
ಬಿ.ಕೆ ಹರಿಪ್ರಸಾದ್
ಮತದಾನದ ಹಕ್ಕೇ ನಮ್ಮ ಎ.ಕೆ. 47: ಎಸ್‌ಐಆರ್ ವಿರುದ್ಧ ಎರಡನೇ ಸ್ವಾತಂತ್ರ್ಯ ಸಂಗ್ರಾಮದಂತೆ ಹೋರಾಡಿ - ಬಿ.ಕೆ. ಹರಿಪ್ರಸಾದ್
ಭಾನುವಾರ ಮೈಸೂರಿನ ಜೆ.ಕೆ. ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ 'ಮೈಸೂರು ವಿಭಾಗೀಯ ಮಟ್ಟದ ಎಸ್‌ಐಆರ್ ಜಾಗೃತಿ ಸಮಾವೇಶ'ವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮತದಾರರ ಪಟ್ಟಿ ಪರಿಷ್ಕರಣೆಯ ಹೆಸರಿನಲ್ಲಿ ನಡೆಯುತ್ತಿರುವ 'ಎಸ್‌ಐಆರ್ (SIR)' ಪ್ರಕ್ರಿಯೆಯ ಹಿಂದೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಕೈವಾಡವಿದ್ದು, ಅರ್ಹ ಮತದಾರರನ್ನು ಕೈಬಿಡದಂತೆ ತಡೆಯಲು ಕಾಂಗ್ರೆಸ್ ಕಾರ್ಯಕರ್ತರು ಇದನ್ನು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂದು ಭಾವಿಸಿ ಹೋರಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಕರೆ ನೀಡಿದ್ದಾರೆ.
ಭಾನುವಾರ ಮೈಸೂರಿನ ಜೆ.ಕೆ. ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ 'ಮೈಸೂರು ವಿಭಾಗೀಯ ಮಟ್ಟದ ಎಸ್‌ಐಆರ್ ಜಾಗೃತಿ ಸಮಾವೇಶ'ವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಾರ್ಯಕರ್ತರಲ್ಲಿ ಜಾಗೃತಿ ಮೂಡಿಸುತ್ತಾ ಮಾತನಾಡಿದ ಅವರು, "ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಪ್ರತಿಯೊಬ್ಬ ಪ್ರಜೆಯ ಕೈಲಿರುವ ಎ.ಕೆ. 47 ಇದ್ದಂತೆ. ಈ ಪ್ರಬಲ ಅಸ್ತ್ರವನ್ನು ಉಳಿಸಿಕೊಳ್ಳಲು ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು. ಒಂದು ವೇಳೆ ನಾವೀಗ ಎಚ್ಚರ ತಪ್ಪಿದರೆ, ಭವಿಷ್ಯದಲ್ಲಿ ದೇಶವು ಮತ್ತೆ ಗುಲಾಮಗಿರಿಗೆ ತಳ್ಳಲ್ಪಡುವ ಅಪಾಯವಿದೆ" ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.
ಅರ್ಹರ ಕಡಿತಕ್ಕೆ ಅವಕಾಶವಿಲ್ಲ
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ಪಕ್ಷದ ವಿರೋಧವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಅವರು, "ಮೃತಪಟ್ಟವರ ಹಾಗೂ ಎರಡೆರಡು ಕಡೆಗಳಲ್ಲಿ ಹೆಸರಿರುವವರನ್ನು ಪಟ್ಟಿಯಿಂದ ಕೈಬಿಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಒಂದು ನಿರ್ದಿಷ್ಟ ಜಾತಿ ಅಥವಾ ವರ್ಗದ ಆಧಾರದ ಮೇಲೆ ವ್ಯವಸ್ಥಿತವಾಗಿ ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವ ಹುನ್ನಾರಕ್ಕೆ ನಾವು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಇದು ಪ್ರಜಾಪ್ರಭುತ್ವದ ಆಶಯಗಳಿಗೆ ಒದಗಿರುವ ಅತಿದೊಡ್ಡ ಆಘಾತವಾಗಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಎಸ್‌ಐಆರ್ ಪ್ರಕ್ರಿಯೆಯು ಸಂಪೂರ್ಣವಾಗಿ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಪ್ರೇರಿತವಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಹರಿಪ್ರಸಾದ್, "ಬಿಜೆಪಿ ಕೇವಲ ಧರ್ಮಾಧಾರಿತ ಹಾಗೂ ಶ್ರೇಣಿಕೃತ ರಾಜಕಾರಣದಲ್ಲಿ ಮಾತ್ರ ನಂಬಿಕೆ ಇಟ್ಟಿರುವ ಪಕ್ಷವಾಗಿದೆ. ಅವರಿಗೆ ದೇಶದ ಪವಿತ್ರ ಸಂವಿಧಾನ, ತ್ರಿವರ್ಣ ಧ್ವಜ ಹಾಗೂ ಜಾತ್ಯತೀತ ತತ್ವಗಳ ಮೇಲೆ ಕಿಂಚಿತ್ತೂ ನಂಬಿಕೆ ಮತ್ತು ಗೌರವವಿಲ್ಲ. ದೇಶದ ಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಜೊತೆಗೂಡಿ ಹೋರಾಡಬೇಕಾದ ಅನಿವಾರ್ಯತೆ ಇಂದಿದೆ," ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

