ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಲು ನನ್ನ ಬೆಂಬಲವೇ ಕಾರಣ: ಎಚ್‌ಡಿಕೆಗೆ ಶಾಸಕ ಜಿ.ಟಿ. ದೇವೇಗೌಡ ತಿರುಗೇಟು
x

ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಲು ನನ್ನ ಬೆಂಬಲವೇ ಕಾರಣ: ಎಚ್‌ಡಿಕೆಗೆ ಶಾಸಕ ಜಿ.ಟಿ. ದೇವೇಗೌಡ ತಿರುಗೇಟು

ಕುಮಾರಸ್ವಾಮಿ ನನ್ನ ಬಗ್ಗೆ ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ನನಗೆ ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿಯೊಂದೇ ಗುರಿ. ಬೇರೆ ರಾಜಕಾರಣ ನನಗೆ ತಿಳಿದಿಲ್ಲ ಎಂದು ದೇವೇಗೌಡ ಅವರು ಹೇಳಿದರು.


Click the Play button to hear this message in audio format

ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಎರಡು ಬಾರಿ ಅಧಿಕಾರದ ಗದ್ದುಗೆ ಏರಲು ನನ್ನ ಬೆಂಬಲವೇ ಕಾರಣ" ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರು ಮಾರ್ಮಿಕವಾಗಿ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ಪಕ್ಷದ ಆಂತರಿಕ ಭಿನ್ನಮತ ಹಾಗೂ ತಮ್ಮ ವಿರುದ್ಧ ಕೇಳಿಬರುತ್ತಿರುವ ಟೀಕೆಗಳಿಗೆ ಸುದೀರ್ಘವಾಗಿ ಪ್ರತಿಕ್ರಿಯಿಸಿದರು. ತಾನು ಸಚಿವನಾಗಲು ಕುಮಾರಸ್ವಾಮಿ ಅವರೂ ಸಹಾಯ ಮಾಡಿದ್ದಾರೆ ಎಂಬುದನ್ನು ಇದೇ ವೇಳೆ ಅವರು ಸ್ಮರಿಸಿದರು.

'ಕುಮಾರಪರ್ವ' ಯಶಸ್ಸಿನ ಶ್ರೇಯಸ್ಸು ಜನತೆಗೆ

ಜೆಡಿಎಸ್ ಪಕ್ಷದ ಬಲವರ್ಧನೆಗಾಗಿ ನಡೆಸಲಾಗಿದ್ದ 'ಕುಮಾರಪರ್ವ' ಸಮಾವೇಶದ ಕುರಿತು ಮಾತನಾಡಿದ ಜಿಟಿಡಿ, ಆ ಸಮಾವೇಶವನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸಿದ್ದು ಚಾಮುಂಡೇಶ್ವರಿ ಕ್ಷೇತ್ರದ ಜನತೆ ಮಾತ್ರ. ರಾಜ್ಯದ ಬೇರಾವ ಕ್ಷೇತ್ರದಲ್ಲೂ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಆ ಕಾರ್ಯಕ್ರಮ ನಡೆದಿರಲಿಲ್ಲ ಎಂದು ತಮ್ಮ ಕ್ಷೇತ್ರದ ಜನರ ಬೆಂಬಲವನ್ನು ಕೊಂಡಾಡಿದರು.

"ಕುಮಾರಸ್ವಾಮಿ ಅವರಿಗೆ ರಾಜ್ಯದಲ್ಲಿ ಪಕ್ಷವನ್ನು ಕಟ್ಟುವ ಶಕ್ತಿ ಇದೆ ಹಾಗೂ ಜೆಡಿಎಸ್ ಉಳಿಸುವ ನಿಟ್ಟಿನಲ್ಲಿ ಅವರು ಕೆಲಸ ಮಾಡುತ್ತಾರೆ. ನನ್ನ ಕ್ಷೇತ್ರದ ಜನತೆ ನನ್ನ ಬೆನ್ನಿಗೆ ಗಟ್ಟಿಯಾಗಿ ನಿಂತಿದ್ದಾರೆ," ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

'ಕಾಂಗ್ರೆಸ್ ಸೇರ್ಪಡೆ' ವದಂತಿಗೆ ಸ್ಪಷ್ಟನೆ

'ಜಿ.ಟಿ. ದೇವೇಗೌಡರು ಪಕ್ಷದಿಂದ ಎರಡೂ ಕಾಲುಗಳನ್ನು ಹೊರಗಿಟ್ಟಿದ್ದಾರೆ' ಎಂಬ ಕುಮಾರಸ್ವಾಮಿ ಅವರ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಅವರು ನನ್ನ ಬಗ್ಗೆ ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ನನಗೆ ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿಯೊಂದೇ ಗುರಿ. ಬೇರೆ ರಾಜಕಾರಣ ನನಗೆ ತಿಳಿದಿಲ್ಲ," ಎಂದು ಸ್ಪಷ್ಟಪಡಿಸಿದರು.

ತಾವು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಊಹಾಪೋಹಗಳಿಗೂ ತೆರೆ ಎಳೆದ ಜಿಟಿಡಿ, "ಹಿಂದೆ ಚಾಮುಂಡಿಬೆಟ್ಟದಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಮಾತನಾಡಿದ್ದಕ್ಕೆ ನಾನು ಕಾಂಗ್ರೆಸ್ ಸೇರುತ್ತೇನೆ ಎಂದು ಕೆಲವರು ಅಪಾರ್ಥ ಮಾಡಿಕೊಂಡರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ನಾನು ಪ್ರತ್ಯೇಕವಾಗಿ ಭೇಟಿಯಾಗಿಲ್ಲ ಅಥವಾ ಯಾವುದೇ ಚರ್ಚೆ ನಡೆಸಿಲ್ಲ. ರಾಜ್ಯ ಸರ್ಕಾರವು ಇತರ ಎಲ್ಲ ಕ್ಷೇತ್ರಗಳಂತೆಯೇ ನನ್ನ ಕ್ಷೇತ್ರದ ಅಭಿವೃದ್ಧಿಗೂ ತಲಾ 25 ಕೋಟಿ ರೂ. ಅನುದಾನವನ್ನು ನೀಡಿದೆಯೇ ಹೊರತು ಬೇರೇನಿಲ್ಲ," ಎಂದು ವದಂತಿಗಳನ್ನು ತಳ್ಳಿಹಾಕಿದರು.

ಕುಟುಂಬದ ಒಳಜಗಳಕ್ಕೆ ಪ್ರತಿಕ್ರಿಯೆ

ಪುತ್ರ ಹಾಗೂ ಶಾಸಕ ಜಿ.ಡಿ. ಹರೀಶ್‌ಗೌಡ ಅವರೊಂದಿಗಿನ ಮುನಿಸಿನ ಬಗ್ಗೆಯೂ ಮುಕ್ತವಾಗಿ ಮಾತನಾಡಿದ ಅವರು, "ಯಾವ ಕುಟುಂಬದಲ್ಲಿ ತಾನೇ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇರುವುದಿಲ್ಲ? ಜಗಳಗಳು ಎಲ್ಲ ಕಡೆಯೂ ಸಹಜ. ಆದರೆ, ನಾವು ಮತ್ತೆ ಒಂದಾಗುವುದಿಲ್ಲ ಎಂದು ಭಾವಿಸುವವರು ಕೇವಲ ಮೂರ್ಖರಷ್ಟೇ," ಎಂದು ಖಡಕ್ ಆಗಿ ಉತ್ತರಿಸುವ ಮೂಲಕ ಕುಟುಂಬದಲ್ಲಿ ಎಲ್ಲವೂ ಸರಿಯಿದೆ ಎಂಬ ಸಂದೇಶ ರವಾನಿಸಿದರು.

ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲೂ ತಾವೇ ಸ್ಪರ್ಧಿಸಬೇಕು ಎಂದು ಕ್ಷೇತ್ರದ ಜನತೆ ಒತ್ತಾಯಿಸುತ್ತಿದ್ದು, ಜನರ ಇಚ್ಛೆಯಂತೆಯೇ ತಾನು ನಡೆಯುವುದಾಗಿ ಜಿ.ಟಿ. ದೇವೇಗೌಡರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

Read More
Next Story