x

ಸಿಗದ ಸಚಿವ ಸ್ಥಾನ| ಕಾಂಗ್ರೆಸ್‌ನ ಪೂಜಾ ಕಾರ್ಯಕ್ರಮಗಳಿಗೆ ಬ್ರಾಹ್ಮಣರ ಬಹಿಷ್ಕಾರ?

ಡಿ.ಕೆ. ಶಿವಕುಮಾರ್‌ ಸರ್ಕಾರದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಪ್ರಾತಿನಿಧ್ಯ ನೀಡದಿರುವುದು ಇದೀಗ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ. ಕಳೆದ ಮೂರು ದಶಕಗಳಲ್ಲಿ ಮೊದಲ ಬಾರಿಗೆ ಈ ರೀತಿಯಾಗಿದೆ!


Click the Play button to hear this message in audio format

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಸಂಪುಟ ವಿಸ್ತರಣೆ ಕಸರತ್ತಿನ ಬೆನ್ನಲ್ಲೇ ಹೊಸದೊಂದು ರಾಜಕೀಯ ಬೆಳವಣಿಗೆ ನಡೆದಿದೆ. ಕಳೆದ ಮೂರು ದಶಕಗಳಲ್ಲಿ ಪ್ರತಿ ಸರ್ಕಾರದಲ್ಲೂ ಒಬ್ಬರಾದರೂ ಮಂತ್ರಿಯಾಗಿ ಬ್ರಾಹ್ಮಣರಿರುತ್ತಿದ್ದದರು, ಅದರೆ ಈ ಬಾರಿ ಮೊದಲ ಬಾರಿಗೆ ಬ್ರಾಹ್ಮಣ ಸಮೂದಾಯಕ್ಕೆ ಅವಕಾಶ ತಪ್ಪಿದೆ ಎಂಬುದು ಅ ಸಮೂದಾಯದ ಬೇಸರಕ್ಕೆ ಕಾರಣವಾಗಿದೆ.

ಹಿಂದಿನ ಸಿದ್ದರಾಮಯ್ಯ ನೇತೃತ್ವದ ಆಡಳಿತಾವಧಿಯಲ್ಲಿ ದಿನೇಶ್ ಗುಂಡೂರಾವ್ ಅವರಿಗೆ ಸಚಿವ ಸ್ಥಾನ ಒಲಿದಿತ್ತು. ಆದರೆ, ಪ್ರಸ್ತುತ ಸಂಪುಟದಲ್ಲಿ ಸಮುದಾಯದ ಒಬ್ಬರೇ ಒಬ್ಬ ಶಾಸಕರಿಗೂ ಸಚಿವ ಸ್ಥಾನ ನೀಡದಿರುವುದು ಕಾಂಗ್ರೆಸ್‌ನ ಸಾಮಾಜಿಕ ಸಮತೋಲನ ರಾಜಕೀಯದ ಮೇಲೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಈ ಸಂದರ್ಭದಲ್ಲಿ ಪ್ರತಿಭಟನೆಯನ್ನೂ ನಡೆಸಿದೆ. ‘ದ ಫೆಡರಲ್ ಕರ್ನಾಟಕ’ದೊಂದಿಗೆ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಎಸ್‌. ರಘುನಾಥ್‌, ಇನ್ನೊಬ್ಬ ಮುಂಖಡ ಅಶೋಕ ಹಾರ್ನಳ್ಳಿ ಸೇರಿದಂತೆ ಹಲವು ಮುಖಂಡರು ಮಾತನಾಡಿದ್ದು, ತಮ್ಮ ಬೇಸರ ಹಾಗೂ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

"ಕಾಂಗ್ರೆಸ್ ಸರ್ಕಾರವು ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ಕೊಂಡೊಯ್ಯುವ 'ಸಾಮಾಜಿಕ ನ್ಯಾಯ'ದ ಬಗ್ಗೆ ಮಾತನಾಡುತ್ತದೆ. ಆದರೆ, ಆಡಳಿತಾತ್ಮಕ ಮತ್ತು ಸಾಂಸ್ಕೃತಿಕವಾಗಿ ಪ್ರಮುಖ ಕೊಡುಗೆ ನೀಡುತ್ತಿರುವ ಬ್ರಾಹ್ಮಣ ಸಮುದಾಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಮುಂಬರುವ ದಿನಗಳಲ್ಲಿ ನಮ್ಮ ಪ್ರಾತಿನಿಧ್ಯದ ಕುರಿತು ಸರ್ಕಾರ ಸೂಕ್ತ ನಿರ್ಧಾರ ತಳೆಯದಿದ್ದರೆ, ಮುಂದಿನ ಚುನಾವಣೆಗಳಲ್ಲಿ ಸಮುದಾಯವು ತಕ್ಕ ರಾಜಕೀಯ ನಿಲುವು ಕೈಗೊಳ್ಳಬೇಕಾಗುತ್ತದೆ," ಎಂದು ಅವರು ಎಚ್ಚರಿಸಿದ್ದಾರೆ.

ಪೂಜಾ ಕಾರ್ಯಕ್ರಮಗಳ ಬಹಿಷ್ಕಾರ?

ಸಮುದಾಯದ ಮುಂದಿನ ನಡೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಬ್ರಾಹ್ಮಣ ಮುಖಂಡರು, "ಸಂಪುಟ ಪ್ರಾತಿನಿಧ್ಯದ ಕೊರತೆಯಿಂದಾಗಿ ಸಮುದಾಯದ ಒಳಗೆ ಪ್ರಮುಖ ನಿರ್ಧಾರಗಳು ರೂಪುಗೊಳ್ಳುತ್ತಿವೆ. ಸರ್ಕಾರಿ ಹಾಗೂ ಕಾಂಗ್ರೆಸ್ ಆಯೋಜಿತ ಪೂಜಾ ಕಾರ್ಯಕ್ರಮಗಳಿಗೆ ಅಸಹಕಾರ ಬಗ್ಗೆ ಚರ್ಚೆ ನಡೆಯುತ್ತಿದೆ. ಸರ್ಕಾರಿ ಅಥವಾ ಕಾಂಗ್ರೆಸ್ ನಾಯಕರು ಆಯೋಜಿಸುವ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಪೂಜೆ-ಪುನಸ್ಕಾರಗಳಲ್ಲಿ ಪುರೋಹಿತರು ಮತ್ತು ಧಾರ್ಮಿಕ ನಾಯಕರು ಪಾಲ್ಗೊಳ್ಳುವುದನ್ನು ಬಹಿಷ್ಕರಿಸುವ ಸಾಧ್ಯತೆಗಳ ಬಗ್ಗೆ ಸಮುದಾಯದ ಮಟ್ಟದಲ್ಲಿ ಮಾತುಗಳೂ ಆರಂಭವಾಗಿವೆ," ಎಂದು ಹೇಳಿದ್ದಾರೆ. "ಶೀಘ್ರದಲ್ಲೇ ರಾಜ್ಯಮಟ್ಟದ ಪ್ರಮುಖ ಮಠಾಧೀಶರು ಮತ್ತು ಸಮುದಾಯದ ಸಂಘಟನೆಗಳ ಪ್ರತಿನಿಧಿಗಳ ಜಂಟಿ ಸಭೆ ಕರೆಯಲು ನಿರ್ಧರಿಸಲಾಗಿದೆ," ಎಂದೂ ಅವರು ಎಚ್ಚರಿಸಿದ್ದಾರೆ.

ಈ ವಿಷಯವನ್ನು ಕೈಗೆತ್ತಿಕೊಂಡು ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಲು ಬಿಜೆಪಿ ಮತ್ತು ಜೆಡಿಎಸ್ ತಂತ್ರ ರೂಪಿಸುತ್ತಿವೆ.ಕಾಂಗ್ರೆಸ್‌ಗೆ ರಾಜಕೀಯವಾಗಿ ಎಷ್ಟು ಪರಿಣಾಮ ಬೀರಬಹುದು ಎಂಬ ಬಗ್ಗ ಚರ್ಚೆ ನಡೆಯುತ್ತಿದೆ. ಬೆಂಗಳೂರು, ಕರಾವಳಿ, ಮಲೆನಾಡು ಹಾಗೂ ಹಳೆಯ ಮೈಸೂರು ಭಾಗದ ಹಲವು ನಗರ ಕ್ಷೇತ್ರಗಳಲ್ಲಿ ಬ್ರಾಹ್ಮಣ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಈ ನಿರ್ಲಕ್ಷ್ಯವು ಕಾಂಗ್ರೆಸ್‌ನ ಸಾಂಪ್ರದಾಯಿಕ 'ಮಧ್ಯಮ ವರ್ಗ'ದ ಬೆಂಬಲಕ್ಕೆ ಧಕ್ಕೆ ತರಬಹುದು ಎಂದು ಬ್ರಾಹ್ಮಣ ಮುಖಂಡರು ಎಚ್ಚರಿಸಿದ್ದಾರೆ.

Read More
Next Story