
ಸದನದಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದರು.
'ಹಾಲು-ಸಕ್ಕರೆ' ವರ್ಸಸ್ 'ಹಾಲಾಹಲ': 'ಕಾಲವೇ ಉತ್ತರ ಕೊಡುತ್ತೆ' ಎಂದ ಡಿಕೆಶಿಗೆ ಅಶೋಕ್ ಟಾಂಗ್!
ಈ ಚರ್ಚೆಯ ನಡುವೆಯೇ ಸಿಎಂ ಸಿದ್ದರಾಮಯ್ಯ ಅವರು ಡಿಕೆಶಿ ಕಡೆಗೆ ಕೈತೋರಿಸಿ ಏನೋ ಹೇಳಲು ಹೋದಾಗ, ಡಿಕೆ ಶಿವಕುಮಾರ್ ಅವರು ಎದ್ದು ನಿಂತು, "ಅದಕ್ಕೆ ಟೈಮ್ (ಕಾಲ) ಉತ್ತರ ಕೊಡುತ್ತೆ ಬಿಡಿ," ಎಂದು ಮಾರ್ಮಿಕವಾಗಿ ನುಡಿದರು.
ವಿಧಾನಸಭೆಯ ಅಧಿವೇಶನದಲ್ಲಿ ಇಂದು ಮುಖ್ಯಮಂತ್ರಿಗಳ ಕುರ್ಚಿ ಕಿತ್ತಾಟದ ವಿಷಯ ಪ್ರಸ್ತಾಪವಾಗಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಭಾರೀ ಜಟಾಪಟಿ ನಡೆಯಿತು. ಒಂದೆಡೆ ಬಿಯರ್ ದರದ ಬಗ್ಗೆ ಸಿಎಂ ತಮಾಷೆಯಾಗಿ ಮಾತನಾಡಿದರೆ, ಮತ್ತೊಂದೆಡೆ ಸಿಎಂ ಮತ್ತು ಡಿಸಿಎಂ ನಡುವಿನ ಸಂಬಂಧದ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಕಚಗುಳಿ ಇಟ್ಟರು. ಇದಕ್ಕೆ ಸಿಎಂ-ಡಿಸಿಎಂ 'ಹಾಲು-ಸಕ್ಕರೆ'ಯ ಉದಾಹರಣೆ ನೀಡಿದರೆ, ಅಶೋಕ್ 'ಹಾಲಾಹಲ'ದ ಕೌಂಟರ್ ನೀಡಿದ್ದು ಸದನದಲ್ಲಿ ನಗೆಯುಕ್ಕಿಸಿತು.
ಚರ್ಚೆಯ ಆರಂಭದಲ್ಲಿ ಮದ್ಯದ ದರದ ವಿಷಯ ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ ಅಶೋಕ್ ಅವರನ್ನು ಉದ್ದೇಶಿಸಿ "ರಾಯಲ್ ಸ್ಟ್ರಾಂಗ್ ಅಂತ ಒಂದು ಬಿಯರ್ ಇದೆ ಕಣಯ್ಯ, ನೀನು ಕುಡಿದಿದ್ದೀಯಾ? ಕುಡಿದಿದ್ರೆ ತಾನೇ ನಿನಗೆ ಗೊತ್ತಾಗೋದು," ಎಂದು ತಮಾಷೆ ಮಾಡಿದರು. ಮುಂದುವರಿದು, "ಕಿಂಗ್ ಫಿಶರ್ ಬಿಯರ್ ಬೆಲೆ ನಮ್ಮಲ್ಲಿ 225 ರೂ. ಇದೆ, ಅದೇ ತೆಲಂಗಾಣದಲ್ಲಿ 125 ರೂ. ಇದೆ," ಎಂದು ದರ ವ್ಯತ್ಯಾಸದ ಬಗ್ಗೆ ಪ್ರಸ್ತಾಪಿಸಿದರು.
ನಾವಿಬ್ಬರು ಹಾಲು-ಸಕ್ಕರೆ: ಸಿಎಂ
ಈ ವೇಳೆ ಮಧ್ಯಪ್ರವೇಶಿಸಿದ ಆರ್. ಅಶೋಕ್, "ಸಿಎಂ ಮತ್ತು ಡಿಕೆಶಿ ನಡುವೆ ಜಗಳ ಇದೆ ಅಂತ ಜನ ಮಾತಾಡ್ಕೋತಾರೆ," ಎಂದು ಕಾಲೆಳೆದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಸಿಎಂ, "ನೋಡಪ್ಪ ನೀನೂ ಹಾಲಂತೆ, ನಾನು ಸಕ್ಕರೆಯಂತೆ," ಎಂದು ತಮ್ಮಿಬ್ಬರ ನಡುವಿನ ಬಾಂಧವ್ಯವನ್ನು ಸಮರ್ಥಿಸಿಕೊಂಡರು. ಕೂಡಲೇ ಇದಕ್ಕೆ ಕೌಂಟರ್ ಕೊಟ್ಟ ಅಶೋಕ್, "ನೀವು ಹಾಲು-ಸಕ್ಕರೆ ಅಂತೀರಿ, ಆದರೆ ಅವರು ಜನರು ಹಾಲಾಹಲ ಅಂತ ಹೇಳ್ತಾರೆ," ಎಂದು ತಿವಿದರು.
ಸಮಯವೇ ಉತ್ತರ ಕೊಡುತ್ತೆ: ಡಿಕೆಶಿ ಮಾರ್ಮಿಕ ನುಡಿ
ಈ ಚರ್ಚೆಯ ನಡುವೆಯೇ ಸಿಎಂ ಸಿದ್ದರಾಮಯ್ಯ ಅವರು ಡಿಕೆಶಿ ಕಡೆಗೆ ಕೈತೋರಿಸಿ ಏನೋ ಹೇಳಲು ಹೋದಾಗ, ಡಿಕೆ ಶಿವಕುಮಾರ್ ಅವರು ಎದ್ದು ನಿಂತು, "ಅದಕ್ಕೆ ಟೈಮ್ (ಕಾಲ) ಉತ್ತರ ಕೊಡುತ್ತೆ ಬಿಡಿ," ಎಂದು ಮಾರ್ಮಿಕವಾಗಿ ನುಡಿದರು.
ಈ ಮಾತನ್ನೇ ಅಸ್ತ್ರವಾಗಿಸಿಕೊಂಡ ಅಶೋಕ್, "ನೋಡಿದ್ರಾ? ಡಿಕೆಶಿ ಎಷ್ಟು ಕರೆಕ್ಟ್ ಆಗಿ ಹೇಳ್ತಾರೆ. ಸಮಯ ಉತ್ತರ ಕೊಡುತ್ತೆ ಅಂತಾರೆ. ಆ ಸಮಯ ಯಾವಾಗ ಬರುತ್ತೆ ಅಂತ ಹೇಳಿದ್ರೆ ಒಳ್ಳೆಯದು," ಎಂದು ವ್ಯಂಗ್ಯವಾಡಿದರು. ಅಲ್ಲದೇ, "ಡಿಕೆಶಿ ಕಡೆಯೂ 65 ಜನ ಶಾಸಕರು ಇದ್ದಾರಂತೆ. ಬೆಳಗ್ಗೆ ಡಿಕೆಶಿ ಮನೆಯಲ್ಲಿ ಇರ್ತಾರಂತೆ, ಸಂಜೆ ನಿಮ್ಮ (ಸಿಎಂ) ಹತ್ರ ಬರ್ತಾರಂತೆ. ಅದಕ್ಕೆ ಅವರಿಗೂ ಗೊಂದಲ ಆಗಿದೆ," ಎಂದು ಆಡಳಿತ ಪಕ್ಷದ ಕಾಲೆಳೆದರು.
ಸಂತೋಷ್ ಲಾಡ್ ಗರಂ
ಇದೇ ವೇಳೆ ಅಶೋಕ್ ಅವರು ಸಚಿವ ಸಂತೋಷ್ ಲಾಡ್ ಅವರ ಹೆಸರನ್ನು ಪ್ರಸ್ತಾಪಿಸಿ, "ಪ್ರಯತ್ನ ವಿಫಲ ಆಗಬಹುದು, ಪ್ರಾರ್ಥನೆ ವಿಫಲ ಆಗಲ್ಲ ಅಂತ ಲಾಡ್ ಅವರಂತವರು ಹೇಳ್ತಿರ್ತಾರೆ," ಎಂದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಲಾಡ್, "ನಾನು ಸಂಜೆ-ಬೆಳಗ್ಗೆ ಬರೋ ಗಿರಾಕಿ ಅಲ್ಲ ಅಶೋಕ್ ಅವರೇ, ಅಂತಹ ಅವಶ್ಯಕತೆ ನನಗಿಲ್ಲ. ನಿಮ್ಮ ಮೇಲೆ ಗೌರವವಿದೆ, ಆ ರೀತಿಯಾಗಿ ನೀವು ಮಾತನಾಡಬಾರದು," ಎಂದು ತಿರುಗೇಟು ನೀಡಿದರು. ಇದಕ್ಕೆ ಅಶೋಕ್, "ಆಯ್ತು ಬಿಡಪ್ಪ ಇನ್ನ ಮಾತನಾಡಲ್ಲ, ಆದರೆ ನಿಮ್ಮ ಪಕ್ಷದಲ್ಲೇ ಗೊಂದಲವಿದೆ ಅದನ್ನೇ ಹೇಳಿದ್ದು," ಎಂದು ಸಮಾಧಾನಪಡಿಸಿದರು.
ಯಾವ ಕ್ರೈಸಿಸ್ ಇಲ್ಲ, ಒಟ್ಟಾಗಿದ್ದೇವೆ: ಡಿಕೆಶಿ ಸ್ಪಷ್ಟನೆ
ಅಶೋಕ್ ಅವರ ಆರೋಪಗಳಿಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, "ನೀನು ಸೀನಿಯರ್ ಇದ್ದೀಯಾ ಅಶೋಕ್, ನಿನಗಿಂತ ಚಿಕ್ಕವರು ಏನೇನೋ ಆಗಿರಬೇಕು. ನಾವು ಏನೆಲ್ಲಾ ಆಗಿ ಬೆಳೆದಿದ್ದೇನೆ. ನಮ್ಮ ಸ್ಟ್ರೆಂತ್ 136 ಶಾಸಕರು. ಸಿದ್ದರಾಮಯ್ಯನವರೂ ಸೇರಿ ನಾವಿದ್ದೇವೆ. ನಾವು ಮಾತು ಕೊಟ್ಟಿದ್ದೇವೆ, ಅದರಂತೆ ಇರ್ತೇವೆ. ಯಾವ ಕ್ರೈಸಿಸ್ ಕೂಡ ಬೇಡ, ಯಾವ ಗೊಂದಲವೂ ಬೇಡ. ನಾನು ಅವರ ಜತೆ ನಿಲ್ತೇನೆ, ಅವರು ನನ್ನ ಜತೆ ನಿಲ್ತಾರೆ," ಎಂದು ಒಗ್ಗಟ್ಟು ಪ್ರದರ್ಶಿಸಿದರು.
ಬಾಗಿಲು ಒದ್ದು ಮಂತ್ರಿಗಿರಿ: ಬೆಲ್ಲದ್ ಟಾಂಗ್
ಕೊನೆಯಲ್ಲಿ ಎದ್ದು ನಿಂತ ಬಿಜೆಪಿ ಶಾಸಕ ಅರವಿಂದ ಬೆಲ್ಲದ್, ಡಿಕೆಶಿಗೆ ಹಳೆಯ ನೆನಪು ಮಾಡಿಕೊಟ್ಟು ಟಾಂಗ್ ನೀಡಿದರು. "ನಿಮ್ಮ ಸ್ಟ್ರೆಂತ್ ಏನು ಎಂಬುದು ನಮಗೆ ಗೊತ್ತು. ಹಿಂದೆ ಎಸ್.ಎಂ. ಕೃಷ್ಣ ಅವರು ಸಿಎಂ ಆಗಿದ್ದಾಗ, ಬಾಗಿಲು ಒದ್ದು ಮಂತ್ರಿಗಿರಿ ಪಡೆದಿದ್ದರಿ ಅಂತ ಹೇಳ್ತಾರೆ. ಈಗಲೂ ಅದೇ ರೀತಿ ಆಗುತ್ತಾ?" ಎಂದು ಪ್ರಶ್ನಿಸುವ ಮೂಲಕ ಚರ್ಚೆಗೆ ಹೊಸ ತಿರುವು ನೀಡಿದರು.

