ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಜಿ.ಎಸ್. ಪಾಟೀಲ್ ಅವಿರೋಧ ಆಯ್ಕೆ
x

ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಜಿ.ಎಸ್. ಪಾಟೀಲ್ ಅವಿರೋಧ ಆಯ್ಕೆ

ಅವಿರೋಧ ಆಯ್ಕೆ ಬಳಿಕ ಸಂಪ್ರದಾಯದ ಪ್ರಕಾರ ಸಿಎಂ ಡಿ.ಕೆ. ಶಿವಕುಮಾರ್‌ ಮತ್ತು ವಿಪಕ್ಷ ನಾಯಕ ಆರ್. ಅಶೋಕ್‌ ಅವರು ಜಿ.ಎಸ್. ಪಾಟೀಲ್‌ ಅವರನ್ನು ಕರೆತಂದು ಸ್ಪೀಕರ್‌ ಪೀಠದಲ್ಲಿ ಕೂರಿಸಿದರು.


ಕರ್ನಾಟಕ ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಕಾಂಗ್ರೆಸ್‌ನ ಹಿರಿಯ ಶಾಸಕ ಜಿ.ಎಸ್. ಪಾಟೀಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸ್ಪೀಕರ್‌ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್‌ ಅವರು ಜಿ.ಎಸ್. ಪಾಟೀಲ್‌ ಅವರನ್ನು ಸಾಂಪ್ರದಾಯಿಕವಾಗಿ ಕರೆತಂದು ಸ್ಪೀಕರ್‌ ಪೀಠದಲ್ಲಿ ಕೂರಿಸಿದರು.

ಸ್ಪೀಕರ್‌ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದ ವೇಳೆ ವಿಧಾನಸಭೆಯ ಬಿಜೆಪಿ ಸದಸ್ಯರು ಸದನದ ಹೊರಗಿದ್ದರು. ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಬಿಜೆಪಿ ಸದಸ್ಯರು ಮತ್ತೆ ಕಲಾಪಕ್ಕೆ ಹಾಜರಾದರು.

ಜಿ.ಎಸ್. ಪಾಟೀಲ್ ಆಯ್ಕೆಯಾಗಿದ್ದು ಹೇಗೆ?

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಸ್ಪೀಕರ್‌ ಸ್ಥಾನಕ್ಕೆ ಜಿ.ಎಸ್. ಪಾಟೀಲ್ ಅವರ ಹೆಸರನ್ನು ಪ್ರಸ್ತಾಪಿಸಿದರು. ಈ ಪ್ರಸ್ತಾವನೆಗೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್‌ ಅವರು ಅನುಮೋದನೆ ನೀಡಿದರು. ನಂತರ ಹಂಗಾಮಿ ಸ್ಪೀಕರ್‌ ಪ್ರಸ್ತಾವನೆಯನ್ನು ಸದನದ ಮತಕ್ಕೆ ಹಾಕಿದರು.

ಪ್ರಸ್ತಾವನೆ ಅಂಗೀಕಾರವಾದ ಹಿನ್ನೆಲೆಯಲ್ಲಿ ಜಿ.ಎಸ್. ಪಾಟೀಲ್‌ ಅವರು ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಅವಿರೋಧವಾಗಿ ಆಯ್ಕೆಯಾದರು.

ಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದೇನು?

ಸ್ಪೀಕರ್‌ ಆಯ್ಕೆ ಪ್ರಕ್ರಿಯೆಗೂ ಮುನ್ನ ಸದನವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ತಮ್ಮ ಮುಂದಿನ ಯೋಜನೆಗಳು ಮತ್ತು ಚಿಂತನೆಗಳ ಬಗ್ಗೆ ಮುಂದೆ ಮಾತನಾಡುವುದಾಗಿ ಹೇಳಿದರು. “ನನಗೆ ಅಧಿಕಾರ ದುರುಪಯೋಗ ಮಾಡಿಕೊಂಡು ಯಾರಿಗೂ ತೊಂದರೆ ಕೊಡುವ ಉದ್ದೇಶ ಇಲ್ಲ. ಯಾರಿಗೆ ಎಷ್ಟು ಗೌರವ ಕೊಡಬೇಕೋ ಅಷ್ಟು ಗೌರವ ಕೊಡುತ್ತೇನೆ,” ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಹಿಂದಿನ ಸಂದರ್ಭವನ್ನು ನೆನಪಿಸಿಕೊಂಡ ಅವರು, ವಿಧಾನಸಭೆಯ ಇದೇ ಸ್ಥಾನದಲ್ಲಿ ನಿಂತು ‘ಒನ್ ಮ್ಯಾನ್ ವಿತ್ ಕರೇಜ್ ಮೇಕ್ಸ್ ಮೇಜಾರಿಟಿ’ ಎಂದು ಹೇಳಿದ್ದಾಗಿ ತಿಳಿಸಿದರು. ಸಿದ್ದರಾಮಯ್ಯ ಅವರೊಂದಿಗೆ ತಾವು ಒಂದಾಗಿ ಇರುವುದಾಗಿ ಹೇಳಿದ್ದ ಅವರು, ತಮ್ಮ ಸಂಖ್ಯೆ 136 ಎಂದು ಉಲ್ಲೇಖಿಸಿದ್ದರು.

2028ರ ಚುನಾವಣೆಯ ತೀರ್ಪು ಜನರದ್ದು

ರಾಜ್ಯದ ಮುಂದಿನ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್‌, 2028ರ ವಿಧಾನಸಭಾ ಚುನಾವಣೆಯಲ್ಲಿ ಏನಾಗಬೇಕು ಎಂಬುದನ್ನು ಜನರೇ ತೀರ್ಮಾನಿಸುತ್ತಾರೆ ಎಂದು ಹೇಳಿದರು. ನಾವೆಲ್ಲರೂ ಒಂದೇ ಯುನಿಟ್‌ ಆಗಿ ಇರ್ತೀವಿ. 2028ರ ಚುನಾವಣೆಯಲ್ಲಿ ಏನಾಗಬೇಕು ಅಂತ ಜನ ತೀರ್ಮಾನ ಮಾಡ್ತಾರೆ ಎಂದು ಅವರು ಹೇಳಿದರು.

ಜಿ.ಎಸ್. ಪಾಟೀಲ್‌ ಅವರು ಸ್ಪೀಕರ್‌ ಆಗಿ ಅವಿರೋಧ ಆಯ್ಕೆಯಾದ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ವಿಪಕ್ಷ ನಾಯಕ ಆರ್. ಅಶೋಕ್‌ ಅವರು ಅವರನ್ನು ಸ್ಪೀಕರ್‌ ಪೀಠಕ್ಕೆ ಕರೆತಂದು ಕೂರಿಸುವ ಮೂಲಕ ವಿಧಾನಸಭೆಯ ಸಂಪ್ರದಾಯವನ್ನು ಪಾಲಿಸಿದರು.

Read More
Next Story