
ಲೋಕಭವನದ ಬಳಿ ಹೆಚ್ಚಿನ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಿರುವುದು.
ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ; ಲೋಕಭವನದ ಸುತ್ತ ಭಾರಿ ಪೊಲೀಸ್ ಭದ್ರತೆ!
ಸಮಾರಂಭ ನಡೆಯುವ ಸಂಪೂರ್ಣ ವಲಯವನ್ನು ಹಲವು ಕಟ್ಟುನಿಟ್ಟಿನ 'ಸೆಕ್ಟರ್‌ಗಳಾಗಿ' ವಿಂಗಡಿಸಲಾಗಿದೆ. ಭದ್ರತೆಯ ಉಸ್ತುವಾರಿಗಾಗಿ ಪ್ರತಿ ಸೆಕ್ಟರ್‌ಗೂ ಓರ್ವ ಡಿಸಿಪಿ ದರ್ಜೆಯ ಅಧಿಕಾರಿಗೆ ನೇತೃತ್ವದ ಜವಾಬ್ದಾರಿ ನೀಡಲಾಗಿದೆ.
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕರ್ನಾಟಕ ರಾಜಕಾರಣದ ‘ಟ್ರಬಲ್ ಶೂಟರ್’ ಎಂದೇ ಖ್ಯಾತರಾದ ಡಿ.ಕೆ. ಶಿವಕುಮಾರ್ ಅವರು ಇಂದು ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿರುವ ಬೆಂಗಳೂರಿನ ಲೋಕಭವನ ಹಾಗೂ ಅದರ ಸುತ್ತಮುತ್ತಲಿನ ಜಾಗದಲ್ಲಿ ಈಗ ಭಾರಿ ಹೈ-ಅಲರ್ಟ್ ಘೋಷಿಸಲಾಗಿದ್ದು, ಇಡೀ ಪ್ರದೇಶವು ಖಾಕಿ ಕೋಟೆಯಾಗಿ ಮಾರ್ಪಟ್ಟಿದೆ.
ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ರಾಜಧಾನಿಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ಸಲುವಾಗಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಖುದ್ದು ಕಣಕ್ಕಿಳಿದು ಬಿಗಿ ಭದ್ರತೆಯ ಸೂತ್ರಗಳನ್ನು ಸಿದ್ಧಪಡಿಸಿದ್ದಾರೆ.
ಭದ್ರತೆಗೆ 2 ಸಾವಿರ ಸಿಬ್ಬಂದಿ ನಿಯೋಜನೆ!
ಸಮಾರಂಭ ನಡೆಯುವ ಸಂಪೂರ್ಣ ವಲಯವನ್ನು ಹಲವು ಕಟ್ಟುನಿಟ್ಟಿನ 'ಸೆಕ್ಟರ್‌ಗಳಾಗಿ' ವಿಂಗಡಿಸಲಾಗಿದೆ. ಭದ್ರತೆಯ ಉಸ್ತುವಾರಿಗಾಗಿ ಪ್ರತಿ ಸೆಕ್ಟರ್‌ಗೂ ಓರ್ವ ಡಿಸಿಪಿ (DCP) ದರ್ಜೆಯ ಅಧಿಕಾರಿಗೆ ನೇತೃತ್ವದ ಜವಾಬ್ದಾರಿ ನೀಡಲಾಗಿದೆ. ಬೆಂಗಳೂರು ನಗರದ ಪೊಲೀಸರಿಗೆ ಸಾಥ್ ನೀಡಲು ಬೇರೆ ಬೇರೆ ಜಿಲ್ಲೆಗಳ ದಕ್ಷ ಅಧಿಕಾರಿಗಳನ್ನೂ ಕಮಿಷನರ್ ರಾಜಧಾನಿಗೆ ಕರೆಸಿಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಭದ್ರತಾ ಸಿಬ್ಬಂದಿಯ ಮಹಾ ವ್ಯೂಹ ?
ಜಂಟಿ ಪೊಲೀಸ್ ಆಯುಕ್ತರು 3 ಮಂದಿ, 20ಕ್ಕೂ ಹೆಚ್ಚು ಡಿಸಿಪಿಗಳು, 50ಕ್ಕೂ ಹೆಚ್ಚು ಎಸಿಪಿಗಳು, 100ಕ್ಕೂ ಹೆಚ್ಚು ಇನ್ಸ್‌ಪೆಕ್ಟರ್‌ಗಳು, 300ಕ್ಕೂ ಹೆಚ್ಚು ಪಿಎಸ್‌ಐ ಅಧಿಕಾರಿಗಳು, 700ಕ್ಕೂ ಹೆಚ್ಚು ಕಾನ್ಸ್‌ಟೇಬಲ್‌ಗಳು, ಇವರೊಂದಿಗೆ ಕೆಎಸ್‌ಆರ್‌ಪಿ ಮತ್ತು ಸಶಸ್ತ್ರ ಮೀಸಲು ಪಡೆಯ ತುಕಡಿಗಳು ಸೇರಿದಂತೆ ಒಟ್ಟು ಎರಡು ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಒಳ ಹೋಗಲು ಪಾಸ್ ಕಡ್ಡಾಯ!
ಲೋಕಭವನದಲ್ಲಿ ನಡೆಯಲಿರುವ ಈ ಹೈ-ಪ್ರೊಫೈಲ್ ಕಾರ್ಯಕ್ರಮಕ್ಕೆ ಬರುವ ಗಣ್ಯರಿಗೆ ಪೊಲೀಸರು ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಕೇವಲ 'ಅಧಿಕೃತ ವಾಹನ ಪಾಸ್' ಹೊಂದಿರುವ ವಿಐಪಿ ಹಾಗೂ ವಿವಿಐಪಿಗಳಿಗೆ ಮಾತ್ರವೇ ನೇರವಾಗಿ ಆವರಣದ ಒಳಗಡೆ ವಾಹನ ಚಾಲನೆ ಮಾಡಲು ಅನುಮತಿ ನೀಡಲಾಗಿದೆ. ಅಷ್ಟೇ ಅಲ್ಲದೆ, ಗಣ್ಯರೆಲ್ಲರೂ ಕಾರ್ಯಕ್ರಮ ಆರಂಭವಾಗುವ ಕನಿಷ್ಠ ಒಂದು ಗಂಟೆ ಮುಂಚಿತವಾಗಿಯೇ ಆಸನಗಳನ್ನು ಅಲಂಕರಿಸುವಂತೆ ಸೂಚಿಸಲಾಗಿದೆ.
ಖಾಸಗಿ ವಾಹನಗಳಿಗೆ ಬ್ರೇಕ್!
ಒಂದು ವೇಳೆ ವಾಹನ ಪಾಸ್ ಇಲ್ಲದೆ ಗಣ್ಯರು ಆಗಮಿಸಿದರೆ, ಅಂತಹ ವಾಹನಗಳಿಗೆ ತಿಮ್ಮಯ್ಯ ಸರ್ಕಲ್ ಬಳಿಯೇ ನಿರ್ಬಂಧ ವಿಧಿಸಲಾಗಿದ್ದು, ಅಲ್ಲಿಂದ ಮುಂದೆ ಯಾವುದೇ ಖಾಸಗಿ ವಾಹನಗಳ ಪ್ರವೇಶ ಇರುವುದಿಲ್ಲ. ಈಗಾಗಲೇ ಪೊಲೀಸರು ಅಧಿಕೃತ ಪಾಸ್ ಪಡೆದ ಗಣ್ಯರ ಪಟ್ಟಿಯನ್ನು ಹಿಡಿದು ಪ್ರತಿಯೊಂದನ್ನೂ ಹದ್ದಿನ ಕಣ್ಣಿನಿಂದ ಪರಿಶೀಲನೆ ನಡೆಸುತ್ತಿದ್ದಾರೆ.
ವಿಶೇಷ ಗಾಲ್ಫ್ ಕಾರ್ಟ್ ವ್ಯವಸ್ಥೆ
ಪಾಸ್ ಇಲ್ಲದ ಗಣ್ಯರನ್ನು ತಿಮ್ಮಯ್ಯ ಸರ್ಕಲ್‌ನಿಂದ ಲೋಕಭವನದ ಮುಖ್ಯ ವೇದಿಕೆಯವರೆಗೆ ಸುರಕ್ಷಿತವಾಗಿ ಮತ್ತು ಗೌರವಯುತವಾಗಿ ಕರೆತರಲು ವಿಶೇಷವಾಗಿ 6 ಸೀಟುಗಳ ಸಾಮರ್ಥ್ಯವಿರುವ ಎಲೆಕ್ಟ್ರಿಕ್ ಗಾಲ್ಫ್ ಕಾರ್ಟ್ ವಾಹನಗಳ ವ್ಯವಸ್ಥೆ ಮಾಡಲಾಗಿದೆ.

