
ದಾವಣಗೆರೆ ದಕ್ಷಿಣದ ಸ್ಟ್ರಾಂಗ್‌ರೂಂನ ಬಾಗಿಲನ್ನು ಹುಳಿ ಹಾಗೂ ಸುತ್ತಿಗೆಯಿಂದ ಹೊಡೆದು ತೆರೆಯಲಾಯಿತು.
By Election Results| ದಾವಣಗೆರೆ ದಕ್ಷಿಣ ಉಪಚುನಾವಣೆ ಮತ ಎಣಿಕೆ: ಸ್ಟ್ರಾಂಗ್ ರೂಂ ಕೀ ನಾಪತ್ತೆ!
ದಾವಣಗೆರೆಯ ಡಿಆರ್‌ಆರ್ ಸರ್ಕಾರಿ ಪಿಯು ಕಾಲೇಜಿನಲ್ಲಿ ಬೆಳಿಗ್ಗೆ 8 ಗಂಟೆಗೆ ನಿಗದಿಯಾಗಿದ್ದ ಮತ ಎಣಿಕೆ ಆರಂಭಕ್ಕೂ ಮುನ್ನ, ಒಟ್ಟು ನಾಲ್ಕು ಸ್ಟ್ರಾಂಗ್ ರೂಂಗಳ ಪೈಕಿ ಕೆಲವು ಕೊಠಡಿಗಳ ಬೀಗ ತೆಗೆಯಲು ಹೋದಾಗ ಕೀಲಿಗಳು ಲಭ್ಯವಿರಲಿಲ್ಲ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯಲ್ಲಿ ಸೋಮವಾರ ಬೆಳಿಗ್ಗೆ ಭಾರೀ ಹೈಡ್ರಾಮಾ ನಡೆದಿದೆ. ಮತ ಎಣಿಕೆ ಕೇಂದ್ರವಾಗಿರುವ ಡಿಆರ್‌ಆರ್ (DRR) ಶಾಲೆಯಲ್ಲಿ ಇವಿಎಂ ಯಂತ್ರಗಳನ್ನು ಇರಿಸಲಾಗಿದ್ದ ಸ್ಟ್ರಾಂಗ್ ರೂಂನ ಕೀಲಿ ಕೈಗಳು ನಾಪತ್ತೆಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಏಜೆಂಟ್ ಪಡಸಾಲೆಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ದಾವಣಗೆರೆಯ ಡಿಆರ್‌ಆರ್ ಸರ್ಕಾರಿ ಪಿಯು ಕಾಲೇಜಿನಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಕ್ಕೂ ಮುನ್ನ, ಒಟ್ಟು ನಾಲ್ಕು ಸ್ಟ್ರಾಂಗ್ ರೂಂಗಳ ಪೈಕಿ ಕೆಲವು ಕೊಠಡಿಗಳ ಬೀಗ ತೆಗೆಯಲು ಹೋದಾಗ ಕೀಲಿಗಳು ಲಭ್ಯವಿರಲಿಲ್ಲ. ಅಧಿಕಾರಿಗಳು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಹುಡುಕಾಟ ನಡೆಸಿದರೂ ಕೀಲಿ ಪತ್ತೆಯಾಗಲಿಲ್ಲ. ಮತ ಎಣಿಕೆ ವಿಳಂಬವಾಗುವುದನ್ನು ತಡೆಯಲು ಮತ್ತು ನಿಯಮಾವಳಿಗಳನ್ನು ಪಾಲಿಸಲು ಚುನಾವಣಾ ವೀಕ್ಷಕರು ತಕ್ಷಣದ ನಿರ್ಧಾರ ಕೈಗೊಂಡು, ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದಂತೆ ಎಲ್ಲಾ ಅಭ್ಯರ್ಥಿಗಳ ಏಜೆಂಟರ ಸಮ್ಮತಿ ಪಡೆದು, ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಸುತ್ತಿಗೆ ಮತ್ತು ಉಳಿಯನ್ನು ಬಳಸಿ ಸ್ಟ್ರಾಂಗ್ ರೂಂನ ಬೀಗಗಳನ್ನು ಮುರಿಯಲಾಯಿತು.
ಸ್ಟ್ರಾಂಗ್‌ರೂಂ ಬಾಗಿಲು ತೆರೆದಿರುವುದು.
ಬೀಗ ಮುರಿಯುವ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋಗ್ರಫಿ ಮಾಡಲಾಗಿದ್ದು, ಈವಿಎಂ ಯಂತ್ರಗಳು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲಾಯಿತು. ಈ ಉಪಚುನಾವಣೆಯು ರಾಜ್ಯ ರಾಜಕಾರಣದಲ್ಲಿ ಬಹಳ ಕುತೂಹಲ ಮೂಡಿಸಿದೆ. ಪ್ರಮುಖವಾಗಿ ಶಾಮನುರು ಶಿವಶಂಕರಪ್ಪ ನಿಧನದಿಂದ ತೆರವಾಗಿದ್ದ ಈ ಸ್ಥಾನಕ್ಕೆ ಅವರ ಮೊಮ್ಮಗ ಸಮರ್ಥ್ ಮಲ್ಲಿಕಾರ್ಜುನ್ (ಕಾಂಗ್ರೆಸ್) ಮತ್ತು ಶ್ರೀನಿವಾಸ್ ದಾಸ್ ಕರಿಯಪ್ಪ (ಬಿಜೆಪಿ) ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

