Cabinet reshuffle State politicians visit Delhi, petition CM Siddaramaiah ministerial berth
x

ನವದೆಹಲಿಯ ಕರ್ನಾಟಕ ಭವನದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರು ಹಾಗೂ ಶಾಸಕರು ಭೋಜನ ಸೇವಿಸಿದರು.

ಸಚಿವ ಸ್ಥಾನ, ಡಿಸಿಎಂ ಪಟ್ಟಕ್ಕಾಗಿ ʼಕೈʼ ಪಾಳಯದಲ್ಲಿ ಹೆಚ್ಚಿದ ಲಾಬಿ

ಸಚಿವ ಸಂಪುಟಕ್ಕೆ ಸೇರುವ ಸಂಭಾವ್ಯ ಶಾಸಕರ ಪಟ್ಟಿಯೊಂದಿಗೆ ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್‌ ಅವರು ಸೋಮವಾರ (ಮೇ 31) ದೆಹಲಿಗೆ ತೆರಳಲಿದ್ದು, ನಾಯಕರ ನಡುವೆ ತೆರೆಮರೆಯ ರಾಜಕೀಯ ತಂತ್ರಗಾರಿಕೆ ಶುರುವಾಗಿದೆ.


ರಾಜ್ಯದಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಸಂಪುಟ ರಚನೆಗೆ ಕಸರತ್ತು ತೀವ್ರಗೊಂಡಿದೆ. ಉಪಮುಖ್ಯಮಂತ್ರಿ ಹಾಗೂ ಸಚಿವ ಸ್ಥಾನಗಳಿಗಾಗಿ ಕಾಂಗ್ರೆಸ್ ಪಾಳಯದಲ್ಲಿ ಭಾರಿ ಪೈಪೋಟಿ ಆರಂಭವಾಗಿದೆ. ಸಚಿವ ಸಂಪುಟಕ್ಕೆ ಸೇರುವ ಸಂಭಾವ್ಯ ಶಾಸಕರ ಪಟ್ಟಿಯೊಂದಿಗೆ ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್‌ ಅವರು ಸೋಮವಾರ (ಮೇ 31) ದೆಹಲಿಗೆ ತೆರಳಲಿದ್ದು, ನಾಯಕರ ನಡುವೆ ತೆರೆಮರೆಯ ರಾಜಕೀಯ ತಂತ್ರಗಾರಿಕೆ ಶುರುವಾಗಿದೆ.

ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಟಿ ಕುರಿತು ಹೈಕಮಾಂಡ್ ಮಟ್ಟದಲ್ಲಿ ಇನ್ನೂ ಅಧಿಕೃತವಾಗಿ ಪ್ರಸ್ತಾಪ ಬಂದಿಲ್ಲ. ಒಮ್ಮೆ ಪ್ರಸ್ತಾಪವಾದ ಬಳಿಕ ಎಷ್ಟು ಡಿಸಿಎಂ ಹುದ್ದೆಗಳು ಇರಬೇಕು, ಯಾರಿಗೆಲ್ಲ ಸಚಿವ ಸ್ಥಾನ ನೀಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸಲಿದೆ" ಖುದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿಕೆ ನೀಡಿರುವುದರಿಂದ ನಾಯಕರಲ್ಲಿ ಪೈಫೋಟಿ ತೀವ್ರವಾಗಿದೆ.

ದಲಿತ ಕೋಟಾ ಡಿಸಿಎಂ ಹುದ್ದೆಗೆ ಫೈಟ್

ಈ ಬಾರಿಯ ಸಂಪುಟ ರಚನೆಯಲ್ಲಿ ಅತ್ಯಂತ ಕುತೂಹಲ ಕೆರಳಿಸಿರುವುದು ದಲಿತ ಕೋಟಾದಡಿ ಸೃಷ್ಟಿಯಾಗಲಿರುವ ಉಪ ಮುಖ್ಯಮಂತ್ರಿ ಹುದ್ದೆ. ಸದ್ಯ ಈ ರೇಸ್‌ನಲ್ಲಿ ಡಾ. ಜಿ. ಪರಮೇಶ್ವರ್ ಹಾಗೂ ಪ್ರಿಯಾಂಕ್ ಖರ್ಗೆ ನಡುವೆ ನೇರ ಪೈಪೋಟಿ ಆರಂಭವಾಗಿದೆ.

ಇತ್ತೀಚೆಗಷ್ಟೇ ದೆಹಲಿಗೆ ಭೇಟಿ ನೀಡಿದ್ದ ಡಾ. ಜಿ. ಪರಮೇಶ್ವರ್, ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ತಮಗೆ ಡಿಸಿಎಂ ಹುದ್ದೆಯ ಜೊತೆಗೆ ಪ್ರಮುಖ ಖಾತೆ ನೀಡಲೇಬೇಕು ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ, "ಕಳೆದ ಬಾರಿ ನೀಡಿದ್ದ ಗೃಹ ಇಲಾಖೆ ತಮಗೆ ಬೇಡ. ಪ್ರಮುಖ ಖಾತೆಯೊಂದಿಗೆ ಡಿಸಿಎಂ ಸ್ಥಾನ ನೀಡದಿದ್ದರೆ ತಮಗೆ ಮಂತ್ರಿಸ್ಥಾನವೇ ಬೇಡ, ಕೇವಲ ಶಾಸಕನಾಗಿಯೇ ಉಳಿಯಲು ಸಿದ್ಧ" ಎಂದು ಎಐಸಿಸಿ ಅಧ್ಯಕ್ಷ ಖರ್ಗೆ ಬಳಿ ನೇರವಾಗಿ ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.

ಇದೇ ವೇಳೆ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ ಹೆಸರು ಕೂಡ ಡಿಸಿಎಂ ರೇಸ್ನಲ್ಲಿ ಕೇಳಿಬಂದಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಹೈಕಮಾಂಡ್ನ ಒಂದು ಬಣ ಪ್ರಿಯಾಂಕ್ ಪರ ಒಲವು ಹೊಂದಿದ್ದು, ಇದು ಹಿರಿಯ ವರ್ಸಸ್ ಕಿರಿಯ ನಾಯಕರ ನಡುವಿನ ಹೋರಾಟಕ್ಕೆ ಕಾರಣವಾಗಿದೆ.

ಹೈಕಮಾಂಡ್‌ಗೆ ಸಿದ್ದರಾಮಯ್ಯ ಶಿಫಾರಸ್ಸು ಪಟ್ಟಿ

ಡಿಸಿಎಂ ಹುದ್ದೆ ಮಾತ್ರವಲ್ಲದೆ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಶಾಸಕರು ಹೈಕಮಾಂಡ್ ಹಾಗೂ ರಾಜ್ಯ ನಾಯಕರ ಮನೆಗಳಿಗೆ ಎಡತಾಕುತ್ತಿದ್ದಾರೆ. ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದವರು ತಮ್ಮ ಸ್ಥಾನ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದರೆ, ಹಿರಿಯರಾಗಿಯೂ ಈ ಹಿಂದೆ ಅವಕಾಶ ವಂಚಿತರಾದವರು, ಹೊಸದಾಗಿ ಆಯ್ಕೆಯಾದ ಯುವ ಶಾಸಕರು ಕೂಡ ಮಂತ್ರಿಗಿರಿ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಸಾಗಿದೆ.

ಈ ಮಧ್ಯೆ, ನೂತನ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ ಸಂಭಾವ್ಯ ನಾಯಕರ ಕೆಲವು ಹೆಸರುಗಳನ್ನು ಸಿದ್ದರಾಮಯ್ಯ ಅವರು ಹೈಕಮಾಂಡ್‌ಗೆ ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಎ.ಎಸ್‌.ಪೊನ್ನಣ್ಣ, ಕೆ.ವೆಂಕಟೇಶ್, ಸಿ.ಪುಟ್ಟರಂಗಶೆಟ್ಟಿ, ಸಂತೋಷ್ ಲಾಡ್‌, ಎಚ್‌.ಸಿ.ಮಹದೇವಪ್ಪ, ಜಮೀರ್‌ ಅಹಮದ್‌, ಶಿವರಾಜ ತಂಗಡಗಿ. ಬಸವರಾಜ ರಾಯರಡ್ಡಿ, ಬಿ.ಕೆ. ಹರಿಪ್ರಸಾದ್‌ ಅವರನ್ನು ಶಿಫಾರಸು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಅಧಿಕಾರದ ಚುಕ್ಕಾಣಿ ಹಿಡಿಯುವ ಪ್ರಕ್ರಿಯೆ ಅಂತಿಮ ಹಂತ ತಲುಪಿದರೂ ಸಚಿವ ಸಂಪುಟದ ಕಸರತ್ತು ಇನ್ನೂ ಬಗೆಹರಿದಿಲ್ಲ. ಜಾತಿ, ಪ್ರಾದೇಶಿಕ ಸಮತೋಲನ ಹಾಗೂ ಹಿರಿಯ-ಕಿರಿಯರ ಸಮನ್ವಯ ಕಾಯ್ದುಕೊಳ್ಳುವುದು ಹೈಕಮಾಂಡ್‌ಗೆ ಈಗ ದೊಡ್ಡ ಸವಾಲಾಗಿ ಪರಿಣಮಿಸಿದೆ.

Read More
Next Story