Karnataka Politics| ನಮ್ಮಲ್ಲಿ ಯಾವುದೇ ಬಣಗಳಿಲ್ಲ, ನಾವೆಲ್ಲರೂ ಒಂದೇ: ಡಿಸಿಎಂ ಡಿಕೆಶಿ
x

Karnataka Politics| ನಮ್ಮಲ್ಲಿ ಯಾವುದೇ ಬಣಗಳಿಲ್ಲ, ನಾವೆಲ್ಲರೂ ಒಂದೇ: ಡಿಸಿಎಂ ಡಿಕೆಶಿ

ಎಂಎಲ್‌ಎ, ಎಂಎಲ್‌ಸಿ ವಿಚಾರವಾಗಿ ದೆಹಲಿ ನಾಯಕರು ಏನೂ ಹೇಳದೇ, ಸೂಚನೆ ಕೊಡದೆ, ನಾವು ಏನೂ ಮಾಡಲೂ ಆಗುವುದಿಲ್ಲ. ಕೆಲವನ್ನು ಮಾರ್ಗದರ್ಶನದ ಅನುಸಾರವಾಗಿ ಮಾಡಬೇಕಾಗುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.


Click the Play button to hear this message in audio format

ದಾವಣಗೆರೆ ದಕ್ಷಿಣ ಉಪ ಚುನಾವಣೆ ನಂತರ ರಾಜ್ಯ ಕಾಂಗ್ರೆಸ್‌ ಹಲವು ಬೆಳವಣಿಗೆಗೆ ಸಾಕ್ಷಿಯಾಗಿದೆ. ಸಿಎಂ ಸಿದ್ದರಾಮಯ್ಯ ಬಣದ ನಾಯಕರನ್ನು ಹಂತ ಹಂತವಾಗಿ ಪಕ್ಷದ ಚಟುವಟಿಕೆಗಳಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ದೂರ ಇಡುತ್ತಿದ್ದಾರೆ ಎಂಬ ಆರೋಪದ ನಡುವೆಯೇ, ನಮ್ಮಲ್ಲಿ ಯಾವುದೇ ಬಣಗಳಿಲ್ಲ, ನಾವೆಲ್ಲರೂ ಒಂದೇ ಬಣ ಎಂದು ಡಿಸಿಎಂ ಡಿಕೆಶಿ ಸ್ಪಷ್ಟಪಡಿಸಿದ್ದಾರೆ.

"ಸಿಎಂ ಸಿದ್ದರಾಮಯ್ಯ ಮತ್ತು ನಾನು ಒಟ್ಟಿಗೇ ಇದ್ದೇವೆ. ಪ್ರತಿದಿನ ಜತೆಯಲ್ಲೇ ಕೂರುತ್ತೇವೆ, ಚರ್ಚಿಸುತ್ತೇವೆ. ಎಲ್ಲಿದೆ ನಮ್ಮಲ್ಲಿ ಗುಂಪು ಎಂಬುದು? ಎಲ್ಲರೂ ನಮ್ಮ ಶಾಸಕರೇ. ಮಾಧ್ಯಮಗಳೇ ನಮ್ಮನ್ನು ಇಬ್ಭಾಗ ಮಾಡುತ್ತಿವೆ" ಎಂದರು.

ಶುಕ್ರವಾರ(ಏ.17) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ದೆಹಲಿಯಲ್ಲಿ ಸಿದ್ದರಾಮಯ್ಯ ಅವರ ಗುಂಪು ಎಂದು ಹೇಳಿದ್ದೀರಿ. ಅವರೇನೂ ಬೋರ್ಡ್ ಹಾಕಿಕೊಂಡಿದ್ದಾರೆಯೇ ? ನನ್ನ ಗುಂಪು ಎಂದು ನಾನು ಬೋರ್ಡ್ ಹಾಕಿಕೊಂಡಿದ್ದೇನೆಯೇ ? 139 ಶಾಸಕರು ನನ್ನ ಹಾಗೂ ಸಿದ್ದರಾಮಯ್ಯ ಅವರ ಶಾಸಕರೇ ಆಗಿದ್ದಾರೆ. ಯಾವ ಗುಂಪೂ ಇಲ್ಲ, ಬೋರ್ಡೂ ಇಲ್ಲ," ಎಂದು ಬೇಸರ ವ್ಯಕ್ತಪಡಿಸಿದರು.

ಹೈಕಮಾಂಡ್‌ ಸೂಚನೆಯಂತೆ ಕ್ರಮ

ಎಂಎಲ್‌ಸಿ ಅಬ್ದುಲ್‌ ಜಬ್ಬಾರ್ ಹಾಗೂ ನಸೀರ್ ಅಹಮದ್‌ ಅವರ ವಿರುದ್ದ ಕ್ರಮ ಕೈಗೊಂಡಿರುವುದರ ಬಗ್ಗೆ ಪ್ರತಿಕ್ರಿಯಸಿದ ಅವರು, "ಇಲ್ಲಿ ಯಾವುದೇ ವೈಯಕ್ತಿಕ ವಿಚಾರಗಳು ಇಲ್ಲ. ಪಕ್ಷಕ್ಕೆ ತನ್ನದೇ ಆದ ರೀತಿ-ರಿವಾಜುಗಳಿವೆ. ಎಂಎಲ್‌ಎ, ಎಂಎಲ್‌ಸಿ ವಿಚಾರವಾಗಿ ದೆಹಲಿ ನಾಯಕರು ಏನೂ ಹೇಳದೇ, ಏನೂ ಸೂಚನೆ ಕೊಡದೆ, ನಾವು ಏನೂ ಮಾಡಲೂ ಆಗುವುದಿಲ್ಲ. ಕೆಲವನ್ನು ಮಾರ್ಗದರ್ಶನದ ಅನುಸಾರವಾಗಿ ಮಾಡಬೇಕಾಗುತ್ತದೆ. ಕೆಲವರು ನನ್ನನ್ನು ದೂರಬಹುದು. ಹಾಗೇ ನನ್ನ ಮೇಲೆ ಹೇಳಿದರೂ ಚಿಂತೆಯಿಲ್ಲ. ಪಕ್ಷದ ಶಿಸ್ತಿನ ಚೌಕಟ್ಟಿ‌ನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಾಗುತ್ತದೆ," ಎಂದು ತಿಳಿಸಿದರು.

ಕಾಂಗ್ರೆಸ್ ಇರುವುದೇ ಎಲ್ಲರ ಒಳಿತಿಗೆ

ಕಾಂಗ್ರೆಸ್ ಪಕ್ಷ ಇರುವುದೇ ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗ, ರೈತರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗಕ್ಕೂ ನ್ಯಾಯ ಒದಗಿಸಲು. ಇದರಲ್ಲಿ ಯಾವುದೇ ತಾರತಮ್ಯವಿಲ್ಲ. ಕಾರ್ಯರ್ತರು, ನಾಯಕರು ತಪ್ಪುಗಳನ್ನು ಮಾಡಿದರೆ ಅವರ ವಿರುದ್ಧ ಶಿಸ್ತು ಕ್ರಮವೂ ಅಗತ್ಯ ಎಂದರು.

2028ಕ್ಕೆ ಮತ್ತೆ ಅಧಿಕಾರಕ್ಕೆ

ಸಚಿವ ಸತೀಶ್ ಜಾರಕಿಹೊಳಿ ಪಕ್ಷದ ನಾಯಕರು. 2028ಕ್ಕೆ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದೇ ನಮ್ಮ ಉದ್ದೇಶ. ನಾವು ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ನನಗೆ ಶೇ.100 ಪಟ್ಟು ಅಧಿಕಾರಕ್ಕೆ ಮರಳುವ ವಿಶ್ವಾಸವಿದೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಹೇಗೆ ನಿಯಂತ್ರಣ ಮತ್ತು ಕಡಿಮೆ ಮಾಡಬೇಕು ಎನ್ನುವ ವಿಚಾರವಾಗಿ ಚರ್ಚೆ ನಡೆಸಿದ್ದೇವೆ. "ನೆಲಮಂಗಲದಿಂದ ಗೊರಗುಂಟೆಪಾಳ್ಯದವರೆಗೆ ಹೆಚ್ಚು ವಾಹನ ಸಂಚಾರ ದಟ್ಟಣೆ ಇದೆ. ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಮೂಲಕ ನಗರದ ಒಳಗೆ ವಾಹನಗಳು ಬರದಂತೆ ಹೇಗೆ ಬದಲಿ ವ್ಯವಸ್ಥೆ ಮಾಡಬಹುದು. ನೈಸ್ ರಸ್ತೆಗೆ ಮುನ್ನ ಯಾವ ವ್ಯವಸ್ಥೆ ಮಾಡಬಹುದು ಎಂದು ಚರ್ಚೆ ನಡೆಸಿದ್ದೇವೆ. ಈಗಾಗಲೇ ಬಿಜಿನೆಸ್ ಕಾರಿಡಾರ್ ಯೋಜನೆ ಕೈಗೆತ್ತಿಕೊಂಡಿದ್ದೇವೆ," ಎಂದು ಮಾಹಿತಿ ನೀಡಿದರು.

ರಾಜಕೀಯ ಲಾಭಕ್ಕಾಗಿ ಕ್ಷೇತ್ರ ಮರುವಿಂಗಡಣೆ

ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್ ವಿಂಗಡಣೆ ಬಗ್ಗೆ ಕೇಂದ್ರ ಸರ್ಕಾರ ಏಕೆ ಆತುರದಲ್ಲಿದೆ ಎಂದು ತಿಳಿಯುತ್ತಿಲ್ಲ. ಕಾಂಗ್ರೆಸ್ ಪಕ್ಷವು ಚೌಕಟ್ಟಿನ ಒಳಗೆ ಇದರ ಬಗ್ಗೆ ಸೂಕ್ತ ಚರ್ಚೆ ನಡೆಸಲಾಗುವುದು. ರಾಜಕೀಯ ಲಾಭಕ್ಕಾಗಿ ಯಾವುದೇ ಸ್ಪಷ್ಟನೆ ಇಲ್ಲದೇ ಈ ನಿರ್ಧಾರವನ್ನು ಬಿಜೆಪಿ ತೆಗೆದುಕೊಳ್ಳುತ್ತಿದೆ. "ಬಿಜೆಪಿಯವರು ಅಭದ್ರತೆ ಎದುರಿಸುತ್ತಿದ್ದಾರೆ. ಅದಕ್ಕೆ ಈ ವಿಚಾರದ ಬಗ್ಗೆ ತರಾತುರಿಯಲ್ಲಿದ್ದಾರೆ. ಕ್ಷೇತ್ರ ಪುನರ್ ವಿಂಗಡಣೆ ಸರಿಯಾದ ಕ್ರಮವಲ್ಲ. ಇದು ಬೇಕಾಗಿಲ್ಲ" ಎಂದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗಿಲ್ಲ. ಮೊದಲು ರಾಜ್ಯಸಭೆ ಹಾಗೂ ಐದು ರಾಜ್ಯಗಳ ಚುನಾವಣೆಗಳನ್ನು ಮುಗಿಸೋಣ. 'ಬ್ರಿಡ್ಜ್ ಟು ಬೆಂಗಳೂರು' ಕಾರ್ಯಕ್ರಮ ನಿಮಿತ್ತ ನಾನು ಹಾಗೂ ಮುಖ್ಯಮಂತ್ರಿ ದೆಹಲಿಗೆ ತೆರಳುತ್ತಿದ್ದೇವೆ. ಇತರೆ ದೇಶಗಳ ರಾಯಭಾರಿಗಳು, ಉದ್ಯಮಿಗಳು ಸೇರಿದಂತೆ ಅನೇಕರು ಸೇರುತ್ತಿದ್ದಾರೆ ಎಂದು ತಿಳಿಸಿದರು.

Read More
Next Story