Dont let the common man suffer: CM takes metro, rejects zero traffic!
x

ಸಿಎಂ ಡಿ.ಕೆ. ಶಿವಕುಮಾರ್‌ ಮೆಟ್ರೋದಲ್ಲಿ ಸಹ ಪ್ರಯಾಣಿಕರ ಕುಶಲೋಪರಿ ವಿಚಾರಿಸಿದರು.

ಜನಸಾಮಾನ್ಯರಿಗೆ ದಟ್ಟಣೆ ಬಿಸಿ ತಾಕದಂತೆ 'ಜೀರೋ ಟ್ರಾಫಿಕ್' ನಿರಾಕರಿಸಿ ಮೆಟ್ರೋ ಏರಿದ ಸಿಎಂ!

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಬೆಳಗ್ಗೆ 9 ಗಂಟೆಗೆ ವಿಧಾನಸೌಧದ ಎದುರಿನ ಮೆಟ್ರೋ ನಿಲ್ದಾಣದಿಂದ ಕನಕಪುರ ರಸ್ತೆಯ ಕೊನೆಯ ನಿಲ್ದಾಣವಾದ 'ಸಿಲ್ಕ್ ಇನ್‌ಸ್ಟಿಟ್ಯೂಟ್' ವರೆಗೆ ಮೆಟ್ರೋ ರೈಲಿನಲ್ಲಿ ಸಂಚರಿಸಿದರು.


Click the Play button to hear this message in audio format

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ತಮ್ಮ ಸ್ವಕ್ಷೇತ್ರ ಕನಕಪುರಕ್ಕೆ ಭೇಟಿ ನೀಡಿರುವ ಸಿಎಂ ಡಿ.ಕೆ. ಶಿವಕುಮಾರ್ ಅವರು ಭಾನುವಾರ (ಜೂ. 7) ರಾಜಧಾನಿ ಜನತೆಗೆ ಯಾವುದೇ ತೊಂದರೆಯಾಗದಂತೆ ಮಾದರಿ ಹೆಜ್ಜೆಯಿಟ್ಟರು.

ಸದಾಶಿವನಗರದ ತಮ್ಮ ನಿವಾಸದಿಂದ ಕನಕಪುರ ರಸ್ತೆಯವರೆಗೂ ಮುಖ್ಯಮಂತ್ರಿಗಳ ಕಾರಿಗೆ ಬೆಂಗಾವಲು ವ್ಯವಸ್ಥೆ ಕಲ್ಪಿಸಲು 'ಜೀರೋ ಟ್ರಾಫಿಕ್' ವ್ಯವಸ್ಥೆ ಕಲ್ಪಿಸಿದರೆ ಪೀಕ್ ಅವರ್‌ನಲ್ಲಿ ಸಾರ್ವಜನಿಕರ ವಾಹನ ಸಂಚಾರಕ್ಕೆ ಭಾರಿ ದಟ್ಟಣೆ ಉಂಟಾಗಲಿದೆ ಎಂಬುದನ್ನು ಮನಗಂಡ ಸಿಎಂ, ವಿಧಾನಸೌಧದಿಂದ ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಮೂಲಕ ಗಮನ ಸೆಳೆದರು.

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ರಾಜ್ಯಪಾಲರ ಸಂಚಾರಕ್ಕಾಗಿ ಟ್ರಾಫಿಕ್ ನಿರ್ಬಂಧಿಸಿದಾಗ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದ ಘಟನೆ ಹಸಿರಾಗಿರುವಾಗಲೇ, ಮುಖ್ಯಮಂತ್ರಿಗಳ ಈ ಜನಸ್ನೇಹಿ ನಡೆ ವಿಐಪಿ ಸಂಸ್ಕೃತಿಗೆ ಭಿನ್ನವಾದ ಮಾದರಿ ಹಾಕಿಕೊಟ್ಟಿದೆ.

ಸಹ ಪ್ರಯಾಣಿಕರೊಂದಿಗೆ ಸಂವಾದ

ಮುಖ್ಯಮಂತ್ರಿಗಳು ಇಂದು ಬೆಳಗ್ಗೆ 9 ಗಂಟೆಗೆ ವಿಧಾನಸೌಧದ ಎದುರಿನ ಮೆಟ್ರೋ ನಿಲ್ದಾಣದಿಂದ ಕನಕಪುರ ರಸ್ತೆಯ ಕೊನೆಯ ನಿಲ್ದಾಣವಾದ 'ಸಿಲ್ಕ್ ಇನ್‌ಸ್ಟಿಟ್ಯೂಟ್' ವರೆಗೆ ಮೆಟ್ರೋ ರೈಲಿನಲ್ಲಿ ಸಂಚರಿಸಿದರು. ಟಿಕೆಟ್ ಪಡೆದು ರೈಲು ಹತ್ತಿದ ಸಿಎಂ, ಭಾನುವಾರ ಬೆಳಗ್ಗೆ ಪ್ರಯಾಣಿಸುತ್ತಿದ್ದ ಸಹ ನಾಗರಿಕರೊಂದಿಗೆ ಅತ್ಯಂತ ಸರಳವಾಗಿ ಬೆರೆತರು. ಪ್ರಯಾಣಿಕರ ಯೋಗಕ್ಷೇಮ ವಿಚಾರಿಸಿ, ನಗುನಗುತ್ತಲೇ ಸೆಲ್ಫಿಗಳಿಗೆ ಪೋಸ್ ನೀಡಿದರು. ಕೊನೆಯ ನಿಲ್ದಾಣದಲ್ಲಿ ಇಳಿದ ಬಳಿಕ ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಕನಕಪುರಕ್ಕೆ ಪ್ರಯಾಣ ಬೆಳೆಸಿದರು.

ಸಿಎಂ ಡಿ.ಕೆ. ಶಿವಕುಮಾರ್‌

11 ಗಂಟೆಗಳ ಕಾಲ 'ಕೃತಜ್ಞತಾ ಸಮರ್ಪಣಾ ಪ್ರವಾಸ'

ರಾಜಕೀಯವಾಗಿ ತಮಗೆ ಜನ್ಮ ನೀಡಿ, ಪ್ರಸ್ತುತ ಸಿಎಂ ಸ್ಥಾನದವರೆಗೂ ತಲುಪಿಸಿದ ಕ್ಷೇತ್ರದ ಜನತೆಗೆ ಧನ್ಯವಾದ ಅರ್ಪಿಸಲು ಡಿ.ಕೆ. ಶಿವಕುಮಾರ್ ಅವರು ಭಾನುವಾರ ಇಡೀ ದಿನವನ್ನು ಮುಡುಪಾಗಿಟ್ಟಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿ ಮತ್ತು ಕನಕಪುರ ತಾಲೂಕಿನ ನಾನಾ ಕಡೆಗಳಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ರವರೆಗೆ ಸತತ 11 ಗಂಟೆಗಳ ಕಾಲ ಬೃಹತ್ 'ಕೃತಜ್ಞತಾ ಸಮರ್ಪಣಾ ಪ್ರವಾಸ' ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಕ್ಷೇತ್ರದ ಸುಮಾರು 20 ರಿಂದ 25 ಆಯ್ದ ಸ್ಥಳಗಳಲ್ಲಿ ಜನರನ್ನು ಖುದ್ದಾಗಿ ಭೇಟಿಯಾಗಿ ಕೃತಜ್ಞತೆ ಸಲ್ಲಿಸಲಿದ್ದಾರೆ.

"ದೊಡ್ಡಾಲಹಳ್ಳಿಯಿಂದ ಹಿಡಿದು ಸಾತನೂರು, ಕನಕಪುರ, ಬೆಂಗಳೂರು ದಕ್ಷಿಣದ ಜನತೆ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ. ಕಳೆದ 40 ವರ್ಷಗಳಿಂದ ನನ್ನನ್ನು ರಾಜಕೀಯವಾಗಿ ಪೋಷಿಸಿದ ಜನತೆಗೆ ಕೃತಜ್ಞತೆ ಸಲ್ಲಿಸುವುದು ನನ್ನ ಆದ್ಯ ಕರ್ತವ್ಯ. ಜನಸಾಮಾನ್ಯರ ಸಂಚಾರಕ್ಕೆ ತೊಂದರೆಯಾಗಬಾರದು ಎಂದೇ ನಾನು ಮೆಟ್ರೋ ಆಯ್ಕೆ ಮಾಡಿಕೊಂಡೆ." ಎಂದು ತಿಳಿಸಿದ್ದಾರೆ.

ಸಿಎಂ ಸಂದೇಶ ವೈರಲ್

ತಮ್ಮ ಮೆಟ್ರೋ ಪ್ರಯಾಣದ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಿಎಂ, "ಕರ್ನಾಟಕದ ಜನರ ಜೀವನದಲ್ಲಿ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಕೈಗೆಟುಕುವ ಸಾರ್ವಜನಿಕ ಸಾರಿಗೆ ಎಷ್ಟು ಮುಖ್ಯ ಎಂಬುದನ್ನು ಈ ಪ್ರಯಾಣ ನೆನಪಿಸಿದೆ. ಬೆಂಗಳೂರು ನಮ್ಮೆಲ್ಲರಿಗೂ ಸೇರಿದ್ದು. ಪ್ರತಿಯೊಬ್ಬ ನಾಗರಿಕನ ದೈನಂದಿನ ಜೀವನವನ್ನು ಸುಲಭ ಹಾಗೂ ಹೆಚ್ಚು ಸಂಪರ್ಕಿಸುವಂತೆ ಮಾಡುವ ಪರಿಹಾರಗಳ ಮೇಲೆ ನಗರದ ಭವಿಷ್ಯ ಅಡಗಿದೆ. ನಮ್ಮ ಮೆಟ್ರೋ ಆ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ" ಎಂದು ಬರೆದುಕೊಂಡಿದ್ದಾರೆ.

ಮೆಟ್ರೋದಲ್ಲಿ ಬಾಲಕಿಯೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್‌

ಸಾರ್ವಜನಿಕರ ಆಕಾಂಕ್ಷೆಗಳನ್ನು ಆಲಿಸುವುದು, ಕಲಿಯುವುದು ಮತ್ತು ಜನರೊಂದಿಗೆ ಸಂಪರ್ಕದಲ್ಲಿರುವುದೇ ನಿಜವಾದ ಸಾರ್ವಜನಿಕ ಸೇವೆ ಎಂದು ಸಿಎಂ ಹೇಳಿದ್ದು, ಒಟ್ಟಾಗಿ ಜನಸ್ನೇಹಿ ಕರ್ನಾಟಕವನ್ನು ನಿರ್ಮಿಸೋಣ ಎಂದು ಕರೆ ನೀಡಿದ್ದಾರೆ. ಸಿಎಂ ಅವರ ಈ ಸರಳ ನಡೆಗೆ ಮೆಟ್ರೋ ಪ್ರಯಾಣಿಕರು ಹಾಗೂ ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Read More
Next Story