ವಿಧಾನಮಂಡಲದಲ್ಲಿ ಮನರೇಗಾ ವಿಶೇಷ ಅಧಿವೇಶನ: ಬಿಜೆಪಿ ವಿರೋಧದ ನಡುವೆ ಚರ್ಚೆ
x

ಕೇಂದ್ರದ ಈ ಮಹತ್ವಾಕಾಂಕ್ಷಿ ಗ್ರಾಮೀಣಾಭಿವೃದ್ಧಿ ಯೋಜನೆಯನ್ನು ಬೆಂಬಲಿಸಲು ಮತ್ತು ಸರ್ಕಾರದ ಟೀಕೆಗಳಿಗೆ ತಿರುಗೇಟು ನೀಡಲು ಬಿಜೆಪಿ ಮತ್ತು ಜೆಡಿಎಸ್ ಸಜ್ಜಾಗಿವೆ.

ವಿಧಾನಮಂಡಲದಲ್ಲಿ ಮನರೇಗಾ ವಿಶೇಷ ಅಧಿವೇಶನ: ಬಿಜೆಪಿ ವಿರೋಧದ ನಡುವೆ ಚರ್ಚೆ

ಕೇಂದ್ರ ಸರ್ಕಾರದ ಹೊಸ 'ವಿಬಿ ಜಿ ರಾಮ್ ಜಿ' ಕಾಯ್ದೆಯ ಸಾಧಕ-ಬಾಧಕಗಳ ಬಗ್ಗೆ ಕರ್ನಾಟಕ ವಿಧಾನಮಂಡಲದ ಉಭಯ ಸದನಗಳಲ್ಲಿ ಇಂದಿನಿಂದ ಎರಡು ದಿನಗಳ ಕಾಲ ವಿಶೇಷ ಚರ್ಚೆ ನಡೆಯಲಿದೆ.


Click the Play button to hear this message in audio format

ಕೇಂದ್ರ ಸರ್ಕಾರವು ನರೇಗಾ ಕಾಯ್ದೆಗೆ ತಿದ್ದುಪಡಿ ತಂದು, ಅದರ ಬದಲಿಗೆ ತಂದ ವಿಬಿ-ಜಿ ರಾಮ್‌ ಜಿ ಕಾಯ್ದೆಯ ಪರ-ವಿರೋಧ ಚರ್ಚೆಗಳು ಇಂದಿನಿಂದ ಎರಡು ದಿನಗಳ ಕಾಲ ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ನಡೆಯಲಿವೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಬದಲಿಗೆ ಬಂದಿದ್ದು, ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಕೇಂದ್ರದ ಈ ನೀತಿಯನ್ನು ಕಾಂಗ್ರೆಸ್‌ ಪ್ರಬಲವಾಗಿ ವಿರೋಧಿಸಿದೆ.

ಸೋಮವಾರವಷ್ಟೇ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗಳು ಮುಕ್ತಾಯಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಸುದೀರ್ಘ ಉತ್ತರ ನೀಡಿದ್ದಾರೆ. ಇದರ ಬೆನ್ನಲ್ಲೇ ಮಂಗಳವಾರ ಮತ್ತು ಬುಧವಾರ ಕೇಂದ್ರದ ಈ ಹೊಸ ಕಾಯ್ದೆಯ ಸಾಧಕ-ಬಾಧಕಗಳ ಕುರಿತು ವಿಶೇಷ ಚರ್ಚೆಗಳನ್ನು ನಡೆಸಲು ಸರ್ಕಾರ ನಿರ್ಧರಿಸಿದೆ. ಈ ವೇಳೆ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ನಡುವೆ ಭಾರಿ ವಾಕ್ಸಮರ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ವರ್ಷದ ಮೊದಲ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸರ್ಕಾರ ನೀಡಿದ್ದ ಪೂರ್ಣ ಭಾಷಣ ಓದದೆ ಕೇವಲ ಆರಂಭ ಹಾಗೂ ಅಂತ್ಯದ ಸಾಲುಗಳನ್ನು ಓದಿ ವಾಪಸ್‌ ತೆರಳಿದ್ದರು. ಆ ಮೂಲಕ ಸಿದ್ದರಾಮಯ್ಯ ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ ಕೇಂದ್ರದ ವಿರುದ್ಧ ಇರುವ ಅಂಶಗಳ ಬಗ್ಗೆ, ಪ್ರಮುಖವಾಗಿ ಮರೇಗಾ ವಿಷಯದ ಬಗ್ಗೆ ರಾಜ್ಯ ಸರ್ಕಾರದ ನಿಲುವಿನ ಬಗ್ಗೆ ತಮ್ಮ ಅಸಮಾಧಾನವನ್ನು ಮುಂದುವರಿಸಿದ್ದರು.

ಸರ್ಕಾರದ ಭಾಷಣದಲ್ಲೇನಿದೆ ?

"ರಾಜ್ಯವು ಒಕ್ಕೂಟ ವ್ಯವಸ್ಥೆಯಲ್ಲಿ ಆರ್ಥಿಕ ಮತ್ತು ನೀತಿಕಾರಕ ವಿಚಾರಗಳಲ್ಲಿ ದಮನಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿದೆ. ತೆರಿಗೆ ಪಾಲು, ಕೇಂದ್ರ ಪುರಸ್ಕೃತ ಯೋಜನೆಗಳು, ಕೇಂದ್ರದ ಯೋಜನೆಗಳು, ವಿಶೇಷ ಯೋಜನೆಗಳು ಮುಂತಾದವುಗಳಲ್ಲಿ ಅನ್ಯಾಯಗಳಿಗೆ ತುತ್ತಾಗಿದೆ. ದೇಶದ ಆರ್ಥಿಕತೆಯಲ್ಲಿ ಚಾಲಕ ಸ್ಥಾನದಲ್ಲಿರುವ ಕರ್ನಾಟಕವನ್ನು ಆರ್ಥಿಕವಾಗಿ ದಮನಿಸಿದರೆ ಅದರ ಪರಿಣಾಮ ಇಡೀ ದೇಶದ ಮೇಲೆ ಉಂಟಾಗುತ್ತದೆ ಎಂಬುದನ್ನು ಒಕ್ಕೂಟ ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕಾಗಿದೆ," ಎಂಬ ಅಂಶಗಳು ಜಂಟಿ ಅಧಿವೇಶನದಲ್ಲಿ ಮಂಡಿಸಲಾದ ರಾಜ್ಯಪಾಲರ ಭಾಷಣದಲ್ಲಿ ಇತ್ತು.

ಮನರೇಗಾ ಉಲ್ಲೇಖ

“ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ” ಕಾಯ್ದೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಆ ಮೂಲಕ ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರು, ಸಣ್ಣ ರೈತರ, ಮಹಿಳೆಯರ ಉದ್ಯೋಗದ ಮತ್ತು ನಿರುದ್ಯೋಗ ಭತ್ಯೆಯ ಹಕ್ಕನ್ನು ಕಸಿದುಕೊಂಡಿದೆ. ಗ್ರಾಮೀಣ ಭಾರತದ ಅಭಿವೃದ್ಧಿ ಪರ್ವದ ಬೃಹತ್‌ ಅಧ್ಯಾಯವಾಗಿದ್ದ “ಮನರೇಗಾ" ಕಾಯ್ದೆಯ ರದ್ಧತಿಯ ಮೂಲಕ ಭಾರತೀಯ ಗ್ರಾಮೀಣ ಬದುಕನ್ನು ದುರ್ಬಲಗೊಳಿಸಲಾಗಿದೆ. ಗಾಂಧೀಜಿಯವರು, ಗ್ರಾಮಗಳು ಸ್ವತಂತ್ರವಾದ, ಸ್ವಾಯತ್ತವಾದ ಘಟಕಗಳಾಗಬೇಕು ಎಂದು ಆಶಿಸಿದ್ದರು, “ಗ್ರಾಮಗಳು ನಾಶವಾದಲ್ಲಿ ಭಾರತವೂ ನಾಶವಾಗುತ್ತದೆ. ಈ ದೇಶ ಯಾವ ಸಂದೇಶವನ್ನು ಜಗತ್ತಿಗೆ ನೀಡಬೇಕೊ ಅದು ಇಲ್ಲವಾಗುತ್ತದೆ," ಎಂದು ಭಾಷಣದಲ್ಲಿ ಉಲ್ಲೇಖಿಸಲಾಗಿತ್ತು.

ಏನಿದು ವಿಬಿ ಜಿ ರಾಮ್ ಜಿ ಕಾಯ್ದೆ?

ಕೇಂದ್ರ ಸರ್ಕಾರವು ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಆಧುನೀಕರಿಸುವ ಉದ್ದೇಶದಿಂದ ಈ ಕಾಯ್ದೆಯನ್ನು ತಂದಿದೆ. ಇದರ ಅಡಿಯಲ್ಲಿ ಕೆಲಸದ ದಿನಗಳನ್ನು 100 ರಿಂದ 125ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ, ಪಾರದರ್ಶಕತೆಗಾಗಿ ಎಐ ತಂತ್ರಜ್ಞಾನ ಮತ್ತು ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಆದರೆ, ಯೋಜನೆಯ ಹೆಸರಿನಿಂದ 'ಮಹಾತ್ಮ ಗಾಂಧಿ' ಅವರ ಹೆಸರನ್ನು ತೆಗೆದು ಹಾಕಿರುವುದು ಹಾಗೂ ಕೇಂದ್ರ ಮತ್ತು ರಾಜ್ಯಗಳ ನಡುವಿನ ಅನುದಾನ ಹಂಚಿಕೆಯ ಪ್ರಮಾಣದಲ್ಲಿ ಬದಲಾವಣೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

ಸದನದಲ್ಲಿ ನಿರ್ಣಯದ ಸಿದ್ಧತೆ

ರಾಜ್ಯ ಸರ್ಕಾರವು ಈ ಕಾಯ್ದೆಯ ವಿರುದ್ಧ ಸದನದಲ್ಲಿ ಅಧಿಕೃತ ನಿರ್ಣಯವೊಂದನ್ನು ತೆಗೆದುಕೊಳ್ಳುವ ಉದ್ದೇಶ ಹೊಂದಿದೆ ಎನ್ನಲಾಗಿದೆ. ಕಾಯ್ದೆಯು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿದೆ ಮತ್ತು ಬಡವರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂಬುದು ಸರ್ಕಾರದ ವಾದ. ಮತ್ತೊಂದೆಡೆ, ಕೇಂದ್ರ ಸರ್ಕಾರದ ಈ ಐತಿಹಾಸಿಕ ಬದಲಾವಣೆಯನ್ನು ಸಮರ್ಥಿಸಿಕೊಳ್ಳಲು ಪ್ರತಿಪಕ್ಷಗಳು ಸನ್ನದ್ಧವಾಗಿವೆ. ಹೀಗಾಗಿ ಈ ಎರಡು ದಿನಗಳ ಅಧಿವೇಶನವು ಅತ್ಯಂತ ಕುತೂಹಲಕಾರಿಯಾಗಿದೆ.

Read More
Next Story