂ ನಾಯಕರು ಮನೆ ಮನೆಗೆ ತಲುಪಲು ವಿಫಲರಾಗಿದ್ದಾರೆ ಮತ್ತು ಆ ಬಳಿಕ ಕೈಗೊಂಡ ಕ್ರಮಗಳಿಂದ ಅಲ್ಪಸಂಖ್ಯಾತ ಸಮುದಾಯದ ಸಿಟ್ಟನ್ನು ಪಕ್ಷ ಎದುರಿಸಬೇಕಾಗಿದೆ" ಎಂದು ಆತಂಕ ವ್ಯಕ್ತಪಡಿಸಿದರು.
ಜಬ್ಬಾರ್ ವಿಚಾರದಲ್ಲಿ ಜಾರಕಿಹೊಳಿ ಆಕ್ಷೇಪ
ಪಕ್ಷದ ಹಿರಿಯ ನಾಯಕ ಅಬ್ದುಲ್ ಜಬ್ಬಾರ್ ಅವರ ಮೇಲೆ ಕೈಗೊಂಡ ಶಿಸ್ತು ಕ್ರಮದ ಕುರಿತು ಸಚಿವ ಸತೀಶ್ ಜಾರಕಿಹೊಳಿ ತೀವ್ರ ಅಸಮಾಧಾನ ಹೊರಹಾಕಿದರು. "ಜಬ್ಬಾರ್ ವಿರುದ್ಧ ತರಾತುರಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇಷ್ಟು ಶೀಘ್ರವಾಗಿ ಕ್ರಮ ತೆಗೆದುಕೊಂಡಿರುವುದು ಸಮುದಾಯವೇ ನಮಗೆ ಸವಾಲು ಹಾಕುವಂತಹ ವಾತಾವರಣ ಸೃಷ್ಟಿಸಿದೆ. ನಾನೇ ಖುದ್ದಾಗಿ ಜಬ್ಬಾರ್ ಜೊತೆ ಮಾತನಾಡಿದ್ದೇನೆ, ಈ ಬೆಳವಣಿಗೆ ಸರಿಯಲ್ಲ" ಎಂದು ವಾದಿಸಿದರು.
ಲಿಂಗಾಯತ ಮತ್ತು ಮುಸ್ಲಿಂ ನಾಯಕರ ನಡುವೆ ವಾದ
ಈ ವೇಳೆ ಮಧ್ಯಪ್ರವೇಶಿಸಿದ ಕೆಲವು ಲಿಂಗಾಯತ ಸಚಿವರು, "ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ, ಏನು ತಪ್ಪಾಗಿದೆ ಎಂದು ನೀವು ಹೀಗೆ ಮಾತನಾಡುತ್ತಿದ್ದೀರಿ?" ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಅಲ್ಪಸಂಖ್ಯಾತ ನಾಯಕರು ಮತ್ತು ಸತೀಶ್ ಜಾರಕಿಹೊಳಿ ಬೆಂಬಲಿಗರು, ಸಮುದಾಯದ ಭಾವನೆಗಳನ್ನು ಕಡೆಗಣಿಸಬೇಡಿ ಎಂದು ಎಚ್ಚರಿಸಿದರು. ಸಚಿವ ಜಮೀರ್ ಅಹಮದ್ ಖಾನ್ ಅವರು, "ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ, ಆಗ ನಾನು ಕೇರಳ ಚುನಾವಣಾ ಪ್ರಚಾರದಲ್ಲಿದ್ದೆ" ಎಂದು ತಮ್ಮ ಮೇಲಿನ ಆರೋಪಗಳಿಗೆ ಸಮಜಾಯಿಷಿ ನೀಡಲು ಯತ್ನಿಸಿದರು.
ದಾಖಲೆ ಇದೆ ಎಂದ ಡಿಸಿಎಂ; ಸಭೆಯಿಂದ ವಾಕ್ ಔಟ್!
ಚರ್ಚೆ ಕಾವೇರುತ್ತಿದ್ದಂತೆ ಮಧ್ಯಪ್ರವೇಶಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, "ಯಾರು ಏನು ಕೆಲಸ ಮಾಡಿದ್ದಾರೆ, ಯಾರು ಮಾಡಿಲ್ಲ ಎನ್ನುವುದಕ್ಕೆ ನನ್ನ ಬಳಿ ಎಲ್ಲಾ ದಾಖಲೆಗಳಿವೆ" ಎಂದು ಖಡಕ್ ಆಗಿ ಹೇಳಿದರು. ಚರ್ಚೆಯು ವಾಗ್ವಾದಕ್ಕೆ ತಿರುಗಿದಾಗ ಅಸಮಾಧಾನಗೊಂಡ ಡಿಸಿಎಂ ಶಿವಕುಮಾರ್ ಮತ್ತು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸಭೆಯಿಂದ ಹೊರನಡೆದರು.
ಈ ಬೆಳವಣಿಗೆಯು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಒಳಗೆ ಮುಸ್ಲಿಂ ನಾಯಕತ್ವ ಮತ್ತು ಮುಂಬರುವ ರಾಜಕೀಯ ತಂತ್ರಗಾರಿಕೆಯ ಕುರಿತು ಭಿನ್ನಮತ ಸ್ಫೋಟಗೊಂಡಿರುವುದನ್ನು ಸೂಚಿಸುತ್ತಿದೆ.

