ಎಚ್ಚರ ತಪ್ಪಿದರೆ ಪ್ರಜಾಪ್ರಭುತ್ವದ ಮಾರಣಹೋಮ:  ಸಿದ್ದರಾಮಯ್ಯ ಗಂಭೀರ ಎಚ್ಚರಿಕೆ
x

ಎಚ್ಚರ ತಪ್ಪಿದರೆ ಪ್ರಜಾಪ್ರಭುತ್ವದ ಮಾರಣಹೋಮ: ಸಿದ್ದರಾಮಯ್ಯ ಗಂಭೀರ ಎಚ್ಚರಿಕೆ

ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, "ಬಿಜೆಪಿಯು ವ್ಯವಸ್ಥಿತವಾಗಿ ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲು ಹುನ್ನಾರ ನಡೆಸಿದೆ ಎಂದು ಸಿದ್ದರಾಮಯ್ಯ ಹೇಳಿದರು.


Click the Play button to hear this message in audio format

ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕುರಿತು ಪ್ರತಿಯೊಬ್ಬರೂ ಎಚ್ಚೆತ್ತುಕೊಳ್ಳದಿದ್ದರೆ ಪ್ರಜಾಪ್ರಭುತ್ವದ ಮಾರಣಹೋಮವಾಗಲಿದ್ದು, ದೇಶವು ಮತ್ತೆ ಸರ್ವಾಧಿಕಾರದ ಕಪಿಮುಷ್ಟಿಗೆ ಸಿಲುಕಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಭೀರ ಎಚ್ಚರಿಕೆ ರವಾನಿಸಿದ್ದಾರೆ.

ಭಾನುವಾರ ಮೈಸೂರಿನ ಜೆ.ಕೆ. ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ 'ಮೈಸೂರು ವಿಭಾಗೀಯ ಮಟ್ಟದ ಎಸ್‌ಐಆರ್ ಜಾಗೃತಿ ಸಮಾವೇಶ'ವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗೆ ಮತದಾರರ ಹಕ್ಕುಗಳನ್ನು ರಕ್ಷಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯ ಎಂದು ಪ್ರತಿಪಾದಿಸಿದರು.

ಮತದಾನದ ಹಕ್ಕಿಗೆ ಕನ್ನ, ಆಯೋಗದ ವಿರುದ್ಧ ಅಸಮಾಧಾನ

"ಚುನಾವಣೆಗಳು ಪ್ರಜಾಪ್ರಭುತ್ವದ ಮೂಲ ಬುನಾದಿ. ಮತದಾನ ಪ್ರತಿಯೊಬ್ಬ ವಯಸ್ಕನ ಸಾಂವಿಧಾನಿಕ ಹಕ್ಕು. ಇದನ್ನು ಮೊಟಕುಗೊಳಿಸುವ ಅಧಿಕಾರ ಯಾರಿಗೂ ಇಲ್ಲ. ಸಂವಿಧಾನಬದ್ಧವಾಗಿ ನಡೆದುಕೊಳ್ಳುವುದು ಚುನಾವಣಾ ಆಯೋಗದ ಜವಾಬ್ದಾರಿಯಾಗಿದೆ. ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸುವುದು ಆಯೋಗದ ಕರ್ತವ್ಯವೇ ಹೊರತು, ಪಟ್ಟಿಯಿಂದ ಹೆಸರು ಕೈಬಿಡುವುದು ಹಕ್ಕನ್ನು ಕಸಿದುಕೊಂಡಂತೆ. ಆದರೆ, 2014ರ ಬಳಿಕ ಮತದಾನದ ಹಕ್ಕಿಗೆ ದೊಡ್ಡ ಮಟ್ಟದ ದ್ರೋಹ ಬಗೆಯಲಾಗುತ್ತಿದೆ," ಎಂದು ಸಿಎಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಯೊಂದು ಮತವೂ ಎಷ್ಟು ಅಮೂಲ್ಯ ಎಂಬುದಕ್ಕೆ, ಹಿಂದೊಮ್ಮೆ ವಿಧಾನಸಭೆ ಚುನಾವಣೆಯಲ್ಲಿ ಕೃಷ್ಣಮೂರ್ತಿ ಅವರು ಕೇವಲ ಒಂದು ಮತದಿಂದ ಪರಾಭವಗೊಂಡಿದ್ದನ್ನು ಅವರು ಉದಾಹರಣೆಯಾಗಿ ನೀಡಿದರು.

'ಬಿಜೆಪಿ ಶೂದ್ರ ವಿರೋಧಿ, ಅದೊಂದು ಸುಳ್ಳಿನ ಕಾರ್ಖಾನೆ'

ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, "ಬಿಜೆಪಿಯು ವ್ಯವಸ್ಥಿತವಾಗಿ ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲು ಹುನ್ನಾರ ನಡೆಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ. 36ರಷ್ಟು ಮಂದಿ ಮಾತ್ರ ಬಿಜೆಪಿಗೆ ಒಲವು ತೋರಿದ್ದರೆ, ಶೇ. 64ರಷ್ಟು ಜನರು ಅವರ ವಿರುದ್ಧವಿದ್ದಾರೆ. ಈ 64 ಶೇಕಡಾದಲ್ಲಿ ಶೇ. 10ರಷ್ಟು ಮತಗಳನ್ನು ಪಟ್ಟಿಯಿಂದ ಕಿತ್ತುಹಾಕಿದರೂ ಅದು ಪ್ರಜಾಪ್ರಭುತ್ವಕ್ಕೆ ದೊಡ್ಡ ಪೆಟ್ಟು ನೀಡಲಿದೆ" ಎಂದು ವಿಶ್ಲೇಷಿಸಿದರು.

"ಬಿಜೆಪಿಗೆ ಪ್ರಜಾಪ್ರಭುತ್ವ, ಸಂವಿಧಾನ ಅಥವಾ ಸಾಮಾಜಿಕ ನ್ಯಾಯದಲ್ಲಿ ಕಿಂಚಿತ್ತೂ ನಂಬಿಕೆ ಇಲ್ಲ. ಹಿಂದುಗಳಲ್ಲಿ ಜಾತಿ ಪದ್ಧತಿ, ವರ್ಣಾಶ್ರಮವನ್ನು ಹುಟ್ಟುಹಾಕಿದ್ದು ಯಾರು? ಶೂದ್ರರನ್ನು ಶಿಕ್ಷಣದಿಂದ ವಂಚಿತರನ್ನಾಗಿಸಿದ್ದು ಯಾರು? ಎಂಬುದರ ಇತಿಹಾಸವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಶೂದ್ರರು ಎಂದಿಗೂ ಬಿಜೆಪಿ ಜೊತೆ ಗುರುತಿಸಿಕೊಳ್ಳಬಾರದು. ಅದು ಶೂದ್ರ ವಿರೋಧಿ ಪಕ್ಷವಾಗಿದ್ದು, ಕೇವಲ ಸುಳ್ಳುಗಳನ್ನು ಉತ್ಪಾದಿಸುವ ಮತ್ತು ಮಾರಾಟ ಮಾಡುವ ಕಾರ್ಖಾನೆಯಾಗಿದೆ" ಎಂದು ಟೀಕಿಸಿದರು.

ಸರ್ವಾಧಿಕಾರದತ್ತ 'ಒಂದು ದೇಶ, ಒಂದು ಚುನಾವಣೆ'

"ಬಿಜೆಪಿ ಅಧಿಕಾರಕ್ಕಾಗಿ ಏನನ್ನೂ ಮಾಡಲು ಹೇಸುವುದಿಲ್ಲ. ಬ್ರಿಟಿಷರ ಕಾಲದಲ್ಲೇ ಆರ್.ಎಸ್.ಎಸ್ ನಾಯಕ ಹೆಡಗೇವಾರ್ ಅವರು ತಮ್ಮ ಆಪ್ತರನ್ನು ಇಟಲಿ ಮತ್ತು ಜರ್ಮನಿಗೆ ಕಳುಹಿಸಿ ಸರ್ವಾಧಿಕಾರದ ಬಗ್ಗೆ ಅಧ್ಯಯನ ಮಾಡಿಸಿದ್ದರು. ಪ್ರಸ್ತುತ ಕೇಂದ್ರ ಸರ್ಕಾರ ಪ್ರತಿಪಾದಿಸುತ್ತಿರುವ 'ಒಂದು ದೇಶ, ಒಂದು ಚುನಾವಣೆ' ಎನ್ನುವುದು ಕೂಡ ಈ ಸರ್ವಾಧಿಕಾರಿ ಮನಸ್ಥಿತಿಯ ಮುಂದುವರಿದ ಭಾಗವೇ ಆಗಿದೆ. ದುರಾಡಳಿತದಿಂದಾಗಿಯೇ ಕಳೆದ ಬಾರಿ 303 ಸ್ಥಾನಗಳಲ್ಲಿದ್ದ ಬಿಜೆಪಿ, ಪ್ರಸ್ತುತ 240ಕ್ಕೆ ಕುಸಿದಿದೆ," ಎಂದು ಅವರು ಲೇವಡಿ ಮಾಡಿದರು.

ಕಾರ್ಯಕರ್ತರಿಗೆ ಸಿಎಂ ಕಿವಿಮಾತು

"ಜೂನ್ 30 ರಿಂದ ಜುಲೈ 29 ರವರೆಗೆ ನಡೆಯಲಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅತ್ಯಂತ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮುಂದಿನ ಒಂದು ತಿಂಗಳ ಕಾಲ ಇತರ ಎಲ್ಲಾ ಕೆಲಸಗಳನ್ನು ಬದಿಗೊತ್ತಿ, ಪ್ರತಿಯೊಬ್ಬ ಅರ್ಹ ಮತದಾರನ ಹೆಸರು ಪಟ್ಟಿಯಲ್ಲಿರುವಂತೆ ಎಚ್ಚರವಹಿಸಬೇಕು. ಪ್ರಸ್ತುತ ನಮ್ಮಲ್ಲಿ ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸುವ ಚುನಾವಣಾ ಆಯೋಗ ಇಲ್ಲ ಎಂಬುದನ್ನು ಕಾರ್ಯಕರ್ತರು ಸದಾ ನೆನಪಿನಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಕೆಲಸ ಮಾಡಬೇಕು," ಎಂದು ಸಿದ್ದರಾಮಯ್ಯ ಕರೆ ನೀಡಿದರು.

Read More
Next Story