Task force formed to detect illegal Bangladeshi immigrants in the state: Home Minister Parameshwar
x

ಗೃಹ ಸಚಿವ ಡಾ.ಜಿ. ಪರಮೇಶ್ವರ್‌ 

ಕರ್ನಾಟಕದಲ್ಲಿದ್ದಾರೆ 370 ಬಾಂಗ್ಲಾ ಅಕ್ರಮ ವಲಸಿಗರು!: ಗೃಹ ಸಚಿವ ಪರಮೇಶ್ವರ್

ರಾಜ್ಯದಲ್ಲಿ 370 ಮಂದಿಯಷ್ಟೆ ಬಾಂಗ್ಲಾ ನಿವಾಸಿಗಳಿದ್ದರು. ಇದರಲ್ಲಿ ಈಗಾಗಲೇ 196 ಮಂದಿ ಅಕ್ರಮ ನಿವಾಸಿಗರನ್ನು ಗಡಿಪಾರು ಮಾಡಲಾಗಿದೆ ಎಂದು ಸದನಕ್ಕೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾಹಿತಿ ನೀಡಿದರು.


Click the Play button to hear this message in audio format

ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ಪ್ರಜೆಗಳ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯದಲ್ಲಿ ಒಟ್ಟು 370 ಬಾಂಗ್ಲಾ ಪ್ರಜೆಗಳನ್ನು ಗುರುತಿಸಲಾಗಿದ್ದು, ಈ ಪೈಕಿ ಈಗಾಗಲೇ 196 ಜನರನ್ನು ಗಡಿಪಾರು ಮಾಡಲಾಗಿದೆ ಎಂದು ಸದನಕ್ಕೆ ತಿಳಿಸಿದ್ದಾರೆ.

ಬಾಂಗ್ಲಾದೇಶದ ಅಕ್ರಮ ವಲಸಿಗರ ಕುರಿತು ಮಾತನಾಡಿದ ಗೃಹ ಸಚಿವರು, ಕೇವಲ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದಲ್ಲಿ ಬಾಂಗ್ಲಾದೇಶದವರು ನೆಲೆಸಿದ್ದಾರೆ. ಇವರು ಸಾಮಾನ್ಯವಾಗಿ ಕೊಲ್ಕತ್ತಾ ಮಾರ್ಗದ ಮೂಲಕ ದೇಶದ ಒಳಗೆ ಪ್ರವೇಶಿಸುತ್ತಾರೆ. ಗಡಿಯಲ್ಲಿ ಇವರನ್ನು ತಡೆಯುವ ಜವಾಬ್ದಾರಿ ಅಲ್ಲಿರುವ ಸೈನಿಕರ ಮೇಲಿರುತ್ತದೆ. ಆದರೂ ಇವರು ಒಳನುಸುಳಿ, ಕೆಲಸ ಅರಸಿ ಕರ್ನಾಟಕ, ಮುಂಬೈ ಸೇರಿದಂತೆ ದೇಶದ ವಿವಿಧ ನಗರಗಳಿಗೆ ವಲಸೆ ಬರುತ್ತಾರೆ ಎಂದು ವಿವರಿಸಿದರು.

ಲಕ್ಷಾಂತರ ಜನರಿಲ್ಲ, ನಿಖರ ಲೆಕ್ಕವಿದೆ

ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬಾಂಗ್ಲಾದೇಶದವರು ನೆಲೆಸಿದ್ದಾರೆ ಎಂಬ ಆರೋಪವನ್ನು ಸಚಿವರು ತಳ್ಳಿಹಾಕಿದರು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಅವರು ಇಲ್ಲಿರುವುದನ್ನು ನಾನು ಒಪ್ಪುವುದಿಲ್ಲ ಎಂದ ಸಚಿವರು, ಈ ಬಗ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಲಭ್ಯವಿರುವ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು 370 ಬಾಂಗ್ಲಾದೇಶದ ಪ್ರಜೆಗಳನ್ನು ಪತ್ತೆ ಹಚ್ಚಲಾಗಿದ್ದು, ಈಗಾಗಲೇ 196 ಜನರನ್ನು ಅವರ ದೇಶಕ್ಕೆ ಗಡಿಪಾರು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾವಾರು ಬಾಂಗ್ಲಾ ಪ್ರಜೆಗಳ ವಿವರ

ಸಚಿವರು ನೀಡಿದ ಮಾಹಿತಿಯಂತೆ, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೇ ಅತಿ ಹೆಚ್ಚು ಅಂದರೆ 284 ಮಂದಿ ಬಾಂಗ್ಲಾ ಪ್ರಜೆಗಳು ನೆಲೆಸಿದ್ದಾರೆ. ಉಳಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 37, ಶಿವಮೊಗ್ಗದಲ್ಲಿ 12 ಹಾಗೂ ಹಾಸನದಲ್ಲಿ 3 ಜನ ಬಾಂಗ್ಲಾದೇಶದವರು ಇರುವುದನ್ನು ಗುರುತಿಸಲಾಗಿದೆ.

ಪತ್ತೆ ಹಚ್ಚಲು ವಿಶೇಷ ಟಾಸ್ಕ್ ಫೋರ್ಸ್

ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇದಕ್ಕಾಗಿ ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ಪ್ರತ್ಯೇಕ ಟಾಸ್ಕ್ ಫೋರ್ಸ್ (Task Force) ರಚನೆ ಮಾಡಲಾಗಿದೆ. ರಾಜ್ಯ ಸರ್ಕಾರವು ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದರೆ, ಕೇಂದ್ರ ಸರ್ಕಾರವು ಅವರನ್ನು ಗಡಿಪಾರು ಮಾಡುವ ಪ್ರಕ್ರಿಯೆಯನ್ನು ನಡೆಸುತ್ತಿದೆ ಎಂದು ಗೃಹ ಸಚಿವರು ಅಕ್ರಮ ವಲಸಿಗರ ವಿರುದ್ಧದ ಸರ್ಕಾರದ ಕ್ರಮಗಳನ್ನು ವಿವರಿಸಿದರು.

Read More
Next Story