
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್‌ಗಾಂಧಿ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್
ಸಂಪುಟ ಫೈಟ್ - ಕೆಪಿಸಿಸಿ ಗಾದಿ: ಇಂದು ದೆಹಲಿಯಲ್ಲಿ ಹೈಕಮಾಂಡ್ ಅಂತಿಮ ನಿರ್ಧಾರ!
ಹೈಕಮಾಂಡ್ ಮೂಲಗಳ ಪ್ರಕಾರ, ಮೊದಲ ಹಂತದಲ್ಲೇ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾಗುವುದು ಅನುಮಾನ ಎನ್ನಲಾಗಿದೆ. ಆರಂಭದಲ್ಲಿ ಕೇವಲ 10 ರಿಂದ 12 ಶಾಸಕರು ಮಾತ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.
ಕರ್ನಾಟಕ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಸಚಿವ ಸಂಪುಟ ರಚನೆಯ ಹಗ್ಗಜಗ್ಗಾಟ ಅಂತಿಮ ಘಟ್ಟ ತಲುಪಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನವದೆಹಲಿಯ ನಿವಾಸದಲ್ಲಿ ಮಂಗಳವಾರ ಹೈಕಮಾಂಡ್ ನಾಯಕರ ಮಹತ್ವದ ಸಭೆ ಆಯೋಜನೆಗೊಂಡಿದ್ದು, ಸಚಿವರ ಪಟ್ಟಿ ಇಂದು ಅಂತಿಮಗೊಳ್ಳುವ ಸಾಧ್ಯತೆಯಿದೆ.
ಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಭಾಗವಹಿಸಿ ಸುದೀರ್ಘ ಚರ್ಚೆ ನಡೆಸಲಿದ್ದಾರೆ. ಜೂ. 3 ರಂದು ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಹೈಕಮಾಂಡ್ ಒಪ್ಪಿಗೆ ಮುದ್ರೆ ಒತ್ತಲು ಈ ಸಭೆ ಅತ್ಯಂತ ನಿರ್ಣಾಯಕವಾಗಿದೆ.
ಪೂರ್ಣ ಪ್ರಮಾಣದ ಸಂಪುಟ ರಚನೆ ಅನುಮಾನ!
ಹೈಕಮಾಂಡ್ ಮೂಲಗಳ ಪ್ರಕಾರ, ಮೊದಲ ಹಂತದಲ್ಲೇ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾಗುವುದು ಅನುಮಾನ ಎನ್ನಲಾಗಿದೆ. ಆರಂಭದಲ್ಲಿ ಕೇವಲ 10 ರಿಂದ 12 ಶಾಸಕರು ಮಾತ್ರ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ. ರಾಜ್ಯದಲ್ಲಿ ಸದ್ಯದಲ್ಲೇ ನಡೆಯಲಿರುವ ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಚುನಾವಣೆಗಳು ಮುಗಿದ ಬಳಿಕವಷ್ಟೇ ಉಳಿದ ಸ್ಥಾನಗಳನ್ನು ಭರ್ತಿ ಮಾಡಿ, ಪೂರ್ಣ ಪ್ರಮಾಣದ ಸಂಪುಟ ವಿಸ್ತರಣೆ ಮಾಡಲು ಕಾಂಗ್ರೆಸ್ ಗಂಭೀರ ಚಿಂತನೆ ನಡೆಸಿದೆ.
ಹಳಬರು vs ಹೊಸಬರು: ಹೈಕಮಾಂಡ್ ಸೂತ್ರವೇನು?
ಮೊದಲ ಹಂತದಲ್ಲೇ ಹಿರಿಯ ನಾಯಕರೊಂದಿಗೆ ಕೆಲವು ಹೊಸ ಮುಖಗಳಿಗೂ ಅವಕಾಶ ನೀಡಿ ಪ್ರಾದೇಶಿಕ ಮತ್ತು ಜಾತಿ ಸಮೀಕರಣ ಸರಿದೂಗಿಸಬೇಕು ಎಂಬುದು ಒಂದು ವಾದ. ಆರಂಭದಲ್ಲಿ ಯಾವುದೇ ಭಿನ್ನಮತ ಅಥವಾ ಗೊಂದಲ ಉಂಟಾಗದಂತೆ ತಡೆಯಲು, ಕೇವಲ ಅತ್ಯಂತ ಹಿರಿಯ ಮತ್ತು ಅನುಭವಿ ನಾಯಕರಿಗೆ ಮಾತ್ರ ಮೊದಲ ಹಂತದಲ್ಲಿ ಮಂತ್ರಿ ಸ್ಥಾನ ನೀಡಬೇಕು ಎಂದು ಹಿರಿಯ ನಾಯಕರು ಹೈಕಮಾಂಡ್‌ಗೆ ಸಲಹೆ ನೀಡಿದ್ದಾರೆ. ಈಗಾಗಲೇ ದೆಹಲಿ ನಾಯಕರು ತಮ್ಮದೇ ಆದ ಒಂದು ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಪಿಸಿಸಿ ಅಧ್ಯಕ್ಷ ಗಾದಿ: ಸತೀಶ್ ಜಾರಕಿಹೊಳಿ ಪಟ್ಟು!
ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಹಿನ್ನೆಲೆಯಲ್ಲಿ ತೆರವಾಗಲಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆಯೂ ಈಗ ಭಾರೀ ಕಗ್ಗಂಟಾಗಿ ಪರಿಣಮಿಸಿದೆ. ಹಿರಿಯ ಮುಖಂಡ ಸತೀಶ್ ಜಾರಕಿಹೊಳಿ ಅವರು ಸಚಿವ ಸ್ಥಾನದ ಜೊತೆಗೆ ತಮಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಬೇಕು ಎಂದು ಬಲವಾದ ಪಟ್ಟು ಹಿಡಿದಿದ್ದಾರೆ. ಸತೀಶ್ ಜಾರಕಿಹೊಳಿ ಅವರ ಈ ದ್ವಿಮುಖ ಬೇಡಿಕೆಗೆ ಸಿದ್ದರಾಮಯ್ಯ ಅವರ ಬೆಂಬಲ ಮತ್ತು ಅಭಿಪ್ರಾಯ ಏನಾಗಿರಲಿದೆ ಎಂಬುದು ಹೈಕಮಾಂಡ್ ಮಟ್ಟದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಜಾರಕಿಹೊಳಿ ಅವರ ಬೇಡಿಕೆಗೆ ಮಣಿಯಬೇಕೇ ಅಥವಾ ಒನ್ ಮ್ಯಾನ್ ಒನ್ ಪೋಸ್ಟ್ (ಒಬ್ಬರಿಗೆ ಒಂದೇ ಹುದ್ದೆ) ನಿಯಮ ಪಾಲಿಸಬೇಕೇ ಎಂಬ ಗೊಂದಲದಲ್ಲಿ ಹೈಕಮಾಂಡ್ ಸಿಲುಕಿದೆ.
ಇಂದಿನ ದೆಹಲಿ ಸಭೆಯು ರಾಜ್ಯ ಕಾಂಗ್ರೆಸ್ ಸರ್ಕಾರದ ಮುಂದಿನ ದಿಕ್ಸೂಚಿಯನ್ನು ನಿರ್ಧರಿಸಲಿದ್ದು, ಯಾರಿಗೆ ಮಂತ್ರಿಗಿರಿ ಸಿಗಲಿದೆ ಮತ್ತು ಕೆಪಿಸಿಸಿ ಸಾರಥ್ಯ ಯಾರ ಹೆಗಲೇರಲಿದೆ ಎಂಬುದು ಕೆಲವೇ ಗಂಟೆಗಳಲ್ಲಿ ಸ್ಪಷ್ಟವಾಗಲಿದೆ.

