ನಾಗೇಂದ್ರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲ ಗೆಹ್ಲೋಟ್​​
x
B Nagendra

ನಾಗೇಂದ್ರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲ ಗೆಹ್ಲೋಟ್​​

ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಾಯಕರು ಸೆಪ್ಟೆಂಬರ್ 1ರಿಂದ 10ರವರೆಗೆ ಸುಮಾರು 200 ಕಿಲೋಮೀಟರ್ ಪಾದಯಾತ್ರೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದರ ನಡುವೆ ಅವರು ರಾಜೀನಾಮೆ ನೀಡಿದ್ದಾರೆ.


Click the Play button to hear this message in audio format

ಯೋಜನೆ ಮತ್ತು ಸಾಂಖ್ಯಿಕ ಸಚಿವ ಬಿ. ನಾಗೇಂದ್ರ ಅವರು ಸಲ್ಲಿಸಿದ್ದ ರಾಜೀನಾಮೆಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್​​ ಅಂಗೀಕರಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಶಿಫಾರಸಿನ ಮೇರೆಗೆ ರಾಜೀನಾಮೆ ಅಂಗೀಕರಿಸಿರುವುದಾಗಿ ಲೋಕಭವನ ಪ್ರಕಟಣೆ ತಿಳಿಸಿದೆ.

ಆಗಸ್ಟ್ 29ರಂದು ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜೀನಾಮೆ ಪತ್ರವನ್ನು ಲೋಕಭವನಕ್ಕೆ ಕಳುಹಿಸಿ, ಅದನ್ನು ಅಂಗೀಕರಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದರು. ಈ ಶಿಫಾರಸಿನ ಅನ್ವಯ ರಾಜ್ಯಪಾಲರು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಎಂದು ಲೋಕಭವನ ತಿಳಿಸಿದೆ.

ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿ ನಾಗೇಂದ್ರ ಅವರು ಆಗಸ್ಟ್ 3ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಸಚಿವರಾಗಿ ಅಧಿಕಾರ ಸ್ವೀಕರಿಸಿ ಒಂದು ತಿಂಗಳು ಪೂರ್ಣಗೊಳ್ಳುವ ಮುನ್ನವೇ ಅವರು ರಾಜೀನಾಮೆ ಸಲ್ಲಿಸಿದ್ದಾರೆ.

ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣದ ಹಿನ್ನೆಲೆ

2023ರ ವಿಧಾನಸಭಾ ಚುನಾವಣೆಯ ಬಳಿಕ ಸಿದ್ದರಾಮಯ್ಯ ನೇತೃತ್ವದಲ್ಲಿ ರಚನೆಯಾದ ಸರ್ಕಾರದಲ್ಲಿ ನಾಗೇಂದ್ರ ಅವರು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾಗಿದ್ದರು. ಈ ಅವಧಿಯಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರ ವಿರುದ್ಧ ಆರೋಪಗಳು ಕೇಳಿಬಂದಿದ್ದವು.

ಆರೋಪಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಡಿ.ಕೆ. ಶಿವಕುಮಾರ್ ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ, ಜೂನ್ 3ರಂದು ಸರ್ಕಾರ ರಚನೆಯಾಗಿತ್ತು. ಸುಮಾರು ಎರಡು ತಿಂಗಳ ಬಳಿಕ ನಡೆದ ಸಂಪುಟ ವಿಸ್ತರಣೆಯಲ್ಲಿ ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಲಾಗಿತ್ತು.

ವಿಧಾನಮಂಡಲ ಅಧಿವೇಶನದಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ

ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿರುವುದನ್ನು ಬಿಜೆಪಿ ಮತ್ತು ಜೆಡಿಎಸ್ ವಿರೋಧಿಸಿದ್ದವು. ಇತ್ತೀಚೆಗೆ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಎರಡೂ ಪಕ್ಷಗಳ ಸದಸ್ಯರು ಸದನದೊಳಗೆ ನಿರಂತರ ಪ್ರತಿಭಟನೆ ನಡೆಸಿದ್ದರು.

ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂಬುದು ಪ್ರತಿಪಕ್ಷಗಳ ಪ್ರಮುಖ ಬೇಡಿಕೆಯಾಗಿತ್ತು. ಪ್ರತಿಭಟನೆ ಮತ್ತು ಗದ್ದಲದ ಹಿನ್ನೆಲೆಯಲ್ಲಿ ಅಧಿವೇಶನದ ಕಲಾಪಗಳು ಹಲವು ಬಾರಿ ಅಸ್ತವ್ಯಸ್ತಗೊಂಡಿದ್ದವು. ಪ್ರತಿಪಕ್ಷಗಳು ಅಹೋರಾತ್ರಿ ಧರಣಿ ನಡೆಸುವುದಾಗಿ ಘೋಷಿಸಿದ ನಂತರ ನಿಗದಿತ ಅವಧಿಗಿಂತ ಎರಡು ದಿನ ಮೊದಲೇ ಅಧಿವೇಶನವನ್ನು ಮುಕ್ತಾಯಗೊಳಿಸಲಾಗಿತ್ತು.

ಬಿಜೆಪಿ ಪಾದಯಾತ್ರೆಗೆ ಸಿದ್ಧತೆ

ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಾಯಕರು ಸೆಪ್ಟೆಂಬರ್ 1ರಿಂದ 10ರವರೆಗೆ ಸುಮಾರು 200 ಕಿಲೋಮೀಟರ್ ಪಾದಯಾತ್ರೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದರು. ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಹೋರಾಟ ನಡೆಸಲು ಪ್ರತಿಪಕ್ಷಗಳು ಮುಂದಾಗಿದ್ದವು.

Read More
Next Story