ಇದು ಡಿ.ಕೆ. ಶಿವಕುಮಾರ್ ಸರ್ಕಾರ – ಸಿಎಂ ಪಟ್ಟಕ್ಕೇರುತ್ತಿದ್ದಂತೆ ಅಬ್ಬರಿಸಿದ ಡಿಕೆಶಿ
x

"ಇದು ಡಿ.ಕೆ. ಶಿವಕುಮಾರ್ ಸರ್ಕಾರ" – ಸಿಎಂ ಪಟ್ಟಕ್ಕೇರುತ್ತಿದ್ದಂತೆ ಅಬ್ಬರಿಸಿದ ಡಿಕೆಶಿ

ಮುಖ್ಯಮಂತ್ರಿ ಹುದ್ದೆ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಡಿ.ಕೆ. ಶಿವಕುಮಾರ್ ಮಾಸ್ ಸಂದೇಶ ರವಾನಿಸಿದ್ದಾರೆ. ಉಚಿತ ಬಸ್ ಪಾಸ್, 56 ಸಾವಿರ ಉದ್ಯೋಗ ಸೇರಿ ಸಂಪುಟದ 6 ಪ್ರಮುಖ ತೀರ್ಮಾನಗಳ ವಿವರ ಇಲ್ಲಿದೆ.


ಮುಖ್ಯಮಂತ್ರಿ ಹುದ್ದೆ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಡಿ.ಕೆ. ಶಿವಕುಮಾರ್ ಅವರು ತಮ್ಮ ನಾಯಕತ್ವದ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಮೊದಲ ಸಚಿವ ಸಂಪುಟ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ "ಇದು ಡಿ.ಕೆ. ಶಿವಕುಮಾರ್ ಅವರ ಸರ್ಕಾರ" ಎಂದು ಹೇಳುವ ಮೂಲಕ ಆಡಳಿತದ ದಿಕ್ಕು ಮತ್ತು ತಮ್ಮ ಕಾರ್ಯಶೈಲಿಯ ಬಗ್ಗೆ ಬಲವಾದ ರಾಜಕೀಯ ಸಂದೇಶ ನೀಡಿದ್ದಾರೆ.

ಮೊದಲ ಸಂಪುಟ ಸಭೆಯಲ್ಲೇ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, 56 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿ, ಖಾಸಗಿ ಉದ್ಯೋಗ ವಿನಿಮಯ ವ್ಯವಸ್ಥೆ, ರಾಜ್ಯಾದ್ಯಂತ ಬಿ ಖಾತಾದಿಂದ ಎ ಖಾತಾ ಪರಿವರ್ತನೆ, ಪಂಚಾಯಿತಿಗೊಂದು ಯುವಕರ ಸಂಘ ಹಾಗೂ ಬೆಂಗಳೂರಿನ ರಸ್ತೆ ಅಭಿವೃದ್ಧಿಗೆ 2 ಸಾವಿರ ಕೋಟಿ ರೂಪಾಯಿ ಅನುದಾನದಂತಹ ಮಹತ್ವದ ತೀರ್ಮಾನಗಳನ್ನು ಘೋಷಿಸಿದ ಡಿಕೆಶಿ, ಯುವಕರೇ ತಮ್ಮ ಸರ್ಕಾರದ ಕೇಂದ್ರಬಿಂದುವಾಗಲಿದ್ದಾರೆ ಎಂಬ ಸಂದೇಶ ನೀಡಿದರು.

ಸುದ್ದಿಗೋಷ್ಠಿಯಲ್ಲಿ 10 ಸಾವಿರ ಯುವಕರ ಸಂಘಗಳಿಗೆ ಸರ್ಕಾರದಿಂದ 10 ಲಕ್ಷ ರೂಪಾಯಿ ಅನುದಾನ ನೀಡುವ ಯೋಜನೆ ಬಗ್ಗೆ ಪ್ರಶ್ನೆ ಕೇಳಿದಾಗ, ಇದಕ್ಕೆ ಸಾವಿರ ಕೋಟಿ ರೂಪಾಯಿಗೂ ಹೆಚ್ಚು ವೆಚ್ಚವಾಗಬಹುದು ಎಂಬ ಮಾಧ್ಯಮದ ಪ್ರಶ್ನೆಗೆ ಡಿಕೆಶಿ, "ಇದು ಡಿ.ಕೆ. ಶಿವಕುಮಾರ್ ಅವರ ಸರ್ಕಾರ" ಎಂದು ಆತ್ಮವಿಶ್ವಾಸದಿಂದ ಉತ್ತರಿಸಿದರು.

ಈ ಒಂದು ವಾಕ್ಯ ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಹುದ್ದೆ ಸ್ವೀಕರಿಸಿದ ಮೊದಲ ದಿನವೇ ಡಿಕೆಶಿ ತಮ್ಮದೇ ಆಡಳಿತದ ಛಾಪು ಮೂಡಿಸಲು ಮುಂದಾಗಿದ್ದಾರೆ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ. ಕಾಂಗ್ರೆಸ್ ಸರ್ಕಾರದ ಎರಡನೇ ಇನ್ನಿಂಗ್ಸ್‌ನಲ್ಲಿ ಆಡಳಿತದ ಕೇಂದ್ರಬಿಂದುವಾಗಿ ಯುವಕರು, ಉದ್ಯೋಗ, ಶಿಕ್ಷಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂಬ ಸಂದೇಶವನ್ನು ಡಿಕೆಶಿ ತಮ್ಮ ಮೊದಲ ಸಂಪುಟ ಸಭೆಯಲ್ಲೇ ರವಾನಿಸಿದ್ದಾರೆ.

ಕ್ಯಾಬಿನೆಟ್ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, ಸರ್ಕಾರದ ಆರು ಪ್ರಮುಖ ತೀರ್ಮಾನಗಳನ್ನು ವಿವರವಾಗಿ ಹಂಚಿಕೊಂಡಿದ್ದಾರೆ.

1. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ (ಬಾಲಕರಿಗೂ ಬಂಪರ್ ಕೊಡುಗೆ)

"ನಮ್ಮ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಮೊದಲ ತೀರ್ಮಾನ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ. ನಾನು ರಾಜ್ಯದ ಬೇರೆ ಬೇರೆ ಭಾಗಗಳಿಗೆ ಪ್ರವಾಸ ಹೋದಾಗೆಲ್ಲಾ, ಕೇವಲ ಹೆಣ್ಣುಮಕ್ಕಳಿಗೆ ಮಾತ್ರ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ನೀಡಿದ್ದೀರಿ, ನಮಗೇಕೆ ಇಲ್ಲ ಎಂದು ಶಾಲಾ-ಕಾಲೇಜು ಬಾಲಕರು ಕೇಳುತ್ತಿದ್ದರು. ಹೀಗಾಗಿ ಈಗ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡಲು ತೀರ್ಮಾನಿಸಿದ್ದೇವೆ. ಈ ಸೌಲಭ್ಯ ಪಡೆಯಲು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕಾಗುತ್ತದೆ" ಎಂದು ಸಿಎಂ ತಿಳಿಸಿದರು.

2. 56 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿ & ಕನ್ನಡಿಗರಿಗೆ ಖಾಸಗಿ ಉದ್ಯೋಗ

ರಾಜ್ಯದ ನಿರುದ್ಯೋಗಿ ಯುವಕರಿಗೆ ಸರ್ಕಾರ ಬಲವಾದ ಭರವಸೆ ನೀಡಿದೆ. "ಉದ್ಯೋಗದ ಸಮಸ್ಯೆ ನಿವಾರಿಸಲು ನಮ್ಮ ಸರ್ಕಾರ ಶೀಘ್ರದಲ್ಲೇ 56 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿಗೆ ವೇಳಾಪಟ್ಟಿ (Time Table) ಬಿಡುಗಡೆ ಮಾಡಲಿದೆ. ಇದರ ಜೊತೆಗೆ ಖಾಸಗಿ ಕಂಪನಿಗಳಿಗೆ ಬೇಕಾದ ತರಬೇತಿ ನೀಡಿ ಉದ್ಯೋಗ ಕೊಡಿಸಲು 'ಖಾಸಗಿ ಉದ್ಯೋಗ ವಿನಿಮಯ ವ್ಯವಸ್ಥೆ' ತರಲಾಗುವುದು. ಇದರಲ್ಲಿ ಕನ್ನಡಿಗರಿಗೆ ಹೆಚ್ಚಿನ ಪಾಲು ನೀಡಲಾಗುವುದು. ಇದರ ಶೇಕಡಾವಾರು ಪ್ರಮಾಣದ ರೂಪುರೇಷೆ ಸಿದ್ಧಪಡಿಸಲು ಸಚಿವರಿಗೆ 1 ತಿಂಗಳ ಗಡುವು ನೀಡಲಾಗಿದೆ" ಎಂದರು.

3. 10 ಸಾವಿರ 'ಭಾರತ ಜೋಡೋ ಯುವಕರ ಸಂಘ' ಸ್ಥಾಪನೆ: 10 ಲಕ್ಷ ಅನುದಾನ

ಯುವಕರಲ್ಲಿ ನಾಯಕತ್ವ ಗುಣ ಬೆಳೆಸಲು ಪ್ರತಿ ಪಂಚಾಯಿತಿ ಹಾಗೂ ನಗರದ ವಾರ್ಡ್ ಮಟ್ಟದಲ್ಲಿ ತಲಾ 150-200 ಯುವಕರನ್ನೊಳಗೊಂಡ 'ಭಾರತ ಜೋಡೋ ಯುವಕರ ಸಂಘ' ರಚನೆ ಮಾಡಲಾಗುವುದು. ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ವೇದಿಕೆ ಕಲ್ಪಿಸುವ ಈ ಸಂಘಗಳಿಗೆ ಸರ್ಕಾರದಿಂದ ತಲಾ 10 ಲಕ್ಷ ರೂಪಾಯಿ ಅನುದಾನ ನೀಡಲು ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ.

4. ಮನೆ ಕಟ್ಟುವವರ OC ಮತ್ತು CC ಸಮಸ್ಯೆಗೆ ಒನ್-ಟೈಮ್ ಪರಿಹಾರ

ಮನೆ ಕಟ್ಟುವವರನ್ನು ಕಾಡುತ್ತಿದ್ದ ಒಸಿ (Occupation Certificate) ಹಾಗೂ ಸಿಸಿ (Commencement Certificate) ಸಮಸ್ಯೆಗೆ ತಾಂತ್ರಿಕ ಪರಿಹಾರ ನೀಡಲಾಗಿದೆ. 2,500 ಅಡಿಯವರೆಗಿನ ಜಾಗದಲ್ಲಿ ಶೇ. 20 ರಷ್ಟು ಹೆಚ್ಚುಕಮ್ಮಿ ನಿಯಮ ಉಲ್ಲಂಘನೆಯಾಗಿದ್ದರೂ, ಕಳೆದ ಮೇ 31ರ ಒಳಗಾಗಿ ಅರ್ಜಿ ಹಾಕಿ ಮನೆ ಕಟ್ಟಿರುವವರಿಗೆ ಒನ್-ಟೈಮ್ ಸೆಟಲ್ಮೆಂಟ್ ಆಧಾರದಲ್ಲಿ ಅವಕಾಶ ನೀಡಲು ನಿರ್ಧರಿಸಲಾಗಿದೆ.

5. ರಾಜ್ಯಾದ್ಯಂತ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ!

ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ 'ಬಿ' ಖಾತಾದಿಂದ 'ಎ' ಖಾತಾ ಪರಿವರ್ತನೆ ನಿಯಮವನ್ನು ಈಗ ಇಡೀ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಲು ತೀರ್ಮಾನಿಸಲಾಗಿದೆ. "ನಮ್ಮ ಸರ್ಕಾರದ ಆರನೇ ಗ್ಯಾರಂಟಿಯೇ 'ಭೂ ಗ್ಯಾರಂಟಿ'. ಜನರ ಸ್ವಂತ ಆಸ್ತಿಗೆ ಸರಿಯಾದ ಸರ್ಕಾರಿ ದಾಖಲೆ ಮಾಡಿಕೊಡುವುದು ನಮ್ಮ ಉದ್ದೇಶ" ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

6. ಬೆಂಗಳೂರಿನ ರಸ್ತೆಗಳ ಡಾಂಬರೀಕರಣಕ್ಕೆ 2,000 ಕೋಟಿ ರೂ. ಅನುದಾನ

ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳ ಗುಂಡಿ ಮುಚ್ಚಲು ಮತ್ತು ಅಭಿವೃದ್ಧಿಪಡಿಸಲು ಹಾಲಿ ಯೋಜನೆಗಳನ್ನು ಹೊರತುಪಡಿಸಿ, ಕೇವಲ ರಸ್ತೆಗಳ ಡಾಂಬರೀಕರಣಕ್ಕಾಗಿ (Tarring) ಬರೋಬ್ಬರಿ 2,000 ಕೋಟಿ ರೂಪಾಯಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ. ಮುಂದಿನ 3 ರಿಂದ 4 ತಿಂಗಳ ಒಳಗಾಗಿ ಇಡೀ ಬೆಂಗಳೂರಿನ ರಸ್ತೆಗಳ ಚಿತ್ರಣ ಬದಲಾಗಲಿದೆ ಎಂದು ಸಿಎಂ ವಿವರಿಸಿದರು.

Read More
Next Story