
ಎಸ್ಎಸ್ಎಲ್ಸಿಯಲ್ಲಿ ಕಲಬುರಗಿಗೆ ಕೊನೇ ಸ್ಥಾನ: ಬಿಜೆಪಿ- ಪ್ರಿಯಾಂಕ್ ಖರ್ಗೆ ವಾಕ್ಸಮರ
ಫಲಿತಾಂಶದ ಪಟ್ಟಿಯಲ್ಲಿ ಕಲಬುರಗಿ ಜಿಲ್ಲೆಯು ಕೊನೆಯ ಸ್ಥಾನ ಪಡೆದುಕೊಂಡಿದ್ದು, ಇದನ್ನು ಗುರಿಯಾಗಿಸಿ ರಾಜ್ಯ ಬಿಜೆಪಿ ಘಟಕವು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ವ್ಯಂಗ್ಯವಾಡಿತ್ತು.
2026ರ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಲಬುರಗಿ ಕೊನೆಯ ಸ್ಥಾನ ಪಡೆದ ಹಿನ್ನೆಲೆಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ವಾಕ್ಸಮರ ಶುರುವಾಗಿದೆ.
“ನಿಮಗೆ ಸಮಸ್ಯೆ ಇದ್ದರೆ ನನ್ನನ್ನು ನಿಂದಿಸಿ, ಆದರೆ ಕಲಬುರಗಿಯ ಮಕ್ಕಳನ್ನು ಅಪಹಾಸ್ಯ ಮಾಡುತ್ತಿರುವುದೇಕೆ?” ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ–1ರ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಈ ಬಾರಿಯೂ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮೇಲುಗೈ ಸಾಧಿಸಿವೆ. ಈ ಪಟ್ಟಿಯಲ್ಲಿ ಕಲಬುರಗಿ ಜಿಲ್ಲೆಯು ಕೊನೆಯ ಸ್ಥಾನ ಪಡೆದುಕೊಂಡಿದ್ದು, ಇದನ್ನು ಗುರಿಯಾಗಿಸಿ ರಾಜ್ಯ ಬಿಜೆಪಿ ಘಟಕವು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ವ್ಯಂಗ್ಯವಾಡಿತ್ತು.
ಸಾಮಾಜಿಕ ಜಾಲತಾಣದಲ್ಲಿ ವಾಕ್ಸಮರ
ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ರಾಜ್ಯ ಬಿಜೆಪಿ, “ಉಸ್ತುವಾರಿ ಸಚಿವರ ಉದಾತ್ತ ಕೆಲಸಗಳು ಕೇವಲ ಪತ್ರಿಕಾಗೋಷ್ಠಿಗಳು ಹಾಗೂ ಟ್ವಿಟರ್‌ಗೆ ಮಾತ್ರ ಸೀಮಿತವಾಗಿರುವಂತೆ ಕಾಣುತ್ತಿದೆ. ಅವರು ಸಾಮಾಜಿಕ ಜಾಲತಾಣಗಳಲ್ಲಿ ಜಗಳವಾಡುವ ಅರ್ಧದಷ್ಟು ಸಮಯವನ್ನು ಕಲಬುರಗಿಯ ಅಭಿವೃದ್ಧಿಗೆ ವ್ಯಯಿಸಿದ್ದರೆ, ಮಕ್ಕಳು ಇಷ್ಟು ಹಿಂದುಳಿಯುತ್ತಿರಲಿಲ್ಲ,” ಎಂದು ಲೇವಡಿ ಮಾಡಿತ್ತು. ಜೊತೆಗೆ, "S.S.L.C ಫಲಿತಾಂಶ ಬಂದಿದೆ ಟ್ವೀಟ್ ಎಲ್ಲಿ ಮಹಾಜ್ಞಾನಿ?" ಎಂದು ಪ್ರಿಯಾಂಕ್ ಖರ್ಗೆ ಅವರನ್ನು ಕಾಲೆಳೆದಿತ್ತು.
ಬಿಜೆಪಿಗೆ ಪ್ರಿಯಾಂಕ್ ತಿರುಗೇಟು
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, "ಕಲಬುರಗಿಯ ವಿದ್ಯಾರ್ಥಿಗಳನ್ನು ಅವಮಾನಿಸುತ್ತಿರುವ ಬಿಜೆಪಿ, ಅವರ ಆತ್ಮಸ್ಥೈರ್ಯ ಮತ್ತು ಆತ್ಮವಿಶ್ವಾಸವನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿದೆ," ಎಂದು ಆರೋಪಿಸಿದ್ದಾರೆ.
"ಜಿಲ್ಲೆ ಶೇ 85.06ರಷ್ಟು ಫಲಿತಾಂಶ ಪಡೆದಿದ್ದು, ಕಳೆದ ಬಾರಿಗಿಂತ (ಶೇ 56.89) ಈ ಬಾರಿ ಭಾರಿ ಮುನ್ನಡೆ ಸಾಧಿಸಿದೆ. ಜಿಲ್ಲೆಯ ಮಕ್ಕಳಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಿಸಿಕೊಳ್ಳುವ ಶಕ್ತಿ ಇದೆ. ಆದರೆ, ಪ್ರತಿ ಬಾರಿಯೂ ಅವರನ್ನು ಅವಮಾನಿಸುತ್ತಿರುವ ಬಿಜೆಪಿಗೆ ಕನಿಷ್ಠ ಸಾಮಾನ್ಯ ಪ್ರಜ್ಞೆ ಇಲ್ಲ. ಜಿಲ್ಲೆಯಲ್ಲಿರುವ ಬಿಜೆಪಿ ನಾಯಕರ ಮಕ್ಕಳಿಗೂ ಅವರು ‘ದಡ್ಡರು’ ಎಂಬ ಹಣೆಪಟ್ಟಿ ಕಟ್ಟುತ್ತಿದ್ದಾರೆಯೇ?" ಎಂದು ಅವರು ಪ್ರಶ್ನಿಸಿದ್ದಾರೆ.

