ಕಾಂಗ್ರೆಸ್ ಆಂತರಿಕ ಕಲಹಗಳೇ ಬಿಜೆಪಿಗೆ ಅಸ್ತ್ರ: ಕರ್ನಾಟಕದಲ್ಲಿ ಕಮಲಕ್ಕೆ ಸುಲಭದಲ್ಲಿ ಮರುಜೀವ ?
x

ಕಾಂಗ್ರೆಸ್ ಆಂತರಿಕ ಕಲಹಗಳೇ ಬಿಜೆಪಿಗೆ ಅಸ್ತ್ರ: ಕರ್ನಾಟಕದಲ್ಲಿ ಕಮಲಕ್ಕೆ ಸುಲಭದಲ್ಲಿ ಮರುಜೀವ ?

ಪ್ರಾದೇಶಿಕ ಪಕ್ಷಗಳಿಂದ ಮತದಾರರ ಅತಿರೇಕದ ತುಷ್ಟೀಕರಣ, ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವಾಗ ಬಿಜೆಪಿ ಅದನ್ನು ರಾಷ್ಟ್ರೀಯತೆ ಮತ್ತು ಅಭಿವೃದ್ಧಿಯ ಮಂತ್ರದೊಂದಿಗೆ ತನ್ನತ್ತ ಸೆಳೆದುಕೊಳ್ಳುತ್ತಿದೆ. ಇನ್ನು ದೇಶವ್ಯಾಪಿ ಕಾಂಗ್ರೆಸ್‌ ಪಕ್ಷದ ಆಂತರಿಕ ಕಲಹಗಳು ಬಿಜೆಪಿಗೆ ವರದಾನವಾಗಿ ಪರಿಣಮಿಸಿವೆ.


Click the Play button to hear this message in audio format

ದೇಶದ ರಾಜಕೀಯ ಭೂಪಟದಲ್ಲಿ ಬಿಜೆಪಿ ತನ್ನ ವ್ಯವಸ್ಥಿತ ಸಂಘಟನಾ ಶಕ್ತಿಯ ಮೂಲಕ ಅಧಿಪತ್ಯ ವಿಸ್ತರಿಸಿಕೊಳ್ಳುತ್ತಿದೆ. ಪ್ರತಿ ರಾಜ್ಯದಲ್ಲಿ ಅಲ್ಲಿನ ಆಡಳಿತರೂಢ ಪಕ್ಷಗಳಲ್ಲಿನ ಆಂತರಿಕ ಕಲಹಗಳ ಲಾಭ ಪಡೆಯುತ್ತಾ ಇಂದು ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ.

ಉತ್ತರದ ರಾಜ್ಯಗಳಿಂದ ಆರಂಭವಾದ ವಿಜಯಯಾತ್ರೆ ಇದೀಗ ದಕ್ಷಿಣದತ್ತ ಮುಖ ಮಾಡಿದೆ. ಪ್ರಾದೇಶಿಕ ಪಕ್ಷಗಳ ಅಸ್ಮಿತೆಗೂ ಸವಾಲೊಡ್ಡಿ, ನಿಧಾನವಾಗಿ ತನ್ನ ಹರವು ವಿಸ್ತರಿಸಿಕೊಳ್ಳುತ್ತಿದೆ. ಈಚೆಗೆ ತೆರೆ ಕಂಡ ಪಂಚರಾಜ್ಯ ಚುನಾವಣೆಯಲ್ಲಿ ಕೇರಳ ಹಾಗೂ ತಮಿಳುನಾಡಿನಲ್ಲಿ ಖಾತೆ ತೆರೆಯುವ ಮೂಲಕ ರಾಜ್ಯಾಧಿಕಾರ ಪಡೆಯಲು ಮುನ್ನುಡಿ ಬರೆದಿದೆ.

ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳ ದೀರ್ಘಾವಧಿಯ 'ದೀದಿ' ಆಡಳಿತಕ್ಕೆ ತೆರೆ ಎಳೆದಿರುವುದು ಬಿಜೆಪಿಯ ಪಾಲಿಗೆ ಐತಿಹಾಸಿಕ ಮೈಲಿಗಲ್ಲು. ಪ್ರಾದೇಶಿಕ ಪಕ್ಷಗಳಿಂದ ಮತದಾರರ ಅತಿರೇಕದ ತುಷ್ಟೀಕರಣ, ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವಾಗ ಬಿಜೆಪಿ ಅದನ್ನು ರಾಷ್ಟ್ರೀಯತೆ ಮತ್ತು ಅಭಿವೃದ್ಧಿಯ ಮಂತ್ರದೊಂದಿಗೆ ತನ್ನತ್ತ ಸೆಳೆದುಕೊಳ್ಳುತ್ತಿದೆ. ಇನ್ನು ದೇಶವ್ಯಾಪಿ ಕಾಂಗ್ರೆಸ್‌ ಪಕ್ಷದ ಆಂತರಿಕ ಕಲಹಗಳು ಬಿಜೆಪಿಗೆ ವರದಾನವಾಗಿ ಪರಿಣಮಿಸಿವೆ.

ಕರ್ನಾಟಕದಲ್ಲಿ ಅಸ್ಥಿರತೆಯ ಲಾಭ

ಕರ್ನಾಟಕದ ಇಂದಿನ ಪರಿಸ್ಥಿತಿ ಗಮನಿಸಿದರೆ ಕಾಂಗ್ರೆಸ್ ಸರ್ಕಾರದ ಒಳಗಿರುವ ಆಂತರಿಕ ಬಿಕ್ಕಟ್ಟುಗಳೇ ಬಿಜೆಪಿಗೆ ಅಸ್ತ್ರಗಳಾಗಿ ಪರಿಣಮಿಸಿವೆ. ಅಧಿಕಾರದ ಚುಕ್ಕಾಣಿ ಹಿಡಿದ ದಿನದಿಂದಲೂ ನಡೆಯುತ್ತಿರುವ ಗದ್ದುಗೆ ಗುದ್ದಾಟವು ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರುತ್ತಿದೆ. ಇದು ಬಿಜೆಪಿಗೆ ಆಡಳಿತ ಪಕ್ಷದ ವಿರುದ್ಧ ಜನಮತ ರೂಪಿಸಲು ಸುಲಭದ ಮಾರ್ಗವಾಗಿ ಬದಲಾಗಿದೆ.

ಮುಡಾ ಹಗರಣ ಸೇರಿದಂತೆ ಇತ್ತೀಚಿನ ಹಲವು ವಿವಾದಗಳು ಮತ್ತು ಭ್ರಷ್ಟಾಚಾರದ ಆರೋಪಗಳು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದಿವೆ. ಇದನ್ನು ಬಿಜೆಪಿ ಸಂಪೂರ್ಣ ಅಧಿಕಾರ ಕಿತ್ತುಕೊಳ್ಳುವ ಪ್ರಯತ್ನದ ಭಾಗವಾಗಿ ಜನಸಾಮಾನ್ಯರ ಮುಂದೆ ಪ್ರಬಲವಾಗಿ ಬಿಂಬಿಸುತ್ತಿದೆ.

ಅಧಿಕಾರ ವರ್ಗಾವಣೆಯಲ್ಲಿ ಮತ್ತು ನಿಗಮ ಮಂಡಳಿಗಳ ನೇಮಕಾತಿಯಲ್ಲಿನ ಅಸಮಾಧಾನವು ಪಕ್ಷದ ಒಳಗೆ ಅತೃಪ್ತಿ ಮೂಡಿಸಿದೆ. ಈ ಅಸ್ಥಿರತೆಯನ್ನೇ ದಾಳವಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿ, ಆಪರೇಷನ್ ಕಮಲದಂತಹ ಹಳೆಯ ತಂತ್ರಗಳಿಗಿಂತ ಹೆಚ್ಚಾಗಿ ಜನಬೆಂಬಲಿತ ಪ್ರತಿಭಟನೆಗಳ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ.

ಎಸ್ಐಆರ್ ಮೂಲಕ ಹಣಿಯುವ ತಂತ್ರ

ಚುನಾವಣಾ ಹೊಸ್ತಿಲಿಗೆ ಬರುವ ಪ್ರತಿ ರಾಜ್ಯದಲ್ಲೂ ಚುನಾವಣಾ ಆಯೋಗ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(SIR) ನಡೆಸುತ್ತಿದ್ದು, ಈ ಪ್ರಕ್ರಿಯೆಯೂ ಬಿಜೆಪಿ ಅಧಿಕಾರ ಹಿಡಿಯಲು ನೆರವಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ವೋಟ್‌ ಚೋರಿ, ಎಸ್‌ಐಆರ್‌ ನಂತಹ ಹಲವು ಆರೋಪಗಳ ಮಧ್ಯೆಯೂ ಬಿಜೆಪಿಯು ತನ್ನ ಬೂತ್ ಮಟ್ಟದ ಸಂಘಟನೆ ಮೂಲಕ ಪ್ರತಿ ಮನೆಗೆ ತಲುಪುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ಆಂತರಿಕ ಬಿಕ್ಕಟ್ಟು ಬಗೆಹರಿಸಿಕೊಳ್ಳುವಲ್ಲಿ ವಿಳಂಬ ಮಾಡಿದಷ್ಟೂ ಬಿಜೆಪಿಗೆ ತನ್ನ ಹರವು ಹೆಚ್ಚಿಸಿಕೊಳ್ಳುವುದು ಸುಲಭವಾಗುತ್ತಿದೆ. ಹಳೇ ಮೈಸೂರು ಭಾಗದಲ್ಲಿಯೂ ಪ್ರಭಾವ ಹೆಚ್ಚಿಸಿಕೊಳ್ಳುವ ಮೂಲಕ ಬಿಜೆಪಿ ಪಕ್ಷವು ರಾಜ್ಯದಲ್ಲಿ ಪರ್ಯಾಯ ಶಕ್ತಿಯಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸುತ್ತಿದೆ.

ಯಾವುದೇ ರಾಜ್ಯದಲ್ಲಿ ವಿರೋಧ ಪಕ್ಷಗಳು ಪ್ರಬಲವಾಗುವುದು ಆಡಳಿತ ಪಕ್ಷದ ವೈಫಲ್ಯಗಳಿಂದಲೇ ಹೊರತು ಕೇವಲ ತಂತ್ರಗಾರಿಕೆಯಿಂದ ಅಲ್ಲ.ಅದರಂತೆ ಕರ್ನಾಟಕದಲ್ಲಿ ಕಾಂಗ್ರೆಸ್ ಎದುರಿಸುತ್ತಿರುವ ಅಸ್ಥಿರತೆ, ಭ್ರಷ್ಟಾಚಾರದ ಆರೋಪಗಳು ಮತ್ತು ಆಂತರಿಕ ಕಲಹಗಳು ಬಿಜೆಪಿಯ ಪಾಲಿಗೆ ಕೆಂಪು ಹಾಸು ಹಾಸಿದಂತಿದೆ. ಒಂದು ವೇಳೆ ಕಾಂಗ್ರೆಸ್ ತನ್ನ ಆಂತರಿಕ ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳದಿದ್ದರೆ ದಕ್ಷಿಣದ ಹೆಬ್ಬಾಗಿಲಿನಲ್ಲಿ ಮತ್ತೊಮ್ಮೆ ಕಮಲ ಅರಳುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಜೆಡಿಎಸ್ ಜೊತೆಗಿನ ಮೈತ್ರಿಯೂ ಅನುಕೂಲ

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟವು ಪ್ರಬಲ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಭಾವ ಮತ್ತು ಉತ್ತರ ಕರ್ನಾಟಕ, ಕರಾವಳಿಯಲ್ಲಿ ಬಿಜೆಪಿಯ ಭದ್ರಕೋಟೆ ಒಂದಾದರೆ, ಮತಗಳ ವಿಭಜನೆಯನ್ನು ತಡೆದು ಅಧಿಕಾರಕ್ಕೇರಲು ಸುಲಭ ದಾರಿಯಾಗಬಹುದು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಜಾರಿ, ಹಣಕಾಸಿನ ನಿರ್ವಹಣೆ ಅಥವಾ ಅಭಿವೃದ್ಧಿ ಕಾರ್ಯಗಳ ಕುರಿತು ಜನರಲ್ಲಿ ಅಸಮಾಧಾನ ಉಂಟಾದಲ್ಲಿ ಅದು ಬಿಜೆಪಿಗೆ ಪೂರಕವಾಗಿ ಪರಿಣಮಿಸಲಿದೆ.

ಕೇಂದ್ರ ಸರ್ಕಾರದ ಪ್ರಭಾವ

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಮತ್ತು ಕೇಂದ್ರ ಸರ್ಕಾರದ ಯೋಜನೆಗಳು ರಾಜ್ಯದ ಮತದಾರರ ಮೇಲೆ ಪ್ರಭಾವ ಬೀರಬಹುದು. ವಿಶೇಷವಾಗಿ ಲೋಕಸಭಾ ಚುನಾವಣೆಯ ನಂತರ ರಾಜ್ಯ ರಾಜಕಾರಣದಲ್ಲೂ ಇದರ ಲಾಭ ಪಡೆಯಲು ಬಿಜೆಪಿ ತಂತ್ರ ರೂಪಿಸುತ್ತದೆ.

ಪ್ರಸ್ತುತ ಸಂಖ್ಯಾಬಲದ ಆಧಾರದ ಮೇಲೆ ತಕ್ಷಣವೇ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಕಡಿಮೆ ಇದೆ. 2028ರ ಚುನಾವಣೆಯಲ್ಲಿ ಮೈತ್ರಿ ಬಲ ಮತ್ತು ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಂಡು ಅಧಿಕಾರ ಹಿಡಿಯುವ ದೊಡ್ಡ ಅವಕಾಶ ಬಿಜೆಪಿಯ ಮುಂದಿದೆ.

Read More
Next Story