
ಸಿಎಂ ಪಟ್ಟಕ್ಕಾಗಿ ಡಿಕೆಶಿ ದೆಹಲಿ ದಂಡಯಾತ್ರೆ: ಹೈಕಮಾಂಡ್ ಭೇಟಿಗೆ ಕಸರತ್ತು!
ಬಜೆಟ್ ಪೂರ್ವಭಾವಿ ಸಭೆಗೂ ಹಾಜರಾಗದೆ ದಿಢೀರ್ ದೆಹಲಿಗೆ ತೆರಳಿರುವ ಡಿಕೆಶಿ ನಡೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಕರ್ನಾಟಕ ಕಾಂಗ್ರೆಸ್ನಲ್ಲಿ ನಾಯಕತ್ವದ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದಿಢೀರ್ ದೆಹಲಿ ಪ್ರವಾಸ ಕೈಗೊಂಡಿದ್ದು, ಸಿಎಂ ಸ್ಥಾನದ ಬಗ್ಗೆ ಸ್ಪಷ್ಟನೆ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವುದು ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಬಜೆಟ್ ಸಭೆ ಬಿಟ್ಟು ದೆಹಲಿಗೆ ಹಾರಿದ ಡಿಕೆಶಿ
ಅತ್ಯಂತ ಪ್ರಮುಖವಾದ ಬಜೆಟ್ ಪೂರ್ವಭಾವಿ ಸಭೆಗಳನ್ನು ಬಿಟ್ಟು ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿರುವುದು ಪಕ್ಷದ ಒಳಗೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅತಿ ಹೆಚ್ಚಿನ ಅನುದಾನ ಹೊಂದಿರುವ ಜಲಸಂಪನ್ಮೂಲ ಹಾಗೂ ಬೆಂಗಳೂರು ನಗರಾಭಿವೃದ್ಧಿ ಇಲಾಖೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಮಹತ್ವದ ಸಭೆಗೂ ಹಾಜರಾಗದೆ ಡಿಕೆಶಿ ದೆಹಲಿಯಾತ್ರೆ ಬೆಳೆಸಿದ್ದಾರೆ. ಇದು ಉದ್ದೇಶಪೂರ್ವಕವಾಗಿಯೇ ಸಿಎಂಗೆ ನೀಡಿದ 'ಸೆಡ್ಡು' ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಹೈಕಮಾಂಡ್ ಭೇಟಿಗೆ ಬಿಗಿಪಟ್ಟು
ನಿನ್ನೆಯಿಂದ ದೆಹಲಿಯಲ್ಲಿ ಬೀಡು ಬಿಟ್ಟಿರುವ ಡಿ.ಕೆ. ಶಿವಕುಮಾರ್, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಭೇಟಿಗೆ ಕಾಲಾವಕಾಶ ಕೋರಿದ್ದಾರೆ. ಬಜೆಟ್ಗಿಂತ ಮುಂಚೆಯೇ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆಸಿ, ಅಧಿಕಾರ ಹಂಚಿಕೆ ಬಗ್ಗೆ ಅಂತಿಮ ತೀರ್ಮಾನ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಆದರೆ, ಮೂಲಗಳ ಪ್ರಕಾರ ಹೈಕಮಾಂಡ್ನಿಂದ ಈವರೆಗೆ ಅವರಿಗೆ ಯಾವುದೇ ಸ್ಪಷ್ಟ ಭರವಸೆ ಸಿಕ್ಕಿಲ್ಲ.
ಡಿಕೆಶಿ ದೆಹಲಿ ದಂಡಯಾತ್ರೆಯ ಹಿಂದಿನ ಲೆಕ್ಕಾಚಾರಗಳೇನು?
ದೆಗಲಿ ಭೇಟಿಯ ಹಿಂದೆ ಡಿಕೆ ಶಿವಕುಮಾರ್ ಅವರಿಗೆ ಹಲವು ಲೆಕ್ಕಾಚಾರಗಳಿವೆ ಎನ್ನಲಾಗಿದೆ. ಮೊದಲಿಗೆ ಸಿಎಂ ಗಾದಿ ವಿಚಾರವನ್ನು ಜೀವಂತವಾಗಿಟ್ಟುಕೊಳ್ಳುವುದು ಮತ್ತು ಹೈಕಮಾಂಡ್ ಮೇಲೆ ಒತ್ತಡ ಹೇರುವುದು ಅವರ ಗುರಿಯಾಗಿದೆ. ತಮಗೆ ಸಿಎಂ ಪಟ್ಟ ನೀಡದಿದ್ದರೆ ಕಠಿಣ ನಿರ್ಧಾರ ಕೈಗೊಳ್ಳಬಲ್ಲೆ ಎಂಬ ಸೂಚನೆ ರವಾನಿಸುವುದು ಅವರ ಭೇಟಿಯ ಉದ್ದೇಶವಾಗಿದೆ. ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್ ಮನಸ್ಸಿನಲ್ಲಿ ಏನಿದೆ ಎಂಬ ಸತ್ಯವನ್ನು ನೇರವಾಗಿ ತಿಳಿದುಕೊಳ್ಳುವುದು. ಬಜೆಟ್ ಸಭೆಗೆ ಗೈರಾಗುವ ಮೂಲಕ ಸಿದ್ದರಾಮಯ್ಯ ಅವರ ನಾಯಕತ್ವಕ್ಕೆ ಸವಾಲು ಹಾಕುವ ತಂತ್ರ ಅವರದ್ದಾಗಿದೆ.

