ಬಿಜೆಪಿಯ ವಿರೋಧದ ನಡುವೆ ವಿಬಿ ಜಿರಾಮ್‌ ಜಿ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕಾರ
x

ಬಿಜೆಪಿಯ ವಿರೋಧದ ನಡುವೆ 'ವಿಬಿ ಜಿರಾಮ್‌ ಜಿ' ಕಾಯ್ದೆ ವಿರುದ್ಧ ನಿರ್ಣಯ ಅಂಗೀಕಾರ

ಮನರೇಗಾ ಸ್ವರೂಪ ಬದಲಿಸುವ ಕೇಂದ್ರದ ನಡೆಗೆ ರಾಜ್ಯ ಸರ್ಕಾರವು ವಿರೋಧ ವ್ಯಕ್ತಪಡಿಸಿದ್ದು, ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಿದೆ. ಹೊಸ ಕಾಯ್ದೆ ರದ್ದುಗೊಳಿಸಬೇಕು ಎಂಬ ನಿರ್ಣಯವನ್ನು ವಿಧಾನಸಭೆ ಕೈಗೊಂಡಿದೆ.


Click the Play button to hear this message in audio format

ಅಬಕಾರಿ ಇಲಾಖೆಯಲ್ಲಿ ನಡೆದ ಹಗರಣದ ಆರೋಪ ಸಂಬಂಧ ಸಚಿವ ಆರ್ ಬಿ ತಿಮ್ಮಾಪೂರ ರಾಜೀನಾಮೆಗೆ ಪ್ರತಿಪಕ್ಷಗಳ ಆಗ್ರಹದ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಬಿ ಜಿ ರಾಮ್ ಜಿ ವಿಧೇಯಕ ವಿರುದ್ಧವಾಗಿ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದರು.

ಕೇಂದ್ರ ಸರ್ಕಾರದ ನಡೆ ಸಂವಿಧಾನದ ಉಲ್ಲಂಘನೆ ಹಾಗೂ ರಾಜ್ಯದ ಗ್ರಾಮೀಣ ಜನರ ಬದುಕಿನ ಹಕ್ಕನ್ನು ಕಾಪಾಡುವ ದೃಷ್ಟಿಯಿಂದ ಒಕ್ಕೂಟ ತತ್ವಕ್ಕೆ ವಿರುದ್ಧವಾಗಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ನಿರ್ಣಯವನ್ನು ಸದನದಲ್ಲಿ ಪ್ರತಿಪಕ್ಷ ಬಿಜೆಪಿಯ ವಿರೋಧದ ನಡುವೆ ಅಂಗೀಕರಿಸಲಾಯಿತು.

ಕರ್ನಾಟಕ ರಾಜ್ಯದ ಗ್ರಾಮೀಣ ಜನರ ಬದುಕಿನ ಹಕ್ಕನ್ನು ಕಾಪಾಡುವ ದೃಷ್ಟಿಯಿಂದ, ಒಕ್ಕೂಟ ತತ್ವಕ್ಕೆ ವಿರೋಧವಾಗಿರುವ ಮತ್ತು ರಾಜ್ಯದ ಬೊಕ್ಕಸಕ್ಕೆ ತೀವು ಹೊರೆ ಉಂಟುಮಾಡುವ ವಿಬಿ ಜಿರಾಮ್‌ ಜಿ ಕಾಯ್ದೆಯನ್ನು ಕೇಂದ್ರ ಸರ್ಕಾರವು ತಕ್ಷಣವೇ ರದ್ದುಗೊಳಿಸಬೇಕು. ವಿಕೇಂದ್ರೀಕರಣ ತತ್ವಕ್ಕೆ ವಿರುದ್ಧವಾಗಿರುವ ಗ್ರಾಮ ಪಂಚಾಯತಿಗಳ ಅಧಿಕಾರ ಮತ್ತು ಹಕ್ಕುಗಳನ್ನು ಕಸಿದುಕೊಂಡಿರುವ ಈ ಕಾಯ್ದೆಯನ್ನು ಸ್ಥಗಿತಗೊಳಿಸಬೇಕು. ಗ್ರಾಮೀಣ ಆಸ್ತಿ ಸೃಜನೆಗೆ ಮತ್ತು ಬಡವರ ಸ್ವಾವಲಂಬನೆಗೆ ಕಾರಣವಾಗಿದ್ದ ಮನರೇಗಾ ಯೋಜನೆಯನ್ನು ಈ ಹಿಂದಿನಂತೆ ಅದರ ಮೂಲ ಸ್ವರೂಪದಲ್ಲಿಯೇ ಮರುಸ್ಥಾಪಿಸಬೇಕು ಎಂದು ಈ ಸದನವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿತು. ಸದನದಲ್ಲಿ ಕೈಗೊಂಡ ನಿರ್ಣಯವನ್ನು ಕೇಂದ್ರ ಸರ್ಕಾರಕ್ಕೆ ಮತ್ತು ರಾಷ್ಟ್ರಪತಿಗಳಿಗೆ ಕಳುಹಿಸಿಕೊಡಬೇಕು ಎಂದು ತೀರ್ಮಾನಿಸಲಾಯಿತು.

ಸದನದಲ್ಲಿ ವಿಬಿ ಜಿರಾಮ್‌ ಜಿ ವಿಧೇಯಕ ಕುರಿತ ವಿಶೇಷ ಚರ್ಚೆಯ ಮೇಲೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ದೇಶದ ಪ್ರಜಾಪ್ರಭುತ್ವದ ಭದ್ರಬುನಾದಿಯಾದ ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಅಧಿಕಾರ ವಿಕೇಂದ್ರೀಕರಣದ ತತ್ವಗಳಿಗೆ ತನ್ನ ಸಂಪೂರ್ಣ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಗ್ರಾಮೀಣ ಬಡವರ ಪಾಲಿನ ಸಂಜೀವಿನಿಯಾಗಿದ್ದ ಮತ್ತು ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿದ್ದ ಮನರೇಗಾ ಯೋಜನೆಯನ್ನು ರದ್ದುಗೊಳಿಸಿರುವುದನ್ನು ಸದನವು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಕೇಂದ್ರ ಸರ್ಕಾರವು ಏಕಪಕ್ಷೀಯವಾಗಿ ಜಾರಿಗೆ ತಂದಿರುವ ಹೊಸ ವಿಬಿ ಜಿರಾಮ್ ಜಿ ಕಾಯ್ದೆಯು ಒಕ್ಕೂಟ ವ್ಯವಸ್ಥೆಯ ಮೂಲ ಆಶಯಗಳಿಗೆ ಮತ್ತು ಗ್ರಾಮೀಣ ಜನರ ಜೀವನೋಪಾಯದ ಹಕ್ಕಿಗೆ ಮಾರಕವಾಗಿದೆ ಎಂದು ಕಿಡಿಕಾರಿದರು.

ರಾಜ್ಯಗಳಿಂದ ಶೇ.40 ರಷ್ಟು ಅನುದಾನ

ಗ್ರಾಮೀಣ ಬಡ ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡುವ ಸಲುವಾಗಿ 2005 ರಲ್ಲಿ ಅಂದಿನ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಮನರೇಗಾ ಯೋಜನೆಯನ್ನು ಜಾರಿಗೆ ತಂದಿತ್ತು. ಈ ಯೋಜನೆಯು ನಿರುದ್ಯೋಗ ನಿರ್ಮೂಲನೆ, ವಲಸೆ ತಡೆ, ಲಿಂಗ ತಾರತಮ್ಯವಿಲ್ಲದೆ ವೇತನ ನೀಡುವಿಕೆ, ಪಂಚಾಯತ್ ವಿಕೇಂದ್ರೀಕರಣದ ಬಲವರ್ಧನೆ ಹಾಗೂ ಗ್ರಾಮೀಣ ಜನರ ವೈಯಕ್ತಿಕ ಹಾಗೂ ಸಮುದಾಯ ಆಸ್ತಿಗಳ ಸೃಜನೆಯಿಂದ ಕ್ರಾಂತಿಕಾರಿ ಬದಲಾವಣೆ ತಂದಿದೆ. ಹೊಸ ಕಾಯ್ದೆಯು ಜೀವಿಸುವ ಹಕ್ಕನ್ನು ಮತ್ತು ಜೀವನೋಪಾಯದ ಹಕ್ಕನ್ನು ಉಲ್ಲಂಘಿಸುತ್ತದೆ ಹಾಗೂ ಗ್ರಾಮ ಪಂಚಾಯತ್‌ಗಳಿಗೆ ನೀಡಲಾದ ಅಧಿಕಾರವನ್ನು ಹಾಗೂ ಸ್ವಾಯತ್ತತೆಯನ್ನು ಕಸಿದುಕೊಳ್ಳುವ ಮೂಲಕ, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಅಲ್ಲದೇ, ಮಹಾತ್ಮ ಗಾಂಧಿಯವರ ಕಲ್ಪನೆಯ ಗ್ರಾಮ ಸ್ವರಾಜ್ಯದ ಉದ್ದೇಶವನ್ನು ಸಹ ವಿಫಲಗೊಳಿಸುತ್ತದೆ. ಮನರೇಗಾ ಕಾಯ್ದೆಯಲ್ಲಿ ಕೇಂದ್ರ ಸರ್ಕಾರವೇ 100 ಮಾನವ ದಿನಗಳ ಕೂಲಿ ಹಣವನ್ನು ಶೇ.100 ರಷ್ಟು ಸಂಪೂರ್ಣವಾಗಿ ಭರಿಸುತ್ತಿತ್ತು. ರಾಜ್ಯಗಳ ಜತೆ ಸಮಾಲೋಚಿಸದೆ, ಕೇಂದ್ರವು ಏಕಾಏಕಿ ರಾಜ್ಯ ಸರ್ಕಾರಗಳು ಶೇ. 40 ರಷ್ಟು ಅನುದಾನವನ್ನು ಭರಿಸಬೇಕೆಂಬ ನಿಯಮವನ್ನು ಹೇರಿದೆ. ಇದರಿಂದ 125 ಮಾನವ ದಿನಗಳ ಕೆಲಸ ಒದಗಿಸುವುದಾಗಿ ಹೊಸ ಕಾಯ್ದೆಯಲ್ಲಿ ಹೇಳಲಾಗಿದ್ದರೂ, ವಾಸ್ತವವಾಗಿ 50 ಮಾನವ ದಿನಗಳ ವೆಚ್ಚವನ್ನು ರಾಜ್ಯ ಸರ್ಕಾರವು ಭರಿಸಬೇಕಾಗುತ್ತದೆ. ಇದು ಒಕ್ಕೂಟ ವ್ಯವಸ್ಥೆಯ ರಚನೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅಲ್ಲದೇ, ಸಂವಿಧಾನದ ಆಶಯಗಳನ್ನು ಸ್ಪಷ್ಟ ಉಲ್ಲಂಘನೆ ಮಾಡಿದೆ ಎಂದು ಕೇಂದ್ರದ ವಿರುದ್ಧ ಟೀಕಾಪ್ರಹಾರ ನಡೆಸಿದರು.

ರಾಜ್ಯವು ದೇಶದಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿದೆ. ನಮ್ಮ ಗ್ರಾಮ ಪಂಚಾಯತಿಗಳು ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ಮೂಲಕ ಕರ್ನಾಟಕವು ದೇಶದಲ್ಲಿಯೆ ಮೊದಲ ಸ್ಥಾನದಲ್ಲಿದೆ. ವಿಕೇಂದ್ರೀಕರಣ ವ್ಯವಸ್ಥೆಯನ್ನು ಸಮಪರ್ಕವಾಗಿ ಅನುಷ್ಠಾನ ಮಾಡಿರುವುದರಲ್ಲಿ ಕೂಡ ರಾಜ್ಯವು ಮೊದಲ ಸ್ಥಾನದಲ್ಲಿದೆ. ರಾಜ್ಯಕ್ಕೆ 14ನೇ ಹಣಕಾಸು ಆಯೋಗದಲ್ಲಿ ಶೇ. 4.71 ರಷ್ಟು ತೆರಿಗೆ ಹಂಚಿಕೆಯನ್ನು ಶಿಫಾರಸ್ಸು ಮಾಡಲಾಗಿತ್ತು. 15ನೇ ಹಣಕಾಸು ಆಯೋಗದಲ್ಲಿ ಶೇ. 3.64 ಕ್ಕೆ ಇಳಿಕೆಯಾಗಿತ್ತು. ಈಗ 16ನೇ ಹಣಕಾಸು ಆಯೋಗದ ಶಿಫಾರಸಿನಲ್ಲಿ ಶೇ.4.131 ರಷ್ಟು ಹಂಚಿಕೆ ಮಾಡಿದ್ದರೂ, ಅದು 14ನೇ ಹಣಕಾಸು ಆಯೋಗದ ಶಿಫಾರಸ್ಸಿಗಿಂತ ಶೇ. 14.1 ರಷ್ಟು ಕಡಿಮೆ ಆಗಿದೆ. ಇಂತಹ ಸಂದಿಗ್ಧ ಸಮಯದಲ್ಲಿ, ಹೊಸ ಕಾಯ್ದೆಯ ಮೂಲಕ ಯೋಜನೆಯ ಅನುಷ್ಠಾನದಲ್ಲಿ ಶೇ.40 ರಷ್ಟು ಹೊರೆಯನ್ನು ರಾಜ್ಯದ ಮೇಲೆ ಹೊರಿಸುತ್ತಿರುವುದು ರಾಜ್ಯದ ಆರ್ಥಿಕ ಭದ್ರತೆಯನ್ನು ಮತ್ತು ಅಭಿವೃದ್ಧಿಯನ್ನು ಅಪಾಯಕ್ಕೆ ದೂಡುವ ಹುನ್ನಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಮಗಾರಿ ಆಯ್ಕೆ ಮಾಡುವ ಸ್ವಾತಂತ್ರ್ಯ ಇರುವುದಿಲ್ಲ

ಮನರೇಗಾ ಕಾಯ್ದೆಯಲ್ಲಿ ಉದ್ಯೋಗವು ಪ್ರತಿಯೊಬ್ಬ ವ್ಯಕ್ತಿಯ 'ಹಕ್ಕು' ಹಾಗೂ 'ಬೇಡಿಕೆ ಆಧಾರಿತ'ವಾಗಿತ್ತು. ಆದರೆ ಹೊಸ ಕಾಯ್ದೆಯಲ್ಲಿ ಇದನ್ನು ಕೇಂದ್ರ ಸರ್ಕಾರ ರೂಪಿಸುವ ಮಾನದಂಡಗಳ ಹಂಗಿಗೊಳಪಡಿಸಿ ಜನರ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಅಲ್ಲದೇ, ಗ್ರಾಮಸಭೆಗಳ ಅಧಿಕಾರವನ್ನು ಕಿತ್ತುಕೊಳ್ಳಲಾಗಿದೆ. ಗ್ರಾಮ ಪಂಚಾಯತಿಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಕಾಮಗಾರಿಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಕಳೆದುಕೊಂಡಿವೆ. ಕೇಂದ್ರ ಸರ್ಕಾರ ಆಯ್ಕೆ ಮಾಡಿದ ಪಂಚಾಯತಿಗಳಲ್ಲಿ ಮಾತ್ರ ಯೋಜನೆ ಜಾರಿಯಾಗುತ್ತಿದ್ದು, ಉಳಿದ ಕಡೆಗಳಲ್ಲಿ ಉದ್ಯೋಗದ ಹಕ್ಕನ್ನು ನಿರಾಕರಿಸಲಾಗಿದೆ. ಮನರೇಗಾ ಕಾಯ್ದೆಯಡಿ ನಮ್ಮ ಹೊಲ-ನಮ್ಮ ದಾರಿ, ದನದ ಕೊಟ್ಟಿಗೆ, ಕುರಿ ದೊಡ್ಡಿ, ಕಣ, ಶಾಲಾ ಕಾಂಪೌಂಡ್, ಶೌಚಾಲಯ, ಬದು, ಹೊಳಗಟ್ಟಿ, ಪಂಚಾಯತಿ ಕಟ್ಟಡ, ತೋಟಗಾರಿಕೆ ಬೆಳೆಗಳು, ಆಟದ ಮೈದಾನದಂತಹ ಸ್ಥಳೀಯವಾಗಿ ಅಗತ್ಯವಿರುವ ಗ್ರಾಮೀಣ ಆಸ್ತಿಗಳನ್ನು ನಿರ್ಮಿಸಲಾಗುತ್ತಿತ್ತು. ಹೊಸ ಕಾಯ್ದೆಯನ್ನು 'ಪಿ.ಎಂ ಗತಿಶಕ್ತಿ' ಯೋಜನೆಗೆ ಜೋಡಿಸಿರುವುದರಿಂದ, ದೊಡ್ಡ ರಸ್ತೆಗಳು ಮತ್ತು ಹೈವೆಗಳ ನಿರ್ಮಾಣಕ್ಕೆ ಬಳಕೆಯಾಗುತ್ತಿದ್ದು, ಇದು ಪರೋಕ್ಷವಾಗಿ ಗುತ್ತಿಗೆದಾರರು ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆಯಾಗಿ ಮಾರ್ಪಟ್ಟಿದೆ. ಇದು ಬಡವರ ಕೈಯಿಂದ ಅನ್ನ ಕಸಿದುಕೊಂಡು ಉಳ್ಳವರನ್ನು ಇನ್ನಷ್ಟು ಶ್ರೀಮಂತರನ್ನಾಗಿ ಮಾಡುವ ಯೋಜನೆಯಾಗಿದೆ ಎಂದು ಆರೋಪಿಸಿದರು.

ಹೊಸ ಕಾಯ್ದೆಯು ವರ್ಷಕ್ಕೆ 12 ತಿಂಗಳ ಬದಲು ಕೇವಲ 10 ತಿಂಗಳು ಮಾತ್ರ ಕೆಲಸಕ್ಕೆ ಅವಕಾಶ ನೀಡುತ್ತದೆ. ವಿಬಿ ಜಿರಾಮ್ ಜಿ ಕಾಯ್ದೆಯಡಿ ಎಲ್ಲಾ ಗ್ರಾಮ ಪಂಚಾಯತಿಗಳು ಸೇರ್ಪಡೆಗೊಳ್ಳುವ ಖಚಿತತೆ ಇಲ್ಲ ಹಾಗೂ ಕಾರ್ಮಿಕರಿಗೆ ನೀಡಲಾಗುವ ಕೂಲಿ ದರದ ಬಗ್ಗೆ ಯಾವುದೇ ಖಾತ್ರಿ ಇರುವುದಿಲ್ಲ. ಈ ಅನಿಶ್ಚಿತತೆಯು ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ವಿಶೇಷವಾಗಿ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾರ್ಮಿಕರು, ಆದಿವಾಸಿಗಳು, ರೈತಾಪಿ ಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಗ್ರಾಮೀಣ ಭಾಗದ ಕೂಲಿ ಕಾರ್ಮಿಕರನ್ನು ಆಧುನಿಕ ಗುಲಾಮಗಿರಿಗೆ ತಳ್ಳುವ ಪ್ರಯತ್ನವಾಗಿದೆ. ಹೀಗಾಗಿ ಕೇಂದ್ರದ ನಡೆಯನ್ನು ರಾಜ್ಯವನ್ನು ತೀವ್ರವಾಗಿ ವಿರೋಧಿಸುತ್ತದೆ ಎಂದು ಹೇಳಿದರು.

Read More
Next Story