ಇಂದು ತಿಪಟೂರಿನಲ್ಲಿ ಮಾಜಿ ಸಚಿವ ಬಿ.ಸಿ.ನಾಗೇಶ್ ಅಂತ್ಯಕ್ರಿಯೆ
x

ಬಿ.ಸಿ.ನಾಗೇಶ್ ಅವರ ಅಂತಿಮ ಸಂಸ್ಕಾರ ಇಂದು ಅವರ ಸ್ವಕ್ಷೇತ್ರ ತಿಪಟೂರಿನಲ್ಲಿ ನಡೆಯಲಿದೆ.

ಇಂದು ತಿಪಟೂರಿನಲ್ಲಿ ಮಾಜಿ ಸಚಿವ ಬಿ.ಸಿ.ನಾಗೇಶ್ ಅಂತ್ಯಕ್ರಿಯೆ

ಕಳೆದ ಒಂದು ವರ್ಷದಿಂದ ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದ ಬಿ.ಸಿ.ನಾಗೇಶ್ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಎರಡು ಬಾರಿ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದ ಅವರು, ಮಂಗಳವಾರ ಕೊನೆಯುಸಿರೆಳೆದಿದ್ದರು.


Click the Play button to hear this message in audio format

ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಅಂತ್ಯಕ್ರಿಯೆ ಇಂದು ಅವರ ಸ್ವಕ್ಷೇತ್ರ ತಿಪಟೂರಿನಲ್ಲಿ ನಡೆಯಲಿದೆ. ಮಂಗಳವಾರ ಬೆಂಗಳೂರಿನಲ್ಲಿರುವ ಪುತ್ರಿಯ ನಿವಾಸದಲ್ಲಿ ನಿಧನರಾದ 67 ವರ್ಷದ ನಾಗೇಶ್ ಅವರ ಪಾರ್ಥಿವ ಶರೀರವನ್ನು ತಿಪಟೂರಿಗೆ ಕೊಂಡೊಯ್ಯಲಾಗಿದ್ದು, ಸಾರ್ವಜನಿಕರು ಹಾಗೂ ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕಳೆದ ಒಂದು ವರ್ಷದಿಂದ ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದ ಬಿ.ಸಿ.ನಾಗೇಶ್ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಎರಡು ಬಾರಿ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದ ಅವರು, ಮಂಗಳವಾರ ಕೊನೆಯುಸಿರೆಳೆದಿದ್ದರು. ಅವರ ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ತಿಪಟೂರು ವಿಧಾನಸಭಾ ಕ್ಷೇತ್ರದಿಂದ 2008 ಮತ್ತು 2018ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ನಾಗೇಶ್ ಅವರು ಕ್ಷೇತ್ರದಲ್ಲಿ ತಮ್ಮದೇ ಆದ ರಾಜಕೀಯ ಪ್ರಭಾವ ಹೊಂದಿದ್ದರು. 2021ರಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಶಿಕ್ಷಣ ಸಚಿವರಾಗಿ ಹಲವು ನಿರ್ಧಾರ

ಸಚಿವರಾಗಿದ್ದ ಅವಧಿಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ, ಶಾಲಾ ಸಮವಸ್ತ್ರಕ್ಕೆ ಸಂಬಂಧಿಸಿದ ನಿಯಮಗಳು ಹಾಗೂ ಶಿಕ್ಷಣದಲ್ಲಿ ಮೌಲ್ಯಾಧಾರಿತ ಅಂಶಗಳಿಗೆ ಒತ್ತು ನೀಡುವ ಹಲವು ಕ್ರಮಗಳು ಚರ್ಚೆಗೆ ಬಂದಿದ್ದವು. ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರಲು ಹಲವು ನಿರ್ಧಾರಗಳನ್ನು ಕೈಗೊಂಡಿದ್ದರು.

ಆರ್‌ಎಸ್‌ಎಸ್ ಹಿನ್ನೆಲೆಯ ಬಿಜೆಪಿ ನಾಯಕ

1984ರಲ್ಲಿ ಬಿಜೆಪಿಗೆ ಸೇರ್ಪಡೆಯಾದ ಬಿ.ಸಿ.ನಾಗೇಶ್ ಅವರು ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದವರಾಗಿದ್ದರು. ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ಸರಳತೆ ಮತ್ತು ಶಿಸ್ತಿನ ರಾಜಕಾರಣಕ್ಕೆ ಹೆಸರಾಗಿದ್ದರು.

ಗಣ್ಯರಿಂದ ಸಂತಾಪ

ಬಿ.ಸಿ.ನಾಗೇಶ್ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ, ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಶಿಕ್ಷಣ ಕ್ಷೇತ್ರ ಹಾಗೂ ತಿಪಟೂರು-ತುಮಕೂರು ಭಾಗದ ಜನರ ಸೇವೆಯಲ್ಲಿ ನಾಗೇಶ್ ಅವರ ಕೊಡುಗೆಯನ್ನು ಗಣ್ಯರು ಸ್ಮರಿಸಿದ್ದಾರೆ.

Read More
Next Story